ಮುಂದೆ 2, ಹಿಂದೆ 1 ಚಕ್ರದ ವಿಶ್ವದ ಅಗ್ಗದ ಬೆಲೆಯ ಕಾರು: 10 ಸಾವಿರಕ್ಕೆ ಬುಕ್ಕಿಂಗ್, ಕಿಮೀ ಒಂದಕ್ಕೆ ತಗಲುವ ಖರ್ಚು ಕೇವಲ 40 ಪೈಸೆ!
ಪೆಟ್ರೋಲ್ ಮತ್ತು ಡೀಸೆಲ್ ದುಬಾರಿ ಬೆಲೆಯಿಂದ ಸಾಮಾನ್ಯ ಜನರಿಗೆ ಬಹಳಷ್ಟು ತೊಂದರೆಯಾಗುತ್ತಿದೆ. ದಿನೇ ದಿನೇ ಏರುತ್ತಿರುವ ತೈಲ ಬೆಲೆಯಿಂದ ಜನರು ಕಂಗೆಟ್ಟಿದ್ದಾರೆ. ಈ ವೇಳೆ ಜನರು ಎಲೆಕ್ಟ್ರಿಕ್ ವಾಹನಗಳ ಕಡೆಗೆ ಗಮನವನ್ನು ಹರಿಸುತ್ತಿದ್ದಾರೆ. ಇದರ ಪರಿಣಾಮವಾಗಿ ನಿಧಾನಗತಿಯಲ್ಲಿ ಎಲೆಕ್ಟ್ರಿಕ್ ವಾಹನಗಳ ಮಾರಾಟ ಕೂಡಾ ಹೆಚ್ಚಾಗುತ್ತಿದೆ. ಇಂತಹ ಸಂದರ್ಭದಲ್ಲಿ ಮುಂಬೈನಲ್ಲಿ ಒಂದು ಸ್ಟಾರ್ಟ್ ಅಪ್ ಕಂಪನಿಯು ಹೊಸದಾದ ಒಂದು ಸಣ್ಣ ಎಲೆಕ್ಟ್ರಿಕ್ ಕಾರನ್ನು ಪರಿಚಯಿಸಿದ್ದು, ಕಂಪನಿಯು ಇದು ವಿಶ್ವದಲ್ಲೇ ಅಗ್ಗದ ಬೆಲೆಯ ಎಲೆಕ್ಟ್ರಿಕ್ ಕಾರು ಎಂದು ಹೇಳಿದೆ. ಈ ಹೊಸ ಎಲೆಕ್ಟ್ರಿಕ್ ಕಾರನ್ನು ಸ್ಟಾರ್ಮ್ ಮೋಟರ್ಸ್ ಕಂಪನಿಯು ಮಾರುಕಟ್ಟೆಗೆ ಪರಿಚಯಿಸಿದೆ ಇದಕ್ಕೆ ಸ್ಟಾರ್ಮ್ R3 ಎನ್ನುವ ಹೆಸರನ್ನು ನೀಡಲಾಗಿದೆ. ಕಂಪನಿಯು ಭಾರತದಲ್ಲಿ ಈಗಾಗಲೇ ಕಾರಿನ ಮಾರಾಟಕ್ಕಾಗಿ ಮುಂಗಡ ಬುಕಿಂಗ್ ಅನ್ನು ಕೂಡಾ ಆರಂಭಿಸಿದೆ.
