ಇದ್ದರೆ ಮೇಷ್ಟ್ರು ಹೀಗಿರಬೇಕು; ರೈಲು ಪ್ರವಾಸವೇ ಗೊತ್ತಿಲ್ಲದ ಮಕ್ಕಳಿಗೆ ಸ್ವಂತ ಹಣದಲ್ಲಿ ವಿಮಾನ ಪ್ರವಾಸ ಮಾಡಿಸಿದ ಮೇಷ್ಟ್ರು!
ಭಾರತ ಸ್ವತಂತ್ರವಾಗಿ 75 ವರ್ಷಗಳೇ ಕಳೆದರೂ ಇನ್ನು 75% ಜನರ ಆಕಾಶದಲ್ಲಿ ಹಾರಾಡುವ ಕನಸು ನನಸಾಗಿಲ್ಲ. ಈ ಜನ ಇನ್ನೂವರೆಗೂ ಭೂಮಿಯ ಮೇಲೆ ನಿಂತು ಮೇಲೆ ಹಾರಾಡುವ ವಿಮಾನವನ್ನೇ ನೋಡುತ್ತಾರೆ. ಕಾರಣ ಅವರ ಹತ್ತಿರ ವಿಮಾನ ಪ್ರವಾಸ ಮಾಡುವಷ್ಟು ಹಣವಿಲ್ಲ ಎಂದರೆ ಬಹುಶಃ ತಪ್ಪಾಗಲಿಕ್ಕಿಲ್ಲ.
ಇನ್ನು ವಿಶೇಷವಾಗಿ ಮಕ್ಕಳ ಬಗ್ಗೆ ವಿಚಾರ ಮಾಡಿದಾಗ ಮಕ್ಕಳಿಗೆ ಆಕಾಶದಲ್ಲಿ ಹಾರಾಡುವ ವಿಮಾನಗಳನ್ನು ನೋಡುವುದು ತುಂಬಾ ಇಷ್ಟ. ಚಿಕ್ಕಂದಿನಲ್ಲಿ ಕಾಗದದಿಂದ ವಿಮಾನ ತಯಾರಿಸುವ ಮಕ್ಕಳಿಗೆ ನಿಜವಾದ ವಿಮಾನದಲ್ಲಿ ಕುಳಿತು ಪ್ರವಾಸ ಮಾಡುವ ಆಸೆ ತುಂಬಾ ಇರುತ್ತದೆ. ಹೀಗೆಲ್ಲ ಇರುವಾಗ ಶಾಲೆಯ ಮುಖ್ಯಗುರುಗಳೊಬ್ಬರು ಮುಗ್ಧ ಮಕ್ಕಳ ಈ ಕನಸನ್ನು ಪೂರ್ಣ ಮಾಡಿರುವುದರಿಂದ ಎಲ್ಲೆಡೆಯೂ ಅವರು ಪ್ರಶಂಸೆಗೆ ಪಾತ್ರರಾಗುತ್ತಿದ್ದಾರೆ.
ಮಧ್ಯಪ್ರದೇಶದ ದೇವಾಸ್ ಜಿಲ್ಲೆಯ ಬಿಜೆಪೂರ್ ಗ್ರಾಮದಲ್ಲಿರುವ ಸರಕಾರಿ ಶಾಲೆಯ ಮುಖ್ಯಗುರುಗಳಾದ ಕಿಶೋರ್ ಕಣಸೆ ಇವರು ಸರಕಾರಿ ಶಾಲೆಯ 19 ಮಕ್ಕಳಿಗೆ ತಮ್ಮ ಸ್ವಂತ ಹಣದಲ್ಲಿ ವಿಮಾನ ಪ್ರವಾಸವನ್ನು ಮಾಡಿಸಿ ಆ ಮಕ್ಕಳ ಮನಸ್ಸನ್ನು ಗೆದ್ದಿದ್ದಾರೆ. ಕಿಶೋರ್ ಸರ್ ಅವರು ತಮ್ಮ ಉಳಿತಾಯದ ಹಣದಿಂದ ಮಕ್ಕಳಿಗೆ ಈ ಸಂತೋಷವನ್ನು ನೀಡಿದ್ದಾರೆ. ಮಕ್ಕಳ ಈ ಆನಂದಕ್ಕಾಗಿ ಕಿಶೋರ್ ಅವರಿಗೆ ಒಟ್ಟು 60 ಸಾವಿರ ರೂಪಾಯಿಗಳ ಖರ್ಚು ತಗುಲಿತು.
