ಪಂಕ್ಚರ್ ಅಂಡಗಿಯಲ್ಲಿ ಕೆಲಸ ಮಾಡಿದ ಬಾಲಕ, ತನ್ನ ಕಠಿಣ ಪರಿಶ್ರಮದಿಂದ IAS ಅಧಿಕಾರಿಯಾದ!

ಏನನ್ನಾದರೂ ಸಾಧಿಸುವ ಛಲವಿದ್ದರೆ, ಅದಕ್ಕನುಗುಣವಾಗಿ ನಿರಂತರವಾದ ಪ್ರಯತ್ನವನ್ನು ಮಾಡಿದರೆ, ಎಂತಹುದೇ ಪ್ರತಿಕೂಲ ಪರಿಸ್ಥಿತಿ ಇದ್ದರೂ ಕೂಡಾ ಯಶಸ್ಸಿನ ಕಡೆಗೆ ನಿಮ್ಮ ಪಯಣವನ್ನು ಯಾರಿಂದಲೂ ಕೂಡಾ ತಡೆಯಲು ಸಾಧ್ಯವೇ ಇಲ್ಲ. ಸಮಸ್ಯೆಗಳು ನಿಮ್ಮನ್ನು ಸ್ಪಲ್ಪ ಕಾಲ ನಿರ್ಬಂಧಿಸಬಹುದಷ್ಟೇ, ಆದರೆ ಸದಾ ಕಾಲವಲ್ಲ. ಇಂದು ನಾವು ಹೇಳಲು ಹೊರಟಿರುವ ಐಎಎಸ್ ಅಧಿಕಾರಿಯೊಬ್ಬರ ಜೀವನದಲ್ಲಿ ಕೂಡಾ ಅವರು ಅನೇಕ ಸಂ ಘ ರ್ಷಗಳನ್ನು ಬಹಳ ದಿಟ್ಟತನದಿಂದ ಎದುರಿಸಿ, ತನ್ನ ಧೈರ್ಯ ಹಾಗೂ ಸಾಹಸದಿಂದಾಗಿ ಇಂದು ಅನೇಕರಿಗೆ ಅವರು ಒಂದು ಸ್ಪೂರ್ತಿಯ ಸೆಲೆಯಾಗಿದ್ದಾರೆ. ಇಂತಹುದೊಂದು ಸಾಧನೆಯನ್ನು ಮೆರೆದ ವ್ಯಕ್ತಿಯ ಹೆಸರು ವರುಣ್ ಬಾರ್ನ್ವಾಲ್. ಇವರು ಹುಟ್ಟಿದ್ದು ಮಹಾರಾಷ್ಟ್ರದ ಬೋಯಿಸಾರ್ ಎನ್ನುವ ಒಂದು ಸಣ್ಣ ಪಟ್ಟಣದಲ್ಲಿ.‌

ವರುಣ್ ಅವರ ಬಾಲ್ಯ ಬಡತನದಲ್ಲೇ ಕಳೆಯುವಂತಾಗಿತ್ತು. ಅವರಿಗೆ ಓದುವುದು ಎಂದರೆ ಬಹಳ ಆಸಕ್ತಿ. ಆದರೆ ಮನೆಯಲ್ಲಿನ ಆರ್ಥಿಕ ಪರಿಸ್ಥಿತಿ ಅದಕ್ಕೆ ಸಹಕಾರಿಯಾಗಿರಲಿಲ್ಲ. ಆಸಕ್ತಿಗೆ ತಕ್ಕ ಹಣಕಾಸು ಇರಲಿಲ್ಲ. ವರುಣ್ 10 ನೇ ತರಗತಿಯನ್ನು ಪಾಸ್ ಮಾಡಿದರು. ಆದರೆ ಮುಂದಿನ ಓದಿಗೆ ಹಣವಿಲ್ಲದ ಕಾರಣ, ಹಣವನ್ನು ಕೂಡಿಡಲು, ಓದಿಗೆ ಹಣವನ್ನು ಹೊಂದಿಸಲು ಅವರು ಹತ್ತನೇ ತರಗತಿ ಆದ ಮೇಲೆ ಒಂದು ಪಂಕ್ಚರ್ ಅಂಗಡಿಯಲ್ಲಿ ಕೆಲಸಕ್ಕೆ ಸೇರಿಕೊಂಡರು. ವರುಣ್ ಬಾರ್ನ್ವಾಲ್ ಹೇಳುವಂತೆ 2006 ರಲ್ಲಿ ಅವರು ಹತ್ತನೇ ತರಗತಿ ಪರೀಕ್ಷೆ ಬರೆದು ಬಂದ ಮೂರು ದಿನಕ್ಕೆ ಅವರ ತಂದೆ ತೀರಿಕೊಂಡರಂತೆ. ಆಗ ವರುಣ್ ಇನ್ನು ತಾನು ಓದುವುದನ್ನು ನಿಲ್ಲಿಸಿಬಿಡೋಣ ಎಂದು ಕೊಂಡಿದ್ದರಂತೆ.

