‘ಕೊರೊನಾ ರಿಲೀಫ್ ಫಂಡ್’ನಲ್ಲಿ ಜಮೆಯಾದ ಹಣದಿಂದ ಐಷಾರಾಮಿ ಲಂಬೋರ್ಗಿನಿ ಕಾರು ಖರೀದಿಸಿದ ಭೂಪ!

ಒಂದು ಕಡೆ ಜಗತ್ತಿನ ಅನೇಕ ದೇಶಗಳು ಕೊರೊನಾ ಸಂಕಷ್ಟದಿಂದ ಹೆಣಗಾಡುತ್ತಿದೆ. ಇನ್ನೂ ಲಸಿಕೆಗಳ ಕ್ಲಿನಿಕಲ್ ಪ್ರಯೋಗಗಳು ನಡೆಯುತ್ತಿದೆ. ಇಡೀ ವಿಶ್ವ ಕೊರೊನಾದಿಂದ ಮುಕ್ತಿ ಯಾವಾಗ? ಎನ್ನುವಂತೆ ಕಾಯುತ್ತಿದೆ. ಇಂತಹ ಸಂಕಷ್ಟದಲ್ಲಿ ವಿಶ್ವದಲ್ಲಿ ಅನೇಕರು ಕೊರೊನಾ ಸಂಕಷ್ಟದಲ್ಲಿ ಇರುವವರಿಗೆ ನೆರವು ನೀಡಲು ಮಿಲಿಯನ್ ಗಟ್ಟಲೆ ಮೊತ್ತದ ಹಣವನ್ನು ದೇಣಿಗೆಯಾಗಿ ನೀಡುವ ಮೂಲಕ ಮಾನವೀಯತೆಯನ್ನು ಮೆರೆದಿದ್ದಾರೆ. ಸರ್ಕಾರ ಕೂಡಾ ದೇಶದ ಉದ್ಯಮಗಳ ಚೇತರಿಕೆ ಹಾಗೂ ಅಭಿವೃದ್ಧಿಗಾಗಿ ಸಾಲ ಯೋಜನೆಗಳನ್ನು ಜಾರಿಗೆ ತಂದಿದೆ. ಆದರೆ ಹೀಗೆ ಹರಿದು ಬಂದ ಹಣವನ್ನು ವ್ಯಕ್ತಿಯೊಬ್ಬ ತನ್ನ ದುಬಾರಿ ಆಸೆಗಳನ್ನು ಪೂರೈಸಿಕೊಳ್ಳಲು ದುರುಪಯೋಗ ಮಾಡಿಕೊಂಡು ಈಗ ಕಾನೂನಿನ ಬಲೆಗೆ ಬಿದ್ದಿದ್ದಾನೆ.

ಇಂತಹುದೊಂದು ಘಟನೆ ನಡೆದಿರುವ ಫ್ಲೋರಿಡಾದಲ್ಲಿ. ಇಲ್ಲಿನ ಡೇವಿಡ್ ಟಿ ಹೈನ್ಸ್ ಎಂಬ 29 ವರ್ಷದ ವ್ಯಕ್ತಿಯೊಬ್ಬ ಕೊರೊನಾ ಪರಿಹಾರ ನಿಧಿಯಾಗಿ ಸಣ್ಣ ಉದ್ಯಮಗಳಿಗೆ ನೀಡುತ್ತಿದ್ದ ಸಾಲದ ಹಣವಾಗಿ ಸಂಗ್ರಹವಾಗಿದ್ದ 3.9 ಮಿಲಿಯನ್ ಡಾಲರ್ ಗಳಷ್ಟು ಹಣವನ್ನು ತನ್ನ ಸ್ವಾರ್ಥಕ್ಕಾಗಿ ಹಾಗೂ ತನ್ನ ಐಶಾರಾಮೀ ಜೀವನಕ್ಕಾಗಿ ಬಳಸಿಕೊಂಡಿದ್ದಾನೆ.‌ ಈ ವ್ಯಕ್ತಿಯ ಮೇಲೆ ಫ್ಲೋರಿಡಾದಲ್ಲಿ ವಂಚನೆ ಮತ್ತು ಕ್ರಿಮಿನಲ್ ಪ್ರಕರಣವನ್ನು ದಾಖಲು ಮಾಡಲಾಗಿದೆ.
ಕೋವಿಡ್-19 ಪರಿಹಾದ ನಿಧಿಯಲ್ಲಿನ ಮಿಲಿಯನ್ ಗಟ್ಟಲೆ ಹಣದಿಂದ ಆತ ಒಂದು ದುಬಾರಿ ಲ್ಯಾಂಬೋರ್ಗಿನಿ ಕಾರು ಮತ್ತು ಇತರೆ ಬೆಲೆ ಬಾಳುವ ವಸ್ತುಗಳನ್ನು ಖರೀದಿಸಿದ್ದಾನೆ.

