ಮಣ್ಣಿನಿಂದ ತುಂಬಿದ ಟ್ರಾಲಿ ಖಾಲಿ ಮಾಡುವಾಗ ಇದ್ದಕ್ಕಿದ್ದಂತೆ ಬಿದ್ದವು ಚಿನ್ನ-ಬೆಳ್ಳಿಯ ನಾಣ್ಯಗಳು; ಲೂಟಿ ಮಾಡಿ ಓಡಿದ ಜನ!
ಉತ್ತರ ಪ್ರದೇಶದ ಶಾಮ್ಲಿ ಜಿಲ್ಲೆಯಲ್ಲಿನ ಗ್ರಾಮವೊಂದರ ಹೊಲದಲ್ಲಿ ರೈತನು ಹೊಲವನ್ನು ಉಳುವಾಗ ಭೂಮಿಯಲ್ಲಿ ಅವರಿಗೆ ಬಂಗಾರದ ಹಾಗೂ ಬೆಳ್ಳಿಯ ನಾಣ್ಯಗಳು ದೊರೆತಿವೆ. ಈ ನಾಣ್ಯಗಳು ಪ್ರಾಚೀನ ಕಾಲಕ್ಕೆ ಸಂಬಂಧಪಟ್ಟಿದೆ ಎನ್ನಲಾಗಿದೆ. ಭಾನುವಾರದಂದು ಮಣ್ಣಿನಿಂದ ತುಂಬಿದ್ದ ಟ್ರಾಕ್ಟರ್ ಟ್ರಾಲಿಯಿಂದ ನಾಣ್ಯಗಳು ಬಿದ್ದಿದ್ದನ್ನು ನೋಡಿದ ಗ್ರಾಮದ ಜನರಿಗೆ ಕೂಡಾ ನಾಣ್ಯಗಳ ಬಗ್ಗೆ ತಿಳಿದು ಬಂದಿದೆ. ವಿಷಯ ಗ್ರಾಮದಲ್ಲಿ ಸುದ್ದಿಯಾದ ಕೂಡಲೇ ಗ್ರಾಮಸ್ಥರೆಲ್ಲಾ ಕೂಡಾ ನಾಣ್ಯಗಳು ಸಿಕ್ಕ ಹೊಲದ ಕಡೆ ಓಡಿ ಬಂದಿದ್ದಾರೆ. ಸಿಕ್ಕವರು ಸಿಕ್ಕಷ್ಟು ಎನ್ನುವಂತೆ ತಮಗೆ ಸಿಕ್ಕ ನಾಣ್ಯಗಳನ್ನು ಎತ್ತಿಕೊಂಡು ಜಾಗವನ್ನು ಖಾಲಿ ಮಾಡಿದ್ದಾರೆ.
ಈ ವಿಷಯ ಪೋಲಿಸರ ಕಿವಿಗೂ ಕೂಡಾ ಬಿದ್ದಿದೆ. ಅವರು ಗ್ರಾಮಕ್ಕೆ ಆಗಮಿಸಿ ವಿಚಾರಣೆ ನಡೆಸಿದಾಗ ಗ್ರಾಮದ ಜನರು ನಾಣ್ಯಗಳು ಸಿಕ್ಕ ವಿಚಾರವು ತಮಗೆ ತಿಳಿದಿಲ್ಲ ಎಂದು ಹೇಳಿದ್ದಾರೆ. ಗ್ರಾಮದಲ್ಲಿ ನಾಣ್ಯಗಳು ಸಿಕ್ಕವೆಂಬ ವಿಚಾರ ತಿಳಿದ ಕೂಡಲೇ ತಡ ಮಾಡದೇ ಪೋಲಿಸರು ಗ್ರಾಮಕ್ಕೆ ಆಗಮಿಸಿದ್ದಾರೆಯಾದರೂ ಗ್ರಾಮಸ್ಥರು ನಾಣ್ಯ ಸಿಕ್ಕ ವಿಚಾರವನ್ನು ಸುಳ್ಳು ಎಂದಿದ್ದಾರೆ. ಪೋಲಿಸರು ಕೂಡಾ ನಾಣ್ಯಗಳು ಸಿಕ್ಕವೆಂದು ಹೇಳಿದ ಹೊಲಕ್ಕೆ ಹೋಗಿ ತಪಾಸಣೆ ನಡೆಸಿದ್ದಾರೆಯಾದರೂ ಅಲ್ಲೇನು ದೊರೆತಿಲ್ಲ. ಆದರೆ ಸೋಶಿಯಲ್ ಮೀಡಿಯಾಗಳಲ್ಲಿ ಎರಡು ಚಿನ್ನದ ಹಾಗೂ ಒಂದು ಬೆಳ್ಳಿಯ ನಾಣ್ಯದ ಫೋಟೋ ವೈರಲ್ ಆಗಿದೆ.

