ಅಂಬರೀಷ್ ಸ್ಮಾರಕ ಸರಿ, ವಿಷ್ಣು ಸ್ಮಾರಕ ಯಾವಾಗ? ಎಂದು ಕೇಳಿದವರಿಗೆ ಕೋಪಗೊಂಡ ಸುಮಲತಾ ಹೇಳಿದ್ದೇನು?

ರೆಬೆಲ್ ಸ್ಟಾರ್ ಎಂದೇ ಖ್ಯಾತರಾದ ಎಲ್ಲರ ಅಚ್ಚುಮೆಚ್ಚಿನ ಅಂಬಿಯವರ ಸ್ಮಾರಕಕ್ಕೆ ನಿನ್ನೆ (ಜೂನ್ 29)ಕ್ಕೆ ಸರಕಾರದ ವತಿಯಿಂದ ಕಂಠೀರವ ಸ್ಟುಡಿಯೋದಲ್ಲಿ 1 ಎಕರೆ 34 ಗುಂಟೆ ಜಾಗ ಜೊತೆಗೇ ಮೊದಲ ಹಂತದಲ್ಲಿ 5 ಕೋಟಿ ರೂಪಾಯಿಗಳ ಬಿಡುಗಡೆ ಮಾಡಲಾಗಿದೆ.

ನಿನ್ನೆ ಮಾನ್ಯ ಮುಖ್ಯಮಂತ್ರಿಗಳ ಜೊತೆಗೆ ಸುಮಲತಾ ಅಂಬರೀಶ್, ರಾಕ್ಲೈನ್ ವೆಂಕಟೇಶ್ ದೊಡ್ಡಣ್ಣ ಹಾಗೂ ಅಂಬಿ ಸ್ಮಾರಕ ಸಮಿತಿಯ ಸದಸ್ಯರು ಭೇಟಿಯಾದಾಗ ಈ ನಿರ್ಣಯವನ್ನು ತೆಗೆದುಕೊಂಡಿದ್ದಾರೆ.

ಆನಂತರ ಈ ವಿಷಯವನ್ನು ಮಾನ್ಯ ಮುಖ್ಯಮಂತ್ರಿಗಳಾದ ಯಡಿಯೂರಪ್ಪನವರು ಹಾಗೂ ಸುಮಲತಾ ಅವರೂ ತಮ್ಮ ಸೋಶಿಯಲ್ ಮೀಡಿಯಾ ಮುಖಾಂತರ ಹೊರ ಹಾಕಿದ್ದಾರೆ. ಅಂಬಿ ಅಭಿಮಾನಿಗಳ ದೃಷ್ಟಿಯಿಂದ ಕನ್ನಡ ಚಿತ್ರರಂಗದ ದೃಷ್ಟಿಯಿಂದ ಇದು ಒಳ್ಳೆಯ ಶುಭ ಸುದ್ದಿಯೇ ಹೌದು.

ಆದರೆ ದೊಡ್ಡದಾದ ಸಮಸ್ಯೆಯೊಂದು ಜನ್ಮ ತಾಳಿದ್ದು ಇಲ್ಲಿಯೇ. ಅಂಬಿ ಸ್ಮಾರಕಕ್ಕೆ ಜಾಗದ ಜೊತೆಗೆ ಹಣ ಸಿಕ್ಕ ಸುದ್ದಿಯೇ ವಿಷ್ಣುವರ್ಧನ್ ಅಭಿಮಾನಿಗಳ ಕೋಪ ತಾರಕಕ್ಕೇರಿಸಿದೆ. ಅವರು ಕೋಪಗೊಳ್ಳುವದು ಸಹಜವೇ.

ಕಳೆದ 10 ವರ್ಷಗಳಿಂದ ವಿಷ್ಣು ಸ್ಮಾರಕಕ್ಕೆ ಕರ್ನಾಟಕದೆಲ್ಲಡೆಯಿಂದ ಒಂದೇ ಸಮನೆ ಕೂಗು ಕೇಳಿ ಬರುತ್ತಿದೆ. ಆದರೆ ಯಾವುದೇ ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ. ಹೀಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ವಿಷ್ಣು ಸ್ಮಾರಕ ಯಾವಾಗ ಎಂದು ಜನರು ಪದೇ ಪದೇ ಪ್ರಶ್ನೆ ಹಾಕುತ್ತಿದ್ದಾರೆ.

ಇದನ್ನು ಗಮನಿಸಿದ ಸುಮಲತಾ ಅವರು ವಿಷ್ಣು ಅಭಿಮಾನಿಗಳಿಗೆ ತಮ್ಮ ಸೋಶಿಯಲ್ ಮೀಡಿಯಾದ ಮಾಧ್ಯಮದಿಂದ ಸುಂದರವಾದ ಸುದೀರ್ಘ ಸಂದೇಶವನ್ನು ಈ ರೀತಿಯಾಗಿ ಕೊಟ್ಟಿದ್ದಾರೆ. ಹಾಗೂ ವಿವಾದದ ಮೇಲೆ ಸಂಪೂರ್ಣವಾಗಿ ತೆರೆ ಎಳೆಯಲು ಪ್ರಯತ್ನ ಮಾಡಿದ್ದಾರೆ.

ಸುಮಲತಾ ಅಂಬರೀಷ್ ಅವರು ಹೇಳಿದ್ದು ….

