ಇಡ್ಲಿ, ದೋಸೆ ಹಿಟ್ಟಿನ ಮಿಶ್ರಣ ಮಾರಾಟ ಮಾಡಿ, 100 ಕೋಟಿಗಳ ಕಂಪನಿ ಸ್ಥಾಪಿಸಿದ ಕೂಲಿ ಕಾರನ ಮಗ!

ನಾವು ನಮ್ಮ ದೈನಂದಿನ ಜೀವನದಲ್ಲಿ ಅನೇಕ ಸಣ್ಣ ಪುಟ್ಟ ವಸ್ತುಗಳನ್ನು ಬಳಸುತ್ತಲೇ ಇರುತ್ತೇವೆ. ನಮ್ಮೆಲ್ಲರಿಗೂ ಅವುಗಳ ಬೆಲೆ ಕೇವಲ ಕೆಲವೇ ರೂಪಾಯಿಗಳು ಎನಿಸುತ್ತದೆ. ಆದರೆ ಅಂತಹ ಚಿಕ್ಕ ಚಿಕ್ಕ ವಸ್ತುಗಳಿಂದಲೇ ಕೆಲವರು ದೊಡ್ಡ ಮಟ್ಟದಲ್ಲಿ ಹಣವನ್ನು ಗಳಿಸುತ್ತಲಿರುತ್ತಾರೆ. ಅವಕಾಶಗಳನ್ನು ಹಾಗೂ ಸಾಧ್ಯತೆಗಳನ್ನು ಸದಾ ಹುಡುಕುವ ವ್ಯಕ್ತಿಯೇ ಒಂದು ದಿನ ಉದ್ಯಮಶೀಲ ವ್ಯಕ್ತಿಯಾಗುವನು. ಈ ಒಂದು ಕೌಶಲ್ಯವೇ ಒಬ್ಬ ಸಾಮಾನ್ಯ ವ್ಯಕ್ತಿಯನ್ನು ದೊಡ್ಡ ಉದ್ಯಮಿಯನ್ನಾಗಿ, ಕೋಟಿಗಳ ಕಂಪನಿಯ ಮಾಲೀಕನನ್ನಾಗಿ ಮಾಡಿದೆ. ಈ ವ್ಯಕ್ತಿಯು ಸಾಮಾನ್ಯ ಎನಿಸುವ ಇಡ್ಲಿ, ದೋಸೆ ಹಾಗೂ ಇನ್ನಿತರೆ‌ ತಿಂಡಿಗಳನ್ನು ಮಾರುತ್ತಲೇ ಕೋಟಿಗಳ ಕಂಪನಿಯನ್ನು ಸ್ಥಾಪಿಸಿದ್ದಾರೆ. ಹಾಗಾದರೆ ಬನ್ನಿ ಆ ಪ್ರತಿಭಾವಂತ ವ್ಯಕ್ತಿಯ ಬಗ್ಗೆ ತಿಳಿಯೋಣ.

ಇಡ್ಲಿ ಹಾಗೂ ದೋಸೆಗಳು ಪಿಸಿ ಮುಸ್ತಫಾ ರಂತ ಸಾಮಾನ್ಯ ವ್ಯಕ್ತಿಯ ಜೀವನವನ್ನು ಸಂಪೂರ್ಣವಾಗಿ ಬದಲಿಸಿದೆ. ವ್ಯಾಪಾರ ಮಾಡುವುದು ದೊಡ್ಡ ವಿಷಯವೇನಲ್ಲ. ಆದರೆ ಎಂತಹ ಪರಿಸ್ಥಿತಿಗಳನ್ನು ಎದುರಿಸಿ ಮುಸ್ತಫ ಯಶಸ್ಸನ್ನು ಪಡೆದುಕೊಂಡಿದ್ದಾರೆ ಎನ್ನುವುದು ಒಂದು ದೊಡ್ಡ ಸಾಧನೆಯಾಗಿದೆ. ಕೇರಳದ ವಯನಾಡಿನ ಚೆನ್ನಾಲೋಡೆ ಎನ್ನುವ ಗ್ರಾಮದಲ್ಲಿ ಜನಿಸಿದ ಮುಸ್ತಫ ಅವರಿಗೆ ಈಗ 48 ವರ್ಷ ವಯಸ್ಸು. ಹುಟ್ಟಿನ ನಂತರ ಅವರು ತಮ್ಮ‌‌ ಮನೆಯಲ್ಲಿ ಕಂಡಿದ್ದು ಬಡತನ. ಮುಸ್ತಫ ಅವರ ತಂದೆ ಒಬ್ಬ ಕೂಲಿಕಾರನಾಗಿದ್ದು ಅವರು ಒಂದು ಟೀ ಎಸ್ಟೇಟ್ ನಲ್ಲಿ ಕೆಲಸವನ್ನು ಮಾಡುತ್ತಿದ್ದರು.