ಕಿಶೋರ್ ಸರ್ ಅವರ ಹೇಳುವ ಪ್ರಕಾರ, ನಾನು ತುಂಬಾ ದಿವಸಗಳಿಂದ ವಿಮಾನಿನ ಟಿಕೆಟ್ ಮೇಲೆ ಗಮನವಿಟ್ಟಿದ್ದೆ. ಯಾವಾಗ ಟಿಕೆಟ್ ಬೆಲೆ ಕಡಿಮೆಯಾಯಿತು ಆಗ ಮೊದಲು ಅಡ್ವಾನ್ಸ್ ಬುಕಿಂಗ್ ಮಾಡಿದೆ. ನಾನು ವಿಮಾನದ ಪ್ರವಾಸಕ್ಕಾಗಿ ಕರೆದೊಯ್ದ ಮಕ್ಕಳಲ್ಲಿ ಕೆಲವು ಮಕ್ಕಳು ಇಲ್ಲಿಯವರೆಗೆ ರೈಲು ಪ್ರವಾಸವನ್ನು ಸಹ ಮಾಡಿಲ್ಲ. ಹೀಗಿರುವಾಗ ವಿಮಾನ ಪ್ರವಾಸವು ಅವರಿಗಾಗಿ ಒಂದು ಸುಂದರವಾದ ಕನಸೇ ಇತ್ತು ಎಂದು ಹೇಳಬಹುದು.
ಸರ್ಕಾರಿ ಶಾಲೆಯಲ್ಲಿ 6,7,8 ನೇ ವರ್ಗದಲ್ಲಿ ಕಲಿಯುವ ಮಕ್ಕಳು ಮೊಟ್ಟಮೊದಲ ಬಾರಿಗೆ ಇಂದೂರಿನ ಏರ್ಪೋರ್ಟ್ ತಲುಪಿದಾಗ ಅವರ ಮುಖದ ಮೇಲೆ ಸಂತೋಷದ ಭಾವನೆಗಳು ಸ್ಪಷ್ಟವಾಗಿ ಕಾಣುತ್ತಿದ್ದವು. ಅವರ ಮುಖದ ಮೇಲೆ ಅದ್ಭುತವಾದ ಖುಷಿ ಮೂಡಿತ್ತು. ಇಲ್ಲಿಂದ ಮೇಷ್ಟ್ರು ಮತ್ತು ಮಕ್ಕಳು ದೆಹಲಿಗೆ ಹೋಗುವ ಫ್ಲೈಟ್ ಏರಿ ಅಲ್ಲಿಂದ ದೆಹಲಿ ದರ್ಶನಕ್ಕೆ ಹೋದರು.
ಕಿಶೋರ್ ಸರ್ ಅವರು ಒಮ್ಮೆ ಮಕ್ಕಳ ಜೊತೆಗೆ ಟ್ರೈನ್ ನಲ್ಲಿ ಆಗ್ರಾದಿಂದ ಇಂದೋರ್ ಗೆ ಬರುವಾಗ ಮುಂದಿನ ಬಾರಿ ವಿಮಾನದಲ್ಲಿ ಪ್ರವಾಸ ಮಾಡೋಣ ಎಂದು ಮಕ್ಕಳು ತಮ್ಮತಮ್ಮಲ್ಲೇ ಮಾತನಾಡುತ್ತಿರುವುದನ್ನು ಕೇಳಿದ್ದರು. ಇಲ್ಲಿಂದಲೇ ಕಿಶೋರ್ ಸರ್ ಅವರಿಗೆ ಮಕ್ಕಳಿಗೊಮ್ಮೆ ವಿಮಾನದಲ್ಲಿ ಪ್ರವಾಸ ಮಾಡಿಸಬೇಕೆಂಬ ಹಂಬಲ ಹುಟ್ಟಿತಂತೆ.
ಮಕ್ಕಳು ಇಂದೋರ್ ನಿಂದ ದೆಹಲಿ ಪ್ರವಾಸ ಮಾಡಿ ಮರಳಿ ಬರುವಾಗ ಟ್ರೈನ್ ನಿಂದ ವಾಪಸಾಗಿದ್ದಾರೆ. ಮಕ್ಕಳ ಜೊತೆಗೆ ನಿತಿನ್ ಗುಪ್ತ ಮತ್ತು ಆಶಾ ತಿಲೋಡಿಯ ಹೆಸರಿನ ಇಬ್ಬರು ಬೇರೆ ಶಿಕ್ಷಕರು ಸಹ ಇದ್ದರು. ವಿಶೇಷವೆಂದರೆ ಈ ಇಬ್ಬರು ಶಿಕ್ಷಕರು ಸಹ ವಿಮಾನ ಪ್ರವಾಸ ಮೊಟ್ಟಮೊದಲ ಬಾರಿಗೆ ಮಾಡುತ್ತಿದ್ದರು.
ಸರಕಾರಿ ಶಾಲೆಯಲ್ಲಿ ಕಲಿಯುವ ಮಕ್ಕಳನ್ನು ಮೇಷ್ಟ್ರು ತಮ್ಮ ಸ್ವಂತ ಹಣದಲ್ಲಿ ವಿಮಾನ ಪ್ರವಾಸ ಮಾಡಿಸಿದ್ದಕ್ಕಾಗಿ ಎಲ್ಲೆಡೆ ಪ್ರಶಂಸೆಗೆ ಪಾತ್ರರಾಗಿದ್ದಾರೆ.