ಟ್ರಕ್ ಕೆಳಗೆ ಸ್ಕೂಟರ್ ಸಹಿತ ಬಿದ್ದರೂ ಸುರಕ್ಷಿತವಾಗಿ ಬದುಕುಳಿದ ಮಹಿಳೆ; ಇದು ಪವಾಡ ಅಲ್ಲ ಹೆಲ್ಮೆಟ್ ಮಹಿಮೆ! ನೋಡಿ ಈ Video

ರಸ್ತೆ ಸಂಚಾರಿ ನಿಯಮಗಳು ಇರುವುದು ನಮ್ಮ ಸುರಕ್ಷತೆಗಾಗಿಯೇ ಹೊರತು ಅದು ಬೇರೆ ಯಾವ ಕಾರಣಕ್ಕಾಗಿ ಅಲ್ಲ. ಆದರೆ ಎಷ್ಟೇ ನಿಯಮಗಳನ್ನು ಅಳವಡಿಸಿದರೂ, ಶಿಸ್ತಿನ ಕ್ರಮಗಳನ್ನು ಕೈಗೊಂಡರೂ ಕೂಡಾ ಜನರಿಗೆ ಇಂದಿಗೂ ಕೂಡಾ ಜಾಗೃತಿ ಎನ್ನುವುದು ಮೂಡಿಲ್ಲ. ರಸ್ತೆ ನಿಯಮಗಳನ್ನು ಪಾಲನೆ ಮಾಡದ ಅಸಂಖ್ಯಾತ ಜನರು ವಾಹನಗಳ ಮೇಲೆ ಸವಾರಿ ಮಾಡುತ್ತಾ ರಸ್ತೆಗೆ ಇಳಿಯುತ್ತಾರೆ. ಪೋಲಿಸರು ಹಿಡಿದಾಗ ದಂಡ ಕಟ್ಟಿ ಮುಂದೆ ಹೋಗುತ್ತಾರೆ. ಹೀಗೆ ದಂಡ ಕಟ್ಟಿದರೆ ಪರವಾಗಿಲ್ಲ, ಆದರೆ ಕೆಲವರು ಅಪಘಾತಗಳಿಗೆ ಈಡಾಗಿ ಪ್ರಾಣವನ್ನೇ ಕಳೆದುಕೊಂಡು ಅವರನ್ನು ನಂಬಿಕೊಂಡವರಿಗೆ ತೀರದ ನೋವನ್ನು ನೀಡುತ್ತಾರೆ. ರಸ್ತೆಗೆ ಇಳಿಯುವಾಗ ಪಾಲಿಸಬೇಕಾದ ರಸ್ತೆ ಸುರಕ್ಷತಾ ನಿಯಮಗಳಲ್ಲಿ ಒಂದು ತಪ್ಪದೇ ಹೆಲ್ಮೆಟ್ ಅನ್ನು ಧರಿಸುವುದು. ಆದರೆ ಜನ ಹೆಲ್ಮೆಟ್ ಧರಿಸದೇ ವಾಹನ ಚಾಲನೆ ಮಾಡುವುದನ್ನು ಪ್ರತಿ ನಿತ್ಯ ಗಮನಿಸುತ್ತಲೇ ಇರುತ್ತೇವೆ.

