ಎತ್ತುಗಳಿಲ್ಲದೆ ಹೆಣ್ಣು ಮಕ್ಕಳಿಂದ ಉಳುಮೆ ಮಾಡಿಸುತ್ತಿರುವ ರೈತ; ಕಷ್ಟ ನೋಡಲಾಗದೆ ಹೊಸ ಟ್ರಾಕ್ಟರ್ ಕಳುಹಿಸಿ ಕೊಟ್ಟ ಸೋನು ಸೂದ್!
ನಟ ಸೋನು ಸೂದ್ ಯಾರಿಗೆ ಗೊತ್ತಿಲ್ಲ ಹೇಳಿ? ಕೊರೊನಾ ಸೋಂಕು ಹರಡುವ ಭೀತಿಯಲ್ಲಿ ದೇಶ ಲಾಕ್ ಡೌನ್ ಆದ ಮೇಲೆ, ಬಹುಶಃ ಈ ನಟ ಮಾಡಿದಷ್ಟು ಸದ್ದು, ಸುದ್ದಿ ಇನ್ನಾವುದೇ ನಟ ಮಾಡಿಲ್ಲ ಎಂದೇ ನಾವು ಹೇಳಬಹುದು. ಕೊರೊನಾ ಸಂಕಷ್ಟದ ಸಮಯದಲ್ಲಿ ಜಗತ್ತೇ ಬಾಗಿಲು ಮುಚ್ಚಿ ಸೋಂಕಿನ ಭೀತಿಯಲ್ಲಿ ಕಳೆಯುವಾಗ, ಈ ಸಂಕಷ್ಟಕ್ಕೆ ಸಿಲುಕಿ ನಲುಗಿದ್ದವರ ನೆರವಿಗೆ ನಾನಿದ್ದೇನೆ ಎಂದು ಧಾವಿಸಿದವರು ನಟ ಸೋನು ಸೂದ್. ತೆರೆಯ ಮೇಲೆ ನಾಯಕರಾಗಿ ಅಬ್ಬರಿಸುತ್ತಿದ್ದ ನಟರೆಲ್ಲಾ ಮನೆಗಳಲ್ಲಿ ಇರುವಾಗಲೇ, ತೆರೆಯ ಮೇಲಿನ ಖಡಕ್ ವಿಲನ್ ಸಾಮಾನ್ಯ ಜನರ ರಿಯಲ್ ಲೈಫ್ ನಲ್ಲಿ ಹೀರೋ ಆಗಿ ಹೊರಹೊಮ್ಮಿದರು.

ಲಾಕ್ ಡೌನ್ ಭೀತಿಯಲ್ಲಿ ಸಿಲುಕಿ ತಮ್ಮ ಊರುಗಳಿಗೆ ಹೋಗಲು ಪರದಾಡುತ್ತಿದ್ದ ವಲಸೆ ಕಾರ್ಮಿಕರನ್ನು ಸೋನು ಬಸ್ಸು, ರೈಲು ಹಾಗೂ ವಿಮಾನಗಳ ಮೂಲಕ ಅವರ ಊರುಗಳಿಗೆ ಕಳುಹಿಸುವ ವ್ಯವಸ್ಥೆ ಮಾಡಿದರು. ಪೋಲಿಸರಿಗೆ ಮಾಸ್ಕ್, ಫೇಸ್ ಶೀಲ್ಡ್ ಹಂಚಿದರು. ಟ್ವಿಟರ್ ನಲ್ಲಿ ಒಂದು ಪೋಸ್ಟ್ ಮೂಲಕ ಕಷ್ಟ ಎಂದವರಿಗೆ ಸಹಾಯ ಮಾಡಲು ಸಿದ್ಧರಾದರು ಸೋನು ಸೂದ್. ಅವರ ಮಾನವೀಯತೆಯನ್ನು ನೋಡಿದ ದೇಶದ ಜನರು ಮನಸ್ಸಿನಿಂದ ಅವರ ಅಭಿಮಾನಿಗಳಾಗಿಬಿಟ್ಟರು. ಸೋನು ಹೆಸರನ್ನು ತಮ್ಮ ಮಕ್ಕಳಿಗೆ, ಅಂಗಡಿಗಳಿಗೆ ಇಟ್ಟು ಅವರಿಗೆ ಧನ್ಯವಾದಗಳನ್ನು ಅರ್ಪಿಸಿದರು.

