ಅಬ್ಬಾ! ಹಾಲು ಮಾರಲು ಹೆಲಿಕಾಪ್ಟರ್ ಖರೀದಿ ಮಾಡಿದ ರೈತ; ಅಚ್ಚರಿ ಪಟ್ಟ ಜನ!

ಭಿವಂಡಿಯ ರೈತ ಜನಾರ್ಧನ್ ಭೊಯಿರ್ ಅವರು ಇತ್ತೀಚಿನ ದಿನಗಳಲ್ಲಿ ತಮ್ಮ ಸುತ್ತಮುತ್ತಲ ಪ್ರದೇಶಗಳಲ್ಲಿ ಸಾಕಷ್ಟು ಸುದ್ದಿಯಲ್ಲಿದ್ದಾರೆ. ಅವರು ಹೀಗೆ ಇದ್ದಕ್ಕಿದ್ದಂತೆ ಸುದ್ದಿಯಾಗಲು ಪ್ರಮುಖ ಕಾರಣ ರೈತನಾಗಿರುವ ಅವರು ಹೆಲಿಕಾಪ್ಟರ್ ಒಂದನ್ನು ಖರೀದಿ ಮಾಡಿರುವುದು. ಒಬ್ಬ ರೈತನ ಬಳಿ ಹೆಲಿಕಾಪ್ಟರ್ ಎಂದ ಕೂಡಲೇ ಇದನ್ನು ನಂಬುವುದು ಕಷ್ಟ ಆಗಬಹುದು, ಅಲ್ಲದೇ ಅನೇಕರಿಗೆ ಇದು ಅಸಾಧ್ಯ ಹಾಗೂ ಆಶ್ಚರ್ಯ ಎಂದು ಕೂಡ ಎನಿಸಬಹುದು. ಆದರೆ ಈ ಸುದ್ದಿ ಅಕ್ಷರಶಃ ಸತ್ಯವಾಗಿದೆ. ಹಾಲಿನ ವ್ಯಾಪಾರ ಮಾಡುವ ಜನಾರ್ಧನ್ ಅವರು ತಮ್ಮ ವ್ಯಾಪಾರ ಹಾಗೂ ವ್ಯವಹಾರದ ವಿಷಯಗಳಲ್ಲಿ ಆಗಾಗ ದೇಶದ ಮೂಲೆಮೂಲೆಗಳಿಗೆ ಸಂಚಾರ ಮಾಡಬೇಕಾಗುತ್ತದೆ. ಆದ್ದರಿಂದಲೇ ಅವರು ತಮ್ಮ ಈ ಸಂಚಾರಕ್ಕೆ ಯಾವುದೇ ರೀತಿಯ ತೊಂದರೆ ಆಗಬಾರದು ಎನ್ನುವ ಕಾರಣಕ್ಕೆ ಹೆಲಿಕಾಪ್ಟರ್ ಖರೀದಿ ಮಾಡಿ ಈಗ ತನ್ನದೇ ಹೆಲಿಕ್ಯಾಪ್ಟರ್ ನಲ್ಲಿ ಕುಳಿತು ಕುಳಿತು ಪ್ರವಾಸವನ್ನು ಮಾಡಲು ಸಜ್ಜಾಗುತ್ತಿದ್ದಾರೆ.‌

