ಕೃಷಿ ಮಾಡಲು ಕಡಿಮೆ ಭೂಮಿ ಇದೆಯಾ? ಹಾಗಾದರೆ ಇಸ್ರೇಲ್ ಬಳಸುವ ಈ ‘ವರ್ಟಿಕಲ್ ಫಾರ್ಮಿಂಗ್’ ಐಡಿಯಾ ಒಮ್ಮೆ ನೋಡಿ!

ಇಸ್ರೇಲ್ ದೇಶ ಕೃಷಿಯಲ್ಲಿ ಯಾವತ್ತೂ ಜಗತ್ತಿಗೆ ಮಾದರಿಯಾಗಿದೆ. ಇಲ್ಲಿ ಸತತವಾಗಿ ಏನಾದರೂ ಕೃಷಿಗೆ ಸಂಬಂಧಿಸಿದ ಹೊಸ ಹೊಸ ಆವಿಷ್ಕಾರಗಳು ನಡೆದೇ ಇರುತ್ತವೆ. ಈ ದೇಶ ಭೌಗೋಳಿಕ ದೃಷ್ಟಿಯಿಂದ ಚಿಕ್ಕದಾದರೂ ಬೇಸಾಯಕ್ಕೆ ಸಂಬಂಧಪಟ್ಟ ವಿವಿಧ ಪರ್ಯಾಯಗಳನ್ನು ಆವಿಷ್ಕಾರ ಮಾಡುತ್ತಿರುತ್ತಾರೆ.

ನಮ್ಮ ದೇಶ ಭೌಗೋಳಿಕ ಹಾಗೂ ಜನಸಂಖ್ಯೆಯ ದೃಷ್ಟಿಯಿಂದ ತುಂಬಾ ದೊಡ್ಡದು ಅಂದಾಗ ಇಷ್ಟೊಂದು ಜನರಿಗೆ ಸಾಕಾಗುವಷ್ಟು ಅನ್ನ ಧಾನ್ಯವನ್ನು ಶೇಖರಿಸಿ ಎಲ್ಲರಿಗೂ ವಿನಿಯೋಗ ಮಾಡುವದು ತುಂಬಾ ಜಟಿಲವಾದ ಕೆಲಸವಾಗಿದೆ.

ಸದ್ಯಕ್ಕೆ ಎಲ್ಲೆಡೆ ಭೂಮಿಯ ಕೊರತೆ ಕಂಡು ಬರುತ್ತಿದೆ. ಹೀಗಾಗಿ ತಂತ್ರಜ್ಞಾನದ ಸಹಾಯದಿಂದ ಕಡಿಮೆ ಜಾಗದಲ್ಲಿ ಹೆಚ್ಚಿಗೆ ಇಳುವರಿಯನ್ನು ಪಡೆಯುವದು ಹೇಗೆ ಎಂಬುದರ ಬಗ್ಗೆ ಈ ಲೇಖನದಲ್ಲಿ ವಿವರಿಸಲಾಗಿದೆ. ಈ ಹೊಸ ತಂತ್ರಜ್ಞಾನದಲ್ಲಿ ಭೂಮಿಯು ಹೆಚ್ಚಿಗೆ ಬೇಕು ಎಂಬ ಚಿಂತೆಯೇ ಇಲ್ಲ. ಯಾಕೆಂದರೆ, ಈಗ ಇಸ್ರೇಲ್ ನಲ್ಲಿ ವರ್ಟಿಕಲ್ ಫಾರ್ಮಿಂಗ್ ಪದ್ಧತಿಯನ್ನು ದೊಡ್ಡ ಪ್ರಮಾಣದಲ್ಲಿ ಅನುಸರಿಸುತ್ತಿದ್ದಾರೆ. ಈ ಪದ್ಧತಿಯು ಪಟ್ಟಣಗಳಲ್ಲಿ ಹೆಚ್ಚಾಗುತ್ತಿರುವ ಜನಸಂಖ್ಯೆ ಮತ್ತು ಭೂಮಿಯ ಕೊರತೆಗಳ ಮೇಲೆ ನಿಶ್ಚಿತವಾಗಿ ಒಳ್ಳೆಯ ಉಪಾಯವಾಗಿದೆ. ಉದಾಹರಣೆಗಾಗಿ ನಮ್ಮಲ್ಲಿಯೇ ಮುಂಬಯಿ, ಬೆಂಗಳೂರು, ದೆಹಲಿ, ಪುಣೆ, ಹೈದರಾಬಾದ್, ಚೆನೈಗಳಂತಹ ದಟ್ಟ ಜನವಸತಿಯ ಪಟ್ಟಣಗಳಲ್ಲಿ ಕೃಷಿ ಭೂಮಿಯು ತುಂಬಾ ದೂರವಿರುತ್ತದೆ ಇಲ್ಲವೇ ಉಳುಮೆಯ ಭೂಮಿ ತುಂಬಾ ಕಡಿಮೆ ಇರುವಲ್ಲಿ ಈ ಐಡಿಯಾ ತುಂಬಾ ವರ್ಕೌಟ್ ಆಗುತ್ತದೆ.

