ಒಂದು ಕಾಲದಲ್ಲಿ ಆಶ್ರಯಕ್ಕೂ ಗತಿ ಇಲ್ಲದೆ, ಪಾನಿಪುರಿ ಮಾರುತ್ತ ಉಪಜೀವನ ನಡೆಸುತ್ತಿದ್ದ ವ್ಯಕ್ತಿ, ಇಂದು ಐಪಿಎಲ್ ಹರಾಜಿನಲ್ಲಿ 8 ಕೋಟಿ ರೂಪಾಯಿ ಪಡೆದುಕೊಂಡ!

IPL-2022 ಗಾಗಿ ತಯಾರಿ ಪ್ರಾರಂಭವಾಗಿದೆ. ಪ್ರಸ್ತುತ ಎಂಟು ಐಪಿಎಲ್ ತಂಡಗಳು ಉಳಿಸಿಕೊಂಡಿರುವ ಆಟಗಾರರ ಪಟ್ಟಿಯನ್ನು ಈ ಬಾರಿ ಬಿಸಿಸಿಐಗೆ ನೀಡಲಾಗಿದೆ. ಮಂಗಳವಾರ ರಾಜಸ್ಥಾನ್ ರಾಯಲ್ಸ್ ತನ್ನೊಂದಿಗೆ ಉಳಿಸಿಕೊಂಡಿರುವ ಆಟಗಾರರ ಹೆಸರನ್ನು ಪ್ರಕಟಿಸಿತು. ರಾಜಸ್ಥಾನ್ ರಾಯಲ್ಸ್ ತಂಡ ಸಂಜು ಸ್ಯಾಮ್ಸನ್, ಜೋಸ್ ಬಟ್ಲರ್ ಮತ್ತು ಯಶಸ್ವಿ ಜೈಸ್ವಾಲ್ ಸೇರಿದಂತೆ ಮೂವರು ಆಟಗಾರರನ್ನು ಮಾತ್ರ ಉಳಿಸಿಕೊಂಡಿದೆ.

ಇವರಲ್ಲಿ ಯಶಸ್ವಿ ಜೈಸ್ವಾಲ್ ಮರಳಿರುವ ಸುದ್ದಿ ಎಲ್ಲರ ಗಮನ ಸೆಳೆದಿದೆ. ವರದಿಗಳ ಪ್ರಕಾರ ಅವರನ್ನು ರಾಜಸ್ಥಾನ್ ರಾಯಲ್ಸ್ ತಂಡ 8 ಕೋಟಿ ರೂ.ಗೆ ಉಳಿಸಿಕೊಂಡಿದೆ. ಇಷ್ಟೊಂದು ದೊಡ್ಡ ಮೊತ್ತದಿಂದ ಜೈಸ್ವಾಲ್ ಅವರನ್ನು ಉಳಿಸಿಕೊಂಡಿರುವದರಿಂದ ಅವರ ಕುರಿತು ಎಲ್ಲೆಡೆ ಚರ್ಚೆಯಾಗುತ್ತಿದೆ. ನಿಜವಾಗಿಯೂ ಯಶಸ್ಸು ಜೈಸ್ವಾಲ್ ಅವರು ಒಬ್ಬ ಅತ್ಯಂತ ಪ್ರತಿಭಾವಂತ ಆಟಗಾರ ಎಂದು ಪರಿಗಣಿಸಲಾಗುತ್ತಿದೆ.

ಈ ಹಿಂದೆ ಐಪಿಎಲ್-2020ರಲ್ಲಿ ರಾಜಸ್ಥಾನ ಅವರನ್ನು 2.4 ಕೋಟಿ ರೂ.ಗೆ ಖರೀದಿಸಿತ್ತು. ಆಗ ಅವರ ಮೂಲ ಬೆಲೆ ಕೇವಲ 20 ಲಕ್ಷ ರೂ. ಆಗಿತ್ತು. ಇದೀಗ ರಾಜಸ್ಥಾನ ಯಶಸ್ವಿ ಅವರ ಕುರಿತು ಮತ್ತೊಮ್ಮೆ ವಿಶ್ವಾಸ ತೋರಿದೆ. ಯಶಸ್ವಿ ಜೈಸ್ವಾಲ್ ಅವರು ಈ ಮಟ್ಟಕ್ಕೆ ಬರಲು ತುಂಬಾನೇ ಕಷ್ಟಪಟ್ಟಿದ್ದಾರೆ. ಯಶಸ್ವಿ ಅವರು ತಮ್ಮ ಹೊಟ್ಟೆಪಾಡಿಗಾಗಿ ಮುಂಬೈನಲ್ಲಿ ಪಾನಿಪುರಿ ಸಹ ಮಾರಾಟ ಮಾಡಿದ್ದಾರೆ.

