ಪುಟ್ಟ ಜೀವಿ ಬೀವರ್ಸ್ ಗಳು ಮರಗಳನ್ನು ಕಡಿದು ಡ್ಯಾಂ ಗಳ ನಿರ್ಮಾಣ ಮಾಡುತ್ತವೆ ಎಂದರೆ ನಂಬುವಿರಾ? ಹೌದು, ವಿಸ್ಮಯವೆನಿಸಿದರೂ ಇದು ವಾಸ್ತವ! ನೋಡಿ ಈ Video

ಪ್ರಾಣಿಗಳು ತಮಗೆ ತಿಳಿದೆಯೋ ತಿಳಿಯದೆಯೋ ಪ್ರಕೃತಿಗೆ ತಮ್ಮದೇ ಆದ ಕೊಡುಗೆಯನ್ನು ನೀಡುತ್ತಿರುತ್ತವೆ. ಮಾನವ ಒಂದೆಡೆ ತನ್ನ ಜೀವನಕ್ಕೆ ಆಧಾರವಾಗಿರುವ ಪ್ರಕೃತಿಯನ್ನೇ ಹಾಳುಗೆಡವುತ್ತಿದ್ದರೆ ಅರಣ್ಯದಲ್ಲಿನ ಜೀವಿಗಳು ಅದೇ ಪ್ರಕೃತಿಯಲ್ಲಿ ಜೀವಿಸುತ್ತಲೇ ತಮ್ಮ ಜೀವನ ವಿಧಾನದಿಂದಲೇ ಪ್ರಕೃತಿಗೆ ತಮ್ಮ ಕೊಡುಗೆಯನ್ನು ನೀಡುತ್ತಿವೆ‌. ಜೀವ ಜಗತ್ತಿನಲ್ಲಿ ಬೀವರ್ಸ್ ಗಳು ಕೂಡಾ ಬಹಳ ಮುದ್ದಾದ ಪ್ರಾಣಿಗಳು. ಬೀವರ್ಸ್ ಗಳು ಕಷ್ಟ ಜೀವಿಗಳು, ಅವುಗಳಿಗೆ ತಾಳ್ಮೆ ಕೂಡಾ ಹೆಚ್ಚು. ಸೋಮಾರಿತನ ಎನ್ನುವುದನ್ನು ಅರಿಯದ ಪುಟ್ಟ ಜೀವಿಗಳು ಬೀವರ್ಸ್ ಗಳು‌. ಈ ಬೀವರ್ಸ್ ಗಳು ಡ್ಯಾಂಗಳನ್ನು ನಿರ್ಮಾಣ ಮಾಡುತ್ತವೆ ಎಂದರೆ ನಂಬುವಿರಾ? ಹೌದು ವಿಸ್ಮಯ ಎನಿಸಿದರೂ ಕೂಡಾ ಇದು ವಾಸ್ತವ. ಹಾಗಾದರೆ ಏನೀ ಆಸಕ್ತಿಕರ ವಿಚಾರ ಎನ್ನುವುದಾದರೆ ತಿಳಿಯೋಣ ಬನ್ನಿ.

