ಈ ಮಹಿಳೆ ಓದಿದ್ದು ಕೇವಲ 5 ನೇ ತರಗತಿ, 2 ಹಸುಗಳಿಂದ ಹಾಲಿನ ವ್ಯಾಪಾರ ಆರಂಭಿಸಿದರು, ಈಗಿನ ಸಂಪಾದನೆ ವರ್ಷಕ್ಕೆ 15-20 ಲಕ್ಷ!

ಶ್ರದ್ಧೆ ಹಾಗೂ ಕಠಿಣ ಪರಿಶ್ರಮವನ್ನು ನಂಬಿದವರಿಗೆ ಜೀವನದಲ್ಲಿ ಯಶಸ್ಸನ್ನು ಪಡೆಯುವುದಕ್ಕೆ ಯಾವುದೇ ದೊಡ್ಡ ದೊಡ್ಡ ಪದವಿಗಳ ಅವಶ್ಯಕತೆ ಇರುವುದಿಲ್ಲ. ನಾವು ಇಂದು ಅಂತಹುದೇ ಒಂದು ಸಾಧನೆಯನ್ನು ಮೆರೆದಿರುವ ಒಬ್ಬ ಮಹಿಳೆಯ ಬಗ್ಗೆ ತಿಳಿಸಲಿದ್ದೇವೆ. ಆಕೆಯ ಬಳಿ ವಿದ್ಯಾರ್ಹತೆಯ ಯಾವುದೇ ದೊಡ್ಡ ದೊಡ್ಡ ಪದವಿಗಳು ಇಲ್ಲವಾದರೂ ನಿರಂತರ ಪರಿಶ್ರಮ ಹಾಗೂ ಕೆಲಸದ ಮೇಲಿನ ಶ್ರದ್ಧೆಯಿಂದ ತನ್ನ ಜೀವನವನ್ನು ರೂಪಿಸಿಕೊಂಡಿದ್ದಾರೆ. ನಾವಿಂದು ಹೇಳಲು ಹೊರಟಿರುವುದು ಲಕ್ನೋದ ನಿವಾಸಿ ಬಿಟಾನಾ ದೇವಿಯ ಬಗ್ಗೆ‌. ಈ ಮಹಿಳೆ ತಮ್ಮ ಸಾಧನೆಯಿಂದ ದೇಶದ ಅನೇಕ ಮಹಿಳೆಯರಿಗೆ ಸ್ಪೂರ್ತಿ ಆಗಿರುವುದು ಮಾತ್ರವೇ ಅಲ್ಲದೇ, ಇವರ ಶ್ರಮ ಹಾಗೂ ಸಾಧನೆಯನ್ನು ಗುರುತಿಸಿ ರಾಷ್ಟ್ರದ ರಾಷ್ಟ್ರಪತಿಯವರು ಕೂಡ ಆಕೆಯನ್ನು ಸನ್ಮಾನಿಸಿದ್ದಾರೆ. ಹಾಗಿದ್ದರೆ ಆ ಮಹಿಳೆಯ ಸ್ಪೂರ್ತುಯ ಕಥೆಯನ್ನು ತಿಳಿಯೋಣ ಬನ್ನಿ.

ಬಿಟಾನಾ ದೇವಿ ಅವರು ರಾಯ್ ಬರೇಲಿಯ ಬಳಿ ಸೆಹಾಗೋ ಎನ್ನುವ ಹಳ್ಳಿಯಲ್ಲಿ ಜನಿಸಿದರು. ಇವರ ತಂದೆ ನಾರಾಯಣ ಅವರು ಕೃಷಿಕರಾಗಿದ್ದರು. ಮನೆಯ ಕೊನೆಯ ಮಗಳಾದ ಇವರಿಗೆ ಇಬ್ಬರು ಅಣ್ಣಂದಿರು ಇದ್ದಾರೆ. ಇವರ ಗ್ರಾಮದಲ್ಲಿ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಅಷ್ಟೊಂದು ಪ್ರಾಧಾನ್ಯತೆ ಇರಲಿಲ್ಲ, ಹೆಚ್ಚಿನ ಓದಿಗೆ ಹೆಣ್ಣು ಮಕ್ಕಳನ್ನು ಹೊರಗೆ ಕಳಿಸುವುದು ಕೂಡಾ ತಪ್ಪು ಎನ್ನುವ ಪರಿಸ್ಥಿತಿ. ಆದ ಕಾರಣ ಇಂತಹುದೇ ಹಳೆಯ ವಿಚಾರಧಾರೆಗಳಿಂದ ಪ್ರೇರಿತರಾಗಿದ್ದ ಇವರ ಕುಟುಂಬದಲ್ಲಿ ಕೂಡಾ ಗಂಡು ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಿದರು. ಬಿಟಾನಾ ದೇವಿ 5 ನೇ ತರಗತಿ ತೇರ್ಗಡೆಯಾದ ಮೇಲೆ ಅವರ ತಂದೆ-ತಾಯಿ ಮಗಳ ಶಿಕ್ಷಣಕ್ಕೆ ಪ್ರೋತ್ಸಾಹವನ್ನು ನೀಡಲಿಲ್ಲ. 15 ನೇ ವಯಸ್ಸಿಗೆ ಲಕ್ನೋದ ನಿಗೋಹ ಎನ್ನುವ ಗ್ರಾಮದ ಹರಿನಾಮ ಎನ್ನುವವರಿಗೆ ಕೊಟ್ಟೂರು ಬಿಟಾನಾ ಅವರ ವಿವಾಹ ಮಾಡಿದರು.

