ದೇಶದಲ್ಲೇ ಅತಿ ಕಡಿಮೆ ಬೆಲೆಯ 7 ಸೀಟುಗಳ ಕಾರಿನ ಹೊಸ ಮಾಡೆಲ್ ಮಾರುಕಟ್ಟೆಗೆ: ಏನಿದರ ಬೆಲೆ ಮತ್ತು ವಿಶೇಷತೆಗಳು?

ರೆನಾಲ್ಟ್ ಇಂಡಿಯಾ ತನ್ನ 2021 ಟ್ರೈಬರ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಭಾರತದಲ್ಲಿ ಇದರ ಆರಂಭಿಕ ಬೆಲೆ 5.30 ಲಕ್ಷ ರೂಪಾಯಿಗಳಾಗಿದೆ. ಇದರ ಟಾಪ್ ಎಂಡ್ ವೇರಿಯಂಟ್ ನ ಬೆಲೆ 7.82 ಲಕ್ಷಗಳವರೆಗೆ ಇರಲಿದೆ ಎನ್ನಲಾಗಿದೆ. ರೆನಾಲ್ಟ್ ತನ್ನ ಟ್ರೈಬರ್ ನ 2021 ಮಾಡೆಲ್ ಅನ್ನು ಹೊಸ ಬಣ್ಣಗಳ ಆಯ್ಕೆಗಳೊಂದಿಗೆ ಬಿಡುಗಡೆ ಮಾಡಿದೆ. ಅದು ಮಾತ್ರವೇ ಅಲ್ಲದೇ ಅದರ ಹೊರ ಮತ್ತ ಒಳ ಭಾಗಗಳಲ್ಲಿಯೂ ಕೂಡಾ ಹಲವು ಬದಲಾವಣೆಗಳನ್ನು ಮಾಡಿದೆ. ಹಳೆಯ ಆವೃತ್ತಿಯಂತೆ 2021 ರ ಆವೃತ್ತಿಯಲ್ಲಿ ಕೂಡಾ ಕಂಪನಿಯು ನಾಲ್ಕು ರೂಪಾಂತರಗಳಲ್ಲಿ ( ವೇರಿಯೆಂಟ್ಸ್ ) ಕಾರುಗಳನ್ನು ಬಿಡುಗಡೆ ಮಾಡಿದೆ.
ಇದರಲ್ಲಿ RXE, RXL, RXT ಮತ್ತು RXZ ಕೂಡಾ ಸೇರಿದೆ.

2021 ರೆನಾಲ್ಟ್ ಟ್ರೈಬರ್ ನಲ್ಲಿ ಹಾಗಾದರೆ ಹೊಸತೇನು ಇದೆ? ಎನ್ನುವ ಪ್ರಶ್ನೆ ನಿಮ್ಮದಾದರೆ ಅದಕ್ಕೆ ಉತ್ತರ ಇಲ್ಲಿದೆ: ರೆನಾಲ್ಟ್ ಟ್ರೈಬರ್ 2021 ನಲ್ಲಿ ಸ್ಟಾಂಡರ್ಡ್ ಡ್ಯುಯೆಲ್ ಹಾರ್ನ್ ಅಳವಡಿಸಲಾಗಿದೆ. RXE ಮತ್ತು RXL ಟ್ರಿಮ್ ನಲ್ಲಿ ಇದರ ಹೊರತಾಗಿ ಯಾವುದೇ ಹೊಸ ವೈಶಿಷ್ಟ್ಯಗಳನ್ನು ಅಳವಡಿಸಲಾಗಿಲ್ಲ ಎನ್ನಲಾಗಿದೆ. RXT ವೇರಿಯಂಟ್ ನಲ್ಲಿ ORVM s ನಲ್ಲಿ ಹೊಸ ಎಲ್ಇಡಿ ಟರ್ನ್ ಇಂಡಿಕೇಟರ್ಸ್ ಅನ್ನು ನೀಡಲಾಗಿದೆ. ಇದಲ್ಲದೇ ಹೊಸ ಸ್ಟಿಯರಿಂಗ್ ಮೌಂಟೆಡ್ ಆಡಿಯೋ ಮತ್ತು ಫೋನ್ ಕಂಟ್ರೋಲ್ಸ್ ಅನ್ನು ಕೂಡಾ ಅಳವಡಿಸಲಾಗಿದೆ. ಇದೇ ವೇಳೆ ಇದರ ಟಾಪ್ ಸ್ಪಿಸಿಫಿಕೇಷನ್ ಉಳ್ಳ RXZ ಟ್ರಿಮ್ ನಲ್ಲಿ ಹೊಂದಾಣಿಕೆ ಮಾಡಬಹುದಾದ ಡ್ರೈವರ್ ಸೀಟ್ ಅಳವಡಿಸಲಾಗಿದೆ.