ಹೆಲ್ಮೆಟ್ ನಮ್ಮ ತಲೆಗೆ ರಕ್ಷಣೆಯನ್ನು ಒದಗಿಸುತ್ತದೆ. ಅನೇಕ ಬಾರಿ ದ್ವಿಚಕ್ರ ವಾಹನ ಸವಾರರು ಅಪಘಾತ ಗಳಲ್ಲಿ ತಲೆಗೆ ಪೆಟ್ಟು ಮಾಡಿಕೊಂಡೇ ಕೊನೆಯುಸಿರೆಳೆದಿರುತ್ತಾರೆ. ಆದರೆ ಬೈಲ್ ಚಲಾಯಿಸುವಾಗ ಶೋಕಿಗಾಗಿ ಹೆಲ್ಮೆಟ್ ಧರಿಸದೇ ಹೋಗುವುದು ಒಂದು ಕ್ರೇಜಾಗಿದೆ. ಆದರೆ ಹೆಲ್ಮೆಟ್ ಅದು ಒಂದು ಉತ್ತಮ ಕಂಪನಿಯ ಹೆಲ್ಮೆಟ್ ಎಷ್ಟು ರಕ್ಷಣೆಯನ್ನು ಒದಗಿಸುತ್ತದೆ, ಹೇಗೆ ಪ್ರಾಣಾಪಾಯದಿಂದ ಕೂಡಾ ರಕ್ಷಿಸಬಲ್ಲದು ಎನ್ನುವುದನ್ನು ತಿಳಿಸುವ ವೀಡಿಯೋ ಒಂದು ವೈರಲ್ ಆಗಿದೆ. ಈ ವೀಡಿಯೋ ನೋಡಿದಾಗ ಒಂದು ಕ್ಷಣ ಬೆಚ್ಚಿ ಬಿದ್ದರೂ ಕೂಡಾ ಅನಂತರ ಒಂದು ಸಮಾಧಾನವನ್ನು ಕೂಡಾ ನೀಡುವ ಜೊತೆಗೆ ಒಂದು ಸಂದೇಶ ಕೂಡಾ ರವಾನೆಯನ್ನು ಮಾಡಿದೆ.

ಈ ವೈರಲ್ ವೀಡಿಯೋ ನೋಡಿದಾಗ ಮಹಿಳೆಯೊಬ್ಭರು ತನ್ನ ಸ್ಕೂಟಿಯಲ್ಲಿ ಬರುತ್ತಿರುತ್ತಾರೆ. ಹಾಗೆ ಬರುವಾಗ ಒಂದು ಟರ್ನಿಂಗ್ ನಲ್ಲಿ ಆಕೆ ಟ್ರಕ್ ಒಂದರ ಪಕ್ಕದಲ್ಲಿ ಟರ್ನ್ ತೆಗೆದುಕೊಳ್ಳುವಾಗಲೇ ಟ್ರಕ್ ಕೂಡಾ ಟರ್ನ್ ತೆಗೆದುಕೊಳ್ಳುತ್ತದೆ. ಆಗಲೇ ಸಂಭವಿಸುತ್ತದೆ ಊಹೆಗೂ ಮೀರಿದ ಅ ವ ಘಡ. ಅಚಾನಕ್ಕಾಗಿ ಟ್ರಕ್ ಮಹಿಳೆಯು ಸವಾರಿ ಮಾಡಿದ್ದ ಸ್ಕೂಟಿಗೆ ತಾಕಿ ಅದು ಕೆಳಗೆ ಬಿದ್ದು ಅನಾಮತ್ತಾಗಿ ಟ್ರಕ್ ನ ಕೆಳಕ್ಕೆ ಬಂದು ಬಿಡುತ್ತದೆ. ಅಷ್ಟೇ ಅಲ್ಲ ಟ್ರಕ್ ಕೆಳಗೆ ಬಿದ್ದ ಸ್ಕೂಟಿಯ ಮೇಲೆ ಲಾರಿ ಹತ್ತಿಸಿಕೊಂಡು ಅದನ್ನು ಒಂದಷ್ಟು ದೂರ ಎಳೆದುಕೊಂಡು ಹೋಗುತ್ತದೆ. ಹೀಗೆ ಹೋಗುವಾಗ ಟ್ರಕ್ ನ ಚಕ್ರ ಮಹಿಳೆ ತಲೆಯ ರಕ್ಷಣೆಗೆ ಧರಿಸಿದ್ದ ಹೆಲ್ಮೆಟ್ ಮೇಲೆ ಹತ್ತಿಸಿಕೊಂಡೇ ಮುಂದೆ ಬರುತ್ತದೆ.

