ಮಹಿಳಾ ಲಾಟರಿ ಏಜೆಂಟ್ ನಿಂದ ಬಡವನ ಮನೆಗೆ ಒಲಿದು ಬಂದ ಅದೃಷ್ಟ ಲಕ್ಷ್ಮೀ: ಆಕೆಯ ವೃತ್ತಿಪರತೆಗೆ ತಲೆ ಬಾಗಿದ ಜನರು

ಲಾಟರಿ ಗಳ ಕುರಿತಾಗಿ ಈಗಾಗಲೇ ಬಹಳಷ್ಟು ಕಥೆಗಳನ್ನು ಕೇಳಿರಬಹುದು. ಸಾಮಾನ್ಯವಾಗಿ ಜಾತ್ರೆಗಳಲ್ಲಿ, ಉತ್ಸವಗಳಲ್ಲಿ, ಮಾರುಕಟ್ಟೆಯಲ್ಲಿ ಅಥವಾ ಇನ್ನೆಲ್ಲೋ ಜನಜಂಗುಳಿ ಹೆಚ್ಚಾಗಿರುವ ಕಡೆ ಲಾಟರಿ ಮಾರುವವರನ್ನು ನೋಡಿರುತ್ತೇವೆ. ಕೆಲವೊಮ್ಮೆ ನಮ್ಮ ಭಾಗ್ಯವೂ ಬದಲಾಗಬಹುದು ಎನ್ನುವ ಆಸೆಯಿಂದ, ಲಾಟರಿ ಹೊಡೆದು ನಾವೂ ಕೋಟ್ಯಾಧೀಶರಾಗಬಹುದೆಂಬ ಆಸೆಯಿಂದ ಲಾಟರಿಯನ್ನು ಕೊಂಡುಕೊಳ್ಳುತ್ತೇವೆ. ಆದರೆ ನಮ್ಮಗೆಲ್ಲಿ ಅಂತಹ ಭಾಗ್ಯ ಎನ್ನುವ ಹಾಗೆ ಲಾಟರಿ ಟಿಕೆಟ್ಟುಗಳಿಂದ ನಮಗೆ ಬಹುಮಾನ ಬರುವುದೇ ಇಲ್ಲ.‌ ಆದರೆ ನಾವಿಂದು ಹೇಳಲು ಹೊರಟಿರುವ ವ್ಯಕ್ತಿಯ ಅದೃಷ್ಟವನ್ನು ಗಮನಿಸಿದಾಗ ಅಂತಹ ಅದೃಷ್ಟ ನಮಗೂ ಬರಬಾರದೇ? ಎಂದು ಅನಿಸುವುದು ಸಹಜ. ಇಲ್ಲೊಬ್ಬ ವ್ಯಕ್ತಿಗೆ ಲಾಟರಿ ಟಿಕೆಟ್ ಗೆ ಕೊಡಬೇಕಾದ ಪೂರ್ತಿ ಹಣವನ್ನು ಕೊಡಲು ಸಾಧ್ಯವಾಗಿರಲಿಲ್ಲ, ಆದರೆ ಅದೃಷ್ಟದ ಬಾಗಿಲು ತೆರೆದು ಆತನಿಗೆ ಲಾಟರಿಯಲ್ಲಿ ಲಕ್ಷಗಳಲ್ಲ, ಬದಲಿಗೆ ಬರೋಬ್ಬರಿ 6 ಕೋಟಿ ರೂಪಾಯಿಗಳು ಲಾಟರಿ ಹೊಡೆದಿದೆ.