ಈ ಹೊಸ ಎಲೆಕ್ಟ್ರಿಕ್ storm R3 ಮುಂಗಡ ಬುಕ್ಕಿಂಗ್ ಗಾಗಿ ಹೆಚ್ಚು ಹಣವನ್ನು ಪಾವತಿಸುವ ಅಗತ್ಯವೂ ಇಲ್ಲ. ಕೇವಲ ಹತ್ತು ಸಾವಿರ ರೂಪಾಯಿಗಳನ್ನು ಪಾವತಿಸುವ ಮೂಲಕ ಮುಂಬೈ ಮತ್ತು ದೆಹಲಿಯ ಎನ್ ಸಿ ಆರ್ ನಲ್ಲಿ ಈ ಹೊಸದಾದ ಕಾರಿನ ಮುಂಗಡ ಬುಕ್ಕಿಂಗ್ ಮಾಡಬಹುದಾಗಿದೆ. ಕಾರಿನ ಲುಕ್ ಬಗ್ಗೆ ಹೇಳುವುದಾದರೆ ಈ ಕಾರಿಗೆ ಮೂರು ಚಕ್ರಗಳನ್ನು ಅಳವಡಿಸಲಾಗಿದೆ. ಆದರೆ ತ್ರೀ ವೀಲರ್ ವಾಹನದ ಲುಕ್ ಅನ್ನು ಖಂಡಿತ ನೀಡಲಾಗಿಲ್ಲ. ಈ ಕಾರಿನ ಮತ್ತೊಂದು ವೈಶಿಷ್ಟ್ಯವೆಂದರೆ ಮೂರು ಚಕ್ರದ ವಾಹನಗಳಲ್ಲಿ ಇದ್ದಂತೆ ಮುಂದೆ ಒಂದು, ಚಕ್ರ ಹಿಂದೆ ಎರಡು ಚಕ್ರಗಳು ಇಲ್ಲಿಲ್ಲ. ಬದಲಾಗಿ ಇದಕ್ಕೆ ವಿರುದ್ಧವಾಗಿ, ಅಂದರೆ ಮುಂದೆ ಎರಡು ಚಕ್ರಗಳಿದ್ದರೆ, ಹಿಂದೆ ಒಂದು ಚಕ್ರವನ್ನು ಅಳವಡಿಸಲಾಗಿದೆ.

ಹೊಸ ಎಲೆಕ್ಟ್ರಿಕ್ ಕಾರನ್ನು ನೋಡಿದಾಗ ಖಂಡಿತವಾಗಿಯೂ ನಿಮಗೆ ಆಶ್ಚರ್ಯವಾಗುತ್ತದೆ. ಏಕೆಂದರೆ ಇದರ ಮುಂದಿನ ಭಾಗದಲ್ಲಿ ಎರಡು ಚಕ್ರ ಹಿಂದೆ ಒಂದು ಚಕ್ರ ಇರುವುದು ಪ್ರತಿಯೊಬ್ಬರ ಗಮನವನ್ನು ಸೆಳೆಯುತ್ತದೆ. ಮೂರು ಚಕ್ರಗಳ ಈ ಕಾರನ್ನು ಪ್ರಸ್ತುತ ವಿಶ್ವದ ಅತಿ ಕಡಿಮೆ ಬೆಲೆಯ ಕಾರೆಂದು ಕರೆಯಲಾಗಿದೆ. ಕಾರಿನ ಬುಕ್ಕಿಂಗ್ ಮುಂದಿನ ಕೆಲವು ವಾರಗಳವರೆಗೆ ಮಾತ್ರ ತೆರೆದಿರುವುದಾಗಿ ಕಂಪನಿಯು ಸೂಚನೆ ನೀಡಿದೆ. ಆರಂಭಿಕ ಗ್ರಾಹಕರು ಸುಮಾರು 50 ಸಾವಿರ ಬೆಲೆಯ ವಿಶೇಷ ಪ್ರಯೋಜನಗಳನ್ನು ಪಡೆಯುವರು ಎನ್ನಲಾಗಿದ್ದು, ಕಂಪನಿಯು ಕಸ್ಟಮೈಸ್ಡ್ ಕಲರ್ ಆಪ್ಷನ್, ಪ್ರೀಮಿಯಂ ಆಡಿಯೋ ವ್ಯವಸ್ಥೆ ಹಾಗೂ ಮೂರು ವರ್ಷಗಳ ಉಚಿತ ನಿರ್ವಹಣೆಯನ್ನು ಆರಂಭಿಕ ಗ್ರಾಹಕರಿಗೆ ನೀಡುವುದು ಎನ್ನಲಾಗಿದೆ.
