ಕಳೆದ 17 ವರ್ಷಗಳಿಂದ ಯಾವುದೇ ಕಾಯಿಲೆ, ಔಷಧಿ ಏನೂ ಇಲ್ಲದೇ ಆರೋಗ್ಯವಾಗಿರುವ ದಂಪತಿ: ಮಣ್ಣಿನ ಮನೆಯಲ್ಲಿ ಪ್ರಕೃತಿಯ ನಡುವೆ ಇವರ ಜೀವನ!
ಉತ್ತಮ ಆರೋಗ್ಯವನ್ನು ಪ್ರತಿಯೊಬ್ಬರೂ ಬಯಸುತ್ತಾರೆ. ತಾವು ಯಾವುದೇ ರೋಗ ಅಥವಾ ಕಾಯಿಲೆಗೆ ತುತ್ತಾಗದೇ, ಯಾವುದೇ ರೀತಿಯ ಔಷಧಿಗಳನ್ನು ಬಳಸದೆ ಸದಾ ಆರೋಗ್ಯವಾಗಿರಬೇಕು ಎನ್ನುವುದು ಅನೇಕರ ಕನಸಾಗಿರುತ್ತದೆ. ಆದರೆ ಈ ಕನಸು ವಾಸ್ತವವಾಗಿ ನನಸಾಗುವುದು ಸಾಧ್ಯವಿಲ್ಲ. ಏಕೆಂದರೆ ಅನೇಕ ಸಂದರ್ಭಗಳಲ್ಲಿ ನಮಗೆ ನೆಗಡಿ ಕೆಮ್ಮು, ಜ್ವರಗಳಂತಹ ಸಮಸ್ಯೆಗಳು ಉಂಟಾಗುತ್ತದೆ. ಇನ್ನು ಕೆಲವು ಸಂದರ್ಭಗಳಲ್ಲಿ ಗಂಭೀರವಾದ ರೋಗಗಳಿಗೆ ತುತ್ತಾಗಿ ಅನೇಕರು ವಾರಗಳು ಅಥವಾ ತಿಂಗಳುಗಳಗಟ್ಟಲೆ ಹಾಸಿಗೆ ಹಿಡಿದು ಬಿಡುತ್ತಾರೆ. ಆದರೆ ನಾವಿಂದು ಕಳೆದ 17 ವರ್ಷಗಳಿಂದಲೂ ಯಾವುದೇ ರೀತಿಯ ಅನಾರೋಗ್ಯಕ್ಕೆ ತುತ್ತಾಗದೆ, ಯಾವುದೇ ರೀತಿಯ ಔಷಧಿಗಳನ್ನು ಬಳಸದೆ ಸಂಪೂರ್ಣ ಆರೋಗ್ಯವಂತ ರಾಗಿರುವ ದಂಪತಿಯ ಬಗ್ಗೆ ತಿಳಿಸಲು ಹೊರಟಿದ್ದೇವೆ. ಹಾಗಿದ್ದರೆ ಆರೋಗ್ಯ ಭಾಗ್ಯ ತಮ್ಮದಾಗಿಸಿಕೊಂಡಿರುವ ಈ ಅದೃಷ್ಟವಂತ ದಂಪತಿ ಯಾರೆಂದು ತಿಳಿಯೋಣ ಬನ್ನಿ.
ಕೇರಳ ರಾಜ್ಯದ ಕಣ್ಣೂರಿನ ನಿವಾಸಿ ಹರಿ ಸ್ಥಳೀಯ ಜಲ ಪ್ರಾಧಿಕಾರದ ಉದ್ಯೋಗಿಯಾಗಿದ್ದಾರೆ. ಅವರ ಪತ್ನಿ ಆಶಾ ರೈತರಲ್ಲಿ ನೈಸರ್ಗಿಕ ಕೃಷಿಯನ್ನು ಉತ್ತೇಜಿಸುವ ಕಾರ್ಯದಲ್ಲಿ ತೊಡಗಿಕೊಂಡಿರುವ ಸಮುದಾಯದೊಂದಿಗೆ ಬೆಸೆದುಕೊಂಡಿದ್ದಾರೆ. ಈ ದಂಪತಿಗೆ ಪ್ರಕೃತಿಯ ಮೇಲೆ ಅಪಾರವಾದ ಪ್ರೀತಿ ಮತ್ತು ಕಾಳಜಿ ಇದ್ದು, ಅದು ಅವರ ಜೀವನ ಶೈಲಿಯಲ್ಲಿ ಪ್ರತಿಫಲಿಸುತ್ತದೆ. ಇವರು ತಮ್ಮ ವಿವಾಹದ ಸಂದರ್ಭದಲ್ಲಿ ಕೆಲವು ಪರಿಸರ ಪ್ರೇಮಿಗಳನ್ನು ಮದುವೆಗೆ ಆಹ್ವಾನಿಸಿದ್ದರು. ಮದುವೆಗೆ ಬಂದ ಅತಿಥಿಗಳನ್ನು ಹಣ್ಣುಗಳು ಹಾಗೂ ಕೇರಳದ ಸಾಂಪ್ರದಾಯಿಕ ಈ ತಿನಿಸು ಪಾಯಸವನ್ನು ನೀಡಿ ಸ್ವಾಗತಿಸಿದ್ದರು.