ಈ ಪದ್ಧತಿಯಿಂದ ಮನೆಯ ಗೋಡೆಯ ಮೇಲೆಯೇ ನಿಮ್ಮ ಮನೆಗೆ ಬೇಕಾದ ಕಾಯಿಪಲ್ಲೆಗಳನ್ನು ಬೆಳೆಸಬಹುದು. ಇದರಿಂದ ಮನೆಯ ತಾಪಮಾನವು ಸರಿಯಾಗಿರುವದು. ಹಾಗೂ ಹೊರಗಿನ ಅನೇಕ ರೀತಿಯ ಕೀಟನಾಶಕಗಳನ್ನು ಹಾನಿಕಾರಕ ಕೆಮಿಕಲ್ ಗಳನ್ನು ಸಿಂಪಡಿಸಿ ಬೆಳೆಸುವ ಹಾಗೂ ರಾಸಾಯನಿಕ ಪ್ರಕ್ರಿಯೆಗಳಿಂದ ತಯಾರಾಗುವ ಹಣ್ಣು ಹಂಪಲು ಕಾಯಿಪಲ್ಲೆಗಳಿಂದ ಮುಕ್ತಿ ಸಿಗುವದು.

ಇಲ್ಲಿ ನೀರಿನ ಬಳಕೆ ಕಡಿಮೆಯಾಗುವದರಿಂದ ನೀರಿನ ಉಳಿತಾಯವಾಗುವದು. ಈ ಪದ್ಧತಿಯಲ್ಲಿ ನೀರಿನ ಸಿಂಪಡಣೆಯನ್ನು ಕಂಪ್ಯೂಟರ್ ಮೂಲಕ ನಿಯಂತ್ರಿಸಲು ಬರುವದು. ಈ ಪದ್ಧತಿಯಲ್ಲಿ ಹೂವಿನ ಕುಂಡಗಳಂತಹವುಗಳಲ್ಲಿ ಸಸಿಗಳನ್ನು ನೆಡಲಾಗುವದು. ಸಸಿಗಳು ಸ್ವಲ್ಪ ದೊಡ್ಡವುಗಳಾದ ಮೇಲೆ ಅವುಗಳನ್ನು ಗೋಡೆಯ ಮೇಲೆ ಅಂಟಿಸಿ ಬಿಡುತ್ತಾರೆ.

ಈ ರೀತಿಯ ಬೇಸಾಯದಿಂದ ಮನೆಯ ಉಷ್ಣತಾಮಾನದಲ್ಲಿ ಇಳಿಕೆಯಾಗುವದು, ರಾಸಾಯನಿಕ ಗೊಬ್ಬರಗಳಿಂದ ಮುಕ್ತವಾಗುವದರಿಂದ ಮನುಷ್ಯನ ಮೇಲಾಗುವ ದುಷ್ಪರಿಣಾಮವು ನಿಲ್ಲುವದು. ಹೆಚ್ಚಿಗೆ ಜನಸಂಖ್ಯೆ ಇರುವ ದೊಡ್ಡ ದೊಡ್ಡ ಪಟ್ಟಣಗಳಲ್ಲಿ ಈ ತಂತ್ರಜ್ಞಾನ ಫಾಲೋ ಮಾಡಿದರೆ ಪಟ್ಟಣವಾಸಿಗಳಿಗೆ ಸಾಕಾಗುವಷ್ಟು ಕಾಯಿಪಲ್ಲೆಗಳು ಸರಳವಾದ ರೀತಿಯಲ್ಲಿ ದೊರೆಯುವದು.

ಈ ಕೃಷಿ ಪದ್ಧತಿಯಲ್ಲಿ ವರ್ಟಿಕಲ್ ಫಾರ್ಮಿಂಗ್ ಜೊತೆಗೆ ಆಧುನಿಕ ಕೃಷಿಯ 3 ಪದ್ಧತಿಗಳಿವೆ. 1. ಹೈಡ್ರೋಪೋನಿಕ್ಸ್ 2. ಎಕ್ವಾಪೋನಿಕ್ಸ್ 3. ಏರೋಪೋನಿಕ್ಸ್. ನಿಮ್ಮ ಅನುಕೂಲದ ಪ್ರಕಾರ ಇವುಗಳಲ್ಲಿಂದ ಒಂದನ್ನು ಆಯ್ಕೆ ಮಾಡಬಹುದು.

