ತುತ್ತು ಅನ್ನಕ್ಕೂ ಗತಿ ಇಲ್ಲದವಳಿಗೆ ಆದಾಯ ತೆರಿಗೆ ಇಲಾಖೆಯಿಂದ ಗೊತ್ತಾಯಿತು ತಾನು 100 ಕೋಟಿಯ ಒಡತಿ ಎಂದು!
ಆಕೆ ಗಂಡನನ್ನು ಕಳೆದುಕೊಂಡ ವಿಧವೆ, ಬಡತನದ ಜೀವನ, ಇಬ್ಬರು ಮಕ್ಕಳ ಜವಾಬ್ದಾರಿ ಬೇರೆ. ಇದನ್ನೆಲ್ಲಾ ನಿರ್ವಹಣೆ ಮಾಡಲು ಆಕೆ ಕೂಲಿ ಮಾಡುತ್ತಾ, ಮನೆಯಲ್ಲಿ ಕುರಿ, ಕೋಳಿಗಳನ್ನು ಸಾಕುತ್ತಾ ಜೀವನ ಸಾಗಿಸುವಾಗಲೇ, ಆಕೆ ಒಂದಲ್ಲ, ಎರಡಲ್ಲ ಭರ್ಜರಿ 100 ಕೋಟಿ ಆಸ್ತಿಯ ಮಾಲಿಕಳು ಎಂದು ತಿಳಿದರೆ ಹೇಗಾಗುತ್ತದೆ ಅಲ್ಲವೇ? ಊಹಿಸಲು ಕೂಡಾ ಸಾಧ್ಯವಿಲ್ಲದ ಕಥೆಯಂತಿದೆ ಈ ವಿಚಾರ. ಆದರೆ ಇಂತಹುದೊಂದು ಘಟನೆ ನಿಜ ಜೀವನದಲ್ಲಿ ನಡೆದರೆ ಅದೊಂದು ಅದ್ಭುತವೇ ಅಲ್ಲವೇ? ಹಾಗಿದ್ದರೆ ಈ ಅದ್ಭುತ ನಡೆದಿದ್ದಾರೂ ಎಲ್ಲಿ? ಇದ್ದಕ್ಕಿದ್ದಂತೆ ಒಬ್ಬ ಬಡ ವಿಧವೆ ಇಷ್ಟು ದೊಡ್ಡ ಸಂಪತ್ತಿನ ಮಾಲಿಕಳಾಗಿದ್ದರ ಹಿಂದಿನ ಘಟನೆಯಾದರೂ ಏನು ಎನ್ನುವ ಕುತೂಹಲ ಮೂಡಿದ್ದರೆ ಅದಕ್ಕೆ ಇಲ್ಲಿದೆ ಉತ್ತರ.
ವಾಸ್ತವವಾಗಿ ದೆಹಲಿ ಮತ್ತು ಮುಂಬೈನ ಕೆಲವು ಕೈಗಾರಿಕೋದ್ಯಮಿಗಳು ದೆಹಲಿ ಹೆದ್ದಾರಿಯಲ್ಲಿ ಜಮೀನನ್ನು ಖರೀದಿ ಮಾಡಿರುವುದಾಗಿ, ಈ ಜಮೀನುಗಳನ್ನು ಅವರು ನಕಲಿ ಹೆಸರುಗಳಲ್ಲಿ ಅಂದರೆ ಆದಿವಾಸಿ ಮತ್ತು ಬುಡಕಟ್ಟು ಜನಾಂಗದವರ ಹೆಸರಿನಲ್ಲಿ ಭೂಮಿಯನ್ನು ಖರೀದಿಸುತ್ತಿದ್ದಾರೆ,
ಎಂದು ಆದಾಯ ತೆರಿಗೆ ಇಲಾಖೆಗೆ ದೂರು ಬಂದಿತ್ತು. ಕಾಗದದ ಮೇಲೆ ಮಾತ್ರ ಬುಡಕಟ್ಟು ಜನಾಂಗದವರ ಹೆಸರುಗಳಿದ್ದು, ವಾಸ್ತವವಾಗಿ ಜಮೀನಿನ ಒಡೆಯರೇ ಬೇರೆ ಆಗಿದ್ದಾರೆ ಎಂಬುದು ದೂರಾಗಿತ್ತು. ಕಾನೂನಿನ ಪ್ರಕಾರ ಈ ಪ್ರದೇಶದಲ್ಲಿ ಬುಡಕಟ್ಟು ಜನಾಂಗದವರು ಮಾತ್ರ, ಬುಡಕಟ್ಟು ಜನಾಂಗದವರ ಜಮೀನು ಖರೀದಿಸಬಹುದು. ಇದೇ ಕಾರಣಕ್ಕೆ ಕೈಗಾರಿಕೋದ್ಯಮಿಗಳು ಬುಡಕಟ್ಟು ಜನಾಂಗದವರ ಹೆಸರಿನಲ್ಲಿ ಜಮೀನು ಖರೀದಿ ಮಾಡುತ್ತಾರೆ.