ಮುಸ್ತಫ ಕೂಡಾ ಶಾಲೆಯಿಂದ ಬಂದ ಕೂಡಲೇ ತಂದೆಯ ಕೆಲಸದಲ್ಲಿ ನೆರವನ್ನು ನೀಡುತ್ತಿದ್ದರು. ಆರನೇ ತರಗತಿಯಲ್ಲಿ ಮುಸ್ತಫಾ ಫೇಲಾದರು. ಆದರೆ ಮುಂದೆ ಕಷ್ಟ ಪಟ್ಟು ಓದಿ ಹತ್ತನೇ ತರಗತಿಯಲ್ಲಿ ಪ್ರಥಮ ಸ್ಥಾನ ಪಡೆದರು. ಅಲ್ಲದೇ ಶಿಕ್ಷಣದಿಂದ ಉತ್ತಮ ಬದಲಾವಣೆ ಸಾಧ್ಯ ಎಂದು ಅರಿತ ಅವರು ಓದಿನ ಕಡೆಗೆ ಹೆಚ್ಚು ಗಮನ ನೀಡಿದರು. ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಗೆ ದಾಖಲಾಗಿ ಕಂಪ್ಯೂಟರ್‌ ಸೈನ್ಸ್ ನಲ್ಲಿ ಶಿಕ್ಷಣ ಪಡೆದರು. ಒಬ್ಬ ಕೂಲಿಯವನ ಮಗ ಅಮೆರಿಕಾದ ಒಂದು ಭಾರತೀಯ ಸ್ಟಾರ್ಟ್ಟಪ್ ಮ್ಯಾನ್ ಹಟ್ಟನ ಅಸೋಸಿಯೇಟ್ಸ್ ನಲ್ಲಿ ಉದ್ಯೋಗವನ್ನು ಪಡೆದುಕೊಂಡರು..

ಉದ್ಯೋಗ ದೊರೆತು ಜೀವನ ಒಂದು ಸರಿಯಾದ ದಾರಿಗೆ ಬರುತ್ತಿದೆ ಎನ್ನುವಾಗಲೇ ಮುಸ್ತಫ ಅವರಿಗೆ ಅದೇಕೋ ಮನಸ್ಸಿಗೆ ಸಮಾಧಾನ ಎನಿಸಲಿಲ್ಲ. ಇನ್ನು ಏನಾದರೂ ದೊಡ್ಡದಾಗಿ ಮಾಡಬೇಕು ಎನ್ನುವ ತುಡಿತದಿಂದ ಎರಡು ವರ್ಷಗಳ ಕಾಲ ಬೇರೆ ಬೇರೆ ಸೆಕ್ಟರ್ ಗಳಲ್ಲಿ ಕೆಲಸವನ್ನು ಮಾಡಿದರು. ಕೊನೆಗೆ ಅವರು ಭಾರತಕ್ಕೆ ವಾಪಸಾದರು. ಕೆಲಸ ಬಿಟ್ಟು ಭಾರತಕ್ಕೆ‌‌ ಅವರು ಮರಳಿ ಬಂದಿದ್ದು ಅವರು ಮಾಡಿದ ತಪ್ಪು ನಿರ್ಧಾರ ಎಂದು ಅನೇಕರು ಹೇಳಿದರು. 2003 ರಲ್ಲಿ ಭಾರತಕ್ಕೆ ಮರಳಿದ ಮುಸ್ತಫಾ ಏನಾದರೂ ಹೊಸದಾಗಿ ಮಾಡಬೇಕೆಂದು ಆಲೋಚನೆ ಮಾಡಿದರು. ಆಗಲೇ ಅವರ ತಲೆಯಲ್ಲಿ ಬಂದ ಆಲೋಚನೆ ಐಡಿ ಫ್ರೆಶ್. ಅಂದರೆ ರೆಡಿ ದೋಸೆ ಹಾಗೂ ಇಡ್ಲಿ ಮಿಶ್ರಣವನ್ನು ಮಾರಾಟ ಮಾಡುವುದು.

