“ಆಲೂಗಡ್ಡೆ ಸಾಗ ಏಕೆ ಮಾಡಿದ್ದು..?” ಎಂದು ವಿಚಾರಿಸಿದ್ದಕ್ಕೆ ಗಂಡನನ್ನು ದೊಣ್ಣೆಯಿಂದ ಥ’ಳಿಸಿದ ಹೆಂಡತಿ!

ಗಂಡ ಹೆಂಡಿರ ಜಗಳ ಉಂಡು ಮಲಗುವ ತನಕ ಎನ್ನುವ ಗಾದೆಯನ್ನು ನಾವು ಕೇಳಿಯೇ ಇದ್ದೇವೆ. ಆದರೆ ಇಲ್ಲೊಂದು ದಂಪತಿಯ ನಡುವೆ ಜಗಳಕ್ಕೆ ಕಾರಣವಾಗಿದ್ದೇ ಊಟದ ವಿಚಾರ ಎನ್ನುವುದು ನಿಜ. ಸಾಮಾನ್ಯವಾಗಿ ಊಟ ಮಾಡುವಾಗ ಉಪ್ಪು, ಖಾರದ ವಿಷಯದಲ್ಲಿ ಕೆಲವೊಮ್ಮೆ ಭಿನ್ನಾಭಿಪ್ರಾಯ ಬರುವುದು ಸಹಜ. ಆದರೆ ಈ ದಂಪತಿಯ ನಡುವೆ ಆಹಾರದ ವಿಚಾರದಲ್ಲಿ ಬೆಳೆದ ಮಾತುಗಳ ಪರಿಣಾಮ ಹೇಗಿದೆಯೆಂದರೆ, ಪತಿ ಆಹಾರದ ವಿಷಯವಾಗಿ ಮಾಡಿದ ಜಗಳಕ್ಕೆ ಪ್ರತಿಯಾಗಿ ತನ್ನ ಪತ್ನಿಯಿಂದ ಏಟುಗಳನ್ನು ತಿನ್ನುವ ಮೂಲಕ ಈ ವಿಷಯವು ಭಾರೀ ಸದ್ದನ್ನು ಮಾಡಿ, ಎಲ್ಲೆಡೆ ಸುದ್ದಿ ಕೂಡಾ ಆಗಿದೆ.

ಮಾಹಿತಿಯ ಪ್ರಕಾರ, ಅಹಮದಾಬಾದ್‌ನ ವಾಸನಾ ಪ್ರದೇಶದಲ್ಲಿ ವಾಸಿಸುವ 40 ವರ್ಷದ ಹರ್ಷದ್ ಗೋಹಿಲ್ ಅವರಿಗೆ ಮಧುಮೇಹದ ಸಮಸ್ಯೆ ಇದೆ. ಆದ್ದರಿಂದಲೇ ಅವರು ಆಹಾರದಲ್ಲಿ ಏನನ್ನು ತಿನ್ನಬೇಕು ಹಾಗೂ ಏನು ತಿನ್ನಬಾರದು ಎನ್ನುವುದನ್ನು ಅವರ ವೈದ್ಯರು ತಿಳಿಸಿದ್ದು, ವೈದ್ಯರು ‌ನೀಡಿರುವ ಸಲಹೆಯ ಪ್ರಕಾರ ಹರ್ಷದ್ ಅವರು ತಮ್ಮ ಆಹಾರದ ವೇಳಾಪಟ್ಟಿಯನ್ನು ಹಾಗೂ‌ ಆಹಾರದ ಮೆನುವನ್ನು ಬಳಸುತ್ತಾರೆ. ವೈದ್ಯರು ಹರ್ಷದ್ ಅವರಿಗೆ ಅವರ ಆಹಾರದಲ್ಲಿ ಸಾಧ್ಯವಾದಷ್ಟು ಆಲೂಗಡ್ಡೆಯ ಸೇವನೆಯನ್ನು ಕಡಿಮೆ ಮಾಡುವಂತೆ ಸೂಚನೆಯನ್ನು ನೀಡಿದ್ದಾರೆ. ಆದರೆ ಕಳೆದ ಶುಕ್ರವಾರ ಊಟದಲ್ಲಿ ಹರ್ಷದ್ ಅವರ ಪತ್ನಿ ಆಲೂಗಡ್ಡೆ ಸಾಗು ಮಾಡಿದ್ದಾರೆ.