ವಿವಾಹದ ನಂತರ ಮನೆಯನ್ನು ನಿರ್ಮಾಣ ಮಾಡುವ ಆಲೋಚನೆ ಮಾಡಿದಾಗ ಈ ದಂಪತಿಯು ಮನೆಯಲ್ಲಿ ಪ್ರಾಕೃತಿಕ ಶಕ್ತಿ ತುಂಬಿರಬೇಕು ಹಾಗೂ ಅದು ಪ್ರಕೃತಿಗೆ ಹತ್ತಿರವಾಗಿರಬೇಕು ಎಂದು ಆಲೋಚನೆ ಮಾಡಿದರು. ಅವರ ಇಂಜಿನಿಯರ್ ಸ್ನೇಹಿತನೊಬ್ಬನ ನೆರವಿನೊಂದಿಗೆ ಅವರ ಕನಸು ನನಸಾಗಿದೆ. ಸುಮಾರು 960 ಚದರ ಅಡಿಗಳಲ್ಲಿ ನಿರ್ಮಾಣ ಆಗಿರುವ ಇವರ ಮನೆಯನ್ನು ಸಂಪೂರ್ಣವಾಗಿ ಜೇಡಿಮಣ್ಣಿನಿಂದ ನಿರ್ಮಾಣ ಮಾಡಲಾಗಿದೆ. ಬುಡಕಟ್ಟು ಜನಾಂಗಗಳ ಮನೆಗಳೇ ಇಂತಹ ಮನೆಯ ನಿರ್ಮಾಣಕ್ಕೆ ಸ್ಫೂರ್ತಿ ಎನ್ನಲಾಗಿದೆ. ಬೆಳಗಿನ ಸಮಯದಲ್ಲಿ ಮಣ್ಣಿನ ಗೋಡೆಗಳು ಸೂರ್ಯನ ಕಿರಣಗಳನ್ನು ಮನೆಯೊಳಗೆ ಪ್ರವೇಶಿಸಲು ಅನುವು ಮಾಡಿಕೊಡುತ್ತದೆ.
ಸೂರ್ಯನ ಕಿರಣಗಳ ಶಾಖದಿಂದಾಗಿ ಮನೆಯೊಳಗಿನ ಗಾಳಿಯು ಬೆಚ್ಚಗಿರುತ್ತದೆ. ಆದ್ದರಿಂದಲೇ ಹಗಲಿನ ವೇಳೆಯಲ್ಲಿ ಮನೆಯೊಳಗೆ ಉಷ್ಣತೆ ಹೆಚ್ಚಾಗಿರುತ್ತದೆ. ರಾತ್ರಿ ಹನ್ನೊಂದರ ನಂತರ ಗಾಳಿ ತಣ್ಣಗಾಗಲು ಆರಂಭಿಸುವುದರಿಂದ ಮನೆಯೊಳಗೆ ಫ್ಯಾನ್ ಅಗತ್ಯವಿಲ್ಲ ಎನ್ನುತ್ತಾರೆ ಈ ದಂಪತಿ. ಕೇರಳದಲ್ಲಿ ಮಳೆಯ ಪ್ರಮಾಣ ಹೆಚ್ಚಾಗಿರುವುದರಿಂದ ಮನೆಯ ಚಾವಣಿಗೆ ಕಾಂಕ್ರೀಟ್ ಮತ್ತು ಹೆಂಚನ್ನು ಬಳಸಲಾಗಿದೆ. ಮನೆಯಲ್ಲಿ ಫ್ರಿಡ್ಜ್ ಬಳಸುವುದು ಬೇಡವೆಂದು ಅಡುಗೆ ಮನೆಯ ಒಂದು ಮೂಲೆಯಲ್ಲಿ ಇಟ್ಟಿಗೆಯನ್ನು ಬಳಸಿ ಒಂದು ಚೌಕಾಕಾರದ ನಿರ್ಮಾಣವನ್ನು ಮಾಡಿ, ಅದಕ್ಕೆ ನಾಲ್ಕು ಕಡೆಯಿಂದಲೂ ಮರಳನ್ನು ಮುಚ್ಚಿ ಆಹಾರ ಪದಾರ್ಥಗಳನ್ನು ಅದರಲ್ಲಿ ಇಡುತ್ತಾರೆ. ಅಲ್ಲಿಟ್ಟ ಒಂದು ವಾರದ ಕಾಲ ಕೆಡುವುದಿಲ್ಲ ಎನ್ನಲಾಗಿದೆ. ಅದು ಅಲ್ಲದೆ ಈ ದಂಪತಿ ಬಹುತೇಕ ತಾಜಾ ಹಣ್ಣು ಮತ್ತು ತರಕಾರಿಗಳನ್ನು ಬಳಸುತ್ತಾರೆ.