ಬೀವರ್ ಗಳು ನೋಡಲು ಎಷ್ಟು ಚಿಕ್ಕ ಜೀವಿಗಳು ಎನಿಸಿದರೂ ಅವು ಮಾಡುವ ಕೆಲಸ ಮಾತ್ರ ನಮ್ಮ ಊಹೆಗೆ ಮೀರಿದ್ದು. ಬೀವರ್ ಗಳು ಮೂಲತಃ ಸಸ್ಯಾಹಾರಿ ಪ್ರಾಣಿಗಳು. ಅವುಗಳಿಗೆ ಮರದ ಕಾಂಡಗಳಲ್ಲಿ ಕೆಳಭಾಗದಲ್ಲಿ ಸಿಹಿಯಾದ ಭಾಗವನ್ನು ಗುರುತಿಸಿ ಅದನ್ನು ತಿನ್ನುತ್ತವೆ. ಅವು ಅರಣ್ಯಗಳಲ್ಲಿ ಸುಮಾರು 20 ಮಿಲಿಯನ್ ವರ್ಷಗಳ ಕಾಲದಿಂದಲೂ ಇವೆ ಎನ್ನಲಾಗಿದೆ. ಇವು ಮರಗಳನ್ನೇ ಕೆಳಗೆ ಬೀಳಿಸುತ್ತವೆ‌. ಇಷ್ಟು ಚಿಕ್ಕ ಜೀವಿಗಳು ಮರಗಳನ್ನು ಬೀಳಿಸುತ್ತವೆ ಎಂದರೆ ಆಶ್ಚರ್ಯ ಆಗಬಹುದು. ಬೀವರ್ಸ್ ಗಳು ಮರದ ಕಾಂಡದ ಬಳಿ ತಮ್ಮ ಕಬ್ಬಿಣದಂತಹ ಹಲ್ಲಿನಿಂದ ಕೊರೆದು ಹಾಕುತ್ತದೆ. ಆಗ ಮರವು ಉರುಳಿ ಕೆಳಗೆ ಬೀಳುತ್ತದೆ.

ಬೀವರ್ ಗಳಿಗೆ ಬಹಳ ತಾಳ್ಮೆಯಿದ್ದು ಮರದ ಕಾಂಡವನ್ನು ಕೊರದು ಹಾಕುತ್ತವೆ. ಇನ್ನು ನಂತರ ಜೋರಾಗಿ ಗಾಳಿ ಬೀಸಿದಾಗ ಮರ ಕೆಳಗೆ ಉರುಳುತ್ತದೆ. ಅವುಗಳ ಹಲ್ಲುಗಳು ಎಷ್ಟು ಶಕ್ತಿ ಶಾಲಿ ಹಾಗೂ ಹರಿತವಾಗಿರುತ್ತವೆ ಎಂದು ಇದರಿಂದ ತಿಳಿಯುತ್ತದೆ‌. ಹಾಗೆ ಬಿದ್ದ ಮರದ ಕೊಂಬೆಗಳನ್ನು ಅವು ತಮ್ಮ ಹಲ್ಲಿ ನಿಂದಲೇ ಕತ್ತರಿಸಿ, ತಾವು ಡ್ಯಾಂ ಕಟ್ಟಬೇಕಿರುವ ಕೊಳ ಅಥವಾ ಹಳ್ಳದ ಇನ್ನೊಂದು ಬದಿಗೆ ಆ ಕಟ್ಟಿಗೆಗಳನ್ನು ನೀರಲ್ಲಿ ಈಜುತ್ತಾ ಸಾಗಿ ಇಡುವ ಮೂಲಕ ಡ್ಯಾಂ ಕಟ್ಟುವ ಕಾರ್ಯ ಆರಂಭಿಸುತ್ತವೆ. ಇದಕ್ಕೆ ಬೀವರ್ಸ್ ನ ಇಡೀ ಕುಟುಂಬ ತೊಡಗಿಕೊಳ್ಳುತ್ತದೆ.