ಆದರೆ ಹತ್ತನೇ ತರಗತಿಯ ಪರೀಕ್ಷೆಯ ಫಲಿತಾಂಶ ಬಂದಾಗ ವರುಣ್ ಶಾಲೆಯಲ್ಲಿ ಎಲ್ಲರಿಗಿಂತ ಹೆಚ್ಚಿನ ಅಂಕ ಪಡೆದು ಅಗ್ರಸ್ಥಾನ ಪಡೆದುಕೊಂಡಿದ್ದರು. ಆಗ ಅವರ ಕುಟುಂಬದವರು, ವಿಶೇಷವಾಗಿ ವರುಣ್ ಅವರ ತಾಯಿ ಮಗನಿಗೆ ನೀನು ಓದಿನ ಕಡೆ ಗಮನ ನೀಡು, ಕೆಲಸ ನಾವೆಲ್ಲಾ ಸೇರಿ ಮಾಡುತ್ತೇವೆ ಎನ್ನುವ ಧೈರ್ಯ ನೀಡಿದರು. ವರುಣ್ ಕೂಡಾ ಕುಟುಂಬ ನೀಡಿದ ಬೆಂಬಲವನ್ನು ಇಂದಿಗೂ ಮರೆತಿಲ್ಲ. ವರುಣ್ 11 ನೇ ತರಗತಿಗೆ ಸೇರಿದರು. ಆ ಎರಡು ವರ್ಷ ಅವರಿಗೆ ಬಹಳ ಕಠಿಣ ವಾಗಿತ್ತು. ಅವರು ಬೆಳಿಗ್ಗೆ 6 ಗಂಟೆಗೆ ಎದ್ದು ಶಾಲೆಗೆ ಹೋಗಿ, ಮಧ್ಯಾಹ್ನ 2 ರಿಂದ ರಾತ್ರಿ 10 ರವರೆಗೆ ಟ್ಯೂಷನ್ ತೆಗೆದುಕೊಳ್ಳುತ್ತಿದ್ದರು. ಅಲ್ಲದೇ ಅವರು ಅಂಗಡಿಯ ಲೆಕ್ಕಾಚಾರ ಹಾಕುವ ಕೆಲಸವನ್ನೂ ಮಾಡುತ್ತಿದ್ದರು.

ವರುಣ್ ಅವರ ದಾಖಲಾತಿಗೆ ಅವರ ಮನೆಯ ಹತ್ತಿರವೇ ಒಂದು ಒಳ್ಳೆಯ ಶಾಲೆಯಿತ್ತು. ಆದರೆ ಆ ಶಾಲೆಯ ಶುಲ್ಕ 10 ಸಾವಿರ ರೂಪಾಯಿಗಳಾಗಿತ್ತು. ಆಗ ವರುಣ್ ತನ್ನ ತಾಯಿಗೆ ಈ ವರ್ಷ ಹಾಗೆ ಇದ್ದು, ಮುಂದಿನ ವರ್ಷ ಹಣ ಹೊಂದಿಸಿ ದಾಖಲಾತಿ ಪಡೆಯುವೆ ಎಂದು ಹೇಳಿದರು. ಅಲ್ಲದೇ ವರುಣ್ ಈ ಎಲ್ಲಾ ವಿಷಯವನ್ನು ತನ್ನ ತಂದೆಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯರ ಬಳಿ ಹೇಳಿಕೊಂಡಿದ್ದ. ಆಗ ಆ ವೈದ್ಯರು ಆತನಿಗೆ ತಾನೇ ಹತ್ತು ಸಾವಿರ ರೂಪಾಯಿ ನೀಡಿ ಶಾಲೆಗೆ ದಾಖಲಾಗುವಂತೆ ಹೇಳಿದ್ದರು. ವರುಣ್ ಶಾಲೆಯಲ್ಲಿ ದಾಖಲಾತಿಯೇನೋ ಪಡೆದರು ಆದರೆ ಪ್ರತಿ ತಿಂಗಳ ಶುಲ್ಕ ಹೇಗೆ ಪಾವತಿ ಮಾಡುವುದು ಎನ್ನುವ ಸಮಸ್ಯೆ ಎದುರಾಯಿತು. ಆಗ ವರುಣ್ ತಮ್ಮ ಶಾಲೆಯ ಪ್ರಿನ್ಸಿಪಲ್ ಬಳಿ ಹೋಗಿ ತನ್ನ ಸಮಸ್ಯೆ ಬಗ್ಗೆ ಮನವಿ ಮಾಡಿಕೊಂಡರು.

