ಪ್ರೇಯಸಿಯ ಪ್ರೇಮವನ್ನು ಪಡೆಯಲು ಮಂತ್ರ ತಂತ್ರ‌ದ‌ ಮೊರೆ ಹೋಗಿ 44 ಲಕ್ಷ ರೂ. ಕಳೆದುಕೊಂಡ ಯುವಕ; ತಲೆಗೆ ಕೈ ಹಚ್ಚಿ ಕುಳಿತ ಪೊಲೀಸರು!

ಅಹಮದಾಬಾದ್ ನಿವಾಸಿಯಾಗಿರುವ ಅಜಯ್ ಕುಮಾರ್ ಅವರ ಭೇಟಿ ಒಬ್ಬ ಯುವತಿಯೊಂದಿಗೆ ಆಯಿತು. ಅವರ ಆ ಭೇಟಿ ಸ್ನೇಹವಾಗಿ, ಆನಂತರ ಅದು ಪ್ರೀತಿಯಾಗಿ, ಇಬ್ಬರು ಒಬ್ಬರನ್ನೊಬ್ಬರು ಗಾಢವಾಗಿ ಪ್ರೀತಿಸುತ್ತಿದ್ದರು. ಆದರೆ ಇದ್ದಕ್ಕಿದ್ದಂತೆ ಆ ಯುವತಿ ಅಜಯ್ ಕುಮಾರ್ ಅವರ ಜೊತೆಗೆ ಮಾತನಾಡುವುದನ್ನು ನಿಲ್ಲಿಸಿಬಿಟ್ಟಳು. ಆಗ ಅಜಯ್ ಎಷ್ಟೇ ಪ್ರಯತ್ನ ಪಟ್ಟರೂ ಆಕೆ ಮೊದಲಿನಂತೆ ಪ್ರೀತಿಯ ಸಂಬಂಧವನ್ನು ಮುಂದುವರೆಸಲು ಇಷ್ಟ ಪಡಲಿಲ್ಲ. ಹೀಗೆ ಪ್ರೀತಿಸಿದ ಹುಡುಗಿಯಿಂದ ಎದುರಾದ ನೋವಿನಲ್ಲಿ ದಿನಗಳನ್ನು ಕಡೆಯುತ್ತಿದ್ದ ಅಜಯ್ ಗೆ ಅನಿಲ್ ಎನ್ನುವ ವ್ಯಕ್ತಿಯ ಪರಿಚಯವಾಯಿತು. ಆತ ತನ್ನನ್ನು ತಾನು ಒಬ್ಬ ಜ್ಯೋತಿಷಿ ಎಂದು ಹೇಳಿಕೊಂಡಿದ್ದಾನೆ. ಆಗ ಅಜಯ್ ಆತನಿಗೆ ತನ್ನ ಜೀವನದಲ್ಲಿನ ನೋವಿನ ಘಟನೆಯನ್ನು ಕುರಿತಾಗಿ ಎಲ್ಲಾ ವಿಚಾರಗಳನ್ನು ವಿವರಿಸಿದ್ದಾನೆ.

