ಕೇವಲ 7 ರಿಂದ 8 ರೂಪಾಯಿಯಲ್ಲಿ 100 ಕಿಮೀ ಚಲಿಸುತ್ತದೆ ಈ ಇಲೆಕ್ಟ್ರಿಕ್ ಬೈಕ್! ತಿಳಿದುಕೊಳ್ಳಿ ಇದರ ಬೆಲೆ ಮತ್ತು ಫೀಚರ್ಸ್
ಎಲೆಕ್ಟ್ರಿಕ್ ಬೈಕ್ ಗಳು ನಮ್ಮ ದೇಶದಲ್ಲಿ ಅಷ್ಟಾಗಿ ಜನಪ್ರಿಯತೆ ಪಡೆದಿಲ್ಲವಾದರೂ ಅಲ್ಲೊಂದು ಇಲ್ಲೊಂದು ನೋಡಲು ಸಿಗುತ್ತವೆ. ಆದರೆ ಈ ಬೈಕ್ ಗಳನ್ನು ಉತ್ಪಾದನೆ ಮಾಡುವ ಕಂಪನಿಗಳು ಮಾತ್ರ ಜನರನ್ನು ಸೆಳೆಯಲು ಈ ಬೈಕ್ ಗಳಿಗೆ ಹೊಸ ರೂಪ ರೇಷೆಗಳನ್ನು ನೀಡುತ್ತಾ ಬರುತ್ತಿವೆ. ಇಂತಹುದೇ ಒಂದು ಪ್ರಯತ್ನವಾಗಿ ಹೈದರಾಬಾದ್ ಮೂಲದ ಎಲೆಕ್ಟ್ರಿಕ್ ವೆಹಿಕಲ್ ಸ್ಟಾರ್ಟ್ ಅಪ್ ಕಂಪನಿ ಅಟುಮೊಬೈಲ್ ಪ್ರೈವೇಟ್ ಲಿಮಿಟೆಡ್ ಹೊಸ ತಲೆಮಾರಿನ ಎಲೆಕ್ಟ್ರಿಕ್ ಬೈಕ್ ಆಯ್ಟಮ್ 1.0 (ಅಟಮ್ 1.0) ಅನ್ನು ಬಿಡುಗಡೆ ಮಾಡಿದೆ. ಈ ಬೈಕ್ ನ ವೆಚ್ಚವು ಪರಿಣಾಮಕಾರಿಯಾಗಿದ್ದು, ಉತ್ತಮವಾದ ಕಾರ್ಯಕ್ಷಮತೆಯನ್ನು ಹೊಂದಿರುವುದು ಮಾತ್ರವೇ ಅಲ್ಲದೇ ಇದು ರೇಸರ್ ಶೈಲಿಯ ಎಲೆಕ್ಟ್ರಿಕ್ ಬೈಕ್ ಇದಾಗಿದ್ದು, ಭಾರತೀಯ ಗ್ರಾಹಕರ ಅಗತ್ಯಗಳಿಗೆ ಅನುಗುಣವಾಗಿ ಇದನ್ನು ವಿನ್ಯಾಸಗೊಳಿಸಲಾಗಿದೆ.

