ಉಳುವಾಗ ನೆಲದಲ್ಲಿ ತೊಡಕಿದ ನೇಗಿಲು! ಅಗೆದು ನೋಡಿದರೆ ಬೆಲೆಬಾಳುವ ರತ್ನ ಮತ್ತು ಚಿನ್ನದ ಖಜಾನೆ!

ಹೊಲದಲ್ಲಿ ಉಳುವಾಗ ನೇಗಿಲು ಸಿಕ್ಕಿ ಬಿದ್ದು, ನಂತರ ಅಗೆದು ನೋಡಿದಾಗ ಬೆಲೆಬಾಳುವ ರತ್ನ ಮತ್ತು ಬಂಗಾರದ ಖಜಾನೆ ದೊರಕಿತು.

ತೆಲಂಗಾಣಾ ರಾಜ್ಯದಲ್ಲಿ ರೈತನೊಬ್ಬನಿಗೆ ತನ್ನ ಹೊಲದಲ್ಲಿ ನೇಗಿಲು ಉಳುವಾಗ ಬಂಗಾರ ಮತ್ತು ಬೆಲೆಬಾಳುವ ರತ್ನಗಳಿಂದ ಕೂಡಿದ ಖಜಾನೆ ದೊರಕಿದೆ. ಜೊತೆಗೆ ಜಮೀನಿನಿಂದ ಅಪರೂಪದ ಒಡವೆಗಳು ಹಾಗೂ ಬೆಳ್ಳಿಯ ಸರ ಹಿತ್ತಾಳೆಯ ವಸ್ತುಗಳು ದೊರೆತಿವೆ.

ಪ್ರಸ್ತುತ ಘಟನೆ ಸಂಗಾರೆಡ್ಡಿ ಜಿಲ್ಲೆಯ ಜಾಹೀರಾಬಾದ್ ಸಮೀಪ ಎರ್ರಾಗದ್ದಾಪಲ್ಲಿ ಗ್ರಾಮದ ರೈತ ಯಾಕೂಬ್ ಅಲಿಯ ತೋಟದಲ್ಲಿ ವರದಿಯಾಗಿದೆ.

ಯಾಕುಬ್ ತನ್ನ ಹೊಲದಲ್ಲಿ ಉಳುವಾಗ ನೇಗಿಲಿಗೆ ಏನಾದರೂ ತೊಡಕಿದಂತಾಯಿತು. ರೈತ ಸ್ವಲ್ಪ ಜೋರಾಗಿ ತೊಡಕಿದ ನೇಗಿಲನ್ನು ಕಿತ್ತಲು ಪ್ರಯತ್ನಿಸಿದಾಗ ಸಾಧ್ಯವಾಗದೇ ಇದ್ದಾಗ, ಯಾಕೂಬ್ ಅಲ್ಲಿ ಸ್ವಲ್ಪ ಅಗೆದನು. ಅಗೆದಾಗ ಆತ ನಿಜಕ್ಕೂ ಆಶ್ಚರ್ಯ ಚಕಿತನಾಗಿದ್ದಾನೆ. ಮೊದಲು ಆತನಿಗೆ ಕಂಚಿನ ಮೂರು ಪಾತ್ರೆಗಳು ದೊರಕಿವೆ. ಅದರಲ್ಲಿ ಬಂಗಾರ ಮತ್ತು ಬೆಳ್ಳಿಯ ಬೆಲೆಬಾಳುವ ರತ್ನಗಳಿದ್ದವು, ಹಾಗೆಯೇ ಹಿತ್ತಾಳೆಯ ಕೆಲವು ಅಪರೂಪದ ವಸ್ತುಗಳು ಇದ್ದವು.

ಯಾಕೂಬ್ ಅಲಿ ಯಾವುದೇ ಆಸೆಯ ಬಲೆಗೆ ಬೀಳದೆ ನೇರ ಪೊಲೀಸರಿಗೆ ವರದಿ ಮುಟ್ಟಿಸಿದ್ದಾನೆ. ಸ್ಥಾನಿಕ ಪೊಲೀಸರು ಮತ್ತು ಕಂದಾಯ ಇಲಾಖೆಯ ಕೆಲವು ಅಧಿಕಾರಿಗಳು ಘಟನೆಯ ಸ್ಥಳದಲ್ಲಿ ಹಾಜರಾದರು. ಜೊತೆಗೆ ಊರ ಜನರೂ ಪ್ರತ್ಯಕ್ಷರಾದರು.

ಅಧಿಕಾರಿಗಳು ಅಲ್ಲಿ ಮತ್ತಷ್ಟು ಅಗೆಸಲಾಗಿ 25 ನಾಣ್ಯಗಳು, ಕೊರಳಲ್ಲಿಯ ಆಭರಣಗಳು, ಉಂಗುರ ಮತ್ತು ಪಾತ್ರೆಗಳು ದೊರಕಿವೆ. ದೊರೆತ ಎಲ್ಲ ವಸ್ತುಗಳನ್ನು ಭಾರತೀಯ ಪುರಾತತ್ವ ಇಲಾಖೆಯ ಕಡೆಗೆ ಒಪ್ಪಿಸಲಾಯಿತು. ತಜ್ಞರ ಸಹಾಯದಿಂದ ಅಭ್ಯಸಿಸಿ ದೊರೆತ ಈ ವಸ್ತುಗಳು ಯಾರ ಮತ್ತು ಯಾವ ಕಾಲದ್ದಾಗಿವೆ ಎಂಬುದು ತಿಳಿಯಬಹುದಾಗಿದೆ.

ಜಾಹೀರಾಬಾದ್ ಇದು ಮಹಾರಾಷ್ಟ್ರದ ಔರಂಗಾಬಾದ್ ಜಿಲ್ಲೆಯ ಕಡೆಗೆ ಹೋಗುವ ಮಾರ್ಗದಲ್ಲಿದೆ. ಔರಂಗಾಬಾದ್ ನಿಜಾಮನ ಮೊದಲ ರಾಜಧಾನಿಯಾಗಿತ್ತು. ಈ ವಲಯದಲ್ಲಿ ಆಗ ಶ್ರೀಮಂತ ಜನರಿರುತ್ತಿದ್ದರು. ಜಗತ್ತಿನ ಬೆಲೆಬಾಳುವ ರತ್ನಗಳಲ್ಲೊಂದಾದ ‘ಕೊಹಿನೂರ್’ ಸಹ ಇಲ್ಲಿಯ ಗಣಿಯಲ್ಲಿಯೇ ದೊರಕಿತ್ತು. ಆದ್ದರಿಂದ ಈ ರೈತನ ಹೊಲದಲ್ಲಿ ದೊರಕಿದ ಖಜಾನೆ ಸಹಿತ ನಿಜಾಮನ ಕಾಲದಲ್ಲಿಯದೇ ಆಗಿರಬೇಕು ಎಂದು ಅಂದಾಜಿಸಲಾಗುತ್ತಿದೆ.