ಅಜಯ್ ಹೇಳಿದ ಕಥೆಯನ್ನು ಕೇಳಿದ ಮೇಲೆ ಅನಿಲ್ ಅಜಯ್ ಪ್ರೇಮಿಸಿದ ಹುಡುಗಿಯನ್ನು ಅವನ ಜೀವನಕ್ಕೆ ಮತ್ತೆ ಕರೆ ತರುವುದು ನನಗೆ ಬಹಳ ಸುಲಭದ ಕೆಲಸವೆಂದು, ಅದಕ್ಕಾಗಿ ಕೆಲವೊಂದು ಪೂಜೆಗಳನ್ನು ಮಾಡಬೇಕಷ್ಟೇ ಎಂದು ಹೇಳಿ ಅಜಯ್ ನಿಂದ ಆತನ ಗೆಳತಿಯ ಸಂಪೂರ್ಣ ವಿವರವನ್ನು ಪಡೆದುಕೊಂಡಿದ್ದಾನೆ. ಅದಾದ ಮೇಲೆ ಸ್ವಲ್ಪ ದಿನ ಕಳೆದ ನಂತರ ಅನಿಲ್ ಅಜಯ್ ಗಳಿ ಬಂದು, ಆತನ ಗೆಳತಿಯನ್ನು ಯಾರೋ ಒಬ್ಬ ವ್ಯಕ್ತಿ ತಂತ್ರ ಮಂತ್ರಗಳಿಂದ ವಶೀಕರಣ ಮಾಡಿಕೊಂಡಿದ್ದಾನೆಂದು, ಆಕೆಯನ್ನು ಆ ಮಂತ್ರ ತಂತ್ರ ದಿಂದ ಹೊರಗೆ ತರಬೇಕಾದ ಅವಶ್ಯಕತೆ ಇದೆ ಎಂದು ಹೇಳಿದ್ದಾನೆ.
ಅನಿಲ್ ಹೇಳಿದ ಮಾತುಗಳನ್ನು ನಂಬಿದ್ದಾನೆ ಅಜಯ್.

ಅಜಯ್ ಅನಿಲ್ ಹೇಳಿದ ಪೂಜೆ ಮಾಡಿಸಲು ಸಿದ್ಧನಾದ. ಅನಿಲ್ ಮೊದಲ ಸಲ ಪೂಜೆಗಾಗಿ 11,400 ಹಾಗೂ 21 ಸಾವಿರ ರೂಪಾಯಿಗಳನ್ನು ಪಡೆದುಕೊಂಡಿದ್ದಾರೆ. ನಂತರ ಯಾವುದೋ ಪೂಜೆ ಮಾಡಿದ್ದಾಗಿ, ಇನ್ನು ಕೆಲವು ದಿನಗಳಲ್ಲಿ ಅಜಯ್ ಪ್ರೀತಿಸುವ ಹುಡುಗಿ ವಾಪಸು ಬರುವಳು ಎಂದು ಹೇಳುತ್ತಾನೆ. ಆದರೆ ಅಂತಹ ಯಾವುದೇ ಬೆಳವಣಿಗೆ ಕಾಣಲಿಲ್ಲ. ಸ್ವಲ್ಪ ದಿನಗಳ ನಂತರ ಅಜಯ್ ಮತ್ತೊಮ್ಮೆ ಅನಿಲ್ ಬಳಿ ಬಂದು ಪೂಜೆಯ ಫಲ ಏನು ಪರಿಣಾಮ ಬೀರಿಲ್ಲ ಎಂದು ಹೇಳಿದಾಗ, ಅನಿಲ್ ಅತ್ತ ಕಡೆಯಿಂದ ಯುವತಿಯ ಮೇಲೆ ಇನ್ನಷ್ಟು ಪ್ರಭಾವಶಾಲಿ ಮಂತ್ರ ತಂತ್ರಗಳನ್ನು ಪ್ರಯೋಗ ಮಾಡಿರುವುದರಿಂದ ತಾನು ಮಾಡಿದ ಪೂಜೆ ಸಫಲವಾಗಿಲ್ಲ ಎಂದು ಹೇಳಿ, ತಾನು ಮತ್ತೊಂದು ಹೊಸ ಪೂಜೆಯನ್ನು ಮಾಡಬೇಕೆಂದು 71 ಸಾವಿರ ರೂಪಾಯಿಗಳನ್ನು ಪಡೆದುಕೊಂಡಿದ್ದಾನೆ.

