ಎಲೆಕ್ಟ್ರಿಕ್ ಸ್ಕೂಟರ್ ಗಳ ಜಗತ್ತಿನಲ್ಲಿ ‘ಓಲಾ’ ಸೃಷ್ಟಿಸಿದ ಸಂಚಲನ: ಒಂದೇ ದಿನದಲ್ಲಿ ಲಕ್ಷ ಸ್ಕೂಟರ್ ಗಳು ಬುಕ್ಕಿಂಗ್ ಆಯ್ತು!

ಓಲಾ ಕಂಪನಿಯ ಎಲೆಕ್ಟ್ರಿಕ್ ಸ್ಕೂಟರ್ ಗಳಿಗೆ ಭಾರತೀಯ ಗ್ರಾಹಕರು ಭರ್ಜರಿಯಾದ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ. ವಾಸ್ತವವಾಗಿ ಓಲಾ ಎಲೆಕ್ಟ್ರಿಕ್ ತನ್ನ ಸ್ಕೂಟರ್ ಗಳ ಮಾರಾಟಕ್ಕಾಗಿ ಬುಕಿಂಗ್ ಆರಂಭಿಸಿದ 24 ಗಂಟೆಗಳ ಅವಧಿಯಲ್ಲಿ 100000 ಸ್ಕೂಟರ್ ಗಳ ಬುಕಿಂಗ್ ಆಗಿದೆ ಎನ್ನಲಾಗಿದೆ. ಸ್ಕೂಟರನ್ನು ಬುಕಿಂಗ್ ಮಾಡಲು ಬಯಸುವವರು ಕಂಪನಿಯ ಅಧಿಕೃತ ವೆಬ್ಸೈಟ್ ಗೆ ಹೋಗುವ ಮೂಲಕ ಅಲ್ಲಿಂದಲೇ ಬುಕಿಂಗ್ ಮಾಡಬಹುದಾಗಿದೆ. ಸ್ಕೂಟರ್ ಬುಕಿಂಗ್ ಮಾಡಲು 499 ರೂಪಾಯಿಗಳ ಟೋಕನ್ ಹಣವನ್ನು ಪಾವತಿಸಬೇಕಾಗಿದೆ. ಈ ಹಣ ಸಂಪೂರ್ಣವಾಗಿ ಮರು ಪಾವತಿ ಮಾಡಲಾಗುವುದು ಎನ್ನುವ ಭರವಸೆಯನ್ನು ನೀಡಲಾಗಿದೆ. ಎರಡು ವಿನ್ಯಾಸದ ಸ್ಕೂಟರ್ ಗಳನ್ನು ಓಲಾ ಪರಿಚಯ ಮಾಡಲಿದ್ದು, ಬುಕಿಂಗ್ ಪ್ರಾರಂಭವಾಗಿರುವುದರಿಂದ ಇನ್ನು ಕೆಲವೇ ವಾರಗಳಲ್ಲಿ ಓಲಾ ಕಂಪನಿ ಈ ಸ್ಕೂಟರ್ ಗಳನ್ನು ಮಾರುಕಟ್ಟೆಗೆ ತರಲಿದೆ ಎಂದು ಹೇಳಲಾಗಿದೆ.

ಓಲಾ ಕಂಪನಿಯು, ಯಾವ ಗ್ರಾಹಕರು ಸ್ಕೂಟರನ್ನು ಮುಂಗಡ ಬುಕ್ಕಿಂಗ್ ಮಾಡುವರ, ಡಿಲವರಿ ವೇಳೆಯಲ್ಲಿ ಅಂತಹವರಿಗೆ ಪ್ರಾಥಮಿಕ ಆದ್ಯತೆಯನ್ನು ನೀಡಲಾಗುವುದು ಎಂದು ತಿಳಿಸಿದೆ. ಅಲ್ಲದೇ ವರದಿಗಳ ಪ್ರಕಾರ ಈ ಸ್ಕೂಟರ್ನಲ್ಲಿ ಗ್ರಾಹಕರಿಗೆ 100 ರಿಂದ 150 ಕಿಲೋಮೀಟರ್ ನ ರೇಂಜ್ ದೊರೆಯಲಿದೆ. ಈ ಸ್ಕೂಟರ್ ನಲ್ಲಿ ರಿಮೂವಬಲ್ ಲಿಥಿಯಂ ಬ್ಯಾಟರಿಯನ್ನು ನೀಡಲಾಗಿದೆ. ಇದರ ಜೊತೆಗೆ ಡಿಜಿಟಲ್ ಇನ್ಸ್ಟ್ರುಮೆಂಟ್ ಕನ್ಸೋಲ್, ಕ್ಲೌಡ್ ಕನೆಕ್ಟಿವಿಟಿ, ಎಲಾಯ್ ವ್ಹೀಲ್ ಗಳ ವೈಶಿಷ್ಟ್ಯಗಳನ್ನು ನೀಡಲಾಗಿದೆ. ಇದೇ ವೇಳೆಯಲ್ಲಿ ಸ್ಕೂಟರ್ ನ ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಸಸ್ಪೆನ್ಷನ್ ಸಹ ನೀಡಲಾಗಿದೆ.

