ಗ್ರಾಮದಲ್ಲಿ ದನಕರುಗಳನ್ನು ಮೇಯಿಸಲು ಹೋಗುತ್ತಿದ್ದ ಹುಡುಗಿ ಇಂದು ಒಬ್ಬ IAS ಅಧಿಕಾರಿ!
“ಸತತ ಪ್ರಯತ್ನ ಮಾಡುವವರಿಗೆ ಯಶಸ್ಸು ಖಚಿತ” ಎನ್ನುವ ಅತ್ಯುತ್ತಮವಾದ ಸಾಲು ತಮಿಳುನಾಡಿನ ಅನುಮತಿ ಎನ್ನುವ ಮಹಿಳೆಯ ವಿಷಯದಲ್ಲಿ ಅಕ್ಷರಶಃ ಸತ್ಯವಾಗಿದೆ. ಬಾಲ್ಯದಿಂದಲೂ ದನಕರುಗಳನ್ನು ಮೇಯಿಸುತ್ತಿದ್ದ ವನಮತಿ ಭವಿಷ್ಯದಲ್ಲಿ ತಾನು ಜಿಲ್ಲಾಧಿಕಾರಿ ಆಗಬೇಕೆಂಬ ಕನಸನ್ನು ಕಂಡು ಕೊಂಡಂತಹ ಬಾಲಕಿ. ಅಂದು ಕನಸನ್ನು ಕಂಡ ಅದೇ ಬಾಲಕಿ ಇಂದು ತಮ್ಮ ಪರಿಶ್ರಮ ಹಾಗೂ ಶ್ರದ್ಧೆಯಿಂದ ತನ್ನ ಕನಸನ್ನು ನನಸು ಮಾಡಿಕೊಂಡು, ತಮ್ಮ ಗುರಿಯನ್ನು ತಲುಪುವಲ್ಲಿ ಯಶಸ್ಸನ್ನು ಪಡೆದುಕೊಂಡಿದ್ದಾರೆ. ತಮಿಳುನಾಡು ರಾಜ್ಯದ ಈರೋಡ್ ಜಿಲ್ಲೆಯ ಮೂಲದವರಾದ ವನಮತಿ ತಮ್ಮ ಬಾಲ್ಯದ ಬಹಳಷ್ಟು ಸಮಯವನ್ನು ಶಿಕ್ಷಣ ಮತ್ತು ಮನೆಯಲ್ಲಿ ಸಾಕಿ ಸಲಹುತ್ತಿದ್ದ ದನಕರುಗಳನ್ನು ಹಳ್ಳಿಯ ಸುತ್ತಮುತ್ತ ಮೇಯಿಸುತ್ತಾ ಕಳೆಯುತ್ತಿದ್ದರು.
ಬಡ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ ವನಮತಿ ಅವರ ಜೊತೆಗೆ ಸದಾ ಇರುತ್ತಿದ್ದುದು ಆಕೆಯ ಕನಸುಗಳು ಮಾತ್ರ. ತನ್ನ ಕನಸುಗಳನ್ನು ನನಸು ಮಾಡಿಕೊಳ್ಳಲು ಪೂರಕವಾದಂತಹ ಯಾವುದೇ ಸಾಧನಗಳು ಆಕೆಯ ಬಳಿ ಇರಲಿಲ್ಲ, ಆದರೆ ಕನಸನ್ನು ನನಸು ಮಾಡಿಕೊಳ್ಳಲೇಬೇಕು ಎನ್ನುವ ದೃಢ ನಿರ್ಧಾರ ಹಾಗೂ ಆತ್ಮವಿಶ್ವಾಸ ಆಕೆಯ ಜೊತೆಗಿತ್ತು. ಮನಮತಿ ಅವರಿಗೆ ಅವರ ಜೀವನದಲ್ಲಿ ಮೊದಲ ಸ್ಫೂರ್ತಿಯಾಗಿದ್ದು ಅವರ ಜಿಲ್ಲೆಯ ಜಿಲ್ಲಾಧಿಕಾರಿ. ಅಲ್ಲಿನ ಜಿಲ್ಲಾಧಿಕಾರಿಯನ್ನು ಯುವಕರು ಹಾಗೂ ಹಿರಿಯರು ಒಂದೇ ಸಮಾನವಾಗಿ ಗೌರವ ನೀಡುವುದನ್ನು ವನಮತಿ ಬಹಳಷ್ಟು ಪ್ರೇರಣೆಯನ್ನು ಪಡೆದುಕೊಂಡಿದ್ದರು.
