ಪ್ರತಿಯೊಂದು ಮಂದಿರದ ಎದುರಿಗೆ ‘ಆಮೆ’ ಏಕೆ ಇರುತ್ತದೆ? ಇದರ ಹಿಂದಿನ ಕಾರಣ ನಿಮಗೆ ಗೊತ್ತಾ?
ನಾವು ಚಿಕ್ಕವರಿರುವಾಗ ನಿಂದಲೂ ನಮ್ಮ ಹಿರಿಯರೊಂದಿಗೆ ಅನೇಕ ಗುಡಿಗುಂಡಾರಗಳನ್ನು ಸುತ್ತಾಡಿ ಬಂದಿದ್ದೇವೆ ಮತ್ತು ಈಗಲೂ ಹೋಗುತ್ತಿರುತ್ತೇವೆ. ನಮ್ಮ ಪ್ರತಿಯೊಂದು ಸುಖ-ದುಃಖಗಳಲ್ಲಿ ದೇವರನ್ನು ಜೊತೆಯಲ್ಲಿಟ್ಟುಕೊಂಡು ಆ ದೇವರ ಮಾರ್ಗದರ್ಶನದಂತೆಯೇ ಆತನನ್ನು ನಂಬಿ ನಡೆಯುತ್ತಿರುತ್ತೇವೆ. ಮನೆಯಲ್ಲಿ ಆಗುವ ಪ್ರತಿಯೊಂದು ಕಾರ್ಯಕ್ರಮಗಳನ್ನು ದೇವರ ಸನ್ನಿಧಿಯಲ್ಲಿ ಆತನ ಆಶೀರ್ವಾದ ವನ್ನು ಪಡೆದು ನೆರವೇರಿಸುತ್ತೇವೆ. ಹೀಗಾಗಿ ಆಗಿನಿಂದಲೂ ನಮ್ಮ ಗಮನಕ್ಕೆ ಬಂದಿರುವ ಒಂದು ವಿಷಯವೇನೆಂದರೆ ಮುಖ್ಯವಾದ ಗರ್ಭಗುಡಿಯ ಬಾಗಿಲಿನ ಎದುರಿಗೆ ಗುಡಿಯ ಪ್ರಾಕಾರದಲ್ಲಿ ಆಮೆ ಅಥವಾ ನಂದಿ ಹೀಗೆ ಯಾವುದಾದರೂ ಒಂದು ಪ್ರಾಣಿ ಇರುವುದು ನಮ್ಮ ಗಮನಕ್ಕೆ ಬಂದಿರುತ್ತದೆ. ಅದರ ಜೊತೆಗೆ ನಮ್ಮಲ್ಲಿ ಒಂದು ಪ್ರಶ್ನೆಯೂ ಮೂಡಿರುತ್ತದೆ, ಏನೆಂದರೆ ಈ ರೀತಿಯ ಪ್ರಾಣಿಯನ್ನು ಗರ್ಭಗುಡಿಯ ಬಾಗಿಲಿನ ಎದುರಿಗೆ ಯಾಕೆ ಪ್ರತಿಷ್ಠಾಪಿಸಿರುತ್ತಾರೆ ಎಂಬುದು ಅಲ್ವಾ?
ಈ ಲೇಖನದಲ್ಲಿ ಇಂದು ಈ ಪ್ರಶ್ನೆಗೆ ಉತ್ತರವನ್ನು ತಂದಿದ್ದೇವೆ ಹಾಗಾದರೆ ಓದಿ ತಿಳಿದುಕೊಳ್ಳಿ.

ಆಮೆಯ ಬಗ್ಗೆ ಪುರಾಣದಲ್ಲಿ ಒಂದು ಕಥೆ ಹೀಗಿದೆ, ಶ್ರೀವಿಷ್ಣುವಿಗೆ ಕುಂಡಲಿನಿ ಜಾಗೃತವಾಗುವ ಸಲುವಾಗಿ ಈ ಆಮೆಯು ಪ್ರಾರ್ಥಿಸಿದ ನಂತರ ವಿಷ್ಣು ಆಮೆಗೆ ತನ್ನ ಮಂದಿರದ ಪ್ರವೇಶದ್ವಾರದಲ್ಲಿ ಸ್ಥಾನ ಕಲ್ಪಿಸಿಕೊಟ್ಟನು. ಇದು ಆಮೆಗೆ ದೊರೆತ ದೇವರ ಒಂದು ದೊಡ್ಡ ವರದಾನವಾಗಿದೆ. ಆಮೆಯ ಹತ್ತಿರವಿರುವ ಸಾತ್ವಿಕ ಗುಣದಿಂದಾಗಿಯೇ ಈ ವರ ಆಮೆಗೆ ಪ್ರಾಪ್ತವಾಗಿದೆ.
