ಒಳ್ಳೆಯ CA ನೌಕರಿ ಬಿಟ್ಟು ವ್ಯವಸಾಯ ಮಾಡಲು ಶುರು ಮಾಡಿದ ಯುವಕ; ಇಂದು ಸಂಪಾದಿಸುತ್ತಿದ್ದಾರೆ ವಾರ್ಷಿಕ 50 ಲಕ್ಷ ರೂಪಾಯಿ!
ವ್ಯವಸಾಯ ಮಾಡುವುದು ಹಾಗೂ ಅದರಲ್ಲಿ ಯಶಸ್ಸನ್ನು ಕಾಣುವುದು ಕೂಡಾ ಒಂದು ಕಲೆ. ವ್ಯವಸಾಯ ಮಾಡುವುದು ಎಂದರೆ ಅದು ಬಾಯಲ್ಲಿ ಹೇಳಿದಷ್ಟು ಸುಲಭವಂತೂ ಅಲ್ಲ. ಯಾವ ಋತುವಿನಲ್ಲಿ ಹೇಗೆ ಕಾಯಕವನ್ನು ನಡೆಸಬೇಕು ಎಂಬುದನ್ನು ರೈತರು ತಮ್ಮ ಅನುಭವ ಹಾಗೂ ಕೌಶಲ್ಯದಿಂದ ತಿಳಿದುಕೊಂಡಿರುತ್ತಾರೆ. ಆದರೆ ಅನೇಕರು ಆಧುನಿಕತೆಗೆ ಮಾರು ಹೋಗಿ ಕೃಷಿಯಿಂದ ವಿಮುಖರಾಗುತ್ತಿರುವಾಗಲೇ CA ವೃತ್ತಿಯನ್ನು ಬಿಟ್ಟು ಕೃಷಿಯ ಕಡೆ ಬಂದು ಯಶಸ್ಸನ್ನು ತನ್ನದಾಗಿಸಿಕೊಂಡ ರೈತನೊಬ್ಬರ ಬಗ್ಗೆ ನಾವಿಂದು ತಿಳಿಯೋಣ ಬನ್ನಿ. ಬಿಹಾರದ ಗೋಪಾಲ್ ಗಂಜ್ ನ ರಾಜೀವ್, ಇವರ ತಂದೆ ಸರ್ಕಾರಿ ಇಂಜಿನಿಯರ್ ಆಗಿದ್ದವರು. ರಾಜೀವ್ ಬಿಟ್ಟು ಕೂಡಾ ಪದವೀಧರ ಹಾಗೂ ಸಿಎ ಮಾಡಿ ಉದ್ಯೋಗವನ್ನು ಪಡೆದವರಾಗಿದ್ದರು.
ರಾಜೀವ್ ಕಾಮರ್ಸ್ ಪದವಿ ಪಡೆದು, ಸಿಎ ಮಾಡಿ ಚಾರ್ಟರ್ಡ್ ಅಕೌಂಟೆಂಟ್ ಆಗಿ ಉದ್ಯೋಗ ಸಂಪಾದಿಸಿದ್ದರು. ಆದರೆ ಅವರಿಗೆ ಅದು ತೃಪ್ತಿ ನೀಡಲಿಲ್ಲ. ಅವರು ಕೃಷಿಯಲ್ಲಿ ತಮ್ಮ ವೃತ್ತಿ ಜೀವನವನ್ನು ಮುಂದುವರೆಸಲು ಬಯಸಿದರು. ಅದಕ್ಕೆ ಸಿಎ ಉದ್ಯೋಗ ಬಿಟ್ಟು ಕೃಷಿ ಮಾಡುವ ಕಡೆ ಗಮನವನ್ನು ನೀಡಿದರು. 2009 ರಲ್ಲಿ ವಿವಾಹವಾದ ರಾಜೀವ್ ಅವರ ಪತ್ನಿ ಒಬ್ಬ ಇಂಜಿನಿಯರ್. ಇದಾದ ನಂತರ 2013 ರಲ್ಲಿ ಮಗಳನ್ನು ಕರೆದುಕೊಂಡು ಹಳ್ಳಿಗೆ ಬಂದಾಗ ಅವರ ಮಗಳು ಒಬ್ಬ ರೈತನ ಮಣ್ಣಾದ ಬಟ್ಟೆಗಳನ್ನು ನೋಡಿ ಅವರ ಹತ್ತಿರ ಹೋಗಲು ಹಿಂಜರಿದಾಗ ರಾಜೀವ್ ಅವರಿಗೆ ಆಘಾತವಾಯಿತಂತೆ. ಅಲ್ಲದೇ ಅಂದೇ ಅವರು ತಾನು ಕೃಷಿ ಮಾಡುವುದಾಗಿ ನಿರ್ಧಾರ ಮಾಡಿಬಿಟ್ಟರಂತೆ.
