ಮಗನ ಆದಾಯದಲ್ಲಿ ಆತನ ಹೆಂಡತಿ ಮಕ್ಕಳು ಮಾತ್ರವಲ್ಲ, ತಂದೆ ತಾಯಿ ಕೂಡಾ ಹಕ್ಕುದಾರರು: ಕೋರ್ಟ್ ತೀರ್ಪು

ಜೀವನ ನಿರ್ವಹಣೆಗೆ ಸಂಬಂಧಿಸಿದ ಜೀವನ ಭತ್ಯೆಯ ಅಥವಾ ಜೀವನಾಂಶದ ವಿಚಾರವಾಗಿ ನ್ಯಾಯಾಲಯವು ಒಂದು ಮಹತ್ವವಾದ ತೀರ್ಪನ್ನು ನೀಡಿದೆ. ಯಾವುದೇ ಒಬ್ಬ ವ್ಯಕ್ತಿಯ ಆದಾಯದಲ್ಲಿ ಆತನ ಹೆಂಡತಿ ಮತ್ತು ಮಕ್ಕಳು ಮಾತ್ರವಲ್ಲದೇ ಆತನ ವಯಸ್ಸಾದ ಪೋಷಕರಿಗೂ ಕೂಡಾ ಪಾಲಿರುತ್ತದೆ ಎಂದು ತಿಳಿಸಲಾಗಿದೆ. ಈ ಮೂಲಕ ಕೋರ್ಟ್ ವ್ಯಕ್ತಿಯೊಬ್ಬನ ಆದಾಯದ ಮೇಲೆ ಆತನ ಹೆಂಡತಿ ಮಕ್ಕಳಷ್ಟೇ ಹಕ್ಕನ್ನು ಆತನ ತಂದೆ ತಾಯಿ ಕೂಡಾ ಹೊಂದಿರುತ್ತಾರೆ ಎನ್ನುವುದನ್ನು ಸ್ಪಷ್ಟಪಡಿಸಿದೆ. ತೀಸ್ ಹಜಾರಿ ಮೂಲದ ಪ್ರಧಾನ ನ್ಯಾಯಾಲಯ ಮತ್ತು ಸೆಷೆನ್ಸ್ ನ್ಯಾಯಾಧೀಶರಾದ ಗಿರೀಶ್ ಕಾಟ್ಪಾಲಿಯಾ ಅವರು ಮಹಿಳೆಯೊಬ್ಬರ ಅರ್ಜಿಯನ್ನು ಆಲಿಸಿದ ನಂತರ ಪ್ರತಿವಾದಿ ಪತಿಗೆ ತನ್ನ ಆದಾಯದ ಅಫಿಡೆವಿಟ್ ನೀಡುವಂತೆ ಕೇಳಿತ್ತು. ಈ ವೇಳೆ ಮಹಿಳೆ ಪತಿಯ ಮಾಸಿಕ ಆದಾಯ 50 ಸಾವಿರ ರೂಪಾಯಿಗಳಿಗಿಂತ ಹೆಚ್ಚು ಎಂದು ತಿಳಿಸಿದ್ದಾರೆ.

ಆಕೆ ತನ್ನ ಪತಿ ತನ್ನ ಹಾಗೂ ತನ್ನ ಮಗುವಿಗೆ ಪತಿ ಕೇವಲ ಹತ್ತು ಸಾವಿರ ರೂಪಾಯಿಗಳನ್ನು ಮಾತ್ರ ನೀಡುತ್ತಿದ್ದಾರೆ ಎಂದು ಆ ರೋ ಪ ಮಾಡಿದ್ದರು. ಆದರೆ ಕೋರ್ಟ್ ನ ಸೂಚನೆಯಂತೆ ಅಫಿಡೆವಿಟ್ ನೀಡಿದ ಪತಿಯ ಅಫಿಡೆವಿಟ್ ನಲ್ಲಿ ಆತನ ಮಾಸಿಕ ಆದಾಯ 37 ಸಾವಿರ ರೂಪಾಯಿಗಳು ಎಂದು ತಿಳಿದು ಬಂದಿದ್ದು, ಇದರಲ್ಲಿ ಆತ ತನ್ನ ಹೆಂಡತಿ, ಎರಡು ವರ್ಷದ ಮಗು ಹಾಗೂ ತನ್ನ ವಯಸ್ಸಾದ ತಂದೆ ತಾಯಿಯ ಹಾಗೂ ತನ್ನ ಸ್ವಂತ ಅವಶ್ಯಕತೆಗಳನ್ನು ಕೂಡಾ ನಿರ್ವಹಣೆ ಮಾಡುತ್ತಾ ಇರುತ್ತಾರೆ. ಆಕೆಯ ಪತಿಯ ಆದಾಯಕ್ಕೆ ಸಂಬಂಧಿಸಿದ ಅಫಿಡೆವಿಟ್ ಅನ್ನು ಪರಿಶೀಲಿಸಿ ವರದಿ ನೀಡುವಂತೆ ನ್ಯಾಯಾಲಯವು ಭದ್ರತಾ ಅಧಿಕಾರಿಗಳಿಗೆ ಸೂಚಿಸಿತ್ತು ಎನ್ನಲಾಗಿದೆ.