ಈ ಮಾಲೀಕತ್ವ ಕೇವಲ ಕಾಗದದ ಮೇಲೆ ಮಾತ್ರ, ಅನಂತರ ಅವರು ಜಮೀನಿನ ಮೇಲೆ ಪವರ್ ಆಫ್ ಅಟಾರ್ನಿ ಪಡೆದುಕೊಂಡು ತಮ್ಮದಾಗಿಸಿಕೊಳ್ಳುತ್ತಾರೆ. ಈ ವಿಷಯವಾಗಿ ದೂರು ಬಂದ ನಂತರ ಆದಾಯ ತೆರಿಗೆ ಇಲಾಖೆ ಒಂದು ಜಮೀನಿನ ನಿಜವಾದ ಮಾಲೀಕಳು ಎನ್ನಲಾಗಿದ್ದ ಸಂಜು ದೇವಿ ಮೀಣಾ ಎಂಬಾಕೆಯನ್ನು ಹುಡುಕಲು ಪ್ರಾರಂಭಿಸಿತು. ದೆಹಲಿ ರಾಜಸ್ಥಾನದ ಹೈವೇಯಲ್ಲಿನ ಜಮೀನು ಆಕೆಯ ಹೆಸರಿನಲ್ಲಿತ್ತು ಎನ್ನಲಾಗಿದೆ. ಹಾಗೆ ಹುಡುಕಾಟ ಆರಂಭಿಸಿದಾಗ ಆಕೆ ರಾಜಸ್ಥಾನದ ಸಿಕಾರ್ ಜಿಲ್ಲೆಯ ನೀಮ್ ಪೊಲೀಸ್ ಠಾಣೆ ತಹಸಿಲ್ನ ದೀಪವಾಸ್ ಗ್ರಾಮದಲ್ಲಿ ವಾಸಿಸುತ್ತಿದ್ದಾರೆಂದು ತಿಳಿದುಬಂದಿದೆ. ಆದರೆ ಇಲ್ಲಿನ ಬೆಟ್ಟಗಳ ಕೆಳಗೆ ಇರುವ ಈ ಗ್ರಾಮವನ್ನು ತಲುಪುವುದು ಸುಲಭವಾದ ಕೆಲಸವಾಗಿರಲಿಲ್ಲ.
ಆದರೆ ಮಾದ್ಯಮವೊಂದು ವಿಷಯವನ್ನು ತಿಳಿಯುವ ಸಲುವಾಗಿ
ಅಲ್ಲಿಗೆ ಹೋದಾಗ ಸಂಜು ದೇವಿ ಮೀಣಾ ಈ ವಿಷಯದ ಸತ್ಯಾಂಶವನ್ನು ತಿಳಿಸಿದ್ದಾರೆ. 2006 ರಲ್ಲಿ ಆಕೆಯ ಪತಿ ಮತ್ತು ಮಾವ ಜೈಪುರದ ಅಮೆರ್ ಎಂಬಲ್ಲಿಗೆ ಕರೆದುಕೊಂಡು ಹೋಗಿ ಹೆಬ್ಬೆಟ್ಟು ಹಾಕಿಸಿದ್ದರಂತೆ. ಅದಾದ ಕೆಲವು ದಿನಗಳ ನಂತರ ಆಕೆಯ ಪತಿ ನಿಧನರಾಗಿದ್ದಾರೆ. ಆ ದಿನಗಳಲ್ಲಿ ಯಾರೋ ಒಬ್ಬರು ಬಂದು 5000 ರೂಪಾಯಿಗಳನ್ನು ಕೊಟ್ಟು ಹೋಗುತ್ತಿದ್ದರು. ಅದನ್ನು ತಾನು ಮತ್ತು ತನ್ನ ಸಹೋದರಿ ಹಂಚಿಕೊಳ್ಳುತ್ತಿದ್ದೆವು, ಆದರೆ ಸ್ವಲ್ಪ ವರ್ಷಗಳ ನಂತರ ಅದು ಬರುವುದು ನಿಂತು ಹೋಯಿತು ಎನ್ನುವ ಸಂಜು ದೇವಿಗೆ ತನ್ನ ಹೆಸರಿನಲ್ಲಿ ನೂರು ಕೋಟಿ ಬೆಲೆಬಾಳುವ ಆಸ್ತಿ ಇರುವ ಬಗ್ಗೆ ತನಗೆ ಯಾವುದೇ ಮಾಹಿತಿ ಕೂಡಾ ಇಲ್ಲ ಎನ್ನುತ್ತಾರೆ.
ಅನೇಕ ಬುಡಕಟ್ಟು ಹಾಗು ಆದಿವಾಸಿಗಳ ಹೆಸರಿನಲ್ಲಿ ಈ ರೀತಿ ಕೈಗಾರಿಕೋದ್ಯಮಿಗಳು ಜಮೀನನ್ನು ಅ ಕ್ರಮವಾಗಿ ಖರೀದಿ ಮಾಡಿದ್ದಾರೆ ಎನ್ನಲಾಗಿದ್ದು, ಅಮಾಯಕ ಜನರನ್ನು ಹೇಗೆ ಯಾಮಾರಿಸಿದ್ದಾರೆ ಎಂಬುದು ಇದರಿಂದ ತಿಳಿಯುತ್ತದೆ. ಕಳೆದ ಕೆಲವು ವರ್ಷಗಳಲ್ಲಿ ಆದಾಯ ತೆರಿಗೆ ಇಲಾಖೆ ಈ ಪ್ರದೇಶದಲ್ಲಿ ಒಟ್ಟು 1400 ಕೋಟಿ ಮೌಲ್ಯದ ಭೂಮಿಯನ್ನು ವಶಪಡಿಸಿಕೊಂಡಿದ್ದು, ಈ ಪೈಕಿ 69 ಪ್ರಕರಣಗಳಲ್ಲಿ ನ್ಯಾಯಾಲಯವು ಭೂಮಿಯನ್ನು ಸರ್ಕಾರಕ್ಕೆ ಹಸ್ತಾಂತರ ಮಾಡಿದೆ ಎನ್ನಲಾಗಿದೆ. ಇನ್ನೂ ಕೂಡಾ ಹಲವು ಕಡೆ ನಿಜವಾದ ಮಾಲೀಕರನ್ನು ಹುಡುಕುವ ಕಾರ್ಯ ಕೂಡಾ ನಡೆದಿದೆ ಎನ್ನಲಾಗಿದೆ.