ಅದಾದ ಮೇಲೆ ಅವರು ಕೃಷಿ ಮಾಡುವ ಬಗ್ಗೆ ವಿವರಗಳನ್ನು ಸಂಗ್ರಹಿಸಿದರಂತೆ, ಕೃಷಿ ವಿಭಾಗಕ್ಕೆ ಭೇಟಿ ನೀಡಿ ಅಲ್ಲಿನ ತಜ್ಞರನ್ನು ತಮಗೆ ಸಹಾಯವನ್ನು ನೀಡುವಂತೆ ಕೇಳಿದ್ದಾರೆ. ಎಲ್ಲಾ ಮಾಹಿತಿ ಪಡೆದ ನಂತರ ಕೃಷಿ ಜಮೀನನ್ನು ಹುಡುಕಿದ ಅವರಿಗೆ ರಾಂಚಿಯಿಂದ 28 ಕಿಮೀ ದೂರದಲ್ಲಿರುವ ಗ್ರಾಮವೊಂದರಲ್ಲಿ ರೈತನೊಬ್ಬರಿಂದ ಹತ್ತು ಎಕರೆ ಜಮೀನು ಲೀಸ್ ಗೆ ಪಡೆದು, ಬರುವ ಆದಾಯದಲ್ಲಿ 33% ಲಾಭವನ್ನು ರೈತನಿಗೆ ನೀಡುವುದಾಗಿ ಅಗ್ರಿಮೆಂಟ್ ಗೆ ಸಹಿ ಹಾಕಿ ಜಮೀನು ಪಡೆದು ಅಲ್ಲಿ ಕೃಷಿಯನ್ನು ಆರಂಭಿಸಿಯೇ ಬಿಟ್ಟರು ರಾಜೀವ್.
ಜೈವಿಕ ಕೃಷಿ ಆರಂಭಿಸಿದ ರಾಜೀವ್ ಕೃಷಿಗಾಗಿ 2.5 ಲಕ್ಷ ಹೂಡಿಕೆ ಮಾಡಿದರು. ಏಳು ಎಕರೆ ಜಮೀನಿನಲ್ಲಿ ತರಬೂಜ ಮತ್ತು ಖರಬೂಜ ಹಣ್ಣನ್ನು ಬೆಳೆದರು. ಅವರ ಪರಿಶ್ರಮದ ಫಲವಾಗಿ ಒಳ್ಳೆ ಫಸಲು ಬಂದು 19 ಲಕ್ಷಕ್ಕೆ ಮಾರಾಟವಾದ ಹಣ್ಣಿನ ಎಲ್ಲಾ ಖರ್ಚು ವೆಚ್ಚ ಕಳೆದು ಅವರಿಗೆ ಸುಮಾರು ಏಳೆಂಟು ಲಕ್ಷ ಲಾಭ ತಂದುಕೊಟ್ಟಾಗ ರಾಜೀವ್ ಅವರ ಮನೋಬಲ ಮತ್ತಷ್ಟು ಹೆಚ್ಚಾಯಿತು. ಅವರು ಕೃಷಿಯಲ್ಲಿ ಹೊಸ ಹೊಸ ಪ್ರಯೋಗಕ್ಕೆ ಮುಂದಾದರು. ಮತ್ತೆ ಹದಿಮೂರು ಎಕರೆ ಜಮೀನನ್ನು ಲೀಸ್ ಗೆ ಪಡೆದ ಅವರು 40 ಜನ ಕೆಲಸದವರನ್ನು ನೇಮಕ ಮಾಡಿಕೊಂಡರು. 2016 ರಲ್ಲಿ ಅವರು ಸುಮಾರು 40 ರಿಂದ 50 ಲಕ್ಷ ರೂ. ಕೃಷಿ ಉತ್ಪನ್ನಗಳನ್ನು ಬೆಳೆದರು.
ಹೀಗೆ ಜಮೀನು ವಿಸ್ತರಿಸುತ್ತಾ ಸಾಗಿದ ಅವರು ಮತ್ತೊಂದು ಗ್ರಾಮದಲ್ಲಿ ಮೂರು ಎಕರೆ ಲೀಸ್ ಗೆ ಪಡೆದು ಅಲ್ಲಿ ತರಕಾರಿಗಳನ್ನು ಬೆಳೆಯಲು ಆರಂಭಿಸಿದರು. ವಾರ್ಷಿಕ ಒಂದು ಕೋಟಿ ಟರ್ನ್ ಓವರ್ ಗಳಿಸುವ ಗುರಿಯನ್ನು ಅವರು ಹೊಂದಿದ್ದಾರೆ. ಅಲ್ಲದೇ ರಾಜೀವ್ ಅವರ ಸ್ನೇಹಿತರು ದೇವರಾಜ್ ಮತ್ತು ಶಿವಕುಮಾರ್ ಕೂಡಾ ಅವರೊಂದಿಗೆ ಕೃಷಿಯಲ್ಲಿ ಕೈ ಜೋಡಿಸಿದ್ದಾರೆ. 32 ಎಕರೆಯಲ್ಲಿ ಕೃಷಿ ಮಾಡುವ ರಾಜೀವ್ ಡ್ರಿಪ್ ಇರಿಗೇಷನ್ ನಂತಹ ಆಧುನಿಕ ವಿಧಾನಗಳನ್ನು ಕೂಡಾ ಅಳವಡಿಸಿದ್ದಾರೆ. ಒಟ್ಟಾರೆ ರಾಜೀವ್ ಕೃಷಿ ಬೇಡವೆಂದು ನಗರಗಳ ಕಡೆ ಮುಖ ಮಾಡುವ ಯುವ ಜನರಿಗೆ ಕೃಷಿಯ ಮಹತ್ವ ತಿಳಿಸುವ ಒಬ್ಬ ಮಾದರಿ ವ್ಯಕ್ತಿಯಾಗಿದ್ದಾರೆ.