ಮದುವೆಯಾದ 15 ದಿನಗಳಲ್ಲೇ ಗಂಡ ಬಿಟ್ಟು ಹೋದ; ನೊಂದುಕೊಳ್ಳದೆ ಕಷ್ಟಪಟ್ಟು ಓದಿ IAS ಪಾಸ್ ಮಾಡಿದ ಕೋಮಲ ಗಣಾತ್ರ!

ಸ್ತ್ರೀ ಜೀವನ ಎಂದರೆ ಅದು ಪತಿಯ ಸುತ್ತಾ, ಮನೆಯಲ್ಲೇ ಎಂಬ ಒಂದು ಮೂಢ ಸಂಪ್ರದಾಯ ನಮ್ಮ ಸಮಾಜದಲ್ಲಿ ಯಾವಾಗ ಬಂತು ಎಂಬುದರ ಬಗ್ಗೆ ಯಾರಿಗೂ ತಿಳಿದಿಲ್ಲ. ಆದರೆ ಇಂದಿಗೂ ಕೂಡಾ ಅನೇಕ ಕಡೆಗಳಲ್ಲಿ ಮಹಿಳೆಯರು ಮನೆ, ಗಂಡ, ಮಕ್ಕಳು ಎಂಬುದಾಗಿ ಜೀವನವನ್ನೇ ಸವೆಸುತ್ತಿದ್ದಾರೆಯೇ ಹೊರತು ಅವರಿಗೆ ಹೊರ ಜಗತ್ತಿನ ಬಗ್ಗೆಯಾಗಲೀ, ಸ್ವತಂತ್ರ ಆಲೋಚನೆಗಳ ವಿಚಾರವಾಗಿ ಯಾವುದೇ ಆಸಕ್ತಿಯಿಲ್ಲ, ಕೆಲವೊಮ್ಮೆ ಅವಕಾಶಗಳು ಕೂಡಾ ಇಲ್ಲ. ಆದರೆ ಈ ಎಲ್ಲಾ ತಡೆಗಳನ್ನು ಮೀರಿ ಅನೇಕ ಮಹಿಳೆಯರು ಇಂದು ಸಮಾಜದಲ್ಲಿ ತಮ್ಮದೇ ಆದ ಒಂದು ಸ್ಥಾನವನ್ನು ಪಡೆದುಕೊಂಡಿದ್ದಾರೆ, ಕೋಟ್ಯಾಂತರ ಮಹಿಳೆಯರಿಗೆ ಸ್ಪೂರ್ತಿಯಾಗಿದ್ದಾರೆ.

ಅಂತಹ ಸ್ಪೂರ್ತಿಯ ಸೆಲೆಯಾಗಿರುವ ಮಹಿಳೆ ಕೋಮಲ್ ಗಣಾತ್ರ. ಇವರು ಒಬ್ಬ ಐಎಎಸ್ ಅಧಿಕಾರಿ. ಕೋಮಲ್ ಗಣಾತ್ರ ಇಂದು ಐಎಎಸ್ ಅಧಿಕಾರಿಯಾಗಿ ಜನಪ್ರಿಯರಾಗಿರಬಹುದು, ಆದರೆ ಅವರ ಹಿಂದಿನ ಜೀವನದಲ್ಲಿ ಒಂದು ವಿಶಾದದ ಛಾಯೆ ಕೂಡಾ ಇತ್ತು. ಆದರೆ ಕೋಮಲ್ ಅವರು ಅದನ್ನು ಮೆಟ್ಟಿ ನಿಂತು ಇಂದು ಸಾಧನೆಯ ಹಾದಿಯಲ್ಲಿ ಯಶಸ್ಸಿನ ಕಡೆಗೆ ತನ್ನ ಪಯಣವನ್ನು ಸಾಗಿಸಿದ್ದಾರೆ. ಕೋಮಲ್ ಅವರು ಮೂಲತ ಗುಜರಾತ್ ನವರು. ಮನೆಯವರು ಕೋಮಲ್ ಅವರಿಗೆ ಅವರ 26 ನೇ ವಯಸ್ಸಿನಲ್ಲಿ ಒಬ್ಬ ಎನ್.ಆರ್.ಐ. ಗೆ ಕೊಟ್ಟು ಮದುವೆಯನ್ನು ಘನವಾಗಿ ನಡೆಸಿಕೊಟ್ಟರು.