ಆದರೆ ಎಷ್ಟೇ ಪೂಜೆ ಮಾಡಿದರೂ ಅಜಯ್ ನ ಗೆಳತಿ ಮಾತ್ರ ಅವನ ಜೀವನಕ್ಕೆ ಮರಳಿ ಬರಲಿಲ್ಲ. ಸ್ವಲ್ಪ ದಿನ ಕಳೆದ ಮೇಲೆ ಮತ್ತೊಮ್ಮೆ ಅಜಯ್ ಅನಿಲ್ ಬಳಿ ಸಮಸ್ಯೆಯ ಪರಿಹಾರ ಕೇಳಲು ಹೋದಾಗ, ಅನಿಲ್ ಯುವತಿಯ ಮೇಲೆ ಮಾಟ ಮಂತ್ರ ಮಾಡುವ ವ್ಯಕ್ತಿ ಹೆಚ್ಚು ಹಣ ಖರ್ಚು ಮಾಡಿ ಪ್ರಭಾವ ಶಾಲಿ ಮಂತ್ರ ಪ್ರಯೋಗವನ್ನು ಮಾಡುತ್ತಿದ್ದಾನೆ. ಆದ್ದರಿಂದಲೇ ನಾನು ಮಾಡುವ ಪೂಜೆ ಸಫಲವಾಗುತ್ತಿಲ್ಲ. ಈ ಬಾರಿ 1,25,000 ರೂಪಾಯಿಗಳ ಪೂಜೆ ಮಾಡಬೇಕೆಂದು ಹೇಳಿದ್ದಾನೆ. ಅಜಯ್ ಮೂರ್ಖನಂತೆ ಅದಕ್ಕೆ ಒಪ್ಪಿಕೊಂಡು ಅನಿಲ್ ಕೇಳಿದಷ್ಟು ಹಣವನ್ನು ನೀಡುವುದು ಮಾತ್ರವೇ ಅಲ್ಲದೆ, ಪ್ರತ್ಯೇಕವಾಗಿ ಹನ್ನೊಂದು ಸಾವಿರ ರೂಪಾಯಿಗಳ ದಕ್ಷಿಣೆ ನೀಡಿದ್ದಾನೆ. ಆದರೆ ಈ ಪೂಜೆಯ ನಂತರ ಕೂಡಾ ಯಾವುದೇ ಫಲಿತಾಂಶ ಬಂದಿಲ್ಲ.

ಕಡೆಗೆ ಅನಿಲ್ ಪೂಜೆ ಮಾಡಿ ತಂತ್ರ ಮಂತ್ರಗಳನ್ನು ಮೊಬೈಲ್ ನಲ್ಲಿ ಬಂಧಿಸುವುದಾಗಿ ಹೇಳಿ ಅಜಯ್ ಗೆ ಎರಡು ಮೊಬೈಲ್ ಗಳನ್ನು ತರಲು ಹೇಳಿದ್ದಾನೆ. ಆಗ ಅಜಯ್ 75,000 ರೂಪಾಯಿ ಖರ್ಚು ಮಾಡಿ 2 ಮೊಬೈಲ್ ಫೋನುಗಳನ್ನು ತಂದು ಕೊಟ್ಟಿದ್ದಾನೆ. ಅದರ ಜೊತೆಗೆ 10,000 ದಕ್ಷಿಣೆ ನೀಡಿದ್ದಾನೆ. ಆದರೆ ಈ ಬಾರಿಯೂ ಪೂಜೆಯ ನಂತರ ಯಾವುದೇ ಪ್ರಯೋಜನವಾಗಿಲ್ಲ. ಕೊನೆಗೆ ಕೋಪಗೊಂಡ ಅಜಯ್ ಅನಿಲ್ ನನ್ನು ಈ ವಿಚಾರವಾಗಿ ಪ್ರಶ್ನೆ ಮಾಡಿದಾಗ, ಅನಿಲ್ ತಾನು ಪೂಜೆ ಮಾಡಿಸುತ್ತಿದ್ದ ಮಂತ್ರವಾದಿಗೆ ಯುವತಿಯ ಕಡೆಯಿಂದ ಮಂತ್ರ ಪ್ರಯೋಗ ಮಾಡಲಾಗಿದ್ದು ಅವರಿಗೆ ತೊಂದರೆಯಾಗಿದೆ. ಆದ್ದರಿಂದ ಈ ಸಮಸ್ಯೆ ಪರಿಹಾರಕ್ಕೆ ಉಜ್ಜಯಿನಿಯಿಂದ ತನ್ನ ಗುರುವನ್ನು ಕರೆ ತರಬೇಕು ಎಂದು ಹೇಳಿದ್ದಾನೆ.