ಊಟ ಮಾಡುವಾಗ, ಅಡುಗೆಯಲ್ಲಿ ಆಲೂಗಡ್ಡೆ ಸಾಗು ಇರುವುದನ್ನು ಗಮನಿಸಿದ ಹರ್ಷದ್ ಅವರು ಕೋಪಗೊಂಡು, ಹೆಂಡತಿಯನ್ನು ಆಲೂಗಡ್ಡೆ ಬಳಸಿದ ವಿಚಾರಕ್ಕೆ ವಿರೋಧ ಮಾಡಿದ್ದಾರೆ. ನನಗೆ ಆಲೂಗಡ್ಡೆ ಆರೋಗಕ್ಕೆ ಒಳ್ಳೆಯದಲ್ಲ ಅಂತ ಗೊತ್ತಿದ್ದೂ ಅದನ್ನೇಕೆ ಮಾಡಿದೆ ಎಂದು ಹೆಂಡತಿಯ ಮೇಲೆ ಅರಚಾಡಿದ್ದಾರೆ. ಗಂಡನ ಮಾತುಗಳನ್ನು ಕೇಳಿದ ಅವರ ಪತ್ನಿಗೆ ಅದೆಲ್ಲಿಂದ ಸಿಕ್ಕಾಪಟ್ಟೆ ಕೋಪ ಬಂದಿತೋ ಗೊತ್ತಿಲ್ಲ ಆಕೆ ಮರು ಮಾತನಾಡದೇ ಸೀದಾ ಬಾತ್ ರೂಂ ಗೆ ಹೋಗಿ, ಬಟ್ಟೆ ಒಗೆಯುವಾಗ, ಬಟ್ಟೆಗಳ‌ ಕೊಳೆ ತೆಗೆಯಲು ಹೊಡೆಯುವ ದೊಣ್ಣೆಯನ್ನು ಎತ್ತಿಕೊಂಡು ಬಂದಿದ್ದಾರೆ.

ಬಂದವರೇ ಗಂಡನನ್ನು ಆ ದೊಣ್ಣಯಿಂದ ಚಚ್ಚಿದ್ದಾರೆ. ಹೆಂಡತಿಯ ಕೈಯಲ್ಲಿ ಏಟು ತಿಂದು ನೋವು ಸಹಿಸಲಾರದೆ ಹರ್ಷದ್ ಅರಚಾಡಿದ್ದು, ಅವರ ಚೀರಾಟವನ್ನು ಕೇಳಿಸಿಕೊಂಡ ನೆರೆ ಹೊರೆಯವರು ಮನೆಯೊಳಗೆ ಬಂದು, ಹರ್ಷದ್ ಅವರನ್ನು ಅವರ ಪತ್ನಿಯಿಂದ ರಕ್ಷಣೆ ಮಾಡಿದ್ದಾರೆ. ಹೆಂಡತಿಯ ಹೊಡೆತಕ್ಕೆ ಭುಜ, ಮತ್ತಿತರ ಕಡೆ ಗಾಯಗೊಂಡ ಹರ್ಷದ್ ಅವರನ್ನು ಚಿಕಿತ್ಸೆಗಾಗಿ ಅಹಮದಾಬಾದ್ ನ ಸಿವಿಲ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಆಸ್ಪತ್ರೆಯಲ್ಲಿ ಅವರ ಪರೀಕ್ಷೆ ಮಾಡಿದ ನಂತರ ಹರ್ಷದ್ ಭುಜದಲ್ಲಿ ಫ್ರಾಕ್ಚರ್ ಆಗಿರುವುದು ದೃಢವಾಗಿದ್ದು, ಹರ್ಷದ್ ತಮ್ಮ ಹೆಂಡತಿಯ ವಿರುದ್ಧ ಪೊಲೀಸರಲ್ಲಿ ದೂರನ್ನು ದಾಖಲಿಸಿದ್ದಾರೆ.