ತನ್ನ ಮಗನಿಗೆ ರಣವಿಜಯ್ ಎಂದು ಹೆಸರಿಟ್ಟ ಮುಸ್ಲಿಂ ಮಹಿಳೆ! ಕಾರಣ ಕೇಳಿದರೆ ‘ವಾವ್’ ಎನ್ನುವಿರಿ!

ದೇಶದಲ್ಲಿ ಕೊರೊನಾ ಪ್ರಕರಣಗಳು ದಾಖಲಾದ ಆರಂಭದಲ್ಲಿ ಇಡೀ ದೇಶವನ್ನು ಲಾಕ್ ಡೌನ್ ಮಾಡಲಾಯಿತು. ಲಾಕ್ ಡೌನ್ ಘೋಷಣೆಯ ನಂತರ ದೇಶದ ಬಹುತೇಕ ಪ್ರಜೆಗಳು ಸರ್ಕಾರದ ಈ ಘೋಷಣೆಯ ಪರವಾಗಿ ನಿಂತರು. ಸರ್ಕಾರ ನೀಡಿದ ಆದೇಶಗಳನ್ನು ಹಾಗೂ ಪ್ರತಿಯೊಂದು ಮಾರ್ಗಸೂಚಿಯನ್ನು ಕೂಡಾ ಶಿಸ್ತಿನಿಂದ ಪಾಲಿಸಲು ಸಿದ್ಧವಾದರು. ಆದರೆ ದೇಶದ ಕೆಲವು ಕಡೆಗಳಲ್ಲಿ ಲಾಕ್ ಡೌನ್ ನಿಂದ ಜನರು ಸಮಸ್ಯೆಗಳನ್ನು ಕೂಡಾ ಎದುರಿಸಲೇಬೇಕಾದ ಪರಿಸ್ಥಿತಿಯು ಕೂಡಾ ಸಹಜವಾಗಿಯೇ ನಿರ್ಮಾಣ ಆಯಿತು. ಸರ್ಕಾರಗಳು ಜನರಿಗೆ ತಮ್ಮ ತಮ್ಮ ಮನೆಗಳಲ್ಲಿ ಉಳಿಯುವಂತೆ ಸೂಚನೆ ನೀಡಿತು.

ಅಲ್ಲದೇ ಅನಿವಾರ್ಯ ಎನಿಸಿದರೆ ಮಾತ್ರ ಹೊರಗೆ ಬರಲು, ಇಲ್ಲವಾದಲ್ಲಿ ಸೋಂಕು ಹರಡುವಿಕೆಯನ್ನು ನಿಯಂತ್ರಣಕ್ಕೆ ತರುವ ಸಲುವಾಗಿ ಎಲ್ಲರೂ ಮನೆಯಲ್ಲೇ ಇರಿ ಎಂದು ಸರ್ಕಾರ ಸೂಚನೆ ನೀಡಿತಾದರೂ, ಅನೇಕರು ಸರ್ಕಾರದ ಈ ಸೂಚನೆ, ಆದೇಶಗಳನ್ನು ಪಾಲನೆ ಮಾಡಲು ಆಸಕ್ತಿ ತೋರದೆ ರಸ್ತೆಗೆ ಇಳಿಯಲು ಆರಂಭಿಸಿದರು. ಆಗ ಬೇರೆ ದಾರಿಯಿಲ್ಲದೇ ಸರ್ಕಾರವು ಪೋಲಿಸರನ್ನು ರಂಗಕ್ಕೆ ಇಳಿಸಿತು ಹಾಗೂ ಅನಾವಶ್ಯಕ ವಾಗಿ ರಸ್ತೆಗೆ ಬರುವ ಜನರಿಗೆ ಲಾಠಿಯ ರುಚಿಯನ್ನು ತೋರಿಸಲು ಅನುಮತಿಯನ್ನು ಕೂಡಾ ನೀಡಿತು. ಒಂದೆಡೆ ಪೋಲಿಸರು ಕಾನೂನು ಮೀರಿದವರನ್ನು ಕಠಿಣವಾಗಿ ಶಿಕ್ಷೆ ನೀಡುತ್ತಲೇ ಮತ್ತೊಂದೆಡೆ ತಮ್ಮ ಮಾನವೀಯ ಮುಖವನ್ನು ಕೂಡಾ ತೋರಿದರು.