ಅವರಿಗೆ ಎರಡನೆಯ ಸ್ಫೂರ್ತಿ ಎಂದರೆ ಅದು ‘ಗಂಗಾ ಯಮುನಾ ಸರಸ್ವತಿ’ ಎನ್ನುವ ಧಾರವಾಹಿ. ಈ ಧಾರವಾಹಿಯ ಮುಖ್ಯ ಪಾತ್ರಧಾರಿ ಒಬ್ಬ ಐಎಎಸ್ ಅಧಿಕಾರಿ. ಆ ಪಾತ್ರವು ಕೂಡಾ ವನಮತಿ ಅವರ ಮೇಲೆ ಬಹಳಷ್ಟು ಪರಿಣಾಮವನ್ನು ಬೀರಿತ್ತು. 2015 ಕ್ಕಿಂತ ಮೊದಲು ವನಮತಿ ಮೂರು ಬಾರಿ ಯುಪಿಎಸ್ಸಿ ಪರೀಕ್ಷೆಯನ್ನು ಬರೆದಿದ್ದರು. ಆದರೆ ಕೆಲವು ಅಂಕಗಳ ಅಂತರದಿಂದ ಅವಕಾಶ ಅವರ ಕೈ ತಪ್ಪಿ ಹೋಗುತ್ತಿತ್ತು. ಆ ವಿಫಲತೆಗಳಿಂದ ಅವರು ಹತಾಶರಾಗಲಿಲ್ಲ, ಅವರು ನಿರಾಶರಾಗದೆ ಮತ್ತೆ ಮತ್ತೆ ತಮ್ಮ ಪ್ರಯತ್ನವನ್ನು ಮುಂದುವರಿಸಿದರು. ಆ ಪ್ರಯತ್ನದ ಫಲವೇ 2015 ರಲ್ಲಿ ಯುಪಿಎಸ್ಸಿ ಪರೀಕ್ಷೆಯ ನಂತರ ಅಂತಿಮ ಪಟ್ಟಿಗೆ ಆಯ್ಕೆಯಾದ 1236 ಅಭ್ಯರ್ಥಿಗಳ ಪಟ್ಟಿಯಲ್ಲಿ ವನಮತಿ ಸ್ಥಾನವನ್ನು ಪಡೆದುಕೊಂಡರು.

ವನಮತಿ ತಮ್ಮ ಈ ಯಶಸ್ಸಿನ ಹಿಂದಿನ ಕಾರಣ ತಮ್ಮ ತಂದೆ ತಾಯಿ ಎಂದು ಹೇಳುತ್ತಾರೆ. ಏಕೆಂದರೆ ಅವರ ಸಮುದಾಯದಲ್ಲಿ ಸಾಮಾನ್ಯವಾಗಿ ಹೆಣ್ಣು ಮಕ್ಕಳಿಗೆ ಬೇಗ ವಿವಾಹ ಮಾಡಿ, ಗಂಡನ ಮನೆಗೆ ಕಳುಹಿಸುವುದಕ್ಕೆ ಹೆಚ್ಚಿನ ಒತ್ತನ್ನು ನೀಡಲಾಗುತ್ತದೆ ಎನ್ನುವ ಅವರು, ತನ್ನ ತಂದೆ ತಾಯಿ ತನ್ನ ಶಿಕ್ಷಣಕ್ಕೆ ಹೆಚ್ಚಿನ ಮಹತ್ವವನ್ನು ನೀಡಿದ್ದು ಮಾತ್ರವೇ ಅಲ್ಲದೇ, ತನ್ನ ಕನಸನ್ನು ನನಸು ಮಾಡಿಕೊಳ್ಳಲು ಸದಾ ಪ್ರೇರಣೆಯನ್ನು ನೀಡಿದರು ಎಂದು ವನುಮತಿ ಬಹಳ ಹೆಮ್ಮೆಯಿಂದ ಹೇಳುತ್ತಾರೆ. ಸಂದರ್ಶನವೊಂದರಲ್ಲಿ ಮಾತನಾಡುತ್ತಾ ವನಮತಿ ಅವರು, “ನನ್ನ ತಂದೆ ಕೊಬ್ಬ ಡ್ರೈವರ್, ಆದರೆ ಶಿಕ್ಷಣ ಮಾತ್ರವೇ ಒಬ್ಬ ವ್ಯಕ್ತಿಯ ಸ್ಥಾನವನ್ನು ಹೆಚ್ಚಿಸುತ್ತದೆ ಎನ್ನುವ ನಂಬಿಕೆ ನನ್ನನ್ನು ನನ್ನ ಗುರಿಯ ಕಡೆಗೆ ತಲುಪಿಸಲು ಒಂದು ಪ್ರೇರಣೆಯಾಯಿತು” ಎಂದು ಹೇಳಿದ್ದರು.
ಲಾಲ್ ಬಹುದ್ದೂರ್ ಶಾಸ್ತ್ರಿ ತರಬೇತಿ ಕೇಂದ್ರದಲ್ಲಿ ಅವರು ಟ್ರೈನಿಂಗ್ ಮುಗಿಸಿದ ನಂತರ ಮೊದಲ ಪೋಸ್ಟಿಂಗ್ ನಲ್ಲಿ ವನಮತಿ ಅವರು ಮಹಾರಾಷ್ಟ್ರದಲ್ಲಿ ಒಂದು ಜಿಲ್ಲೆಯ ಜಿಲ್ಲಾಧಿಕಾರಿಯಾಗಿ ನೇಮಕಗೊಂಡರು. ಪ್ರಸ್ತುತ ವನವತಿ ಅವರು ನಂದೂರ್ಬಾರ್ ನಲ್ಲಿ ಇಂಟಿಗ್ರೇಟೆಡ್ ಟ್ರೈಬಲ್ ಡೆವಲಪ್ಮೆಂಟ್ ಪ್ರಾಜೆಕ್ಟ್ ನಲ್ಲಿ ಯೋಜನಾ ಅಧಿಕಾರಿಯಾಗಿ ತಮ್ಮ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ವನಮತಿ ಅವರ ಸಾಧನೆ ಅನೇಕ ಯುವಕ ಯುವತಿಯರಿಗೆ ಸಾಧನೆಯ ಹಾದಿಯಲ್ಲಿ ಪ್ರಯತ್ನ ಎಂದಿಗೂ ನಿಲ್ಲಿಸಬಾರದು ಎನ್ನುವ ಸಂದೇಶವನ್ನು ನೀಡುತ್ತದೆ.