ಕೇವಲ 5 ನೇ ತರಗತಿಯವರೆಗೆ ಶಿಕ್ಷಣವನ್ನು ಪಡೆದಿರುವ ಇವರು ಇಂದು ಡೈರಿ ಉದ್ಯಮವನ್ನು ನಡೆಸುತ್ತಿದ್ದಾರೆ. 28 ವರ್ಷಗಳ ಹಿಂದೆ ಎರಡು ಹಸುಗಳ ಮೂಲಕ ಇವರು ತಮ್ಮ ಕೆಲಸವನ್ನು ಆರಂಭಿಸಿದರು. 1982 ರಲ್ಲಿ ಬಿಟಾನಾ ಅವರಿಗೆ ಮೊದಲ ಗಂಡು ಮಗುವಾದಾಗ ಅವರ ತಂದೆ ಮಗುವಿಗೆ ಹಾಲಿನ ಅವಶ್ಯಕತೆಗಾಗಿ ಎಂದು ಒಂದು ಕರುವನ್ನು ಮಗಳಿಗೆ ಉಡುಗೊರೆ ನೀಡಿದರು. ಬಿಟಾನಾ ದೇವಿ ಕರುವನ್ನು ಚೆನ್ನಾಗಿ ಆರೈಕೆ ಮಾಡಿ ಬೆಳೆಸಿದ ಮೇಲೆ, ಅದು ಪ್ರತಿದಿನ ಎರಡು ಲೀಟರ್ ಹಾಲನ್ನು ಕೊಡುತ್ತಿತ್ತು. ಇದರಲ್ಲಿ ಅವರ ಮಗ ಸ್ವಲ್ಪ ಹಾಲು ಕುಡಿದರೆ, ಉಳಿದಿದ್ದು ಮನೆಯವರಿಗೆ ಬಳಕೆಯಾಗುತ್ತಿತ್ತು. 1990 ರಲ್ಲಿ ಅವರು ಮತ್ತೊಂದು ಹಸುವನ್ನು ಖರೀದಿ ಮಾಡಿದರು.

ಒಮ್ಮೆ ಪರಾಗ್ ಡೈರಿಯ ಯುವಿ ಸಿಂಗ್ ಎನ್ನುವವರು ಅವರ ಮನೆಗೆ ಬಂದಾಗ, ಇವರ ಮನೆಯಲ್ಲಿದ್ದ ಹಸುಗಳನ್ನು ನೋಡಿ, ಇನ್ನಷ್ಟು ಹಸುಗಳನ್ನು ಖರೀದಿಸಿ ಡೈರಿ ಉದ್ಯಮ ಪ್ರಾರಂಭಿಸುವಂತೆ ಸಲಹೆ ನೀಡಿದಾಗ, ಬಿಟಾನಾ ದೇವಿ ಹಾಗೂ ಅವರ ಪತಿ ಇಬ್ಬರಿಗೂ ಕೂಡಾ ಇದು ಬಹಳ ಹಿಡಿಸಿತು. ಅದೂ ಅಲ್ಲದೇ ಬಿಟಾನಾ ಅವರಿಗೆ ಅದರ ಬಗ್ಗೆ ಸಾಕಷ್ಟು ಆಸಕ್ತಿ ಇದ್ದುದರಿಂದ ಬಹಳ ಉತ್ಸಾಹದಿಂದ ಒಪ್ಪಿಕೊಂಡರು ಅದಾದ ನಂತರ ಒಂದೊಂದೇ ಹಸು ಎಮ್ಮೆಗಳನ್ನು ಖರೀದಿ ಮಾಡಲು ಆರಂಭಿಸಿದರು. 15 ವರ್ಷಕ್ಕೆ ವಿವಾಹವಾದ ಬಿಟಾನಾ ಅವರ ಪತಿ ಸರ್ಕಾರಿ ಶಾಲೆಯ ಶಿಕ್ಷಕರಾಗಿದ್ದರು. ಅವರು ನೀಡಿದ ಸಹಕಾರದಿಂದ ಇಂದು ಅವರ ಡೈರಿ ಉದ್ಯಮ ದೊಡ್ಡದಾಗಿ ಬೆಳೆದಿದೆ.