ಹೀಗೆ ಲಾಕ್ ಡೌನ್ ಸಂದಿಗ್ಧದಲ್ಲಿ ಬರೇಲಿಯಲ್ಲಿ ತಮನ್ನಾ ಎನ್ನುವ ಮುಸ್ಲಿಂ ಮಹಿಳೆಯೊಬ್ಬರು ತುಂಬು ಗರ್ಭಿಣಿಯಾಗಿದ್ದು, ಆಕೆಗೆ ಹೆರಿಗೆ ನೋವು ಕಾಣಿಸಿಕೊಂಡ ಕಾರಣ ಆಸ್ಪತ್ರೆಗೆ ದಾಖಲಾಗಬೇಕಾದ ಅನಿವಾರ್ಯತೆ ಇತ್ತು. ಆದರೆ ಆಕೆಯ ಪತಿ ಲಾಕ್ ಡೌನ್ ಕಾರಣದಿಂದ ನೋಯ್ಡಾದಲ್ಲಿ ಸಿಲುಕಿದ್ದರು. ತಮನ್ನಾ ಅವರ ಸಂಕಷ್ಟದ ಬಗ್ಗೆ ತಿಳಿದ ಕೂಡಲೇ ಪೋಲಿಸ್ ಅಧಿಕಾರಿಗಳು ತಡ ಮಾಡಲಿಲ್ಲ. ಬರೇಲಿ ಮತ್ತು ನೋಯ್ಡಾ ಪೋಲಿಸರು ಪರಸ್ಪರ ಸಹಕಾರದಿಂದ ತಮನ್ನಾರನ್ನು ಆಸ್ಪತ್ರೆಗೆ ದಾಖಲಿಸಿದರು. ಅದು ಮಾತ್ರವಲ್ಲದೇ ಲಾಕ್ ಡೌನ್ ನಲ್ಲಿ ಸಿಲುಕಿದ್ದ ಆಕೆಯ ಪತಿಯನ್ನು ಆಸ್ಪತ್ರೆಗೆ ಕೂಡಾ ಕರೆತರಲು ನೆರವನ್ನು ನೀಡಿದರು.

ತಮನ್ನಾ ಸರಿಯಾದ ಸಮಯದಲ್ಲಿ ಆಸ್ಪತ್ರೆಗೆ ದಾಖಲಾದ ಮೇಲೆ ಅಲ್ಲಿ ಆಕೆ ಮುದ್ದಾದ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಆಕೆ ಸಂಕಷ್ಟದ ಸಮಯದಲ್ಲಿ ತನ್ನ ನೆರವಿಗೆ ಧಾವಿಸಿದ ಪೋಲಿಸ್ ಅಧಿಕಾರಿಗಳಿಗೆ ಕೃತಜ್ಞತೆಯನ್ನು ಸಲ್ಲಿಸುವ ಸಲುವಾಗಿ
ನೋಯ್ಡಾ ಪೋಲಿಸ್ ಇಲಾಖೆಯ ಡಿಎಸ್ಪಿ ಆಗಿರುವ ರಣವಿಜಯ್ ಸಿಂಗ್ ಅವರ ಹೆಸರನ್ನೇ ತಮ್ಮ ಮಗುವಿಗೆ ಇಟ್ಟಿದ್ದಾರೆ. ಆಕೆ ವಾಸ್ತವವಾಗಿ ಪೋಲಿಸರು ಭಗವಂತನ ರೂಪದಲ್ಲಿ ಬಂದರು ಎನ್ನುತ್ತಾರೆ. ಮುಸ್ಲಿಂ ಆದರೂ ಕೂಡಾ ಆಕೆ ತನ್ನ ಮಗುವಿಗೆ ರಣವಿಜಯ್ ಸಿಂಗ್ ಅವರ ಹೆಸರನ್ನು ಇಡುವ ಮೂಲಕ ತನ್ನ ಧನ್ಯವಾದಗಳನ್ನು ತಿಳಿಸಿದ್ದಾರೆ.