ಕೇರಳದಲ್ಲಿ ಸಮೀಜಾ ಎನ್ನುವ ಮಹಿಳೆ ಕಳೆದ ಕೆಲವು ವರ್ಷಗಳಿಂದಲೂ ಲಾಟರಿ ಟಿಕೆಟ್ ಮಾರುವ ಅಂಗಡಿ ಇಟ್ಟಿದ್ದಾರೆ. ಇತ್ತೀಚೆಗೆ ಲಾಟರಿ ಕಂಪನಿಯು ಬೇಸಿಗೆ ಆಫರ್ ಆಗಿ ಲಾಟರಿ ಟಿಕೆಟ್ ಗಳನ್ನು ನೀಡಿತ್ತು. ಆ ಟಿಕೆಟ್ ಗಳನ್ನು ಮಾರಾಟ ಕೂಡಾ ಚೆನ್ನಾಗಿ ಆಗಿತ್ತಿ. ಸಮೀಜಾರ ಅಂಗಡಿಯಲ್ಲಿ 12 ಟಿಕೆಟ್ ಗಳು ಮಾತ್ರ ಉಳಿದು ಹೋಗಿದ್ದವು. ಅವುಗಳನ್ನೂ ಮಾರಾಟ ಮಾಡಬೇಕಾಗಿತ್ತು. ಆಗ ಸಮೀಜಾ ತನ್ನ ಬಳಿ ಯಾವಾಗಲೂ ಟಿಕೆಟ್ ಕೊಳ್ಳುವ ಗ್ರಾಹಕರಿಗೆ ಫೋನ್ ಮೂಲಕ ಕರೆ ಮಾಡಿದ್ದಾರೆ. ಹಾಗೆ ಕರೆ ಮಾಡಿದಾಗ ಅವರ ರೆಗುಲರ್ ಗ್ರಾಹಕ ನಾಗಿರುವ ಪಿಕೆ ಚಂದ್ರನ್ ಅವರಿಗೆ ಸಮೀಜಾ ಲಾಟರಿ ಟಿಕೆಟ್ ಬಗ್ಗೆ ಹೇಳಿದಾಗ ಚಂದ್ರನ್ ಅವರ ಕೂಡಲೇ ಸರಿ ಎನ್ನುತ್ತಾ ಲಾಟರಿ ಒಂದು ಲಾಟರಿ ಟಿಕೆಟ್ ಅನ್ನು ತನಗಾಗಿ ಇಡುವಂತೆ, ಆದರೆ ಸದ್ಯಕ್ಕೆ ಹಣ ಇಲ್ಲ ಎಂದು ಹೇಳಿದ್ದಾರೆ.

ಪ್ರತಿ ಬಾರಿಯಂತೆ ಈ ಬಾರಿಯೂ ಕೂಡ ಲಾಟರಿಯಲ್ಲಿ ತನಗೆ ಬಹುಮಾನ ಬರುವ ಬಗ್ಗೆ ಅವರಿಗೆ ನಂಬಿಕೆ ಇಲ್ಲ. ಆದರೆ ಅವರು ಯಾವ ಟಿಕೆಟ್ ಅನ್ನು ತನಗಾಗಿ ಇಡಲು ಹೇಳಿದ್ದರೋ ಅದೇ ಟಿಕೆಟ್ ಅವರ ಭವಿಷ್ಯವನ್ನು ಬದಲಾಯಿಸುತ್ತದೆ ಎಂದು ಕನಸಿನಲ್ಲಿ ಕೂಡ ಅವರು ಊಹಿಸಿರಲಿಲ್ಲ. ಚಂದ್ರನ್ ಎಸ್‌ಡಿ 31642′ ಸಂಖ್ಯೆಯ ಟಿಕೆಟ್ಟನ್ನು ತನಗಾಗಿ ಕಾಯ್ದಿರಿಸಿದ್ದರು. ಇದೇ ಟಿಕೆಟ್ ಗೆ ಆರು ಕೋಟಿ ರೂಪಾಯಿಗಳ ಬಹುಮಾನ ಬಂದಿತ್ತು. ಸಮೀಜಾ ಈ ಮಾಹಿತಿಯನ್ನು ಚಂದ್ರನ್ ಅವರಿಗೆ ನೀಡಿದ್ದಾರೆ. ಚಂದ್ರನ್ ಲಾಟರಿ ಗೆದ್ದ ವಿಚಾರದಲ್ಲಿ ಜನರು ಲಾಟರಿ ಗೆದ್ದ ವ್ಯಕ್ತಿಗಿಂತ ಹೆಚ್ಚಾಗಿ ಸಮೀಜಾ ಅವರು ತಮ್ಮ ವೃತ್ತಿಯಲ್ಲಿ ತೋರಿದ ನಿಷ್ಠೆಯನ್ನು ಕುರಿತಾಗಿ ಹೆಚ್ಚಾಗಿ ಮಾತನಾಡುತ್ತಿದ್ದಾರೆ.

