ಟೀ ಬಗೆಗಿನ ಈ ವಿಷಯಗಳು ನಿಮಗೆ ಬೇರೆ ಯಾರೂ ಹೇಳುವುದಿಲ್ಲ!

ನಮ್ಮೆಲ್ಲರ ಮನೆಯಲ್ಲಿ ನಾವು ಮಾಡುವ ಚಹಾ ಹೆಚ್ಚು ಕಡಿಮೆ ಒಂದೇ ತರ ಇರುತ್ತೆ, ಹೇಗೆಂದರೆ ಮೊದಲು ನೀರು, ಸಕ್ಕರೆ, ಚಹದ ಪುಡಿ ಆನಂತರ ಹಾಲು ಇನ್ನು ಬೇಕಾದರೆ ಅದರಲ್ಲಿ ಯಾಲಕ್ಕಿ ಅಥವಾ ಹಸಿ ಶುಂಠಿ ಬೆರೆಸಿ ಕುದಿಸಿ ತಯಾರಿಸಿ ಕೊಡುವ ಈ ಪದ್ಧತಿ ಹಾಗೆ ನೋಡಿದರೆ ತಪ್ಪೇ ಎಂದು ಹೇಳಬಹುದು.

ಹಾಗಾದರೆ ಚಹಾ ತಯಾರಿಸುವ ಪದ್ಧತಿ ಹೇಗೆ ಅಂತೀರಾ? ಕುಡಿಯುವ ಚಹಾ ಎಷ್ಟು ಬಿಸಿಯಾಗಿರಬೇಕು? ಖಾಲಿ ಹೊಟ್ಟೆಯಲ್ಲಿ ಚಹಾ ಕುಡಿದರೆ ಸರಿಯೇ? ಈ ಎಲ್ಲ ಪ್ರಶ್ನೆಗಳ ಉತ್ತರವನ್ನು ಇಲ್ಲಿ ನೋಡುವಾ.

ಚಹಾ ಮಾಡುವ ಸರಿಯಾದ ಪದ್ಧತಿ ಎಂದರೆ, ಪಾತ್ರೆಯಲ್ಲಿ ಶುದ್ಧವಾದ ನೀರು ತೆಗೆದುಕೊಂಡು ಮೊದಲು ಅದನ್ನು ಕುದಿಸಬೇಕು. ಇದನ್ನು ಅರ್ಧ ನಿಮಿಷಕ್ಕಿಂತ ಹೆಚ್ಚು ಕುದಿಸಬಾರದು. ಆನಂತರ ಒಂದು ಒಣದಾದ ಪಾತ್ರೆಯಲ್ಲಿ ಚಹದಪುಡಿಯನ್ನು ಹಾಕಿ ಅದರ ಮೇಲೆ ಈ ಕುದಿಸಿದ ನೀರನ್ನು ಹಾಕಬೇಕು. 5 ರಿಂದ 6 ನಿಮಿಷಗಳವರೆಗೆ ಅದನ್ನು ಮುಚ್ಚಿ ಇಡಿ. ಅದಾದ ನಂತರ ಕಪ್ ನಲ್ಲಿ ಸೋಸಿಕೊಳ್ಳಿ. ಈಗ ರುಚಿಗೆ ತಕ್ಕಂತೆ ಸಕ್ಕರೆ ಮತ್ತು ಹಾಲನ್ನು ಬೆರೆಸಿ. ಒಂದು ಕಪ್ ಚಹಾ ತಯಾರಿಸಲು ಅರ್ಧ ಚಮಚ ಚಹದಪುಡಿ ಸಾಕು.

ಚಹದಪುಡಿ, ಸಕ್ಕರೆ, ಹಾಲು ಎಲ್ಲವೂ ಒಂದೇ ಸಮಯ ಕುದಿಸಿ ತಯಾರಿಸುವ ಚಹಾ ನಿಶ್ಚಿತವಾಗಿಯೂ ಅದು ಒಳ್ಳೆಯ ಪದ್ಧತಿಯಲ್ಲ. ಇದರಿಂದ ಚಹಾದ ಎಲ್ಲ ಲಾಭಗಳು ನಷ್ಟವಾಗುತ್ತವೆ. ಜೊತೆಯಲ್ಲಿ ಚಹಾದಲ್ಲಿ ಕಹಿತನ ಬರುವದು ಮತ್ತು ಚಹಾ ಸ್ಟ್ರಾಂಗ್ ಆಗುತ್ತೆ, ಇಂಥ ಚಹಾ ಕುಡಿಯುವದರಿಂದ ಯಾವ ಲಾಭವಾಗುವದಿಲ್ಲ.

ಚಹಾ ಯಾವಾಗ ಕುಡಿಯಬೇಕು?

ಬೆಡ್ ಟಿ ಮತ್ತು ಮಲಗುವ ಮುನ್ನ ಹೊರತು ಪಡಿಸಿ ಉಳಿದ ಸಮಯ ಯಾವಾಗ ಬೇಕಾದರೂ ಚಹಾ ಕುಡಿಯಬಹುದು. ಇನ್ನು ಬೆಡ್ ಟೀ ಮತ್ತು ಮಲಗುವ ಮುನ್ನ ಯಾಕೆ ಚಹಾ ಕುಡಿಯಬಾರದು ಅಂತೀರಾ? ರಾತ್ರಿ ಮಲಗುವದು ಮತ್ತು ಆರಾಮ ಮಾಡುವದರಿಂದ ಇಂಟೆಸ್ಟಾಯಿನ್ (ಕರಳು) ಫ್ರೆಶ್ ಇರುತ್ತದೆ. ಇಂಥದ್ದರಲ್ಲಿ ಮುಂಜಾನೆ ಎದ್ದಕೊಡಲೇ ಮೊದಲು ಚಹಾ ಕುಡಿಯುವದು ಒಳ್ಳೆಯದಲ್ಲ. ತದ ರಾತ್ರಿಯವರೆಗೆ ಚಹಾವನ್ನು ಸತತವಾಗಿ ಕುಡಿಯುವದರಿಂದ ನಿದ್ರಾಹೀನತೆ ಆವರಿಸಬಹುದು.