1) ಹೈಡ್ರೋಪೋನಿಕ್ಸ್:.

ಈ ಪದ್ಧತಿಯಲ್ಲಿ ಮಣ್ಣಿನ ಉಪಯೋಗ ಮಾಡಲಾಗುವದಿಲ್ಲ. ಇದರಲ್ಲಿ ಬರೀ ರಾಸಾಯನಿಕ ದ್ರಾವಣವನ್ನು ಉಪಯೋಗಿಸಲಾಗುವದು.

2 ) ಎಕ್ವಾಪೋನಿಕ್ಸ್:-

ಈ ತಂತ್ರಜ್ಞಾನದಲ್ಲಿ ಮತ್ಸ್ಯಪಾಲನೆಯ ಉದ್ಯೋಗವನ್ನು ವಿಕಸಿತ ಮಾಡುವದಿದೆ. ಇಲ್ಲಿ ಮತ್ಸ್ಯ ಮತ್ತು ಸಸಿಗಳನ್ನು ಪರಸ್ಪರ ಸಹಯೋಗದಿಂದ ಬೆಳೆಸಲಾಗುತ್ತದೆ.

3 ) ಏರೋಪೋನಿಕ್ಸ್:-

ಈ ತಂತ್ರಜ್ಞಾನದಲ್ಲಿ ಸಸಿಗಳ ಬೆಳವಣಿಗೆಯನ್ನು ಬರೀ ಹವೆಯಿಂದಲೇ ಬೆಳೆಸಲಾಗುವದು.

ಎಕ್ವಾಪೋನಿಕ್ಸ್ ಮತ್ತು ಏರೋಪೋನಿಕ್ಸ್ ಪದ್ಧತಿಗಳ ಉಪಯೋಗವನ್ನು ಮಾಡುವದು ತುಂಬಾ ಕಡಿಮೆ. ಹಾಗೂ ಏರೋಪೋನಿಕ್ಸ್ ಬಗ್ಗೆ ಜನರಲ್ಲಿ ಇನ್ನು ಸ್ವಲ್ಪ ಸಂಶಯಗಳಿವೆ.

ಸದ್ಯಕ್ಕೆ ಇಸ್ರೇಲ್ ವ್ಯತಿರಿಕ್ತವಾಗಿ ಜಗತ್ತಿನ ಅನೇಕ ದೇಶಗಳಲ್ಲಿ ಉದಾಹರಣೆಗಾಗಿ, ಅಮೆರಿಕಾ, ಕೊರಿಯಾ, ಆಸ್ಟ್ರೇಲಿಯಾ, ಚೀನಾ, ಜಪಾನ್, ಯುರೋಪ್ ದೇಶಗಳಲ್ಲಿ ಈ ತಂತ್ರಜ್ಞಾನದ ಅವಲಂಬನೆಯನ್ನು ಮಾಡುತ್ತಿದ್ದಾರೆ.

ಇನ್ನು ಈ ತಂತ್ರಜ್ಞಾನದದಲ್ಲಿ ಋಣಾತ್ಮಕ ಗುಣಗಳ ಬಗ್ಗೆ ಹೇಳುವದಾದರೆ, ಇಲ್ಲಿ ಉಪಯೋಗಿಸಲಾಗುವ ಹನಿ ನೀರಾವರಿ ವ್ಯವಸ್ಥೆಗೆ ಬೇಕಾಗುವ ಖರ್ಚು ಸ್ವಲ್ಪ ಹೆಚ್ಚಿಗಿದೆ. ಆದರೆ ಈ ಹೊಸ ಟೆಕ್ನಾಲಾಜಿಯ ಉಪಯೋಗ ಮಾತ್ರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವದು ಕಂಡು ಬರುತ್ತಿದೆ. ಇನ್ನೊಂದು ವಿಷಯ ಇಂದು ಇಲ್ಲದೆ ಹೋದರೂ ನಾಳೆಗೆ ಮಾತ್ರ ಈ ತಂತ್ರಜ್ಞಾನ ಅವಶ್ಯಕವಾದ ತಂತ್ರಜ್ಞಾನವಾಗುವದು ನಿಶ್ಚಿತ. ಹಾಗಾಗಿ ಭವಿಷ್ಯದಲ್ಲಿ ಇದು ಜನಪ್ರಿಯವಾಗುವದು ಎನ್ನುವದರಲ್ಲಿ ಸಂಶಯವಿಲ್ಲ.