ಭದ್ರತಾ ಅಧಿಕಾರಿಗಳು ನ್ಯಾಯಾಲಯಕ್ಕೆ ಪ್ರತಿವಾದಿಯು ಅಫಿಡೆವಿಟ್ ಮೂಲಕ ಸರಿಯಾದ ಮಾಹಿತಿಯನ್ನು ನೀಡಿದ್ದಾರೆ ಎನ್ನುವ ಮಾಹಿತಿಯನ್ನು ನೀಡಿದ್ದಾರೆ. ಆತನ ಆದಾಯ ತೆರಿಗೆ ಖಾತೆಯ ಅನ್ವಯ ಆತನ ಮಾಸಿಕ ಆದಾಯ 37 ಸಾವಿರ ರೂಪಾಯಿಯಳು ಎನ್ನುವುದು ಖಚಿತವಾದ ಮಾಹಿತಿ ಎನ್ನಲಾಗಿದೆ. ಅಲ್ಲದೇ ಆತ ಪೋಷಕರ ಖರ್ಚು ವೆಚ್ಚಗಳನ್ನು ಮಾತ್ರವೇ ಅಲ್ಲದೇ ಅವರ ಅನಾರೋಗ್ಯದ ವಿಚಾರದಲ್ಲಿ ಕೂಡಾ ಹಣವನ್ನು ಬಳಸುತ್ತಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ನ್ಯಾಯಾಲಯವು ಈ ಸಂಗತಿಯನ್ನು ಬಹಳ ಗಂಭೀರವಾಗಿ ಪರಿಗಣಿಸಿದೆ. ಆದರೆ ಪ್ರತಿವಾದಿಯ ಪತ್ನಿಯ ವಾದವೇ ಬೇರೆ ಆಗಿದೆ.

ಆಕೆ ತನ್ನ ಪತಿಗೆ ಪತ್ನಿ ಹಾಗೂ ಮಗುವಿನ ಬಗೆಗೆ ಹೆಚ್ಚಿನ ಜವಾಬ್ದಾರಿ ಇರುತ್ತದೆ ಆದ ಕಾರಣ ತನಗೆ ಜೀವನ ಭತ್ಯೆಯನ್ನು ಹೆಚ್ಚಿಸಬೇಕು ಎಂದು ಆಕೆ ಬೇಡಿಕೆಯನ್ನು ಇಟ್ಟಿದ್ದಾಳೆ. ನ್ಯಾಯಾಲಯವು ಈ ಪ್ರಕರಣವನ್ನು ತೀರ್ಮಾನ ಮಾಡುತ್ತಾ ಪ್ರತಿವಾದಿ ಪತಿಯ ವೇತನವನ್ನು ಆರು ಭಾಗಗಳಾಗಿ ವಿಭಜಿಸಿದೆ. ಅದರಲ್ಲಿ ಎರಡು ಭಾಗಗಳನ್ನು ಪ್ರತಿವಾದಿಗೆ ನೀಡಿದೆ. ಇನ್ನು ಪತ್ನಿ, ಮಗು, ತಂದೆ ಹಾಗೂ ತಾಯಿಗೆ ಒಂದೊಂದು ಭಾಗವನ್ನು ನೀಡಿದೆ. ಗಂಡನ ಆದಾಯಕ್ಕೆ ಅನುಗುಣವಾಗಿ ತನ್ನ ಜೀವನಾಂಶವನ್ನು ಹೆಚ್ಚಿಸಬೇಕೆಂದು ಬೇಡಿಕೆಯಿಟ್ಟ ಪತ್ನಿಯ ಬೇಡಿಕೆಯನ್ನು ಪರಿಗಣಿಸಿ ಕೋರ್ಟ್ ಇಂತಹ ಒಂದು ನಿರ್ಣಯವನ್ನು ಮಾಡಿದೆ.

ಈ ಪ್ರಕಾರ ಇನ್ನು ಮುಂದೆ ಹೆಂಡತಿ ಮತ್ತು ಮಗನಿಗೆ 12,500 ರೂಪಾಯಿ ಪ್ರತಿ ತಿಂಗಳ ಹತ್ತನೇ ತಾರೀಖಿನಂದು ಅವರಿಗೆ ಜೀವನಾಂಶ ನೀಡಬೇಕೆಂದು ಕೋರ್ಟ್ ಆದೇಶ ನೀಡಿದೆ. ನ್ಯಾಯಾಲಯವು ತನ್ನ ನಿರ್ಣಯವನ್ನು ನೀಡುವಾಗ ಒಂದು ಕೇಕ್ ನ ಉದಾಹರಣೆಯನ್ನು ನೀಡಿದೆ. ಹೇಗೆ ನಾವು ಮನೆಗೆ ಒಂದು ಕೇಕನ್ನು ತಂದು ಅದನ್ನು ಎಲ್ಲರೂ ಸೇರಿ ಸಮಾನಾಂತರವಾಗಿ ಹಂಚಿಕೊಂಡು ತಿನ್ನುತ್ತೇವೆಯೋ ಅದೇ ರೀತಿಯಲ್ಲಿ ಮನೆಯ ಸದಸ್ಯರೊಬ್ಬರ ಆದಾಯವನ್ನು ಕೂಡಾ ಸಮಾನವಾಗಿ ಹಂಚಿಕೊಂಡು ಬಳಸಿಕೊಳ್ಳಬೇಕು ಹಾಗೂ ಸಂತೋಷದಿಂದ ಜೀವನವನ್ನು ನಡೆಸಬೇಕು ಎನ್ನುವ ಸಲಹೆಯನ್ನು ಕೂಡಾ ನೀಡಿದೆ.