ಜವಾರಿ ಟ್ಯಾಲೆಂಟ್! ಕರೆಂಟ್ ಮತ್ತು ಇಂಧನ ಇವೆರಡರ ಸಹಾಯವಿಲ್ಲದೇನೆ ರೈತ ತನ್ನ ಬೆಳೆಗಳಿಗೆ ಕೊಡುತ್ತಿದ್ದಾನೆ ನೀರು!

ಕೃಷಿ ವ್ಯವಸಾಯಕ್ಕೆ ಆಧುನಿಕ ತಂತ್ರಜ್ಞಾನದ ಟಚ್ ಅಪ್ ನೀಡುವದು ತುಂಬಾ ಅತ್ಯವಶ್ಯವಾಗಿದೆ. ಸದ್ಯದ ರೈತ ತನ್ನ ಹೊಲದಲ್ಲಿ ಆಧುನಿಕ ಉಪಕರಣಗಳ ಉಪಯೋಗ ಹೆಚ್ಚಾಗಿ ಮಾಡುತ್ತಿದ್ದಾನೆ. ಅಷ್ಟೇ ಅಲ್ಲದೆ ರೈತನ ಪ್ರತಿಯೊಂದು ಕೆಲಸ ಆದಷ್ಟು ವೇಗದಲ್ಲಿ ಮತ್ತು ಸರಳ, ಸಹಜವಾಗಿ ಆಗಲು ಕೃಷಿಯ ಅನೇಕ ಸಲಕರಣೆಗಳ ಶೋಧ ಅವಿರತವಾಗಿ ನಡೆದೇ ಇದೆ. ಇಷ್ಟಲ್ಲದೆ ರೈತನು ಸಹ ತುಂಬಾ ಜಾಣನಾಗಿದ್ದಾನೆ. ತನಗೆ ಬೇಕಾಗುವ ದಿನನಿತ್ಯದ ಉಪಯೋಗಕ್ಕೆ ಬರುವ ಅನೇಕ ಸಲಕರಣೆಗಳನ್ನು ತಾನೇ ತಯಾರಿಸಿಕೊಳ್ಳುತ್ತಿದ್ದಾನೆ ಎಂದರೆ ತಪ್ಪಲ್ಲ.

ದಿನದಿಂದ ದಿನಕ್ಕೆ ಕರೆಂಟ್ ಹಾಗೂ ಇಂಧನ ಬೆಲೆ ಹೆಚ್ಚಾಗುತ್ತಲೇ ಇದೆ. ಅದರಲ್ಲೂ ತೋಟಕ್ಕೆ ನೀರು ಬಿಡಲು ಸಮಯಕ್ಕೆ ಸರಿಯಾಗಿ ಕರೆಂಟ್ ಇರುವದಿಲ್ಲ. ಹೀಗಾಗಿ ಈಗ ಝಾರಖಂಡ್ ಹಜಾರಿಬಾಗ್ ನಿವಾಸಿಯಾದ ಮಹೇಶ್ ಮಾಂಝಿ ಹೆಸರಿನ ರೈತನೊಬ್ಬ ಜವಾರಿ ಐಡಿಯಾದಿಂದ ಸೈಕಲ್ ನೀರಾವರಿ ಯಂತ್ರ ಒಂದನ್ನು ತಯಾರಿಸಿದ್ದಾನೆ. ಈ ಯಂತ್ರದ ಚಾಲನೆಗೆ ಕರೆಂಟ್ ಹಾಗೂ ಇಂಧನ ಇವೆರಡರ ಅವಶ್ಯಕೆತೆಯೇ ಬೀಳುವುದಿಲ್ಲ.

ಮಹೇಶ್ ನ ಮನೆಯಲ್ಲಿ ಒಂದು ನಿರುಪಯೋಗಿ ಮೋಟಾರ್ ಪಂಪ್ ಇದೆ. ಆತ ಸೈಕಲ್ ನ ಹಿಂದಿನ ಟಾಯರ್ ಅನ್ ಪ್ಯಾಕ್ ಮಾಡಿ ಅಲ್ಲಿ ಸೈಕಲ್ ಪಂಪ್ ಕೂಡಿಸಿ ನೀರಾವರಿ ವ್ಯವಸ್ಥೆ ಮಾಡಿಕೊಂಡನು. ಈಗ ಅದರ ಸಹಾಯದಿಂದ ತೋಟಕ್ಕೆ ನೀರು ಹರಿಬಿಡುತ್ತಿದ್ದಾನೆ. ಆತನ ತೋಟದ ಹತ್ತಿರವೇ ಒಂದು ಚಿಕ್ಕ ಕೆರೆ ಇದೆ. ಅಲ್ಲಿ ಸೈಕಲ್ ನಡೆಸಿ ಪ್ಯಾಡಲ್ಸ್ ಗಳನ್ನು ತುಳಿಯಲು ನೀರಾವರಿ ಯಂತ್ರದ ಉಪಯೋಗ ಮಾಡಲಾಗುತ್ತದೆ. ಇದರಿಂದ ನೀರು ಸಹಜವಾಗಿ ತೋಟಕ್ಕೆ ತಲುಪುತ್ತದೆ. ಈ ಯಂತ್ರವು ಕಡಿಮೆ ಭೂಮಿ ಉಳ್ಳವರಿಗೆ ತುಂಬಾ ಉಪಯೋಗವಾಗುತ್ತದೆ.