ಆ ಕ್ಷಣದಲ್ಲಿ ಆ ದೃಶ್ಯ ನೋಡಿದವರಿಗೆ ಎದೆ ಝಲ್ಲೆನ್ನುತ್ತದೆ. ಏಕೆಂದರೆ ಹೆಲ್ಮೆಟ್ ಮೇಲೆ ವಾಹನ ಚಕ್ರ ಹತ್ತಿಸಿಕೊಂಡು, ಮಹಿಳೆ ಲಾರಿಯ ಕೆಳಗೆ ಸಿಕ್ಕಿ ಬಿದ್ದಿರುವುದನ್ನು ನೋಡಿದಾಗ ಆ ಹೆಲ್ಮೆಟ್ ಒಡೆದು ಮಹಿಳೆಯ ತಲೆ ಅಪ್ಪಚ್ಚಿಯಾಗಿರುತ್ತದೆ ಎಂದೇ ಎಲ್ಲರೂ ಭಾವಿಸುತ್ತಾರೆ. ಆದರೆ ಕೆಲವು ಕ್ಷಣಗಳ ನಂತರ ಮಹಿಳೆ ಟ್ರಕ್ ಕೆಳಗಿನಿಂದ ಹೊರ ಬಂದು ಟ್ರಕ್ ಕೆಳಗಿದ್ದ ಕೆಲವು ವಸ್ತುಗಳನ್ನು ಸಂಗ್ರಹಿಸುವುದನ್ನು ನಾವು ಗಮನಿಸಬಹುದು. ನಿಜಕ್ಕೂ ಆಕೆ ಧರಿಸಿದ್ದ ಹೆಲ್ಮೆಟ್ ಆಕೆ ಪ್ರಾಣವನ್ನು ಉಳಿಸಿತ್ತು ಎನ್ನುವುದರಲ್ಲಿ ಎಳ್ಳಷ್ಟು ಕೂಡಾ ಸಂಶಯವಿಲ್ಲ ಎಂದು ನಾವು ಹೇಳಬಹುದು. ಹೆಲ್ಮೆಟ್ ನ ಪ್ರಾಮುಖ್ಯತೆ ತಿಳಿಸಲು ಈ ವೀಡಿಯೋ ಅಕ್ಷರಶಃ ಸೂಕ್ತ ಎನಿಸಿದೆ.

ವಿಡಿಯೋ ನೋಡಿ

ಈ ವೀಡಿಯೋವನ್ನು ಈಗಾಗಲೇ ಒಂದು ಕೋಟಿಗಿಂತಲೂ ಅಧಿಕ ಜನರು ವೀಕ್ಷಣೆಯನ್ನು ಮಾಡಿದ್ದಾರೆ. ಒಂದು ಲಕ್ಷಕ್ಕಿಂತ ಅಧಿಕ ಜನರು ಲೈಕ್ ಮಾಡಿದ್ದಾರೆ. ಒಂಬತ್ತು ಸಾವಿರಕ್ಕೂ ಅಧಿಕ ಮಂದಿ ಕಾಮೆಂಟ್ ಗಳನ್ನು ಮಾಡಿದ್ದಾರೆ. ನೆಟ್ಟಿಗರೊಬ್ಬರು ಆಕೆ ಧರಿಸಿರುವ ಹೆಲ್ಮೆಟ್ ನಿಜಕ್ಕೂ ಅದ್ಬುತ ಅದು ಯಾವ ಬ್ರಾಂಡ್ ನ ಹೆಲ್ಮೆಟ್ ಎಂದು ಕೇಳಿದ್ದಾರೆ. ಮತ್ತೊಬ್ಬರು ಹೆಲ್ಮೆಟ್ ಪ್ರಾಣ ಉಳಿಸುತ್ತದೆ ಎಂದು ಗೊತ್ತಿತ್ತು ಆದರೆ ಇಂತಹ ಅಪಾಯದಿಂದಲೂ ರಕ್ಷಣೆ ಮಾಡುವುದು ಎಂಬುದನ್ನು ಊಹೆ ಮಾಡಿರಲಿಲ್ಲ ಎಂದಿದ್ದಾರೆ. ಮತ್ತೊಬ್ಬರು ಆ ಮಹಿಳೆಯ ತಾಳ್ಮೆಯನ್ನು ಮೆಚ್ಚಬೇಕು ಎಂದರೆ, ಕೆಲವರು ಈ ಘಟನೆಯ ನೀತಿ ಏನೆಂದರೆ ಟ್ರಕ್ ಗಳ ಬಳಿ ವಾಹನ ಚಲಾಯಿಸಬಾರದು ಎಂದು ಹಾಸ್ಯ ಮಾಡಿದ್ದಾರೆ.‌