ಹೈನ್ಸ್ ಮಾಡಿದ ಅಕ್ರಮ ಪತ್ತೆಯಾಗುತ್ತಲೇ ಆತನನ್ನು ಜುಲೈ 24 ರಂದು ಬಂಧಿಸಲಾಗಿದೆ. ಆತನ ಐಶಾರಾಮೀ ಜಾರು ಹಾಗೂ ಆತನ ವಿವಿಧ ಬ್ಯಾಂಕ್ ಖಾತೆಗಳಲ್ಲಿ ಇಟ್ಟಿದ್ದ ಅಕ್ರಮ ಹಣವನ್ನು ಕೂಡಾ ವಶಪಡಿಸಿಕೊಳ್ಳಲಾಗಿದೆ. ಕೊರೊನಾ ಸಂದಿಗ್ಧ ಪರಿಸ್ಥಿತಿಯಲ್ಲಿ ಸಣ್ಣ ಉದ್ಯಮಗಳ ಚೇತರಿಕೆಗಾಗಿ ಮಾರ್ಚ್ 29 ರಂದು ಕೊರೊನಾ ವೈರಸ್ ಏಡ್ ರಿಲೀಫ್ ಮತ್ತು ಎಕಾನಮಿಕ್ ಆಕ್ಟ್ (ಕೊರೊನಾ ವೈರಸ್ ಅನುದಾನ ಪರಿಹಾರ ಮತ್ತು ಆರ್ಥಿಕ ಕಾಯ್ದೆ) ಅನ್ವಯ ಸಣ್ಣ ಉದ್ಯಮಗಳಿಗೆ ಪೇಚೆಕ್ ಪ್ರೊಟೆಕ್ಷನ್ ಪ್ರೋಗ್ರಾಂ (PPP) ಅಡಿಯಲ್ಲಿ ಮನ್ನಾ ಮಾಡುವ ಸಾಲಗಳನ್ನು ನೀಡುವ ಯೋಜನೆ ಒಂದು ಜಾರಿಯಾಗಿದೆ.

ಇದೇ ಯೋಜನೆಯನ್ನು ದಾಳವನ್ನಾಗಿ ಮಾಡಿಕೊಂಡ
ಹೈನ್ಸ್ ಸಾಲದ ಅರ್ಜಿಗಳನ್ನು ಸಲ್ಲಿಸಿ ಅದರಲ್ಲಿ ಸುಳ್ಳು ದಾಖಲೆಗಳನ್ನು ನೀಡಿದ್ದಾನೆ. ಉದ್ಯೋಗಿಗಳಿಗೆ ಕಂಪನಿ ಕಡೆಯಿಂದ ಪಾವತಿಸಿದ ಮೊತ್ತ ಸೇರಿದಂತೆ ಕಂಪನಿಗಳ ವೆಚ್ಚಗಳ ಬಗ್ಗೆ ಸುಳ್ಳು ಹೇಳಿಕೆಗಳನ್ನು ನೀಡಿದ್ದಾರೆ. ಯುಎಸ್ ನ ಪೋಸ್ಟಲ್ ಇನ್ಸ್‌ಪೆಕ್ಟರ್ ಬ್ರೆಯಾನ್ ಮ್ಯಾಸ್ಮೆಲ್ಲಾ ಹೈನ್ಸ್ ನ ಈ ನಕಲಿ ದಾಖಲೆಗಳ ಅಸಲಿಯತ್ತನ್ನು ಬಯಲಿಗೆಳೆದಿದ್ದು, ಹೈನ್ಸ್ ಸಾಲ ಪಡೆಯಲು ದಾಖಲಿಸಿರುವ ಹಾಗೆ ಯಾವುದೇ ಉದ್ಯೋಗಿಯಾಗಲಿ ಅಸ್ತಿತ್ವದಲ್ಲಿ ಇಲ್ಲ, ಆತ ಸುಳ್ಳು ದಾಖಲೆ ಸೃಷ್ಟಿಸಿ ಹಣವನ್ನು ಪಡೆದಿದ್ದಾನೆ ಎಂದು ತಿಳಿಸಿದ್ದಾರೆ.

ಸಾಲದ ಮೊದಲ ಕಂತಿನಲ್ಲಿ ಆತನಿಗೆ ಪಾವತಿಯಾಗಿದ್ದ ಹಣದಲ್ಲೇ ಆತ ಲ್ಯಾಂಬೋರ್ಗಿನಿ ಕಾರು ಹಾಗೂ ಇನ್ನಿತರೆ ಐಶಾರಾಮೀ ವಸ್ತುಗಳನ್ನು ಖರೀದಿಸಿದ್ದನು. ಆದರೆ ಆತನ ಆಟ ಸಾಗುವ ಮೊದಲೇ ಪೋಲಿಸರ ಬಲೆಗೆ ಸಿಕ್ಕಿ ಬಿದ್ದು ಈಗ ಕಂಬಿ ಎಣಿಸುವಂತಾಗಿದೆ‌. ಒಟ್ಟಾರೆ ಕೊರೊನಾ ಸಂದಿಗ್ಧತೆಯನ್ನು ಕೂಡಾ ಕ್ಯಾಷ್ ಮಾಡಿಕೊಳ್ಳುವ ಜನರಿದ್ದಾರೆ ಎಂಬುದಕ್ಕೆ ಹೈನ್ಸ್ ಉದಾಹರಣೆಯಾಗಿದ್ದಾನೆ ಎಂದರೆ ತಪ್ಪಿಲ್ಲ.