ಯೋಗದಲ್ಲಿ ಕುಂಡಲಿನಿಯನ್ನು ಪ್ರಾಪ್ತ ಮಾಡಿಕೊಳ್ಳುವ ಸಾಧನೆ ಇದು ಅತ್ಯುನ್ನತ ಸಾಧನೆಯಾಗಿದೆ. ಅದಕ್ಕಾಗಿ ನಮ್ಮ ಪೂರ್ವಜರು ಮಂದಿರದ ಪ್ರಾಕಾರದಲ್ಲಿ ಆಮೆಯನ್ನು ಪ್ರತಿಷ್ಠಾಪಿಸುವುದರ ಹಿಂದಿನ ಈ ಸದುದ್ದೇಶವೇ ಕಾರಣವಾಗಿದೆ. ಶ್ರೀ ಕೃಷ್ಣನು ಅರ್ಜುನನಿಗೆ ಗೀತೆಯ ಜ್ಞಾನವನ್ನು ನೀಡುವಾಗ ಈ ಯೋಗದ ಬಗ್ಗೆಯೂ ಅದರಲ್ಲಿ ವರ್ಣನೆ ಬರುತ್ತದೆ.
ಆಮೆಯು ಅಂಗಗಳನ್ನು ತನ್ನ ಕವಚದಲ್ಲಿ ಒಳಗೆ ಸೆಳೆದುಕೊಳ್ಳುವ ರೀತಿಯಲ್ಲಿ ಮಾನವನಿಗೂ ಈ ಅವಸ್ಥೆ ಪ್ರಾಪ್ತವಾಗಬೇಕು. ಅರಿಷಡ್ವರ್ಗಗಳನ್ನು ಬದಿಗೆ ಸಾರಿ ಭಗವಂತನಲ್ಲಿ ನತಮಸ್ತಕ ನಾಗಿ ಆತನಲ್ಲಿಯೇ ಲೀನವಾಗುವಂತಹ ಪಾಠವನ್ನು ಆಮೆ ಹೇಳುತ್ತದೆ. ಯಾವ ರೀತಿ ಯೋಗ ಪುರುಷರು ಭೌತಿಕ ಜಗತ್ತಿನಿಂದ ಅಲಿಪ್ತರಾಗಿ ಭಗವಂತನಲ್ಲಿ ಲೀನರಾಗಿರುತ್ತಾರೆಯೋ ಅದೇ ರೀತಿಯಲ್ಲಿ ಸಾಮಾನ್ಯ ಮನುಷ್ಯನು ಸಹಿತ ತನ್ನ ದೇವರಲ್ಲಿ ಲೀನವಾಗಬೇಕೆಂದು ಇದರ ಹಿಂದಿನ ಉದ್ದೇಶವಿರುತ್ತದೆ. ಮನುಷ್ಯನು ಆಸೆಬುರುಕ ಪ್ರಾಣಿ ಯಾಗಿದ್ದಾನೆ. ಆದ್ದರಿಂದ ಆತ ತನ್ನ ತಲೆಯಲ್ಲಿಯ ಎಲ್ಲ ಕೆಟ್ಟ ವಿಚಾರಗಳನ್ನು ತ್ಯಜಿಸಿ ಮಾಯಾವಿ ಬಂಧನಗಳನ್ನು ದೂರಮಾಡಿ ದೇವರ ಸನ್ನಿಧಿಯಲ್ಲಿ ನಿರಾತಂಕವಾಗಿ ಬರಬೇಕು ಎಂಬ ವಿಚಾರ ಈ ಆಮೆಯು ಹೇಳುತ್ತದೆ.