ಮನೆಯಲ್ಲಿ ಸೋಲಾರ್ ಪ್ಯಾನೆಲ್ ಕೂಡ ಅಳವಡಿಸಿದ್ದಾರೆ. ಸೌರಶಕ್ತಿಯನ್ನು ಹೆಚ್ಚು ಬಳಕೆ ಮಾಡುತ್ತಾರೆ. ಮನೆಯಿಂದ ಹೊರ ಹೋಗುವ ತ್ಯಾಜ್ಯವನ್ನು ಬಯೋ ಗ್ಯಾಸ್ ಆಗಿ ಪರಿವರ್ತನೆ ಮಾಡಲಾಗುತ್ತಿದೆ. ಇವರ ಮನೆಯಲ್ಲಿ ತಿಂಗಳಿಗೆ ನಾಲ್ಕು ಯೂನಿಟ್ ವಿದ್ಯುತ್ ಮಾತ್ರವೇ ಜಲವಿದ್ಯುತ್ ಆಗಿದ್ದು, ಉಳಿದದ್ದೆಲ್ಲದಕ್ಕೂ ಸೋಲಾರ್ ಎನರ್ಜಿ ಬಳಸಿಕೊಂಡಿದ್ದಾರೆ. ಇವರ ಮನೆಯಲ್ಲಿ ಕೂಡ ಟಿವಿ, ಕಂಪ್ಯೂಟರ್, ಮಿಕ್ಸರ್ ನಂತಹ ಉಪಕರಣಗಳು ಇವೆ
ಇವರ ಸುಂದರವಾದ ಮನೆ ಈ ದಂಪತಿ ಕೃತಕವಾಗಿ ಬೆಳೆಸಿರುವಂತಹ ಪುಟ್ಟ ಕಾಡಿನಂತಹ ವಾತಾವರಣದ ಮಧ್ಯದಲ್ಲಿದ್ದು, ಇಲ್ಲಿ ವಿವಿಧ ಬಗೆಯ ಚಿಟ್ಟೆಗಳು, ಹಕ್ಕಿಗಳು, ಸಣ್ಣ ಪುಟ್ಟ ಪ್ರಾಣಿಗಳಿಗೆ ಕೂಡಾ ನೆಲೆಯನ್ನು ನೀಡಿದೆ.

ಈ ದಂಪತಿಯು ಬೀಜ ನೀಡುವ ಕಾರ್ಯವನ್ನು ಮಾತ್ರವೇ ಕೃತಕವಾಗಿ ಮಾಡುತ್ತಾರೆ. ಉಳಿದಂತೆ ಎಲ್ಲಾ ಪ್ರಕೃತಿದತ್ತವಾಗಿ ನಡೆಯುತ್ತದೆ. ಕೃತಕವಾಗಿ ಬೆಳೆದಂತಹ ಹಣ್ಣು ಮತ್ತು ತರಕಾರಿಗಳಿಗೂ, ಪ್ರಕೃತಿದತ್ತವಾಗಿ ಬೆಳೆದ ಹಣ್ಣು-ತರಕಾರಿಗಳ ರುಚಿಗೂ ಬಹಳಷ್ಟು ವ್ಯತ್ಯಾಸವಿದೆ ಎನ್ನಲಾಗಿದೆ. ಹೀಗೆ ಪ್ರಕೃತಿಯ ಭಾಗವಾಗಿ ಜೀವನ ನಡೆಸುತ್ತಿರುವ ಈ ದಂಪತಿಯ ಜೀವನ ಶುದ್ಧವಾದ, ಕಾಲುಷ್ಯ ರಹಿತ ವಾತಾವರಣದಲ್ಲಿ ಇದ್ದು, ತಾಜಾ ಹಣ್ಣು ಮತ್ತು ತರಕಾರಿಗಳು ಹಾಗೂ ಆರೋಗ್ಯಕರ ಜೀವನ ಶೈಲಿ ಉತ್ತಮ ಆರೋಗ್ಯಕ್ಕೆ ಬಹಳಷ್ಟು ಪೂರಕವಾಗಿದೆ.