ಇತ್ತೀಚೆಗಷ್ಟೇ ಬಿಡುಗಡೆ ಮಾಡಿದ ವೀಡಿಯೋ ಒಂದದರಲ್ಲಿ ಓಲಾ ಎಲೆಕ್ಟ್ರಿಕ್ ಸ್ಕೂಟರ್ ಹೇಗಿದೆ ಎನ್ನುವುದನ್ನು ತೋರಿಸಲಾಗಿದೆ. ಈ ವಿಡಿಯೋದಲ್ಲಿ ಸ್ಕೂಟರ್ ನ ಅಂಡರ್ ಸೀಟ್ ಸ್ಟೋರೇಜ್, ಸ್ಪೀಡ್ ಆ್ಯಕ್ಸಿಲರೇಶನ್ ಮತ್ತು ಸೆಗ್ಮೆಂಟ್ ಗಳಲ್ಲಿ ಸ್ಕೂಟರ್ ನ ವೇಗದ ಮೇಲೆ ಹೆಚ್ಚು ಗಮನವನ್ನು ವಹಿಸಲಾಗಿದೆ. ಆದಾಗ್ಯೂ ಈ ಹೊಸ ಸ್ಕೂಟರ್ ನ ಸ್ಪೆಸಿಫಿಕೇಶನ್ ಕುರಿತಾಗಿ ಕಂಪನಿಯು ಅಧಿಕೃತವಾಗಿ ಇನ್ನೂ ಯಾವುದೇ ರೀತಿಯಾದಂತಹ ಮಾಹಿತಿಗಳನ್ನು ಬಹಿರಂಗಪಡಿಸಿಲ್ಲ. ಆದ್ದರಿಂದಲೇ ವಾಹನದ ಸಂಪೂರ್ಣ ವೈಶಿಷ್ಟ್ಯಗಳ ಕುರಿತಾಗಿ ಈಗಲೇ ಹೇಳುವುದು ಸಾಧ್ಯವಿಲ್ಲ.

ಓಲಾ ಎಲೆಕ್ಟ್ರಿಕ್ ಸ್ಕೂಟರನ್ನು ತಮಿಳುನಾಡಿನ ಓಲಾ ಎಲೆಕ್ಟ್ರಿಕ್ ಉತ್ಪಾದನಾ ಘಟಕದಲ್ಲಿ ಸಿದ್ಧಪಡಿಸಲಾಗುತ್ತಿದೆ. ಇದು ಕೈಗಾರಿಕೆಗಳ 4.0 ಮಾನದಂಡಗಳನ್ನು ಅಳವಡಿಸಿಕೊಂಡು ಕೆಲಸವನ್ನು ಮಾಡುತ್ತಿದೆ. ಈ ಒಂದು ಉತ್ಪಾದನಾ ಘಟಕದಲ್ಲಿ ವರ್ಷವೊಂದಕ್ಕೆ ಸುಮಾರು 10 ಮಿಲಿಯನ್ ಅಂದರೆ ಒಂದು ಕೋಟಿ ಸ್ಕೂಟರ್ ಗಳನ್ನು ಉತ್ಪಾದನೆ ಮಾಡಬಹುದಾಗಿದೆ. ಒಂದನೇ ಹಂತದಲ್ಲಿ ಇದರ ಸಾಮರ್ಥ್ಯ ವರ್ಷಕ್ಕೆ 2000000 ಇದ್ದು, ಈ ಉತ್ಪಾದನಾ ಘಟಕದಲ್ಲಿ ಹತ್ತು ಸಾಮಾನ್ಯ ಜೋಡಣೆಯ ಮಾರ್ಗಗಳು ಇರುವುದರಿಂದ ಇದರ ಸಹಾಯದಿಂದ ಪ್ರತಿ ಎರಡು ಸೆಕೆಂಡಿಗೆ ಒಂದು ಎಲೆಕ್ಟ್ರಿಕ್ ಸ್ಕೂಟರನ್ನು ಜೋಡಿಸಬಹುದಾಗಿದೆ.

ಉತ್ಪಾದನಾ ಘಟಕದಲ್ಲಿ ದಿನವೊಂದಕ್ಕೆ 25000 ಬ್ಯಾಟರಿಗಳನ್ನು ನಿರ್ಮಾಣ ಮಾಡಬಹುದಾದ ಸಾಮರ್ಥ್ಯ ಇದೆ. ಭಾರತದಲ್ಲಿ ಸ್ಥಳೀಯವಾಗಿ ನಿರ್ಮಾಣ ಮಾಡುತ್ತಿರುವ ಓಲಾ‌ ಕಂಪನಿಯ ಈ ಎಲೆಕ್ಟ್ರಿಕ್ ಬೈಕುಗಳನ್ನು ಯುರೋಪ್, ಯುಕೆ, ಲ್ಯಾಟಿನ್ ಅಮೆರಿಕ, ಏಷ್ಯಾ ಪೆಸಿಫಿಕ್, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ ಗೆ ರಫ್ತು ಮಾಡಲಾಗುತ್ತದೆ ಎಂದು ಹೇಳಲಾಗಿದೆ ಈ ಮೂಲಕ ಕಂಪನಿಯು ಓಲಾ ಸ್ಕೂಟರ್ ಗಳನ್ನು ವಿದೇಶಗಳಲ್ಲಿ ಕೂಡ ಮಾರಾಟ ಮಾಡಲು ಹಾಗೂ ಜನಪ್ರಿಯ ಗೊಳಿಸಲು ಯೋಜನೆಗಳನ್ನು ಸಿದ್ಧಪಡಿಸಿದೆ.