ಇದರಲ್ಲಿ ಬೆಳ್ಳಿ ನಾಣ್ಯದ ಮೇಲೆ ರಹಮುತ್ತುಲ್ಲಾ ಇಬ್ನೇ ಮೊಹಮ್ಮದ್ ಎಂದು ಅರಬ್ಬಿಯಲ್ಲಿ ಬರೆದಿದ್ದರೆ, ಇನ್ನೆರಡು ಬಂಗಾರದ ನಾಣ್ಯಗಳ ಮೇಲೆ ಬೇರೇನೋ ಬರೆಯಲಾಗಿದೆ ಎನ್ನಲಾಗಿದೆ. ಹೊಲದ ಮಾಲೀಕರಾದ ಓಮ್ ಸಿಂಗ್ ಅವರು ಬಂಗಾರದ ಮತ್ತು ಬೆಳ್ಳಿಯ ನಾಣ್ಯಗಳು ಸಿಕ್ಕಿವೆ ಆದರೆ ಅವು ಎಷ್ಟೆಷ್ಟು ಇವೆ ಎನ್ನುವುದು ಗೊತ್ತಿಲ್ಲವೆಂದು ಪೋಲಿಸರಿಗೆ ಮಾಹಿತಿಯನ್ನು ನೀಡಿದ್ದಾರೆ. ಆದರೆ ಗ್ರಾಮದ ಮುಖ್ಯಸ್ಥರಾದ ರಾಜ್‍ಕುಮಾರ್ ಅವರು ಮಾತ್ರ ನಾಣ್ಯದ ವಿಷಯವು ನನಗೂ ತಿಳಿಯಿತು ಆದರೆ ನಾವ್ಯಾರೂ ಕೂಡಾ ಇನ್ನೂ ಒಂದು ನಾಣ್ಯವನ್ನು ಕೂಡಾ ನೋಡಿಲ್ಲವೆಂದು ಹೇಳಿದ್ದಾರೆ.
ಬಂಗಾರದ ನಾಣ್ಯದ ಮೇಲೆ ಏನು ಬರೆದಿರುವುದು ಎಂದು ಅರ್ಥವಾಗಿಲ್ಲ ಎಂದಿರುವ ಓಮ್ ಸಿಂಗ್ ಅವರು ನಾಣ್ಯಗಳು ಸಿಕ್ಕಿರುವುದು ನಿಜ ಎಂದಿದ್ದಾರೆ. ಒಟ್ಟಾರೆ ಇದೊಂದು ಗೊಂದಲದ ಪರಿಸ್ಥಿತಿಯನ್ನು ಅಲ್ಲಿ ನಿರ್ಮಾಣ ಮಾಡಿದೆ. ಇನ್ನು ಈ ವಿಷಯದ ಕುರಿತಾಗಿ ಎಡಿಎಂ ಅರವಿಂದ್ ಸಿಂಗ್ ಅವರು ನಮಗೆ ಹೊಲದ ವೇಳೆ ಭೂಮಿಯಲ್ಲಿ ಯಾವುದೋ ಲೋಹ ದೊರೆತಿದೆ ಎನ್ನುವ ಮಾಹಿತಿ ಸಿಕ್ಕಿದೆಯೇ ಹೊರತು ನಾಣ್ಯಗಳ ಬಗ್ಗೆ ಮಾಹಿತಿ ಸಿಕ್ಕಿಲ್ಲ ಎಂದಿದ್ದಾರೆ. ಎಸ್ ಡಿ ಎಂ ಅನ್ನು ತಪಾಸಣೆಯನ್ನು ನಡೆಸಲು ಕಳುಹಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ನಾಣ್ಯಗಳು ಸಿಕ್ಕಿರುವುದು ನಿಜವೇ ಆದಲ್ಲಿ ಈ ಬಗ್ಗೆ ಪುರಾತತ್ವ ಇಲಾಖೆಗೆ ಕೂಡಾ ತಿಳಿಸಲಾಗುವುದು ಎಂದಿದ್ದಾರೆ. ಒಟ್ಟಾರೆ ಇಲ್ಲೊಂದು ಗೊಂದಲಮಯ ಪರಿಸ್ಥಿತಿ ಇದೆ. ಹೊಲದ ಮಾಲೀಕ ನಾಣ್ಯಗಳು ಸಿಕ್ಕಿವೆ ಎಂದರೆ ಗ್ರಾಮದ ಮುಖ್ಯಸ್ಥರು ತಾವು ನೋಡಿಲ್ಲ ಎಂದಿದ್ದಾರೆ. ಆದರೆ ಸೋಶಿಯಲ್ ಮೀಡಿಯಾಗಳಲ್ಲಿ ಮಾತ್ರ ಬಂಗಾರದ ಮತ್ತು ಬೆಳ್ಳಿಯ ನಾಣ್ಯಗಳ ಫೋಟೋಗಳು ವೈರಲ್ ಆಗಿದ್ದು ಈ ನಾಣ್ಯಗಳು ಎಲ್ಲಿಂದ ಬಂದವು ಎಂಬುದು ಇತ್ಯರ್ಥವಾಗಬೇಕಾದ ಅಗತ್ಯವೂ ಕೂಡಾ ಇದೆ.