ಇದಲ್ಲದೇ ಇದರಲ್ಲಿ ಆಪ್ಶನಲ್ ಡ್ಯುಯೆಲ್ ಟೋನ್ ಎಕ್ಸ್ ಟೀರಿಯರ್ ನ ಜೊತೆಯಲ್ಲಿ ಮಿಸ್ಟ್ರೀ ಬ್ಲಾಕ್ ರೂಫ್ ಮತ್ತು ORVMs ಅನ್ನು ಕೂಡಾ ನೀಡಲಾಗಿದೆ.
ರೆನಾಲ್ಟ್‌ ತನ್ನ ಟ್ರೈಬರ್ 2021 ನ ಲೈಅಪ್ ನಲ್ಲಿ ಹೊಸ ಸೀಡರ್ ಬ್ರೌನ್ ಪೇಂಟ್ ಸ್ಕೀಂ ಅನ್ನು ಪರಿಚಯಿಸಿದೆ. ಹೊಸ ಡ್ಯುಯೆಲ್ ಟೋನ್ ಬಣ್ಣದ ಆಯ್ಕೆಯು ಕೇವಲ 2021 ರೆನಾಲ್ಟ್‌ ಟ್ರೈಬರ್ ನ ಟಾಪ್ ಸ್ಪೆಸಿಫಿಕೇಷನ್ ಮಾಡೆಲ್ ನಲ್ಲಿ ಮಾತ್ರ ದೊರೆಯಲಿದೆ. 2021 ಟ್ರೈಬರ್ RXZ ರೂಪಾಂತರಗಳಿಗೆ ಗ್ರಾಹಕರು ಹೆಚ್ಚುವರಿ 17 ಸಾವಿರ ರೂಪಾಯಿಗಳನ್ನು ನೀಡಬೇಕಾಗುತ್ತದೆ. 2021 ರೆನಾಲ್ಟ್ ಟ್ರೈಬರ್ ನಲ್ಲಿ ಯಾವುದೇ ರೀತಿಯ ಯಾಂತ್ರಿಕ ಬದಲಾವಣೆಗಳನ್ನು ಮಾಡಲಾಗಿಲ್ಲ.

ಇದರಲ್ಲಿ 999 ಸಿಸಿಯ ಮೂರು ಸಿಲಿಂಡರ್ ಗಳ ಪೆಟ್ರೋಲ್ ಇಂಜಿನ್ ಅನ್ನು ಅಳವಡಿಸಲಾಗಿದೆ.
ಇದರ ಇಂಜಿನ್ 6250 ಆರ್‌ಪಿಎಂನಲ್ಲಿ ಗರಿಷ್ಠ 72 ಪಿಎಸ್ ಶಕ್ತಿಯನ್ನು ಮತ್ತು 3500 ಆರ್‌ಪಿಎಂನಲ್ಲಿ 96 ಎನ್ಎಂ ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ನೀಡಲಾಗಿದೆ. ಇದರ ಇಂಜಿನ್ 5 ಸ್ಪೀಡ್ ಮ್ಯಾನ್ಯುವೆಲ್ ಗೇರ್ ಬಾಕ್ಸ್ ಹೊಂದಿದೆ. 2021 ರೆನಾಲ್ಟ್ ಟ್ರೈಬರ್ ನ ಉದ್ದ 3990 ಮಿಲಿಮೀಟರ್ ಗಳು, ಅಗಲ 1739 ಮಿಲಿ ಮೀಟರ್ ಗಳು ಮತ್ತು ಎತ್ತರ 1643 ಮೀಟರ್ ಗಳಾಗಿವೆ. ಇದರ ವೀಲ್ ಬೇಸ್ 2636 ಮಿಲಿ ಮೀಟರ್ ಮತ್ತು ಗ್ರೌಂಡ್ ಕ್ಲಿಯರೆನ್ಸ್ 182 ಮಿಲಿಮೀಟರ್, 40 ಲೀಟರ್ ಗಳ ಇಂಧನ ಟ್ಯಾಂಕ್ ಅನ್ನು ಹೊಂದಿದೆ.

ಹೊಸ ರೆನಾಲ್ಟ್ ಟ್ರೈಬರ್ ನ ಮುಂಭಾಗದಲ್ಲಿ ಡಿಸ್ಕ್ ಮತ್ತು ಹಿಂಭಾಗದಲ್ಲಿ ಡ್ರಮ್ ಬ್ರೇಕ್ ಅನ್ನು ಹೊಂದಿದೆ.‌
ಇದಲ್ಲದೇ ಇದರ ಮುಂಭಾಗದಲ್ಲಿ ಕಾಯಿಲ್ ಸ್ಪ್ರಿಂಗ್, ಲೋಯರ್ ಟ್ರಯಾಂಗಲ್ ನ ಜೊತೆಯಲ್ಲಿ ಮ್ಯಾಕ್ ಫರ್ಸನ್ ಸ್ಟ್ರಟ್ ಸಸ್ಪನ್ಷನ್ ಅನ್ನು ನೀಡಲಾಗಿದೆ. ಅಲ್ಲದೇ ಇದರ ರಿಯರ್ನಲ್ಲಿ ಟಾರ್ಷಮ್ ಬೀಮ್ ಆಕ್ಸಲ್ ಸಸ್ಪೆನ್ಷನ್ ಅನ್ನು ನೀಡಲಾಗಿದೆ. ರೆನಾಲ್ಟ್ ಟ್ರೈಬರ್ 2021 ನ ಹೊಸ ಫೀಚರ್ ಗಳು ಹಾಗೂ ಹೊಸ ರೂಪಾಂತರ ಗ್ರಾಹಕರನ್ನು ತೃಪ್ತಿ ಪಡಿಸುವಂತಹ ವಿಶೇಷವಾದ ಲಕ್ಷಣಗಳ ಮೂಲಕ ಮಾರುಕಟ್ಟೆಗೆ ಬರುತ್ತಿದೆ.