ವರುಣ್ ಓದಿನಲ್ಲಿ ಬಹಳ ಬುದ್ದಿವಂತನಾಗಿದ್ದ ಕಾರಣ ಶಾಲೆಯ ಪ್ರಿನ್ಸಿಪಲ್ ಅವರು ಆತನ ಎರಡು ವರ್ಷದ ಶಾಲಾ ಶುಲ್ಕ ಮನ್ನಾ ಮಾಡಿಸಿ, ಉಚಿತ ಶಿಕ್ಷಣ ದೊರೆಯುವ ಹಾಗೆ ಮಾಡಿದರು. ಹನ್ನೆರಡನೆಯ ತರಗತಿ ಮುಗಿಸಿದ ನಂತರ ವರುಣ್ ಇಂಜಿನಿಯರಿಂಗ್ ಗೆ ದಾಖಲಾದರು. ಇಂಜಿನಿಯರಿಂಗ್ ದಾಖಲಾತಿಗೆ ಅವರು 100000 ರೂ.ಗಳ ಶುಲ್ಕವನ್ನು ಪಾವತಿ ಮಾಡಬೇಕಾಗಿತ್ತು. ಆಗ ವರುಣ್ ಅವರ ತಾಯಿ ಆ ಹಣವನ್ನು ಹೇಗೋ ಹೊಂದಿಸಿ ಮಗನ ದಾಖಲಾತಿಯನ್ನು ಮಾಡಿಸಿದರು. ಆದರೆ ಸಮಸ್ಯೆ ಅಲ್ಲಿಗೆ ಮುಗಿದಿರಲಿಲ್ಲ. ಕಾಲೇಜಿನ ಮುಂದಿನ ವರ್ಷಗಳಲ್ಲಿ ಹಣದ ಅವಶ್ಯಕತೆ ಇತ್ತು, ಅನ್ಯ ಶುಲ್ಕಗಳನ್ನು ಪಾವತಿಸಬೇಕಿತ್ತು. ಈ ಸಂದರ್ಭದಲ್ಲಿ ವರುಣ್ ಅವರ ಸ್ನೇಹಿತರು ಒಟ್ಟಾಗಿ ಅವರ ಕಾಲೇಜಿನ ಶುಲ್ಕವನ್ನು ಸಮಯಕ್ಕೆ ಸರಿಯಾಗಿ ಪಾವತಿ ಮಾಡುತ್ತಾ ಅವರಿಗೆ ನೆರವನ್ನು ನೀಡಿದರು.

ಇಂಜಿನಿಯರಿಂಗ್ ಮುಗಿದ ಮೇಲೆ ವರುಣ್ ಅವರಿಗೆ ದೊಡ್ಡ ದೊಡ್ಡ ಕಂಪನಿಗಳಿಂದ ಉದ್ಯೋಗದ ಅವಕಾಶಗಳು ಹುಡುಕಿಕೊಂಡು ಬಂದವು. ಆದರೆ ವರುಣ್ ತಾನು ಸಿವಿಲ್ ಸರ್ವಿಸ್ ಪರೀಕ್ಷೆಗಳನ್ನು ಪಾಸು ಮಾಡುವ ಗುರಿಯನ್ನು ಇಟ್ಟುಕೊಂಡು ಅದಕ್ಕಾಗಿ ತಯಾರಿ ನಡೆಸಿದರು. ಈ ವಿಷಯದಲ್ಲಿ ಅವರ ಸಹೋದರರು ಅವರಿಗೆ ಬೆಂಬಲವಾಗಿ ನಿಂತರು. ತನ್ನ ಕಠಿಣ ಪರಿಶ್ರಮದಿಂದ 2016ರ ಯುಪಿಎಸ್ಸಿ ಪರೀಕ್ಷೆಗಳಲ್ಲಿ 26ನೇ ರ‍್ಯಾಂಕ್ ಪಡೆದ ವರುಣ್ ಅವರು ಗುಜರಾತ್‌ ನ ಜಿಲ್ಲೆಯೊಂದರ ಡೆಪ್ಯುಟಿ ಕಲೆಕ್ಟರ್ ಆದರು. ಹೀಗೆ ವರುಣ್ ತನ್ನ ಜೀವನದ ಎಲ್ಲಾ ಕಠಿಣ ಪರಿಸ್ಥಿತಿಗಳನ್ನು ಎದುರಿಸಿ ಒಂದು ಉನ್ನತ ಸ್ಥಾನವನ್ನು ಅಲಂಕರಿಸಿ ಗುರಿಯ ಕಡೆಗೆ ನಡೆಯುವ ಛಲವಿದ್ದರೆ ದಾರಿ ಖಂಡಿತಾ ಸಿಗುತ್ತದೆ ಎನ್ನುವುದಕ್ಕೆ ಒಂದು ಜೀವಂತ ದಂತಕಥೆಯಾಗಿದ್ದಾರೆ.