ಗಾಳಿಗೆ ದೇಹ ಅಲ್ಲಾಡಿದರೂ ತಲೆ ಮಾತ್ರ ಇದ್ದಲ್ಲೇ ಇರುತ್ತೆ! ಇದು ನೋಡಿ ಕಿಂಗ್ ಫಿಶರ್ ಹಕ್ಕಿಯ ಅಚ್ಚರಿಪಡಿಸುವಂತಹ Video!

ಪ್ರಕೃತಿಯಲ್ಲಿ ಅದೆಷ್ಟೋ ಸುಂದರ, ರಮಣೀಯ ಹಾಗೂ ವೈವಿದ್ಯಮಯ ಎನಿಸುವ ದೃಶ್ಯಗಳು, ಜೀವಿಗಳು ಹಾಗೂ ಸನ್ನಿವೇಶಗಳು ಇದ್ದು ಅವುಗಳನ್ನು ಆಸ್ವಾದಿಸುವ ಮನಸ್ಸು ಹಾಗೂ ಆಸಕ್ತಿ ಇದ್ದವರಿಗೆ ಅವು ಗೋಚರಿಸುತ್ತವೆ. ಇನ್ನು ಪ್ರಕೃತಿ ಪ್ರೇಮಿಗಳಿಗಂತೂ ಅಂತಹ ಮನಮೋಹರ ದೃಶ್ಯಗಳು ನೋಡಲು ಸಿಕ್ಕರೆ ಅದು ಅದ್ಭುತವೇ ಸರಿ, ಅವರ ಕಣ್ಣಿಗೊಂದು ಹಬ್ಬವೇ ಸರಿ. ಪ್ರಕೃತಿಯಲ್ಲಿ ವೈವಿದ್ಯಮಯ ಜೀವಿಗಳಲ್ಲಿ ಬಹಳ ಆಕರ್ಷಕವಾಗಿ ನಮ್ಮ ಮನಸ್ಸನ್ನು ಸೆಳೆಯುವುದು ಮಾತ್ರವೇ ಅಲ್ಲದೇ ನಮ್ಮ ಮನಸ್ಸಿಗೆ ಒಂದು ಮುದವನ್ನು ನೀಡುವ, ಆಹ್ಲಾದದ ಅನುಭವವನ್ನು ನೀಡುವ ಜೀವಿಗಳೆಂದರೆ ಹಕ್ಕಿಗಳು ಅಥವಾ ಪಕ್ಷಿಗಳು. ಅವುಗಳ ಬಣ್ಣ, ಆಕಾರ, ಗಾತ್ರ, ಇಂಚರ ಅಬ್ಬಾ ಎಲ್ಲವೂ ಕೂಡಾ ಅದ್ಭುತ ಅನಿಸದೇ ಇರಲಾರದು.

ಮುಂಜಾನೆಯ ತಂಪಿನಲ್ಲಿ ಹಕ್ಕಿಗಳ‌ ಇಂಚರ ಮನಸ್ಸಿಗೆ ಶಾಂತಿಯನ್ನು ನೀಡುತ್ತದೆ. ಸಂಜೆ ಗತ್ತಲ ವೇಳೆ ಸೂರ್ಯನ ಕಾಂತಿಯಿಂದ ಕೆಂಪಾದ ಆಗಸದಲ್ಲಿ ಹಕ್ಕಿಗಳು ಹಾರುವ ದೃಶ್ಯ ಪ್ರಕೃತಿಯೇ ಚಿತ್ರಕಾರನಾಗಿ ಹೃನ್ಮನ ತಣಿಸುವ ಕಲಾಖಂಡವನ್ನೇ ಕಣ್ಮುಂದೆ ತಂದು ಇರಿಸಿದನೇನೋ ಎನ್ನುವಂತೆ ಭಾಸವಾಗುತ್ತದೆ. ಹೀಗೆ ಹಕ್ಕಿಗಳು ಅಥವಾ ಪಕ್ಷಿಗಳು ನಮಗೆ ಸದಾ ಪ್ರಿಯವಾದವು. ಸೋಶಿಯಲ್ ಮೀಡಿಯಾದಲ್ಲೊಂದು ಅಂದವಾದ ಹಕ್ಕಿಯ ಸುಂದರವಾದ ವೀಡಿಯೋ ಒಂದು ವೈರಲ್ ಆಗುತ್ತಾ ಸಾಗಿದೆ.‌ ಈ ವೀಡಿಯೋ ನೋಡುಗನಿಗೆ ವಾವ್ ಏನೀ ಆಶ್ಚರ್ಯ ಎನಿಸದೇ ಇರಲಾರದು. ಹಕ್ಕಿಯು ತನ್ನ ದೇಹದಲ್ಲಿ ಮಾಡುತ್ತಿರುವ ವಿನ್ಯಾಸವು ಯಾವುದೇ ಬ್ರೇಕ್ ಡಾನ್ಸ್ ಮಾಡುವ ನರ್ತಕನಿಗೆ ತಾನೇನು ಕಡಿಮೆ ಎನ್ನುವಂತೆ ಇದೆ.