ತಾವು ತಂದ ಕಟ್ಟಿಗೆಗಳನ್ನು ಇಂಟರ್ ಲಾಕ್ ಮಾಡಲು ಬಹಳ ಎಚ್ಚರಿಕೆ ವಹಿಸುತ್ತವೆ‌. ಡ್ಯಾಂ ಕಟ್ಟುವ ಕೊಳದ ತೀರದಲ್ಲಿ ಕಲ್ಲುಗಳನ್ನು ಡ್ಯಾಂ ನ ಭದ್ರ ಹಿಡಿತ ಕ್ಕಾಗಿ ಜೋಡಿಸುತ್ತವೆ. ನೀರಿನ ಕೊಳದ ತಳದಿಂದ ಮಣ್ಣು ಹೊತ್ತು ತಂದು ಕಲ್ಲಿಗೆ ಅಂಟಿಸುತ್ತವೆ. ನಾವು ಸಿಮೆಂಟ್, ಮರಳು ಬಳಸಿ ಪ್ಲಾಸ್ಟಿಂಗ್ ಮಾಡುವ ಹಾಗೆ, ಇವು ಮಣ್ಣನ್ನು ಬಳಸುತ್ತವೆ. ನೀರೊಳಗೆ ಬೆಳೆದ ಜಲ ಸಸ್ಯಗಳನ್ನು ಮೇಲೆ ಎತ್ತಿ ತಂದು ಡ್ಯಾಂ ನಿರ್ಮಾಣದಲ್ಲಿ ಬಳಸಿಕೊಳ್ಳುತ್ತವೆ. ಹೀಗೆ ಬೀವರ್ಸ್ ಗಳ ಇಡೀ ಕುಟುಂಬ ಸೇರಿ ಕಟ್ಟುವ ಸಣ್ಣ ಸಣ್ಣ ಡ್ಯಾಂ ಗಳು ಅನೇಕ ಸಂದರ್ಭಗಳಲ್ಲಿ ರಾಕಿ ಪರ್ವತ ಶ್ರೇಣಿಯಲ್ಲಿ ಬಿಲಿಯನ್ ಗಟ್ಟಲೆ ನೀರನ್ನು ಫಿಲ್ಟರ್ ಮಾಡಲು, ಮಣ್ಣಿನ ಸವೆತ ಹಾಗೂ ಪ್ರವಾಹವನ್ನು ತಪ್ಪಿಸಲು ನೆರವಾಗುತ್ತದೆ.

ವಿಡಿಯೋ ನೋಡಿ

ಸೋಶಿಯಲ್ ಮೀಡಿಯಾದಲ್ಲಿ ಬೀವರ್ಸ್ ಕಟ್ಟುವ ಈ ಪುಟ್ಟ ಡ್ಯಾಂಗಳ ವೀಡಿಯೋ ವೈರಲ್ ಆಗಿದ್ದು ಕೋಟ್ಯಂತರ ಜನರು ಇದನ್ನು ವೀಕ್ಷಣೆ ಮಾಡಿದ್ದಾರೆ. ಇದನ್ನು ನೋಡಿದ ನೆಟ್ಟಿಗರು ಬೀವರ್ಸ್ ಗಳು ಡಿಗ್ರಿ ಪಡೆಯದ ಇಂಜಿನಿಯರ್ ಗಳು, ಪ್ರಕೃತಿಯಲ್ಲಿನ ಇಂಜಿನಿಯರ್ ಗಳು ಅವುಗಳಿಗೆ ಕಾಂಟ್ರಾಕ್ಟರ್ ಇಲ್ಲದೇ ಡ್ಯಾಂ ಕಟ್ಟುವ ಕಲೆ ಗೊತ್ತಿದೆ ಎಂದೂ, ಜೀವಿಗಳು ಚಿಕ್ಕವೋ, ದೊಡ್ಡವೋ ಆದರೆ ಅವು ಮಾನವರಿಗಿಂತ ಉತ್ತಮ ಏಕೆಂದರೆ ಅವು ಪರಿಸರದ ಉಳಿವಿಗೆ ತಮ್ಮದೇ ಆದಂತಹ ಕೊಡುಗೆ ನೀಡುತ್ತಿವೆ ಎಂದಿದ್ದಾರೆ. ಒಟ್ಟಾರೆ ಬೀವರ್ಸ್ ಗಳ ಈ ಸಾಹಸ ನೋಡಿದ ಪ್ರತಿಯೊಬ್ಬರೂ ಕೂಡಾ ಅವುಗಳನ್ನು ಹೊಗಳಿದ್ದಾರೆ.‌