ಚಂದ್ರನ್ ಅವರು ಟಿಕೆಟ್ ಗೆ ನೀಡಬೇಕಿದ್ದ ನೂರು ರೂಪಾಯಿ ಕೊಟ್ಟಿರಲಿಲ್ಲ ಎಂದಿದ್ದಾರೆ ಎನ್ನಲಾಗಿದೆ. ಸಮೀಜ ಬಯಸಿದರೆ ಅದನ್ನು ತಾನೆ ಇಟ್ಟು ಕೊಳ್ಳಬಹುದಾಗಿತ್ತು. ಆದರೆ ಆಕೆ ಹಾಗೆ ಮಾಡಲಿಲ್ಲ. ಬದಲಾಗಿ ಲಾಟರಿ ಟಿಕೆಟ್ ಗೆ ಬಹುಮಾನ ಬಂದಿರುವ ವಿಷಯ ತಿಳಿದ ಕೂಡಲೇ ಆಕೆ ಟಿಕೆಟ್ ಅನ್ನು ತೆಗೆದುಕೊಂಡು ಚಂದ್ರನ್ ಅವರ ಮನೆಗೆ ಹೋಗಿ ಸಂತೋಷದ ವಿಷಯವನ್ನು ಹೇಳಿ, ಚಂದ್ರನ್ ಅವರಿಂದ ನೂರು ರೂ ಬದಲಾಗಿ ಇನ್ನೂರು ರೂಪಾಯಿಗಳನ್ನು ಪಡೆದುಕೊಂಡು ಬಂದಿದ್ದಾರೆ. ಸಮೀಜಾ ಜಾಗದಲ್ಲಿ ಬೇರೆ ಯಾರಾದರೂ ಇದ್ದಿದ್ದರೆ ಬಹುಶಃ 6 ಕೋಟಿಗಳ ಆಸೆಯಿಂದ ಅವರು ಇನ್ನೇನಾದರೂ ಮಾಡಬಹುದಿತ್ತು.

ಸಮೀಜಾ ತಮ್ಮ ಗಂಡ ರಾಜೇಂದ್ರನ್ ಜೊತೆಗೆ ಲಾಟರಿ ಟಿಕೆಟ್ ಅಂಗಡಿಯನ್ನು ನಡೆಸುತ್ತಿದ್ದು, ಇಬ್ಬರ ಮಕ್ಕಳ ತಾಯಿ ಆಗಿದ್ದಾರೆ. ಲಾಟರಿ ಟಿಕೆಟ್ ವಿಷಯದಲ್ಲಿ ಅವರು ತೋರಿದ ನಿಷ್ಠೆಗೆ ಜನರು ಮೆಚ್ಚುಗೆಯನ್ನು ಸೂಚಿಸಿದ್ದಾರೆ. ಸಾಮಾನ್ಯವಾಗಿ ಬಡವರನ್ನು ಅಪ್ರಾಮಾಣಿಕರು ಎನ್ನುವಂತೆ ನಮ್ಮ ಸಮಾಜದಲ್ಲಿ ಬಿಂಬಿಸಲಾಗುತ್ತದೆ. ಆದರೆ ಅವರಲ್ಲಿ ಪ್ರಾಮಾಣಿಕತೆ ಹಾಗೂ ವೃತ್ತಿನಿಷ್ಠೆ ಹೇಗಿರುತ್ತದೆ ಎಂಬುದಕ್ಕೆ ಸಮೀಜಾ ಒಂದು ಅತ್ಯುತ್ತಮ ಉದಾಹರಣೆಯಾಗಿದ್ದಾರೆ. ಸಮೀಜಾ ಮಾತನಾಡುತ್ತಾ, ಜನರ ನಂಬಿಕೆ ಮುಖ್ಯ. ಅದು ಇದ್ದರೆ ಇನ್ನಷ್ಟು ಉತ್ತಮವಾಗಿ ತನ್ನ ವೃತ್ತಿಯನ್ನು ನಡೆಸಬಹುದು ಎನ್ನುತ್ತಾರೆ.‌

ಇನ್ನು ಲಾಟರಿ ಗೆದ್ದ ಚಂದ್ರನ್ ಒಂದು ಶಾಲೆಯಲ್ಲಿ ಮಾಲಿಯ ಕೆಲಸವನ್ನು ಮಾಡುತ್ತಿದ್ದು, ಕಳೆದ ಕೆಲವು ವರ್ಷಗಳಿಂದಲೂ ಅವರು ಲಾಟರಿ ಟಿಕೆಟ್ ಗಳನ್ನು ಖರೀದಿ ಮಾಡುತ್ತಿದ್ದರು. ಆದರೆ ಅವರಿಗೆ ಅದೃಷ್ಟ ಒಲಿದಿರಲಿಲ್ಲ. ಈ ಬಾರಿ ಮಾತ್ರ ತಡವಾದರೂ ಅವರ ಅದೃಷ್ಟದ ಬಾಗಿಲು ಭರ್ಜರಿಯಾಗಿ ತೆರೆದಿದೆ.