ಮದುವೆಯಾದ 15 ದಿನಗಳ ನಂತರ ಕೋಮಲ್ ಗಣಾತ್ರ ಅವರ ಪತಿ ನ್ಯೂಜಿಲೆಂಡ್ ಹೋಗುವ ತವಕದಲ್ಲಿ ಪತ್ನಿಯನ್ನು ಬಿಟ್ಟು ಹೋದರು. ಹಾಗೆ ಹೋದ ವ್ಯಕ್ತಿ ಮತ್ತೆ ವಾಪಸ್ಸು ಬರಲೇ ಇಲ್ಲ. ಮದುವೆಯಾದ ಹದಿನೈದು ದಿನಕ್ಕೆ ಇಂತಹುದೊಂದು ಘಟನೆ ನಡೆದರೆ ಸಾಮಾನ್ಯವಾಗಿ ಹೆಣ್ಣು ಕುಗ್ಗಿ ಹೋಗುವುದು ಸಹಜ. ಆದರೆ ಕೋಮಲ್ ಅಂತಹ ದುರ್ಬಲ ವ್ಯಕ್ತಿತ್ವದ ಮಹಿಳೆಯಾಗಿರಲಿಲ್ಲ. ಅವರು ಪರಿಸ್ಥಿತಿಯನ್ನು ಎದುರಿಸಲು ಸಜ್ಜಾದರು. ತನ್ನನ್ನು ಕರೆದುಕೊಂಡು ಹೋಗಲು ಬಾರದ ಪತಿಯ ಬಗ್ಗೆ ಚಿಂತಿಸಿ ಪ್ರಯೋಜನ ಇಲ್ಲವೆಂದು, ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕೆಂದು ಆಕೆ ನಿಶ್ಚಯ ಮಾಡಿದರು.

ಇಂತಹ ಒಂದು ದೃಢ ನಿರ್ಧಾರ ಮಾಡಿದ ಕೋಮಲ್ ಯು ಪಿ ಎಸ್ ಸಿ ಪರೀಕ್ಷೆಗಳಿಗೆ ಸಿದ್ಧತೆಯನ್ನು ನಡೆಸಿದರು. ಗುಜರಾತಿ ಮೀಡಿಯಂನಲ್ಲೇ ಶಿಕ್ಷಣ ಮಾಡಿದ್ದ ಆಕೆಗೆ ಇದೊಂದು ಸವಾಲು ಆಗಿತ್ತಾದರೂ ಆಕೆ ಆ ಸವಾಲನ್ನು ಎದುರಿಸಿ ನಿಲ್ಲಲು ಸಜ್ಜಾಗಿದ್ದರು. ತಂದೆಯ ಸಹಾಯದಿಂದ ಆಕೆ ಯು ಪಿ ಎಸ್ ಸಿ ಪರೀಕ್ಷೆಗೆ ಸಿದ್ಧತೆಯನ್ನು ನಡೆಸಿದರು. ಅಲ್ಲದೇ ಒಂದು ಖಾಸಗಿ ಶಾಲೆಯಲ್ಲಿ ಆಕೆ ಶಿಕ್ಷಕಿಯಾಗಿ ವೃತ್ತಿಯನ್ನು ಕೂಡಾ ಆರಂಭ ಮಾಡಿದರು. ವೃತ್ತಿ ಹಾಗೂ ಪರೀಕ್ಷೆ ತಯಾರಿ ಎರಡನ್ನೂ ತೂಗಿಸಿಕೊಂಡು ಬಹಳ ಶ್ರಮ ವಹಿಸಿ ಆಕೆ ಯು ಪಿ ಎಸ್ ಸಿ ಪರೀಕ್ಷೆಗಳನ್ನು ಎದುರಿಸದರು‌. ಆಕೆಯ ಶ್ರಮಕ್ಕೆ ತಕ್ಕ ಫಲಿತಾಂಶ ಕೂಡಾ ದೊರಕಿತು.

ಕೋಮಲ್ ಅವರು ಐಎಎಸ್ ಪಾಸ್ ಮಾಡಿದರು. ಇಂದು ಆಕೆ ರಕ್ಷಣಾ ಸಚಿವಾಲಯದಲ್ಲಿ ಅಡ್ಮಿನಿಸ್ಟ್ರೇಟಿವ್ ಆಗಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಕೋಮಲ್ ಒಂದು ಸಂದರ್ಶನದಲ್ಲಿ ಹೆಣ್ಣಿನ ಜೀವನ ವಿವಾಹದಿಂದಲೇ ಸಂಪೂರ್ಣ ಎಂದು ನಾನು ಮದುವೆಗೆ ಮುಂಚೆ ತಿಳಿದಿದ್ದೆ. ಆದರೆ ಅದೇ ಜೀವನವಲ್ಲ ಎಂದು ಅನಂತರ ಅರ್ಥವಾಯಿತು ಎಂದಿದ್ದಾರೆ. ಕೋಮಲ್ ತನ್ನನ್ನು ಅರ್ಥ ಮಾಡಿಕೊಂಡು ವ್ಯಕ್ತಿಯೊಡನೆ ವಿವಾಹವಾಗಿ ಸುಖಿ ಜೀವನ ನಡೆಸುತ್ತಿದ್ದಾರೆ.