ಬೆಂಗಳೂರಿನಿಂದ 2000 ಕಿ.ಮೀ ನಡೆದು ಮನೆಗೆ ತಲುಪಿದಾಗ ಹಾವು ಕಚ್ಚಿ ವಲಸೆ ಕಾರ್ಮಿಕನ ಸಾವು!

ಬೆಂಗಳೂರಿನಿಂದ ಹೊರಟ ವಲಸಿಗನೊಬ್ಬ 2000 ಕಿ.ಮೀ. ಅವಿರತವಾಗಿ ನಡೆದುಕೊಂಡು ದಣಿದು ಸೋತು ಸುಣ್ಣವಾಗಿ ತನ್ನೂರಾದ UP ಯ ಗೊಂಡ ಜಿಲ್ಲೆಯ ಧಾನೇಪುರ್ ತಲುಪಿದ ಮೇಲೆ, ಮುಖ ತೊಳೆದುಕೊಳ್ಳಲು ಕಬ್ಬಿನ ಗದ್ದೆಯಲ್ಲಿ ಹೋದಾಗ ಹಾವು ಕಡಿದು ದುರಂತ ಸಾವು ಸಂಭವಿಸಿದೆ. ದೂರದ ಆಯಾಸದ ಪ್ರಯಾಣ ಮುಗಿಸಿ ಮಗ ಮನೆ ತಲುಪಿದ ಕುಟುಂಬದವರ ಖುಷಿ ಕೆಲವೇ ಗಂಟೆಗಳಲ್ಲಿ ದುಃಖದಲ್ಲಿ ಪರಿವರ್ತನೆಯಾಗಿದೆ.

ಬೆಂಗಳೂರಿನಿಂದ 23 ವರ್ಷದ ವಲಸಿಗ ಸಲ್ಮಾನ್ ಖಾನ್
ನಿರಂತರವಾಗಿ 12 ದಿನಗಳವರೆಗೆ ನಡೆದುಕೊಂಡು ಉತ್ತರ ಪ್ರದೇಶದಲ್ಲಿದ್ದ ತನ್ನ ಮನೆ ತಲುಪಿದ ನಂತರ ಈ ಮೇಲಿನ ಘಟನೆ ಸಂಭವಿಸಿದೆ.

ಮಗನ ಆಕಸ್ಮಿಕ ಮೃತ್ಯುವಿನಿಂದ ಆತನ ತಾಯಿ ರುಕ್ಸಾನಾಳ ಪ್ರಜ್ಞೆ ತಪ್ಪಿ ಅವಳ ಆರೋಗ್ಯ ಹದಗೆಟ್ಟು ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸಲ್ಮಾನ್ ನ ಮೃತ್ಯುವಿನಿಂದ ಆತನ ಕುಟುಂಬದವರು ಸಲ್ಮಾನ್ ತಾಯಿಯ ಆಸ್ಪತ್ರೆಯ ಬಿಲ್ ತುಂಬಲು ಪರದಾಡುತ್ತಿದ್ದಾರೆ.

ಕೆಲಸದ ಶೋಧದಲ್ಲಿ ಸಲ್ಮಾನ್ ಕಳೆದ ಡಿಸೆಂಬರ್ ನಲ್ಲಿ ಬೆಂಗಳೂರಿಗೆ ಆಗಮಿಸಿದ್ದ. ಗೊಂಡ ಜಿಲ್ಲೆಯ ತನ್ನ ಮಿತ್ರರೊಂದಿಗೆ ಕಟ್ಟಣ ನಿರ್ಮಾಣದ ಸೈಟ್ ನಲ್ಲಿ ಕೆಲಸ ಮಾಡುತ್ತಿದ್ದ. ಆದರೆ ಲಾಕ್ ಡೌನ್ ಕಾರಣದಿಂದ ಸರಿಯಾಗಿ ಸಂಬಳ ಲಭಿಸದೆ ಇದ್ದಾಗ ಹತ್ತೂ ಜನ ಮಿತ್ರರೊಂದಿಗೆ UP ಯ ತನ್ನೂರಿಗೆ ಕಾಲ್ನಡಿಗೆಯಲ್ಲಿಯೇ ಹೋಗುವ ವಿಚಾರ ಮಾಡಿ ಸತತ 12 ದಿನಗಳ ಕಾಲ ನಡೆದು ಮೇ 26 ರಂದು ಊರು ತಲುಪಿದ್ದಾನೆ.

ಸಲ್ಮಾನ್ ನ ಜೊತೆಗಿದ್ದ ಮಿತ್ರ ಕೌಶಲ ಕುಮಾರ್, ‘ಕಳೆದ ಎರಡು ತಿಂಗಳಿಂದ ಕಂಟ್ರಾಕ್ಟರ್ ನಮಗೆ ನಮ್ಮ ಸಂಬಳ ಕೊಟ್ಟಿಲ್ಲ, ನಾವು ರೈಲಿನಿಂದಾದರೂ ಮನೆ ಸೇರುವ ಯತ್ನ ಮಾಡಿದ್ದೆವು ಆದರೆ ವ್ಯರ್ಥ. ಅಂಥದ್ದರಲ್ಲೇ ಪೊಲೀಸರ ಹೊಡೆತ ಹಾಗೂ ಅಪಮಾನ ಸಹಿಸುತ್ತ ಕೊನೆಗೆ ನಡೆದುಕೊಂಡಾದರೂ ಮನೆಗೆ ಹೋಗುವಾ ಎಂದು ನಿಶ್ಚಯಿಸಿ ನಮ್ಮ ಪ್ರವಾಸ ಪ್ರಾರಂಭಿಸಿದೆವು, ಎಂದು ಹೇಳಿದ್ದಾನೆ.