ಈ ಹೊಸ ಆಟಮ್ 1.0 ರ ಬೈಕ್ ನ ಬೆಲೆ 50,000 ರೂ.ಗಳಾಗಿದ್ದು, ನಿರ್ಮಾಣವು ರೆಟ್ರೊ, ವಿಂಟೇಜ್ ವಿನ್ಯಾಸವನ್ನು ಕೂಡಿದೆ. ಈ ಬೈಕು ಖರೀದಿಗೆ ಅಟೊಮೊಬಿಲ್ನ ಆನ್ಲೈನ್ ಪೋರ್ಟಲ್ನಲ್ಲಿ ಲಭ್ಯವಿದೆ. ಈ ಹೊಸ ಬೈಕ್ ಪೋರ್ಟಬಲ್ ಲಿಥಿಯಂ ಮತ್ತು ಅಯಾನ್ ಬ್ಯಾಟರಿ ಪ್ಯಾಕ್ ನಿಂದ ನಡೆಯುತ್ತದೆ. 4 ಗಂಟೆಗಳ ಚಾರ್ಜಿಂಗ್ ಸಾಮರ್ಥ್ಯ ಇರುವ ಈ ATUM 1.0 ಒಮ್ಮೆ ಚಾರ್ಜ್ ಆದರೆ ಸುಮಾರು 100 ಕಿ.ಮೀ. ವರೆಗೂ ಬ್ಯಾಟರಿ ಕಾರ್ಯ ನಿರ್ವಹಿಸುತ್ತದೆ. ನಗರ ಪ್ರದೇಶಗಳಲ್ಲಿ ಇದು ಮಕ್ಕಳು, ವಯಸ್ಕರು ಮತ್ತು ಹಿರಿಯರು ಸಂಚಾರ ಮಾಡಲು ಬಹಳ ಸಮರ್ಪಕವಾಗಿದೆ ಎನ್ನಬಹುದು. ಬೈಕ್ ವಿವಿಧ ಬಣ್ಣಗಳಲ್ಲಿ ಲಭ್ಯವಿದೆ. ಪರಿಸರ ಸ್ನೇಹಿ ATUM 1.0 ನಲ್ಲಿ ಹೆಚ್ಚಿನ-ಕಾರ್ಯಕ್ಷಮತೆಯನ್ನು ಹಾಗೂ ಓಡಿಸಲು ಆರಾಮಾಗಿ ಇರುವಂತೆ ಹೆಚ್ಚಿನ ಗಮನವನ್ನು ನೀಡಲಾಗಿದೆ.

ಬೈಕು ತನ್ನೆಲ್ಲಾ ವಿಭಿನ್ನ ಪರಿಸ್ಥಿತಿಗಳಲ್ಲಿ ಕಾರ್ಯದಕ್ಷತೆಯ ಕುರಿತಾದ ಪರೀಕ್ಷೆಗಳನ್ನು ಕೂಡಾ ಯಶಸ್ವಿಯಾಗಿ ದಾಟಿದ್ದು, ವಿಶೇಷ ವಿಷಯವೆಂದರೆ ಇದನ್ನು ಸ್ಥಳೀಯ ಉಪಕರಣಗಳನ್ನು ಬಳಿಸಿಕೊಂಡು ಅಭಿವೃದ್ಧಿ ಪಡಿಸಲಾಗಿದೆ. ತೆಲಂಗಾಣದಲ್ಲಿರುವ ಗ್ರೀನ್ ಫೀಲ್ಡ್ ಉತ್ಪಾದನಾ ಸೌಲಭ್ಯದ ಅಡಿಯಲ್ಲಿ 15,000 ಬೈಕ್ ಗಳನ್ನು ಉತ್ಪಾದನಾ ಮಾಡುವ ಸಾಮರ್ಥ್ಯವನ್ನು ಹೊಂದಿದ್ದು, ಮಾರುಕಟ್ಟೆಯ ಬೇಡಿಕೆಗೆ ಅನುಗುಣವಾಗಿ 10,000 ಎಲೆಕ್ಟ್ರಿಕ್ ಬೈಕ್ ಗಳನ್ನು ಹೆಚ್ಚುವರಿಯಾಗಿ ಉತ್ಪಾದನೆ ಮಾಡುವ ಕ್ಷಮತೆಯನ್ನು ಈ ಉತ್ಪಾದನ ಘಟಕವು ಹೊಂದಿದೆ ಎನ್ನಲಾಗಿದೆ. ಇಂಟರ್ನ್ಯಾಷನಲ್ ಸೆಂಟರ್ ಆಫ್ ಆಟೋಮೋಟಿವ್ ಟೆಕ್ನಾಲಜಿಯ ಮೂಲಕ ಆಟಮ್ 1.0 ಕಡಿಮೆ ವೇಗದ ಬೈಕ್ ಎಂದು ಕೂಡಾ ಇದು ಅನುಮೋದನೆಯನ್ನು ಪಡೆದಿದೆ.