2005 ರಲ್ಲಿ ಮುಸ್ತಫ 25 ಸಾವಿರ ರೂ.ಗಳ ಬಂಡವಾಳದೊಂದಿಗೆ ತಮ್ಮ ಆಲೋಚನೆಗೆ ವಾಸ್ತವ ರೂಪವನ್ನು ನೀಡಿದರು. ಆದರೆ ಇದರ ಔಪಚಾರಿಕ ಆರಂಭ 2010 ರಲ್ಲಿ ಎಂದು ಹೇಳಲಾಗುತ್ತದೆ. ‌‌ಅವರು ಈ ಕೆಲಸಕ್ಕೆ ತಮ್ಮ‌ ಚಿಕ್ಕಪ್ಪನ ಮಕ್ಕಳ ಸಹಾಯವನ್ನು ಪಡೆದುಕೊಂಡರು. ಒಂದು ಸಮಯದಲ್ಲಿ ಮುಸ್ತಫ ಅವರ ಕಂಪನಿಯಿಂದ ದೋಸೆ ಇಡ್ಲಿ ಮಿಶ್ರಣದ
ನೂರು ಪ್ಯಾಕೆಟ್ಟುಗಳನ್ನು ಮಾರಾಟ ಮಾಡಲಾಗುತ್ತಿತ್ತು. ಆದರೆ ದಿನ ಕಳೆದಂತೆ ಅದರ ಬೇಡಿಕೆಯೂ ಹೆಚ್ಚಾಯಿತು. ಇಂದು ದಿನವೊಂದಕ್ಕೆ 50,000 ಪ್ಯಾಕೆಟ್ ಗಳನ್ನು ಮಾರಾಟ ಮಾಡುತ್ತಾರೆ. 650 ಜನರಿಗೆ ಉದ್ಯೋಗ ಅವಕಾಶವನ್ನು ಕಲ್ಪಿಸಿಕೊಟ್ಟಿದ್ದಾರೆ. ಭಾರತದಲ್ಲಿ ಈಗಾಗಲೇ ತಮ್ಮ ಕಂಪನಿಯ ಹೆಸರನ್ನು ಜನಪ್ರಿಯಗೊಳಿಸುವ ಮುಸ್ತಾಫ ಅವರು ಇದೀಗ ದುಬೈ ನಲ್ಲಿ ಕೂಡಾ ತಮ್ಮ ಕಂಪನಿಯನ್ನು ಪ್ರಾರಂಭಿಸುವ ಯೋಜನೆಯನ್ನು ಮಾಡಿಕೊಳ್ಳುತ್ತಿದ್ದಾರೆ.

ಆರಂಭದ ದಿನಗಳಲ್ಲಿ ಮುಸ್ತಫ ಅವರು 5000 ಕಿಲೋಗ್ರಾಂ ಅಕ್ಕಿಯನ್ನು ಬಳೆಸಿ 15,000 ಕಿಲೋಗ್ರಾಂ ಇಡ್ಲಿ ಮತ್ತು ದೋಸೆ ಮಿಶ್ರಣವನ್ನು ಸಿದ್ಧಪಡಿಸಿ ಪ್ಯಾಕೆಟ್ ಗಳನ್ನು ಮಾಡಿ ತಮ್ಮ ಸ್ಕೂಟರ್ ಮೇಲೆ ಇಟ್ಟುಕೊಂಡು ಮಾರಾಟ ಮಾಡಲು ಹೋಗುತ್ತಿದ್ದರು. ಇಂದು ಅದೇ ಕಂಪನಿ ಅದರ ನಾಲ್ಕರಷ್ಟು ದೋಸೆ ಹಿಟ್ಟಿನ ಮಿಶ್ರಣವನ್ನು ವಿವಿಧ ಅಂಗಡಿಗಳಲ್ಲಿ ಹಾಗೂ ದೇಶದ ವಿವಿಧ ನಗರಗಳಲ್ಲಿ ಮಾರಾಟವನ್ನು ಮಾಡುತ್ತಿದೆ. 2015- 16 ರಲ್ಲಿ ಮುಸ್ತಫ ಅವರ ಕಂಪನಿಯ ಟರ್ನೊವರ್ ನೂರು ಕೋಟಿ ರೂಪಾಯಿಗಳು ಆಗಿತ್ತು. 2017 – 18ರಲ್ಲಿ ಇದು 182 ಕೋಟಿಯನ್ನು ತಲುಪಿತು. 2019 20 ರಲ್ಲಿ 350ರಿಂದ 400 ಕೋಟಿ ರೂಪಾಯಿಗಳನ್ನು ತಲುಪಿದೆ.