ಆಮೆಯು ಇರುವ ಇನ್ನೊಂದು ಕಾರಣವೇನೆಂದರೆ, ಆಮೆಯು ಶರಣಾಗತಿಯನ್ನು ಪ್ರಾಪ್ತ ಮಾಡಿಕೊಂಡ ಭಾವನೆಯ ಪ್ರತೀಕವಾಗಿದೆ. ಆದ್ದರಿಂದ ದೇವರಿಗೆ ನಮಿಸುವಾಗ, ನಮ್ರನಾಗಿ, ತಲೆ ಕೆಳಗೆ ಮಾಡಿ, ವಿನೀತನಾಗಿ ನಮಿಸುವ ಸಂದೇಶವನ್ನು ಆಮೆಯು ಕೊಡುತ್ತದೆ.
ಭಗವಂತನ ಪ್ರಾಪ್ತಿಗಾಗಿ ಏಕಾಗ್ರತೆಯು ಮೂಲಮಂತ್ರವಾಗಿದೆ. ಮಾನವ ಅರಿಷಡ್ವರ್ಗಗಳನ್ನು ಸ್ವಚ್ಛಂದವಾಗಿ ಬಿಟ್ಟು ಭಗವಂತನ ಪ್ರಾಪ್ತಿ ಮಾಡಲು ಸಾಧ್ಯವಿಲ್ಲ. ಆದ್ದರಿಂದ ಆತನ ಸನ್ನಿಧಿಯಲ್ಲಿ ಬರುವಾಗ ದೀನನಾಗಿರಬೇಕು.

ದೇವರಿಗೆ ನಮಿಸುವ ಮೊದಲು ಆಮೆಗೆ ನಮಿಸುತ್ತಾರೆ. ಕಾರಣ ದೇವರ ದರ್ಶನವನ್ನು ಪಡೆಯುವ ಮೊದಲು ಆತನ ಗರ್ಭಗುಡಿಯಲ್ಲಿ ಪ್ರವೇಶ ಮಾಡುವ ಮೊದಲು ಮಾನವ ಆಮೆಯ ಹಾಗೆ ಆಕುಂಚನಗೊಳ್ಳಬೇಕು. ಆಮೆಯ ಹಾಗೆ ಮಾನಸಿಕವಾಗಿ ದೇಹವನ್ನು ಆಕುಂಚನ ಗೊಳಿಸಿಕೊಳ್ಳುವ ಕ್ಷಮತೆ ಮನುಷ್ಯನಲ್ಲಿರುವುದು ಅವಶ್ಯಕ.
ದೇವರ ಸನ್ನಿಧಿಯಲ್ಲಿ ಅಥವಾ ಮಂದಿರದಲ್ಲಿ ಧನಾತ್ಮಕ ಶಕ್ತಿಯು ಪ್ರವಹಿಸುತ್ತಿರುತ್ತದೆ. ನಾವು ದೇಗುಲದಲ್ಲಿ ಪ್ರವೇಶಮಾಡಿದಾಗ ನಮಗೆ ಒಂದು ರೀತಿಯ ಸಮಾಧಾನ, ಶಾಂತಿ ಲಭಿಸುತ್ತದೆ. ಗುಡಿಯಲ್ಲಿ ಧನಾತ್ಮಕ ಶಕ್ತಿಯ ತರಂಗಗಳು ಗ್ರಹಣ ಮಾಡಿಕೊಳ್ಳಲು ಆಮೆ ಇದು ಒಂದು ಪ್ರತೀಕವಾಗಿದೆ. ಇದರಿಂದ ವ್ಯಕ್ತಿಯ ಆಧ್ಯಾತ್ಮಿಕ ಉನ್ನತಿ ಆಗಲು ಸಾಧ್ಯವಾಗುತ್ತದೆ.
ಹೀಗೆ ಅನೇಕ ಕಾರಣಗಳಿಂದಾಗಿ ಗರ್ಭಗುಡಿಯ ದೇಗುಲದ ಎದುರಿನ ಬಾಗಿಲಿನ ಮುಂದೆ ನಮಗೆ ಆಮೆಯು ಕಂಡುಬರುತ್ತದೆ.