ನೀರಿನ ಮೇಲೆ ಗೂಡು ಕಟ್ಟುತ್ತಿದ್ದ ಹಕ್ಕಿಗಳಿಗೆ ಸಹಾಯ ಹಸ್ತ ನೀಡಿದ ಬಾಲಕ: ವೈರಲ್ ವೀಡಿಯೋ ಹೇಳಿತೊಂದು ಸಾಮರಸ್ಯದ ಕಥೆ
ನಮ್ಮ ಜೀವ ಜಗತ್ತಿನಲ್ಲಿ ಜೀವಿಗಳ ಬದುಕು ಸುಂದರವಾಗಿರಲು ಹೊಂದಾಣಿಕೆಯೆಂಬುದು ಅತ್ಯಾವಶ್ಯಕ ಹಾಗೂ ಅನಿವಾರ್ಯವಾಗಿದೆ. ಜೀವಿ ಜೀವಿಗಳ ನಡುವಿನ ಹೊಂದಾಣಿಕೆ ಹಾಗೂ ಸಾಮರಸ್ಯವು ಪ್ರಕೃತಿಯಲ್ಲೊಂದು ಹೊಸ ಅಂದವನ್ನು, ಹೊಸ ಕಥೆಯನ್ನು ಕಟ್ಟುವ ಸಾಮರ್ಥ್ಯವನ್ನು ಪಡೆದಿರುತ್ತದೆ. ಆದರೆ ಆಧುನಿಕತೆಯ ಭರದಲ್ಲಿ ಮನುಷ್ಯ ತನ್ನ ಜೀವನವನ್ನು ಐಶಾರಾಮೀ ಹಾಗೂ ಸೌಲಭ್ಯಗಳ ಭಂಡಾರವನ್ನಾಗಿ ಮಾಡಿಕೊಳ್ಳುವ ತವಕದಿಂದ, ತನ್ನ ಜೀವನವನ್ನು ಸಕಲ ಸವಲತ್ತುಗಳಿಂದ ತುಂಬಿಕೊಳ್ಳುವ ಅತಿಯಾಸೆಯಿಂದ ಪರಿಸರದ ಮೇಲೆ ನಿರಂತರವಾಗಿ ದೌ ರ್ಜ ನ್ಯ ನಡೆಸುತ್ತಾ ಬರುತ್ತಿರುವ ಪರಿಣಾಮ ಇಂದು ಅಸಂಖ್ಯಾತ ಜೀವಿಗಳು ತಮ್ಮ ನೆಲೆಯನ್ನು ಕಳೆದುಕೊಂಡಿವೆ. ಇನ್ನೂ ಅನೇಕ ಜೀವಿಗಳು ಅಳಿದು ಹೋಗಿವೆ, ಮಾನವನ ಅತ್ಯಾಸೆಯ ಫಲವಾಗಿ ಪರಿಸರವು ಕಳಾ ವಿಹೀನವಾಗುತ್ತಾ ಸಾಗಿದೆ.
ಮನಿಷ್ಯರು ಮತ್ತು ಅನ್ಯ ಜೀವಿಗಳ ನಡುವೆ ಹೊಂದಾಣಿಕೆ ಎಂಬುದೇ ಇಲ್ಲವಾಗಿದೆ. ಪ್ರಾಣಿಗಳ ಬಗ್ಗೆ ದಯೆ, ಅನುಕಂಪ ಹಾಗೂ ಕರುಣೆ ಎನ್ನುವ ಭಾವನೆ ಗಳನ್ನೇ ಮರೆತವರಂತೆ ಕೆಲವರು ಅವುಗಳಿಗೆ ಹಿಂ ಸೆ ನೀಡಿ, ಆ ಫೋಟೋ ಹಾಗೂ ವೀಡಿಯೋಗಳು ವೈರಲ್ ಆದಾಗ ನಾವು ಅದನ್ನು ನೋಡಿ ನೊಂದು ಕೊಂಡು, ಮಾನವೀಯತೆ ಮರೆತವರ ಕಾರ್ಯಕ್ಕೆ ಹಿಡಿ ಶಾ ಪ ಕೂಡಾ ಹಾಕುತ್ತೇವೆ. ಆದರೆ ಇಂತಹ ಘಟನೆಗಳ ನಡುವೆಯೇ ಸೋಷಿಯಲ್ ಮೀಡಿಯಾದಲ್ಲಿ ಐಎಫ್ಎಸ್ ಅಧಿಕಾರಿ ಸುಶಾಂತ್ ನಂದಾ ಅವರು ಶೇರ್ ಮಾಡಿರುವ ವೀಡಿಯೋ ಒಂದು ಈಗ ಎಲ್ಲರ ಗಮನ ಸೆಳೆದಿದ್ದು, ಸಹಸ್ರಾರು ಜನ ಈ ವೀಡಿಯೋ ಲೈಕ್ ಮಾಡಿದ್ದಾರೆ.