ಕೃಷಿ ಮತ್ತು ಹಾಲಿನ ವ್ಯಾಪಾರ ಎರಡನ್ನೂ ಕೂಡ ಸಮದೂಗಿಸಿಕೊಂಡು ಬರುತ್ತಿರುವ ಜನಾರ್ಧನ್ ಅವರು ಹೆಲಿಕ್ಯಾಪ್ಟರ್ ಅನ್ನು ಕೊಂಡು ಕೊಂಡ ನಂತರ ತಾನೇ ಅದನ್ನು ಚಲಾಯಿಸುವ ಪ್ರಯತ್ನಕ್ಕೆ ಕೂಡಾ ಮಾಡುವುದಾಗಿ ಹೇಳಿದ್ದಾರೆ. ಕೃಷಿಯ ಜೊತೆಗೆ ಅವರು ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಕೂಡ ತನ್ನನ್ನು ತಾನು ತೊಡಗಿಸಿಕೊಂಡಿದ್ದು, ಅನೇಕ ಸಂದರ್ಭಗಳಲ್ಲಿ ತಮ್ಮ ವ್ಯವಹಾರದ ವಿಷಯವಾಗಿ ದೇಶದ ವಿವಿಧ ಭಾಗಗಳಿಗೆ ಪ್ರವಾಸ ಮಾಡಬೇಕಾಗುವುದು ಅಂತಹ ಸಂದರ್ಭಗಳಲ್ಲಿ ಪಯಣಕ್ಕೆ ನೆರವು ನೆರವಾಗಲಿ ಎನ್ನುವ ಕಾರಣಕ್ಕೆ ಆದರೂ ಸ್ವಂತ ಹೆಲಿಕಾಪ್ಟರನ್ನು ಏಕೆ ಖರೀದಿ ಮಾಡಬಾರದೆಂಬ ಯೋಚನೆಯನ್ನು ಮಾಡಿದರು.

ಹೆಲಿಕಾಪ್ಟರ್ ಖರೀದಿ ಮಾಡಿರುವ ವಿಷಯವಾಗಿ ಜನಾರ್ಧನ್ ಅವರು ಮಾತನಾಡುತ್ತಾ, ಡೈರಿ ವ್ಯಾಪಾರ ವಿಷಯವಾಗಿ ಆಗಾಗ ಪಂಜಾಬ್, ಹರಿಯಾಣ ಗುಜರಾತ್ ಹಾಗೂ ರಾಜಸ್ಥಾನ ಗಳಂತಹ ರಾಜ್ಯಗಳಲ್ಲಿನ ವಿವಿಧ ಪ್ರದೇಶಗಳಿಗೆ, ದೂರದ ಸ್ಥಳಗಳಿಗೆ ಹೋಗಬೇಕಾಗುತ್ತದೆ. ಅದಕ್ಕೆ ತನ್ನದೇ ಆದ ಹೆಲಿಕಾಪ್ಟರ್ ಖರೀದಿ ಮಾಡಿದ್ದಾಗಿ ಹೇಳಿದ್ದಾರೆ. ಜನಾರ್ಧನ್ ಅವರು 30 ಕೋಟಿ ರೂಪಾಯಿ ಬೆಲೆ ಬಾಳುವ ಹೆಲಿಕ್ಯಾಪ್ಟರ್ ಅನ್ನು ಖರೀದಿಸಿರುವ ವಿಚಾರ ಪ್ರಸ್ತುತ ಅವರು ವಾಸಿಸುತ್ತಿರುವ ಪ್ರದೇಶದಲ್ಲಿ ಜನರ ಆಸಕ್ತಿಯನ್ನು ಕೆರಳಿಸಿರುವ ವಿಚಾರವಾಗಿದೆ. ಜನಾರ್ಧನ್ ಅವರ ಮನೆಯ ಬಳಿಯಲ್ಲಿಯೇ ಹೆಲಿಪ್ಯಾಡ್, ಪೈಲೆಟ್ ರೂಮ್, ಟೆಕ್ನಿಷಿಯನ್ ರೂಮ್ ಗಳನ್ನು ಸಿದ್ದಪಡಿಸಲಾಗುತ್ತಿದೆ.

