ಕಲ್ಲು, ಇಟ್ಟಿಗೆಗಳ ಉಪಯೋಗವಿಲ್ಲದೆ ಕಡಿಮೆ ವೇಳೆಯಲ್ಲಿ ಮತ್ತು ಕಡಿಮೆ ವೆಚ್ಚದಲ್ಲಿ ನಿರ್ಮಿಸಿ ಸ್ಮಾರ್ಟ್ ಮನೆ: ಟೆಕ್ನಿಕ್ ತಿಳಿದುಕೊಳ್ಳಿ!!

ಪ್ರತಿಯೊಬ್ಬರೂ ತಮ್ಮ ತಲೆಯ ಮೇಲೆ ಉತ್ತಮ ಛಾವಣಿ ಇರಬೇಕೆಂದು ಕನಸು ಕಾಣುತ್ತಾರೆ. ನಾಲ್ಕು ಗೋಡೆಗಳಿದ್ದರೂ ಛಾವಣಿ ಮಾತ್ರ ತುಂಬಾ ಗಟ್ಟಿಯಾಗಿರಬೇಕೆಂದು ನಾವೆಲ್ಲ ಬಯಸುತ್ತೇವೆ. ಮನೆ ಒಂದೇ ಬಾರಿ ಕಟ್ಟಲು ಸಾಧ್ಯವಾಗುತ್ತದೆ ಹೀಗಾಗಿ ಜನರು ಹಣದ ಸಮಸ್ಯೆಯಿಂದ ತಮಗೆ ಅನುಕೂಲಕರವಾದ ರೀತಿಯಲ್ಲಿ ಮನೆಯನ್ನು ನಿರ್ಮಾಣ ಮಾಡುತ್ತಾರೆ. ಆದರೆ ಸಾಂಗಲಿಯ ಇಂಜಿನಿಯರ್ ಮಹೇಶ್ ಕುಮಾರ್ ಪಾಟೀಲ್ ಮನೆ ಕಟ್ಟುವ ಸಲುವಾಗಿ ಒಂದು ವಿಚಿತ್ರ ಪ್ರಯೋಗ ಮಾಡಿದ್ದಾರೆ. ಅತ್ಯಂತ ಕಡಿಮೆ ವೆಚ್ಚದಲ್ಲಿ ಮತ್ತು ಕಡಿಮೆ ಸಮಯದಲ್ಲಿ ಸ್ಮಾರ್ಟ್ ಮನೆ ನಿರ್ಮಿಸಿದ್ದಾರೆ. ಅವರ ಈ ಪ್ರಯೋಗದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ತುಂಬಾ ಚರ್ಚೆಯಾಗುತ್ತಿದೆ.

ಜಾಗದ ಕೊರತೆ, ಕಟ್ಟಡ ಸಾಮಗ್ರಿಗಳ ಬೆಲೆ ಏರಿಕೆಯಿಂದಾಗಿ ಜನಸಾಮಾನ್ಯರಿಗೆ ಮನೆ ಕಟ್ಟುವದು ಎಂದರೆ ಅಸಾಧ್ಯವಾದ ಸಂಗತಿಯಾಗಿದೆ. ಇದರಿಂದ ಅದೆಷ್ಟೋ ಬಡಜನರ ಮನೆ ಕಟ್ಟುವ ಆಸೆ ಈಡೇರದೆ ಹಾಗೆ ಉಳಿದಿದೆ. ಇಂತಹ ಸಮಯದಲ್ಲಿ ಸಾಂಗಲಿಯ ಇಂಜಿನಿಯರ್ ಮಹೇಶ್ ಕುಮಾರ್ ಮತ್ತು ಅವರ ತಂಡ ಕಡಿಮೆ ಸಮಯದಲ್ಲಿ ಅಂದರೆ ಕೇವಲ ಮೂರು ತಿಂಗಳಲ್ಲಿ ಕಡಿಮೆ ವೆಚ್ಚದಲ್ಲಿ ಸ್ಮಾರ್ಟ್ ಹೌಸ್ ನಿರ್ಮಿಸಿದ್ದಾರೆ. ಮೊನೊಲಿಥಿಕ್ ಇಂಟೆಲಿಜನ್ಸ್ ಅಂದರೆ ಏಕತಾನತೆಯ ಕಟ್ಟಡ, ಸುರಕ್ಷಿತತೆ ಮತ್ತು ಅತ್ಯಾಧುನಿಕ ಅನುಕೂಲತೆ ಹೊಂದಿರುವ ಈ ಮನೆಯ ಕುರಿತು ಎಲ್ಲೆಡೆಗೆ ಚರ್ಚೆ ಯಾಗುತ್ತಿದೆ.

