ತಂದೆ-ತಾಯಿ ಮನೆಯಲ್ಲಿ ಇಲ್ಲದಿದ್ದಾಗ ಕೃಷಿ ಹೊಂಡದಲ್ಲಿ ಬಿದ್ದು ಸೋದರ ಸಹಿತ ಮೂವರು ಮಕ್ಕಳ ದಾರುಣ ಸಾವು..
ತಂದೆ-ತಾಯಿ ಇಬ್ಬರೂ ಬೇರೆ ಹೊಲದಲ್ಲಿ ಕೆಲಸ ಮಾಡಲು ಹೋದಾಗ ಸೋದರ ಸಹಿತ ಮೂವರು ಮಕ್ಕಳು ಆಟವನ್ನು ಆಡುತ್ತಾ ಆಡುತ್ತಾ ಕೃಷಿಹೊಂಡದ ಹತ್ತಿರ ಹೋಗಿದ್ದಾರೆ. ನಂತರ ಅಲ್ಲಿ ಆಟ ಆಡುತ್ತಿರುವ ಸಮಯದಲ್ಲಿ ಬ್ಯಾಲೆನ್ಸ್ ತಪ್ಪಿ ನೀರಿನಲ್ಲಿ ಬಿದ್ದು ಮೂವರು ಮಕ್ಕಳು ಅಸುನೀಗಿದ್ದಾರೆ.
ಈ ಹೃದಯವಿದ್ರಾವಕ ಘಟನೆ ಕಳೆದ ಮೇ 9 ರಂದು ನೆರೆಯ ರಾಜ್ಯ ಮಹಾಷ್ಟ್ರದಲ್ಲಿಯ ಸೊಲ್ಲಾಪುರ ಜಿಲ್ಲೆಯ ಮೋಹೊಳ ತಾಲೂಕಿನ ಶೇಟ್ಫಳ ಗ್ರಾಮದ ತೋಟದಲ್ಲಿ ಘಟಿಸಿದೆ.
ವಿನಾಯಕ್ ಭರತ್ ನಿಕಮ್ (12) ಸಿದ್ಧೇಶ್ವರ ಭರತ್ ನಿಕಮ್ (8) ಮತ್ತು ಕಾರ್ತಿಕ್ ಮುಕೇಶ್ ಹಿಂಗಮಿರೆ ಹೀಗೆ ಮೂವರು ಮಕ್ಕಳ ಹೆಸರುಗಳಿವೆ. ಭರತ್ ನಿಕಮ್ ಹಾಗೂ ಪತ್ನಿ ರೇಷ್ಮಾ ಇಬ್ಬರೂ ಕೂಡಿ ದುಡಿಯಲು ಕಳೆದ ಕೆಲವು ತಿಂಗಳಿಂದ ಬೇರೆಯವರ ತೋಟಕ್ಕೆ ಹೋಗುತ್ತಿದ್ದರು.
ಮೇ 9 ರಂದು ಪತಿ-ಪತ್ನಿಯರಿಬ್ಬರೂ ಕೂಡಿಕೊಂಡು ಬೇರೇವರ ತೋಟಕ್ಕೆ ಕೆಲಸಕ್ಕೆ ಹೋಗಿದ್ದಾರೆ. ಆಗ ಮೂವರೂ ಮಕ್ಕಳು ಆಟ ಆಡುತ್ತಾ ಕೃಷಿ ಹೊಂಡದಲ್ಲಿ ಬಿದ್ದು ಸಾವಿಗೀಡಾಗಿದ್ದಾರೆ. ಸಾಯಂಕಾಲ 6 ಗಂಟೆಗೆ ಪತಿ-ಪತ್ನಿಯರಿಬ್ಬರೂ ಕೆಲಸದಿಂದ ಮರಳಿ ಬಂದಾಗ ಮಕ್ಕಳು ಮನೆಯಲ್ಲಿ ಕಾಣಿಸಿಲ್ಲ. ಆಗ ಅತ್ತಿತ್ತ ಹುಡುಕಾಡುತ್ತಿರುವಾಗ ಕೃಷಿ ಹೊಂಡದ ಹತ್ತಿರ ಮಕ್ಕಳ ಚಪ್ಪಲಿಗಳು ಕಾಣಿಸಿವೆ. ನಂತರ ಒಳಗೆ ನೋಡಿದಾಗ ಮೂವರೂ ಮಕ್ಕಳು ಕೃಷಿ ಹೊಂಡದಲ್ಲಿಯೇ ಅಸುನೀಗಿದ್ದರು. ಪ್ರಕರಣದ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದ್ದು ಹಠಾತ್ ಸಾವು ಎಂದು ಪ್ರಕರಣ ದಾಖಲಿಸಿಕೊಳ್ಳಲಾಗಿದೆ.