ವೀಡಿಯೋದಲ್ಲಿ ಕಿಂಗ್ ಫಿಶರ್ ಹಕ್ಕಿಯೊಂದು ಕಾಡಿನಲ್ಲಿ ಒಂದು ಸಣ್ಣ ಕಡ್ಡಿಯ ಮೇಲೆ ಕುಳಿತಿದೆ. ಆ ಕಡ್ಡಿಯು ಗಾಳಿಗೋ ಅಥವಾ ಹಕ್ಕಿಯ ಭಾರಕ್ಕೋ ಎಂಬಂತೆ ಅಲುಗಾಡುತ್ತಿದೆ. ಆದರೆ ವಿಶೇಷತೆ ಅಲ್ಲಿಲ್ಲ. ಬದಲಾಗಿ ಆ ಕಡ್ಡಿ ಕದಲುವಾಗ ಹಕ್ಕಿಯ ದೇಹದಲ್ಲಿ ಕಂಡ ಚಲನೆಯು ಮಾತ್ರ ವಿಸ್ಮಯ ಎನಿಸುವಂತೆ ಭಾಸವಾಗುತ್ತಿದೆ. ಏಕೆಂದರೆ ಕಡ್ಡಿ ಆಡುವಾಗ ಆ ಪುಟ್ಟ ಹಕ್ಕಿಯ ದೇಹವು ಅದಕ್ಕೆ ತಕ್ಕಂತೆ ಆಡುತ್ತಿದೆ ಆದರೆ ಅದರ ತಲೆಯ ಭಾಗ ಮಾತ್ರ ಸ್ವಲ್ಪವೂ ಕದಲದೇ ಒಂದೇ ಸ್ಥಾನದಲ್ಲಿ ಇದೆ‌. ಹಕ್ಕಿಯ ತಲೆ ಭಾಗವು ಸ್ವಲ್ಪ ಕೂಡಾ ಆ ಕಡೆ ಈ ಕಡೆ ಆಗದೆ ಅದರ ದೇಹ ಮಾತ್ರ ಸುತ್ತುವಂತೆ ಇರುವುದು ನೋಡುತ್ತಿದ್ದರೆ ಮತ್ತೆ ಮತ್ತೆ ವೀಡಿಯೋ ನೋಡಬೇಕು ಎನಿಸುವಂತಿದೆ.

ಟ್ವಿಟರ್ ನಲ್ಲಿ ಸೆಪ್ಟೆಂಬರ್ ಎರಡರಂದು ಶೇರ್ ಆಗಿರುವ ಈ ವೀಡಿಯೋವನ್ನು ಈಗಾಗಲೇ 31 ಸಾವಿರಕ್ಕಿಂತ ಅಧಿಕ ಮಂದಿ ವೀಕ್ಷಣೆ ಮಾಡಿದ್ದಾರೆ.‌ 1.7 ಸಾವಿರದ ಗಡಿ ದಾಟಿದ ಮೆಚ್ಚುಗೆಗಳನ್ನು ಈ ವೀಡಿಯೋ ಪಡೆದುಕೊಂಡಿದೆ. ಅಲ್ಲದೇ ವೀಡಿಯೋ ನೋಡಿದ ಮಂದಿಯ ಪ್ರತಿಕ್ರಿಯೆಗಳು ಕೂಡಾ ಬಹಳ ಆಸಕ್ತಿಕರ ಎನಿಸಿದೆ. ಕೆಲವರು ವೀಡಿಯೋ ನೋಡಿ ಆಡುತ್ತಿರುವುದು ಹಕ್ಕಿಯ ತಲೆಯೋ ಅಥವಾ ದೇಹವೋ ಎಂದು ಪ್ರಶ್ನೆ ಮಾಡಿದರೆ ಮತ್ತೊಬ್ಬರು ಸುತ್ತಲ ದೃಶ್ಯ ನೋಡು ನಿಮಗೇ ಉತ್ತರ ಸಿಗುತ್ತದೆ ಎಂದು ಅವರಿಗೆ ತಮ್ಮ ಪ್ರತಿಕ್ರಿಯೆಯನ್ನು ನೀಡಿದ್ದಾರೆ.‌

ವಿಡಿಯೋ ನೋಡಿ….

ಒಬ್ಬರು ಕಿಂಗ್ ಫಿಶರ್ ಗಳು ಸುಂದರವಾದ ಹಕ್ಕಿಗಳು ಎಂದು ತಿಳಿದಿತ್ತು ಈ ವೀಡಿಯೋ ನೋಡಿದ ಮೇಲೆ ಅದರ ಮತ್ತೊಂದು ಅಡಗಿದ್ದ ಕೌಶಲ್ಯ ಈಗ ಅನಾವರಣ ಆಗಿದೆ ಎಂದಿದ್ದಾರೆ. ಹಕ್ಕಿಯ ಫೋಕಸ್ ಬಹಳ ಚೆನ್ನಾಗಿದೆ ಎಂದು, ಅದ್ಭುತ ಕೌಶಲ್ಯ ಎಂದೂ, ನಂಬಲಾಗದ ಕಲೆ ಇದು ಎಂದು ಅನೇಕರು ಅನೇಕ ರೀತಿಯಲ್ಲಿ ಕಿಂಗ್ ಫಿಶರ್ ಹಕ್ಕಿಯ ಈ ಅಂದವಾದ ವೀಡಿಯೋ ನೋಡಿ ತಮ್ಮ ಪ್ರತಿಕ್ರಿಯೆಗಳನ್ನು ನೀಡುತ್ತಾ ತಮ್ಮ ಮೆಚ್ಚುಗೆಯನ್ನು ಸೂಚಿಸುತ್ತಿದ್ದಾರೆ.