ಸೋನು ಸೇವೆ ಅಷ್ಟಕ್ಕೆ ನಿಲ್ಲಲಿಲ್ಲ. ಕೆಲವು ದಿನಗಳ ಹಿಂದೆ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಮುದಿನೇಪಲ್ಲಿ ಎಂಬಲ್ಲಿ ಬಡ ರೈತನೊಬ್ಬ ತನ್ನ ಜಮೀನು ಉಳುಮೆ ಮಾಡಲು ಎತ್ತುಗಳು ಇಲ್ಲದ ಕಾರಣ, ತನ್ನ ಇಬ್ಬರ ಹೆಣ್ಣು ಮಕ್ಕಳ ಕೈಗೆ ನೇಗಿಲು ಕೊಟ್ಟು, ತಾನು ಹೊಲ ಉಳುತ್ತಿರುವ ವೀಡಿಯೋ ಹಾಗೂ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ, ಜನ ರೈತನ ಪರಿಸ್ಥಿತಿಯನ್ನು ನೋಡಿ ಮರುಕ ಪಟ್ಟಿದ್ದರು. ಈ ಸುದ್ದಿ ಸೋನು ಸೂದ್ ಅವರ ಗಮನಕ್ಕೆ ಬಂದ ಕೂಡಲೇ ಸೋನು ಆ ಬಡ ರೈತನ ನೆರವಿಗೂ ಕೂಡಾ ಮುಂದಾಗಿದ್ದಾರೆ.

ಸೋನು ತಮ್ಮ ಟ್ವಿಟರ್ ನಲ್ಲಿ ಆ ಬಡಕುಟುಂಬಕ್ಕೆ ಒಂದು ಜೋಡಿ ಎತ್ತುಗಳ ಅವಶ್ಯಕತೆ ಇಲ್ಲ, ಅವರು ಒಂದು ಟ್ರಾಕ್ಟರ್ ಪಡೆಯಲು ಅರ್ಹತೆಯನ್ನು ಹೊಂದಿದ್ದಾರೆ. ನಾನು ಅವರಿಗೆ ಟ್ರಾಕ್ಟರ್ ಕಳುಹಿಸುತ್ತಿದ್ದೇನೆ, ಇಂದು ಸಂಜೆ ವೇಳೆಗೆ ನಿಮ್ಮ ಜಮೀನಿನಲ್ಲಿ ಟ್ರಾಕ್ಟರ್ ನಲ್ಲಿ ಉಳುಮೆ ನಡೆಯುತ್ತದೆ ಎಂದು ಹೇಳುವ ಮೂಲಕ ಆ ಬಡ ರೈತನ ಸಂಕಷ್ಟಕ್ಕೆ ಮಿಡಿದಿದ್ದು ಮಾತ್ರವೇ ಅಲ್ಲದೇ ಆತನಿಗೆ ಅತ್ಯಾವಶ್ಯಕ ಆಗಿರುವ ಟ್ರಾಕ್ಟರ್ ನೀಡಲು ಅವರು ನಿರ್ಧಾರ ಮಾಡಿದ್ದು ಶ್ಲಾಘನೀಯ.

ಸೋನು ಅವರ ಈ ಮಾನವೀಯ ಸೇವೆಗಳು ಈಗ ಎಲ್ಲೆಡೆ ಸುದ್ದಿಯಾಗುತ್ತಿದ್ದು, ಜನರು ಇಂತಹ ಗುಣ ನಮ್ಮ ರಾಜಕಾರಣಿಗಳಿಗೆ, ಸಿನಿಮಾದಲ್ಲಿ ನಾಯಕರಾಗಿ ಜನರ ನೆರವಿಗೆ ಧಾವಿಸುವ ನಟರಿಗೆ ಏಕೆ ನಿಜ ಜೀವನದಲ್ಲಿ ಜನರ ಸಹಾಯ ಮಾಡುವ ಮನಸ್ಸೇಕೆ ಬರಬಾರದು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಅಭಿಪ್ರಾಯ ಪಡುತ್ತಿದ್ದಾರೆ. ಒಂದಂತೂ ನಿಜ ಸೋನು ಸೂದ್ ಪ್ರಸ್ತುತ ಜನರ ಕಣ್ಣಿಗೆ ನಿಜವಾಗಿಯೂ ರಿಯಲ್ ಲೈಫ್ ಹೀರೋ ಆಗಿ ಕಾಣುತ್ತಿರುವುದು ಮಾತ್ರ ನಿಜ.