ಆರಂಭದಲ್ಲಿ ಒಂದೆರಡು ಹಸುಗಳ ಮೂಲಕ ಸಿಗುತ್ತಿದ್ದ ಹಾಲನ್ನು ಮಾರಾಟ ಮಾಡುತ್ತಾ, ಅದರಿಂದ ಬಂದ ಹಣದಿಂದ ಹಸುಗಳನ್ನು ಖರೀದಿ ಮಾಡುತ್ತಿದ್ದರು. ಈಗ ಅವರ ಬಳಿ ಹಾಲು ನೀಡುವ ಒಟ್ಟು 40 ಹಸುಗಳು ಇವೆ. ಪ್ರತಿದಿನ ಬೆಳಿಗ್ಗೆ ಐದು ಗಂಟೆಗೆ ಏಳುವ ಈ ಮಹಿಳೆಯು ಹಸುಗಳಿಗೆ ಮೇವನ್ನು ಹಾಕುತ್ತಾರೆ. ಎರಡು ಗಂಟೆಗಳ ಕಾಲ ಹಾಲು ಕರೆಯುವುದಕ್ಕೆ ಮೀಸಲಿಟ್ಟಿದ್ದಾರೆ. ಹಾಲು ಕರೆದ ನಂತರ ಅದನ್ನು ಡೈರಿಗೆ ಸಾಗಿಸುವ ಕೆಲಸವನ್ನು ಕೂಡ ತಾನೇ ಸ್ವತಃ ನಿರ್ವಹಿಸುತ್ತಾರೆ. ಮನೆಯಲ್ಲಿರುವ ಹಸುಗಳನ್ನು ತನ್ನ ಮಕ್ಕಳಂತೆ ಬಿಟಾನಾ ಪೋಷಿಸುತ್ತಾ ಬರುತ್ತಿದ್ದಾರೆ.

2014-2015ರಲ್ಲಿ ಅವರು ಒಟ್ಟು 56, 567 ಲೀಟರ್ ಹಾಲು ಉತ್ಪಾದಿಸಿದ್ದರು. ಅವರು ಪರಾಗ ಡೈರಿಗೆ ಪ್ರತಿದಿನ ಸುಮಾರು 155 ಲೀಟರ್ ಹಾಲನ್ನು ಪೂರೈಸುತ್ತಾರೆ. ಪ್ರಸ್ತುತ, ಅವರ ಡೈರಿ ಫಾರಂಗಳು ಪ್ರತಿದಿನ 188 ಲೀಟರ್ ಹಾಲನ್ನು ಉತ್ಪಾದಿಸುತ್ತವೆ. ವರ್ಷವೊಂದಕ್ಕೆ ಡೈರಿ ಉದ್ಯಮದಿಂದ ಬಿಟಾನಾ ದೇವಿ ಸುಮಾರು 15 ರಿಂದ 20 ಲಕ್ಷ ರೂಪಾಯಿಗಳನ್ನು ಗಳಿಸುತ್ತಿದ್ದಾರೆ. ಸ್ಥಳೀಯ ಸರ್ಕಾರ ಇವರಿಗೆ ಹತ್ತು ಬಾರಿ ಗೋಕುಲ ಪುರಸ್ಕಾರವನ್ನು ನೀಡಿ ಸನ್ಮಾನಿಸಿದೆ. 2018ರಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಬಿಟಾನಾ ದೇವಿಯವರ ಸಾಧನೆಯನ್ನು ಸನ್ಮಾನಿಸುವ ಮೂಲಕ ಗೌರವಿಸಿದ್ದಾರೆ.