ಚಹಾದ ಜೊತೆಗೆ ಏನನ್ನು ತಿನ್ನಬೇಕು?

ಯಾರಿಗೆ ಎಸಿಡಿಟಿಯ ತೊಂದರೆ ಇದೆ ಅವರು ಯಾವತ್ತೂ ಬರೀ ಚಹಾ ಎಂದೂ ಕುಡಿಯಬಾರದು. ಅದರ ಜೊತೆಗೆ ಒಂದೆರಡು ಬಿಸ್ಕತ್ ಅಥವಾ ಬ್ರೆಡ್ ಏನನ್ನಾದರೂ ತೆಗೆದುಕೊಳ್ಳಬೇಕು. ಹಾಗೆಯೇ ಗ್ರೀನ್ ಟೀ ಇದು ಹರ್ಬಲ್ ಆಗಿರುವದರಿಂದ ಖಾಲಿ ಹೊಟ್ಟೆಯಲ್ಲಿಯೇ ತೆಗೆದುಕೊಳ್ಳಬೇಕು. ಇದರ ಜೊತೆಯಲ್ಲಿ ಏನನ್ನೂ ತೆಗೆದುಕೊಳ್ಳದಿದ್ದರೆ, ಅದರ ಪರಿಣಾಮ ಒಳ್ಳೆಯದಾಗುತ್ತದೆ.

ಒಂದು ದಿನದಲ್ಲಿ ಎಷ್ಟು ಕಪ್ ಚಹಾ ಕುಡಿಯುವದು ಸರಿ?

ಕೆಲವರು ದಿನವೊಂದರಲ್ಲಿ 5 ರಿಂದ 10 ಕಪ್ ಚಹಾದ ಸೇವನೆ ಮಾಡುತ್ತಾರೆ. ಆದರೆ ಇದು ಆರೋಗ್ಯದ ದೃಷ್ಟಿಯಿಂದ ಸರಿಯಲ್ಲ. ಹರ್ಬಲ್ ಟೀ ಎಷ್ಟು ಸಲ ಬೇಕಾದರೂ ಕುಡಿಯಬಹುದು. ಆದರೆ ಹಾಲು ಮತ್ತು ಸಕ್ಕರೆ ಎಲ್ಲವನ್ನು ಒಟ್ಟಿಗೆ ಕುದಿಸಿ ತಯಾರಿಸಿದ ಚಹಾ ದಿನದಲ್ಲಿ 3 ಕಪ್ ಗಳಿಗಿಂತ ಹೆಚ್ಚು ಕುಡಿಯಬಾರದು.

ಗರಂ ಗರಂ ತುಂಬಾ ಹಾಟ್ ಚಹಾ ಕುಡಿಯುವದು ಎಷ್ಟು ಒಳ್ಳೆಯದು?

ಛಳಿಯಲ್ಲಿ ಅಥವಾ ಮಳೆಯಲ್ಲಿ ಜನರು ತುಂಬಾ ಹಾಟ್ ಚಹಾ ಬೇಕೆನ್ನುತ್ತಾರೆ. ಎಷ್ಟೋ ಸಲ ತುಂಬಾ ಸುಡುತ್ತಿರುವ ಚಹಾ ಕುಡಿದು ಬಾಯಿ ಸುಟ್ಟುಕೊಂಡವರಿದ್ದಾರೆ. ಆದರೆ ಚಹಾ ಕಪ್ ನಲ್ಲಿ ಹಾಕಿದ ಎರಡು ಮೂರು ನಿಮಿಷಗಳ ನಂತರ ಕುಡಿಯುವದು ಒಳ್ಳೆಯದು. ನಾಲಿಗೆಯೂ ಒಂದು ಜ್ಞಾನನೇಂದ್ರಿಯವಾಗಿದೆ. ಸುಡುತ್ತಿರುವ ಚಹದಿಂದ ನಾಲಿಗೆಗೆ ತೊಂದರೆಯಾಗುವದು.

ಹೀಗಾಗಿ ಹಿರಿಯರು ಹೇಳಿದಂತೆ ಯಾವುದೇ ಆಗಲಿ ‘ಅತಿಯಾದರೆ ಅಮೃತವೂ ವಿಷ’ ಎನ್ನುವ ಹಾಗೆ ನಮ್ಮ ಹವ್ಯಾಸಗಳು ನಮ್ಮ ಹದ್ದು ಬಸ್ತಿನಲ್ಲಿರಬೇಕು. ಯಾಕೆಂದರೆ ಅತಿಯಾದ ಚಹದ ಸೇವನೆಯೂ ದೇಹಕ್ಕೆ ಒಳ್ಳೆಯದಲ್ಲ ಎನ್ನುವದು ನಿಮಗೂ ಗೊತ್ತು.