ಇಂಜಿನಿಯರ್ ಮಹೇಶಕುಮಾರ ಪಾಟೀಲ ಮತ್ತು ಅವರ ತಂಡದ ಸದಸ್ಯರಾದ ಭೂಷಣ ಗೋಡ್ಸೆ ಮತ್ತು ವಿಶಾಲ ನಾನವರೆ ಗ್ರಾಮೀಣ ಪ್ರದೇಶದ ಜನರ ಸಲುವಾಗಿ ಕಡಿಮೆ ವೆಚ್ಚದಲ್ಲಿ ಮತ್ತು ಕಡಿಮೆ ಸಮಯದಲ್ಲಿ ಮನೆಗಳನ್ನು ನಿರ್ಮಿಸಿಕೊಟ್ಟಿದ್ದಾರೆ. ಇತ್ತೀಚೆಗಷ್ಟೇ ಅಟ್ಪಾಡಿ ತಾಲೂಕಿನ ವಿಠ್ಠಲಾಪುರ ಗ್ರಾಮದಲ್ಲಿ ಈ ಮನೆಯ ಪ್ರೋಟೋಟೈಪ್ ಪ್ರೊಜೆಕ್ಟ್ ಯೋಜನೆಯನ್ನೂ ಪೂರ್ಣಗೊಳಿಸಿದ್ದಾರೆ. ಇಲ್ಲಿನ ಕಾಂತಿಲಾಲ್ ಬಾಡ್ ಇವರ ಸಲುವಾಗಿ 550 ಚದರ ಅಡಿ ಕಾಂಕ್ರೀಟ್ ನ ಮೊನೊಲಿಥಿಕ್ ಇಂಟೆಲಿಜನ್ಸ್ ಸಂಕಲ್ಪನೆಯ ಆಧಾರದ ಮೇಲೆ ಮನೆ ನಿರ್ಮಿಸಲಾಗಿದೆ.

ಈ ಮನೆಯ ವೈಶಿಷ್ಟ್ಯವೆಂದರೆ ಈ ಮನೆಯ ನಿರ್ಮಾಣವು ಸಾಮರಸ್ಯದಿಂದ ಕೂಡಿದೆ. ಈ ಕಟ್ಟಡದ ನಿರ್ಮಾಣದಲ್ಲಿ ಇಟ್ಟಿಗೆಗಳ ಬಳಕೆ ಮಾಡಿಲ್ಲ. ಒಂದೇ ನಿಟ್ಟಿನಲ್ಲಿ ಬಾಗಿಲುಗಳು, ಕಿಟಕಿಗಳು, ಬಾಲ್ಕನಿಗಳನ್ನು ವಿನ್ಯಾಸಗೊಳಿಸಲಾಗಿದೆ. ಅಲ್ಲದೆ, ಮನೆಯಲ್ಲಿ ಫ್ಯಾನ್ ಮತ್ತು ಲೈಟ್‌ಗಳು ಸೌರಶಕ್ತಿಯಿಂದ ಕಾರ್ಯನಿರ್ವಹಿಸುತ್ತವೆ. ಅಷ್ಟೇ ಅಲ್ಲ ಲೈಟ್ ಮತ್ತು ಫ್ಯಾನ್‌ಗಳು ಅಲೆಕ್ಸಾ ಧ್ವನಿ ನಿಯಂತ್ರಣ ವ್ಯವಸ್ಥೆಯನ್ನು ಸಹ ಹೊಂದಿವೆ. ಈ ಮನೆಗಳ ಮುಖ್ಯ ಬಾಗಿಲುಗಳಿಗೆ ಡಿಜಿಟಲ್ ಲಾಕ್ ಸೌಲಭ್ಯವನ್ನು ಒದಗಿಸಲಾಗಿದೆ.