ಅದಾದ ಕೆಲವು ದಿನಗಳ ನಂತರ ಅನಿಲ್ ತನ್ನ ಗುರು ಎಂದು ಒಬ್ಬ ವ್ಯಕ್ತಿಯನ್ನು ಕರೆತಂದಿದ್ದಾನೆ. ಅಲ್ಲದೇ ಅಜಯ್ ಅವರ ಮನೆಯಲ್ಲಿ ಒಂದು ಗುಪ್ತ ನಿಧಿ ಇದ್ದು, ಹದಿನೈದು ಲಕ್ಷ ರೂಪಾಯಿ ಖರ್ಚು ಮಾಡಿ ಪೂಜೆಯನ್ನು ಮಾಡಿದರೆ, ಆ ನಿಧಿ ಹೊರಗೆ ಬರುತ್ತದೆ ಎಂದೂ, ಆಗ ಆತನ ಗೆಳತಿ ಅಜಯ್ ನ ಐಶ್ವರ್ಯ ವನ್ನು ಕಂಡು ಮರಳಿ ಬರುವಳು ಎಂದು ಹೇಳಿದ್ದಾರೆ. ಮತ್ತೊಮ್ಮೆ ಮೋಸ ಹೋದ ಅಜಯ್ ತನ್ನ ತಂದೆಯ ಅಕೌಂಟ್ ನಿಂದ 15 ಲಕ್ಷ ರೂಪಾಯಿಗಳನ್ನು ತೆಗೆದು ಅನಿಲ್ ಗೆ ನೀಡಿದ್ದಾನೆ. ಅನಂತರ ಯಾವುದೋ ಒಂದು ಪೂಜೆಯನ್ನು ಮಾಡಿ ಅನಿಲ್ ಹಾಗೂ ಆತನ ಗುರು ಹೊರಟು ಹೋಗಿದ್ದಾರೆ. ಈ ಘಟನೆಯ ನಂತರ ಮತ್ತೆ ಅನಿಲ್ ಅಜಯ್ ಗೆ ಸಿಗಲೇ ಇಲ್ಲ.

ಅನಿಲ್ ನ ಯಾವುದೇ ಸುಳಿವು ಸಿಗದೆ ಹೋದಾಗ ತನಗೆ ಮೋಸವಾಗಿದೆ ಎನ್ನುವುದನ್ನು ಅರ್ಥ ಮಾಡಿಕೊಂಡು ಪೊಲೀಸರ ಬಳಿಗೆ ಹೋಗಿ ದೂರು ದಾಖಲು ಮಾಡಿದ್ದಾನೆ. ಆದರೆ ಇಷ್ಟೆಲ್ಲಾ ನಡೆಯುವಾಗ ಅಜಯ್ ತಾನು ಯಾವ ಹುಡುಗಿಯನ್ನು ಮಂತ್ರ ತಂತ್ರ ದಿಂದ ಮುಕ್ತಗೊಳಿಸಿ, ಮತ್ತೆ ತನ್ನ ಜೀವನಕ್ಕೆ ಕರೆ ತರಲು ಪ್ರಯತ್ನ ಮಾಡುತ್ತಿದ್ದನೋ, ಆ ಹುಡುಗಿಗೆ ಆಗಲೇ ಮದುವೆ ಅದಾಗಲೇ ಬೇರೆಯವರೊಂದಿಗೆ ಮದುವೆ ಕೂಡಾ ಆಗಿ ಹೋಗಿತ್ತು ಎನ್ನಲಾಗಿದೆ.