ಜನಾರ್ಧನ್ ಅವರು ತಮ್ಮ ಎರಡೂವರೆ ಎಕರೆ ಜಮೀನಿನಲ್ಲಿ ರೌಂಡ್ ಪ್ಯಾಡ್ ಮತ್ತು ಇತರೆ ಅವಶ್ಯಕತೆಗಳನ್ನು ಅಳವಡಿಸುವುದಾಗಿ ಹೇಳಿದ್ದಾರೆ.
ರೈತ ಜನಾರ್ಧನ್ ಅವರು ಖರೀದಿ ಮಾಡಿರುವ ಈ 30 ಕೋಟಿ ರೂಪಾಯಿಗಳ ಹೆಲಿಕ್ಯಾಪ್ಟರ್ ಬರುವ ಮಾರ್ಚ್ ತಿಂಗಳಿನ 15ನೇ ತಾರೀಕು ಅಧಿಕೃತವಾಗಿ ಅವರ ಕೈಸೇರಲಿದೆ. ವಾಸ್ತವವಾಗಿ ಭಿವಂಡಿ ಪ್ರದೇಶದಲ್ಲಿ ಅನೇಕ ದೊಡ್ಡ ದೊಡ್ಡ ಕಂಪನಿಗಳಿಗಾಗಿ ಗೋದಾಮುಗಳನ್ನು ನಿರ್ಮಾಣ ಮಾಡಲಾಗಿದೆ.
ಈ ಗೋದಾಮು ಗಳಿಂದ ಅವುಗಳ ಮಾಲೀಕರಿಗೆ ಕಂಪನಿಗಳ ಕಡೆಯಿಂದ ದೊಡ್ಡ ಮಟ್ಟದಲ್ಲಿ ಬಾಡಿಗೆ ಕೂಡಾ ದೊರೆಯುತ್ತದೆ. ಅಮೆರಿಕಾದ ಅಧ್ಯಕ್ಷರ ಬೆಂಗಾವಲು ಪಡೆಯಲ್ಲಿರುವ ಕ್ಯಾಡಿಲಾಕ್ ಕಾರು ಮೊದಲು ಖರೀದಿ ಮಾಡಿದ್ದು ಮುಂಬೈ ನಗರದಲ್ಲಿ ಅಲ್ಲ, ಬದಲಾಗಿ ಭಿವಂಡಿಯಲ್ಲಿ ಎನ್ನುವುದು ಬಹಳ ಕುತೂಹಲಕಾರಿ ವಿಷಯವಾಗಿದೆ.

ಈ ಪ್ರದೇಶದಲ್ಲಿ ಜನಾರ್ಧನ್ ಅವರು ಕೂಡ ಕೆಲವು ಗೋದಾಮುಗಳ ಮಾಲೀಕರೂ ಆಗಿದ್ದಾರೆ. ಅವರು ದೊಡ್ಡ ದೊಡ್ಡ ಕಂಪನಿಗಳಿಗೆ ಅವುಗಳನ್ನು ಬಾಡಿಗೆಗೆ ನೀಡಿದ್ದಾರೆ.‌ ಅವರು ಕಂಪನಿಗಳಿಂದ ದೊಡ್ಡ ಮೊತ್ತದ ಬಾಡಿಗೆಯನ್ನು ಕೂಡಾ ಪಡೆಯುತ್ತಾರೆ ಎನ್ನಲಾಗಿದೆ. ಒಟ್ಟಾರೆ ಕೃಷಿ ಹಾಗೂ ಹಾಲು ಮಾರಾಟ ಅವರ ಪ್ರಮುಖ ವೃತ್ತಿಯಾಗಿದ್ದು, ಇದನ್ನು ಮಾಡುತ್ತಲೇ ಅವರು ರಿಯಲ್ ಎಸ್ಟೇಟ್ ಹಾಗೂ ಇನ್ನಿತರೆ ವ್ಯವಹಾರಗಳ ಕಡೆ ಗಮನ ಹರಿಸಿರುವುದು, ರೈತನಾಗಿ ಇಷ್ಟೆಲ್ಲಾ ಅಭಿವೃದ್ಧಿ ಪಡೆದಿರುವುದು ಈಗ ಎಲ್ಲರ ಮೆಚ್ಚುಗೆಗೆ ಕಾರಣವಾಗಿದೆ.