ಎಲ್ಲಾ ಆಧುನಿಕ ಸೌಲಭ್ಯಗಳನ್ನು ಬಳಸಿ ಮನೆಯನ್ನು ಅಲಂಕರಿಸಲಾಗಿದೆ, ಆದರೆ ಈ ಮನೆ ಕೇವಲ ಮೂರು ತಿಂಗಳಲ್ಲಿ ಮನೆಯನ್ನು ಪೂರ್ಣಗೊಳಿಸಿರುವುದರಿಂದ ಎಲ್ಲರೂ ಆಶ್ಚರ್ಯ ಪಡುವ ಸಂಗತಿಯಾಗಿದೆ. ಒಂದು ಆರ್‌ಸಿಸಿ ಚೌಕಟ್ಟಿನ ರಚನೆಯ ವಸ್ತು ಎಷ್ಟೋ ಪ್ರಬಲವಾಗಿರುತ್ತದೆಯೋ ಅಷ್ಟೇ ಈ ಮನೆಯೂ ಸಹ ಪ್ರಬಲವಾಗಿದೆ ಎಂದು ಹೇಳಲಾಗುತ್ತದೆ. ಮೊನೊಲಿಥಿಕ್ ಇಂಟೆಲಿಜನ್ಸ್ ಸಂಕಲ್ಪನೆ ಹಳೆಯದಾಗಿದೆ, ಆದರೆ ಗ್ರಾಮೀಣ ಜನರಿಗೆ ಕೈಗೆಟುಕುವ ಮತ್ತು ಆಧುನಿಕ ಅನುಕೂಲಗಳನ್ನು ಹೊಂದಿದ ಸಂಕಲ್ಪನೆಯಾಗಿದೆ.

ಈ ಮನೆಯನ್ನು ನಿರ್ಮಿಸಿರುವ ಮಹೇಶಕುಮಾರ ಪಾಟೀಲ ಇದಕ್ಕಾಗಿ ಮೊದಲು ರಚನಾತ್ಮಕ ಅಧ್ಯಯನ ಮಾಡಿದ್ದಾರೆ. ಮನೆ ನಿರ್ಮಿಸುವಾಗ ಒತ್ತಡ ಮತ್ತು ಬಿರುಕುಗಳನ್ನು ನಿರ್ಮಾಣವಾಗದ ಹಾಗೆ ಬಾಗಿಲು ಮತ್ತು ಕಿಟಕಿಗಳನ್ನು ವಿನ್ಯಾಸಗೊಳಿಸಲಾಗಿದೆ. ಈ ಮಾದರಿಯ ಮನೆಯ ವಿನ್ಯಾಸ ನೋಡಿ ಅದರಲ್ಲಿನ ಆಧುನಿಕ ಸೌಲಭ್ಯಗಳನ್ನು ನೋಡಿದರೆ ಖರ್ಚು ಜಾಸ್ತಿ ಆಗುತ್ತೆ ಅನ್ನಿಸುತ್ತೆ ಆದರೆ ಮಹೇಶ ಕುಮಾರ ಪಾಟೀಲ ಇವರು ಕೇವಲ ಆರು ಲಕ್ಷದಲ್ಲಿ ಇಷ್ಟು ವಿಶಾಲವಾದ ಮನೆ ಕಟ್ಟುವ ಪ್ರಯೋಗ ಮಾಡಿದ್ದಾರೆ. ಆದ್ದರಿಂದ ಈ ಮನೆ ಹೆಚ್ಚು ಜನಪ್ರಿಯವಾಗಿದೆ.