ವಿಷ್ಣುವರ್ಧನ್ ಅವರ ಮೇಲೆ ನೀವು ಇಟ್ಟಿರುವ ಪ್ರೀತಿ ನೋಡಿ ಖುಷಿ ಆಗುತ್ತೆ. ನಾನೂ ಕೂಡ ನಿಮ್ಮ ಹಾಗೆ ಅವರ ಅಭಿಮಾನಿ. ವಿಷ್ಣು ಅವರ ಸ್ಮಾರಕ ಇನ್ನು ಯಾಕೆ ಪ್ರಾರಂಭ ಆಗಿಲ್ಲ ಅಂತ ಕೆಲವರು ಕೇಳುತ್ತಿರುವುದು ನೋಡಿ ಆಶ್ಚರ್ಯ ಆಗುತ್ತಿದೆ. ನಿಜವಾದ ಅಭಿಮಾನಿಗಳಿಗೆ ತಪ್ಪು ಕಲ್ಪನೆ ಬೇಡ.

ಈಗಾಗಲೇ ನಮ್ಮ ನೆಚ್ಚಿನ ವಿಷ್ಣುವರ್ಧನ್ ಅವರ ಸ್ಮಾರಕದ ಕೆಲಸ ಒಂದು ವರ್ಷದ ಹಿಂದೆಯೇ ಶುರುವಾಗಿದೆ. ಮೈಸೂರಿನ ಸಮೀಪ, ಅವರ ಕುಟುಂಬದವರ ಇಚ್ಛೆಯಂತೆ, ಸ್ಮಾರಕ ರೂಪಗೊಳ್ಳುತ್ತಿದೆ. ನನಗೆ ತಿಳಿದಿರುವಂತೆ, ಸರಕಾರ ಅದಕ್ಕಾಗಿ 10 ಕೋಟಿ ರೂಪಾಯಿ ಘೋಷಿಸಿದೆ. ಅದರಲ್ಲಿ 5 ಕೋಟಿ ರೂಪಾಯಿಯನ್ನು ಈಗಾಗಲೇ ಬಿಡುಗಡೆ ಮಾಡಿದೆ. ಬಹುತೇಕ ವಿಷ್ಣು ಅಭಿಮಾನಿಗಳಾಗಿ ತಿಳಿದಿದೆ.

ಕನ್ನಡ ಚಿತ್ರರಂಗ ಹಾಗೂ ಕರ್ನಾಟಕದ ಎಲ್ಲೆಡೆ ಇರುವ ಅಭಿಮಾನಿಗಳು ಅಂಬಿ ಹಾಗೂ ವಿಷ್ಣುವರ್ಧನ್ ಅವರ
ಕಲಾ ಸೇವೆ ಹಾಗೂ ಸಾಮಾಜಿಕ ಸೇವೆಯ ಹಿನ್ನೆಲೆಯಲ್ಲಿ
ಅವರುಗಳ ಸ್ಮಾರಕದ ವಿಷಯದಲ್ಲಿ ಯಾವಾಗಲೂ ಒಗ್ಗಟ್ಟಾಗಿ ಹೆಜ್ಜೆ ಇಟ್ಟಿವೆ. ಮತ್ತು ಒಕ್ಕೂರಿಲಿನ ಧ್ವನಿಯಾಗಿದೆ.

ಅಂಬಿ ಹಾಗೂ ವಿಷ್ಣುವರ್ಧನ್ ಅವರ ಆತ್ಮೀಯ ಸ್ನೇಹ ಹಾಗೂ ಒಬ್ಬರಿಗಗೊಬ್ಬರು ತೋರುತ್ತಿದ್ದ ಪ್ರೀತಿ ಚಿಕ್ಕವರಿಗೆ ಸ್ಫೂರ್ತಿ ಆಗಬೇಕು. ಬೇಡದ ಮಾತುಗಳಿಂದ ಅವರಿಬ್ಬರ ವ್ಯಕ್ತಿತ್ವಕ್ಕೆ ಮಾತ್ರವಲ್ಲ ಅವರ ಸ್ನೇಹಕ್ಕೂ ಅಪಮಾನ. ನಾಲ್ಕು ದಶಕಗಳ ಕಾಲ ಅವರ ಸ್ನೇಹ ಯಾವುದೇ ಅಹಂಗೂ ಒಳಗಾಗಲಿಲ್ಲ, ಯಾವ ವಿಷಯವೂ ಅವರ ನಡುವೆ ಕಂದಕ ತರಲಿಲ್ಲ. ಈಗ ಅವರನ್ನು ಬೇರೆ ಮಾಡಿ ಅವರ ನೆನಪುಗಳಿಗೆ ಮಸಿ ಬಳಿಯೋದು ಬೇಡ.

ಅಂಬಿ-ವಿಷ್ಣು ಇಬ್ಬರು ತಮ್ಮ ಕ್ಷೇತ್ರಗಳಲ್ಲಿ ಸಾಧಕರು ಹಾಗೂ ಸಮಾಜಕ್ಕೆ ತಮ್ಮದೇ ಕೊಡುಗೆ ನೀಡಿದವರು. ಅವರ ಸ್ನೇಹಕ್ಕೆ ಯಾರೂ ಧಕ್ಕೆ ತರೋದು ಬೇಡ ಹಾಗೆಯೇ ಅವರಿಬ್ಬರ ಸಾಧನೆಗಳನ್ನು ನಾವು ಗೌರವಿಸೋಣ”.