ವೈರಲ್ ವೀಡಿಯೋ ನೋಡಿದಾಗ ಅಲ್ಲೊಂದು ಭಾವನಾತ್ಮಕವಾದ ದೃಶ್ಯವು ನಮ್ಮ ಕಣ್ಮುಂದೆ ಬರುತ್ತವೆ. ಈ ವೀಡಿಯೋ ದಲ್ಲಿ ನೀರಿನಲ್ಲಿ ವಾಸಿಸುವ ಹಕ್ಕಿಗಳು ತಮ್ಮ ಗೂಡನ್ನು ಕಟ್ಟುವ ವೀಡಿಯೋ ಇದಾಗಿದ್ದು, ಹಕ್ಕಿಗಳು ಗೂಡು ಕಟ್ಟುವುದರಲ್ಲಿ ವಿಶೇಷ ಏನು ಅದು ಸಹಜವಾಗಿ ನಡೆಯುವುದೇ ಅಲ್ಲವೇ? ಎನ್ನುವಿರಾ? ನಿಜಕ್ಕೂ ಇಲ್ಲೊಂದು ವಿಶೇಷ ಇದೆ. ಅದೇನೆಂದರೆ ಇಲ್ಲಿ ಗೂಡು ಕಟ್ಟುತ್ತಿರುವ ಹಕ್ಕಿಗೆ ಸಹಾಯ ಮಾಡುತ್ತಿದ್ದಾನೆ ಒಬ್ಬ ಹುಡುಗು ಹಾಗೂ ಹಕ್ಕಿ ಕೂಡಾ ಆ ಹುಡುಗನ ಮೇಲೆ ಎಷ್ಟು ನಂಬಿಕೆಯಿಟ್ಟಿದೆ ಎಂದರೆ ಅವರು ನೀರಿನಲ್ಲಿ ಈಜುತ್ತಾ ಬಂದು ಆತನು ನೀಡಿದ ಸಹಾಯ ಪಡೆಯುತ್ತದೆ.
ಗೂಡು ಕಟ್ಟಲು ಹಕ್ಕಿಯು ಕಡ್ಡಿಗಳನ್ನು ಸಂಗ್ರಹಿಸುವುದನ್ನು ಗಮನಿಸಿದ ಬಾಲಕನೊಬ್ಬ ಹಕ್ಕಿಗೆ ಕಡ್ಡಿಗಳನ್ನು ನೀಡುವುದಕ್ಕೆ ಮುಂದಾದಾಗ ಹಕ್ಕಿಯು ನೀರಿನಲ್ಲಿ ಈಜುತ್ತಾ ದಡದ ಬಳಿಗೆ ಬಂದು ಬಾಲಕನ ಕೈಯಿಂದ ಕೊಟ್ಟ ಕಡ್ಡಿಗಳನ್ನು ತನ್ನ ಕೊಕ್ಕಿನಲ್ಲಿ ಹಿಡಿದು ಹೋಗಿ ಗೂಡು ನಿರ್ಮಾಣ ಮಾಡುತ್ತಿರುವ ತನ್ನ ಸಂಗಾತಿಗೆ ನೀಡುತ್ತದೆ. ಈ ವೀಡಿಯೋ ನೋಡಿದಾಗ ಪ್ರಕೃತಿಯಲ್ಲಿ ಜೀವಿಗಳ ನಡುವೆ ಇರುವ ಒಂದು ಸಹಕಾರ, ಸಾಮರಸ್ಯ ಹಾಗೂ ಹಕ್ಕಿಯು ಹೇಗೆ ಬಾಲಕನನ್ನು ನಂಬಿ ತನ್ನ ಮುಗ್ಧತೆಯನ್ನು ಮೆರೆಯುತ್ತದೆ ಎಂಬುದನ್ನು ನಾವು ನೋಡಬಹುದಾಗಿದೆ. ಈ ವೀಡಿಯೋವನ್ನು ಈಗಾಗಲೇ ಹದಿನಾರು ಸಾವಿರಕ್ಕಿಂತ ಅಧಿಕ ಮಂದಿ ವೀಕ್ಷಣೆ ಮಾಡಿದ್ದಾರೆ.
Help all in building their nest💕
— Susanta Nanda IFS (@susantananda3) December 11, 2020
Shared by Fiegen pic.twitter.com/euH7VsnLsK
ಪ್ರತಿಕ್ರಿಯೆಗಳನ್ನು ನೀಡಿರುವ ಮಂದಿ ಕೂಡಾ ಬಹಳ ಮೆಚ್ಚುಗೆ ಸೂಚಿಸಿದ್ದಾರೆ. ಟ್ವಿಟರ್ ಬಳಕೆದಾರರೊಬ್ಬರು ನಂಬಿಕೆ, ಪಾಲುದಾರಿಕೆ ಮತ್ತು ಜೀವ ವೈವಿಧ್ಯತೆಗೆ ಉದಾಹರಣೆ ಇದು ಎಂದಿದ್ದಾರೆ. ಮತ್ತೊಬ್ಬ ಟ್ಚಿಟರ್ ಬಳಕೆದಾರರೊಬ್ಬರು ಮುಗ್ಧ ಹಕ್ಕುಗಳು ಮನುಷ್ಯನನ್ನು ಎಷ್ಟು ನಂಬುತ್ತವೆ ನೋಡಿ ಎಂದು ಟ್ವೀಟ್ ಮಾಡಿದ್ದಾರೆ. ಮತ್ತೊಬ್ಬರು ಹಕ್ಕಿಗೆ ಸಹಾಯ ಮಾಡಿದ ಬಾಲಕನನ್ನು ದೇವರು ಹರಸಲಿ, ಇಂತಹ ಮಕ್ಕಳ ಸಂಖ್ಯೆ ಇನ್ನೂ ಹೆಚ್ಚಾಗಬೇಕಿದೆ. ಮಕ್ಕಳಲ್ಲಿ ಪ್ರಾಣಿಗಳ ಬಗ್ಗೆ ದಯೆ, ಕರುಣೆ ಹಾಗೂ ಅನುಕಂಪ ಗಳಂತಹ ಗುಣಗಳು ಬೆಳೆಯಬೇಕು ಎಂದಿದ್ದಾರೆ.