ಉತ್ತರ ಪ್ರದೇಶದ ಭದೋಹಿ ಜಿಲ್ಲೆಯ ಸೂರ್ಯವನ್ ನಗರದಲ್ಲಿ ವಾಸಿಸುವ 20 ವರ್ಷದ ಯಶಸ್ವಿ ಜೈಸ್ವಾಲ್ ಬಾಲ್ಯದಿಂದಲೂ ಕ್ರಿಕೆಟಿಗನಾಗುವ ಆಸಕ್ತಿ ಹೊಂದಿದ್ದರು. ಯಶಸ್ವಿ ಅವರ ತಂದೆ ಭೂಪೇಂದ್ರ ಜೈಸ್ವಾಲ್ ಅವರು ಭದೋಹಿಯಲ್ಲಿ ಸಣ್ಣ ಅಂಗಡಿಯನ್ನು ನಡೆಸುತ್ತಿದ್ದಾರೆ ಮತ್ತು ಅವರ ತಾಯಿ ಕಾಂಚನ್ ಗೃಹಿಣಿಯಾಗಿದ್ದಾರೆ. 10 ನೇ ವಯಸ್ಸಿನಲ್ಲಿ, ಯಶಸ್ವಿ ಮುಂಬೈಗೆ ಹೋಗುವ ಬಗ್ಗೆ ತನ್ನ ತಂದೆಯೊಂದಿಗೆ ಮಾತನಾಡಿದರು ಮತ್ತು ನಂತರ ತನ್ನ ಕನಸನ್ನು ನನಸಾಗಿಸಲು ಮಾಯಾನಗರಿ ಮುಂಬೈಯತ್ತ ಪಯಣ ಸಾಗಿಸಿದರು. ಯಶಸ್ವಿಯನ್ನು ಅವರ ತಂದೆ ಮುಂಬೈನ ವರಳಿ ಭಾಗದಲ್ಲಿ ವಾಸಿಸುವ ಸಂತೋಷ್ ಎಂಬ ಸಂಬಂಧಿಕರ ಕಡೆಗೆ ಕಳುಹಿಸಿದರು. ಯಶಸ್ವಿ ಅವರ ಹತ್ತಿರ ಸುಮಾರು 5-6 ತಿಂಗಳುಗಳ ವರೆಗೆ ವಾಸ ಮಾಡಿದರು. ಅಲ್ಲಿಂದ ಮುಂಬೈನ ಆಝಾದ ಮೈದಾನದಲ್ಲಿ ಕ್ರಿಕೆಟ್ ಪ್ರ್ಯಾಕ್ಟೀಸ್ ಮಾಡಲು ಹೋಗುತ್ತಿದ್ದರು. ಆದರೆ ಆ ಸಂಬಂಧಿಕರ ಮನೆ ತುಂಬಾ ಚಿಕ್ಕದಾಗಿರುವದರಿಂದ ಆ ಮನೆಯಲ್ಲಿ ವಾಸಿಸುವದು ತುಂಬಾ ಕಠಿಣವಾದ ಸಂಗತಿ ಯಾಗಿತ್ತು.