ಈ ಎಲೆಕ್ಟ್ರಿಕ್ ಬೈಕನ್ನು ಓಡಿಸಲು ಲೈಸನ್ಸ್ ನ ಅಗತ್ಯವಿಲ್ಲದ ಕಾರಣ ಇದನ್ನು ಕಿರಿಯರು ಕೂಡಾ ಬಳಸಬಹುದು ಎನ್ನಲಾಗಿದೆ. ಈ ಬೈಕ್ ಬಿಡುಗಡೆ ಸಂದರ್ಭದಲ್ಲಿ ಆಟೋಮೊಬೈಲ್ ಪ್ರೈವೇಟ್ ಲಿಮಿಟೆಡ್ ಸಂಸ್ಥಾಪಕರಾದ ವಾಮಸಿ ಗದ್ದಾಂ ಅವರು ಈ ಬೈಕ್ ನ ನಿರ್ಮಾಣಕ್ಕಾಗಿ ಮೂರು ವರ್ಷಗಳ ಶ್ರಮವನ್ನು ವಹಿಸಲಾಗಿದೆ ಎಂದಿದ್ದು, ಇದು ಖಂಡಿತವಾಗಿ ಜನರ ಮನಸ್ಸನ್ನು ಗೆದ್ದು, ಮಾರುಕಟ್ಟೆಯಲ್ಲಿ ಬೇಡಿಕೆಯನ್ನು ಖಚಿತವಾಗಿ ಪಡೆಯಲಿದೆ ಎಂದು ಹೇಳಿದ್ದಾರೆ. Atum 1.0 6 ಕಿಲೋಗ್ರಾಂಗಳ ಬ್ಯಾಟರಿಯನ್ನು ಹೊಂದಿದ್ದು, ಇದರ ವಿನ್ಯಾಸವು ಎಲ್ಲಿಯಾದರೂ ಚಾರ್ಜ್ ಮಾಡುವ ರೀತಿಯಲ್ಲಿ 3 ಪಿನ್ ಸಾಕೆಟ್ ಗಳನ್ನು ಹೊಂದಿದೆ.

ATUM 1.0 ಕಾರ್ಯನಿರ್ವಹಣೆಗೆ ತುಂಬಾ ಕಡಿಮೆ ವೆಚ್ಚವಾಗುತ್ತದೆ. ಸಾಮಾನ್ಯವಾಗಿ,ATUM 1.0 ರಲ್ಲಿ 100 ಕಿ.ಮೀ ದೂರಕ್ಕೆ ಸುಮಾರು 7 ರಿಂದ 8 ರೂಪಾಯಿಗಳಿಗೆ ಮಾತ್ರ ವ್ಯಯವಾಗುತ್ತದೆ. ಅದೇ ಸಾಮಾನ್ಯ ಬೈಕ್ ನಲ್ಲಾದರೆ ಈ ವೆಚ್ಚ 80 ರಿಂದ 100 ರೂಪಾಯಿಗಳಾಗುತ್ತದೆ. ಯಾವುದೇ ರಸ್ತೆಯಲ್ಲಿ ಚಲಿಸಲು ಅನುಕೂಲ ಆಗುವಂತಹ 20X4 ಹೆವಿ ಟಯರ್ಸ್, ಆರಾಮದಾಯಕವಾದ ಸೀಟ್, ಎರಡು ವರ್ಷ ಗ್ಯಾರಂಟಿ ಇರುವ ಬ್ಯಾಟರಿ, ನೂರು ಕಿಮೀ ಕ್ರಮಿಸುವ ದಕ್ಷತೆ ಹೀಗೆ ಅನೇಕ ವಿಶೇಷತೆಗಳು ಈ ಬೈಕ್ ನ ಪ್ರಮುಖ ಆಕರ್ಷಣೆಗಳಾಗಿವೆ.