ಇದಾದ ನಂತರ ರಾಮ್ ಲೀಲಾ ಸಮಯದಲ್ಲಿ ಆಜಾದ್ ಮೈದಾನದಲ್ಲಿ ಪಾನಿಪುರಿ ಮತ್ತು ಹಣ್ಣುಗಳನ್ನು ಮಾರಾಟ ಮಾಡಿ ಯಶಸ್ವಿಯವರು ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದರು. ಯಶಸ್ವಿ ಅವರು ಡೈರಿಯಲ್ಲಿ ಸಹ ಕೆಲಸ ಮಾಡುತ್ತಿದ್ದರು ಆದರೆ ಒಂದು ದಿನ ಡೈರಿಯವರು ಕೆಲಸದಿಂದ ಇವರನ್ನು ತಗೆದು ಹಾಕಿದರು. ತದನಂತರ ಇವರ ಸಹಾಯಕ್ಕಾಗಿ ಒಂದು ಕ್ಲಬ್ ಮುಂದೆ ಬಂದಿತು, ನೀನು ಉತ್ತಮವಾಗಿ ಆಟ ಆಡಿದರೆ ಮಾತ್ರ ನಿನ್ನನ್ನು ನಮ್ಮ ಆಶ್ರಯದಲ್ಲಿ ಇರಲು ಪರವಾನಗಿ ನೀಡುತ್ತುವೆ ಎಂಬ ಷರತ್ತು ಆ ಕ್ಲಬ್ ನದಾಗಿತ್ತು. ಡೇರೆಯಲ್ಲಿ ವಾಸಿಸುತ್ತಿದ್ದಾಗ ಯಶಸ್ವಿ ಅವರ ಕೆಲಸವೆಂದರೆ ಚಪಾತಿ ಮಾಡುವುದು.ಇಲ್ಲಿ ಅವರಿಗೆ ಉತ್ತಮವಾದ ಅಲ್ಪೋಪಹಾರ ಮತ್ತು ಊಟ ಸಹ ದೊರೆಯುತ್ತಿತ್ತು. ಅಷ್ಟೇ ಅಲ್ಲದೆ ಜೈಸ್ವಾಲ್ ಅವರು ಹಣ ಸಂಗ್ರಹ ಮಾಡುವ ಸಲುವಾಗಿ ಚೆಂಡು ಹುಡುಕುವ ಕೆಲಸ ಸಹ ಮಾಡಿದ್ದಾರೆ.

ಆಜಾದ್ ಮೈದಾನದಲ್ಲಿ ನಡೆದ ಹಲವಾರು ಕ್ರಿಕೆಟ್ ಪಂದ್ಯಗಳಲ್ಲಿ ಚೆಂಡು ಹೊರಗಡೆ ಹೋದಾಗ ಕಳೆದು ಹೋಗುತ್ತಿತ್ತು ಆಗ ಇವರು ಅದನ್ನ ಹುಡುಕಿ ಅವರಿಗೆ ಕೊಡುವ ಕಾರ್ಯಮಾಡುತ್ತಿದ್ದರು ಇದರಿಂದ ಆ ಕಮಿಟಿಯವರು ಇವರಿಗೆ ಸ್ವಲ್ಪ ದುಡ್ಡು ಸಹ ನೀಡುತ್ತಿದ್ದರು. ಒಂದು ದಿನ ಆಜಾದ್ ಮೈದಾನದಲ್ಲಿ ಯಶಸ್ವಿ ಕ್ರಿಕೆಟ್ ಆಡುತ್ತಿದ್ದಾಗ ಇವರ ಮೇಲೆ ಕೋಚ್ ಜ್ವಾಲಾ ಸಿಂಗ್ ಅವರ ಕಣ್ಣು ಬಿದ್ದಿತು. ತದನಂತರ ಇವನೊಬ್ಬ ಉತ್ತಮ ಆಟಗಾರ ಆಗಬಹುದು ಎಂದು ಊಹಿಸಿ ಅವನಿಗೆ ತರಬೇತಿ ನೀಡಲು ಪ್ರಾರಂಭ ಮಾಡಿದರು. ಉತ್ತರ ಪ್ರದೇಶದ ನಿವಾಸಿ ಜ್ವಾಲಾ ಸಿಂಗ್ ಅವರ ತರಬೇತಿಯಲ್ಲಿ ಯಶಸ್ವಿಯವರ ಪ್ರತಿಭೆ ಸಾಕಷ್ಟು ಪ್ರಮಾಣದಲ್ಲಿ ಬೆಳೆಯಿತು ಮತ್ತು ಅವರು ಒಬ್ಬ ಶ್ರೇಷ್ಠ ಕ್ರಿಕೆಟಿಗರಾದರು.