ಕಂಪನಿ ಹೇಳುವ ಪ್ರಕಾರ ಒಂದು ಸಲ ಕಾರಿನ ಬ್ಯಾಟರಿಯನ್ನು ಸಂಪೂರ್ಣವಾಗಿ ಚಾರ್ಜ್ ಮಾಡಿದರೆ, ಸುಮಾರು 200 ಕಿಲೋಮೀಟರುಗಳ ದೂರವನ್ನು ಕ್ರಮಿಸಬಹುದಾಗಿದೆ. ಇದು ಫೋರ್ ಜಿ ಸಂಪರ್ಕಿತ ಡಯಾಗ್ನೋಸ್ಟಿಕ್ ಎಂಜಿನ್ ಅನ್ನು ಒಳಗೊಂಡಿದ್ದು, ಕಾರಿನ ಚಾಲಕನಿಗೆ ಟ್ರ್ಯಾಕ್ ಸ್ಥಳ ಮತ್ತು ಬ್ಯಾಟರಿಯ ಸ್ಥಿತಿಯನ್ನು ಕುರಿತಾಗಿ ಕೂಡ ಮಾಹಿತಿಯನ್ನು ನೀಡುತ್ತದೆ. ಕಂಪನಿಯ ಅನ್ವಯ ಈ ವರ್ಷ ಕಾರನ್ನು ಬುಕ್ಕಿಂಗ್ ಮಾಡಿದವರಿಗೆ 2022ರ ಆರಂಭದಿಂದಲೇ ಕಾರಿನ ಡಿಲೆವರಿಯನ್ನು ಆರಂಭಿಸಲಾಗುವುದು. ಮಾಧ್ಯಮ ವರದಿಗಳ ಕಂಪನಿಯು ಪ್ರಕಾರ ಈ ಕಾರಿ 6.5 ಕೋಟಿ ಮೌಲ್ಯದ 165 ಯೂನಿಟ್ ಗಳ ಬುಕಿಂಗ್ ಅನ್ನು ಮಾಡಿಕೊಂಡಿದೆ ಎನ್ನಲಾಗಿದ್ದು, ಇದು ಕೇವಲ ನಾಲ್ಕು ದಿನಗಳ ಅಂಕಿ ಅಂಶಗಳು ಎನ್ನಲಾಗಿದೆ.
ಆರಂಭಿಕ ಹಂತದಲ್ಲಿ ಕಂಪನಿಯು ಕೇವಲ ಮುಂಬೈ ಮತ್ತು ದೆಹಲಿಯಲ್ಲಿ ಕಾರಿನ ಬುಕಿಂಗ್ ಗಳನ್ನು ತೆರೆದಿದ್ದು, ಮುಂದಿನ ದಿನಗಳಲ್ಲಿ ದೇಶದ ಅನ್ಯ ನಗರಗಳಲ್ಲಿ ಕೂಡಾ ಬುಕಿಂಗ್ ಆರಂಭಿಸಲಿದೆ ಎನ್ನಲಾಗಿದೆ. ಕಾರಿನ ಆರಂಭಿಕ ಬೆಲೆ 4.5 ಲಕ್ಷ ರೂಪಾಯಿಗಳಾಗಿದೆ. ನಗರ ಪ್ರದೇಶಗಳ ಒಳಗೆ ಪ್ರತಿದಿನ ಹತ್ತರಿಂದ ಇಪ್ಪತ್ತು ಕಿಲೋಮೀಟರ್ ಗಳ ವ್ಯಾಪ್ತಿಯಲ್ಲಿ ಸಂಚರಿಸುವ ವ್ಯಕ್ತಿಗಳನ್ನು ವಿಶೇಷವಾಗಿ ದೃಷ್ಟಿಯಲ್ಲಿಟ್ಟುಕೊಂಡು ಈ ಕಾರುಗಳ ಉತ್ಪಾದನೆಯನ್ನು ಮಾಡಿರುವುದಾಗಿ ಕಂಪನಿಯು ಹೇಳಿಕೊಂಡಿದೆ.

ಅಲ್ಲದೇ ಈ ಕಾರಿನಲ್ಲಿ ಪ್ರತಿ ಕಿಲೋಮೀಟರ್ ಪ್ರಯಾಣಕ್ಕೆ ತಗಲುವ ವೆಚ್ಚ ಕೇವಲ 40 ಪೈಸೆಗಳು ಎನ್ನಲಾಗಿದೆ. ಸ್ಟೊರ್ಮ್ ಮೋಟಾರ್ಸ್ ಕಂಪನಿಯು 2016 ರಲ್ಲಿ ಪ್ರಾರಂಭವಾಯಿತು. ಕಂಪನಿಯ ಸ್ಥಾವರವು ಉತ್ತರಾಖಂಡದ ಕಾಶಿಪುರ ದಲ್ಲಿದೆ. ಪ್ರತಿ ತಿಂಗಳಿಗೆ 500 ಯೂನಿಟ್ ಗಳ ಉತ್ಪಾದನೆ ಮಾಡುವ ಸಾಮರ್ಥ್ಯವನ್ನು ಇದು ಹೊಂದಿದೆ. ಈ ಕಾರಿನ ನಿರ್ವಹಣಾ ವೆಚ್ಚವು ಅನ್ಯ ಕಾರುಗಳಿಗಿಂತ 80% ಕಡಿಮೆಯಿದ್ದು, ಇದು ಗ್ರಾಹಕರಿಗೆ ಬಹಳ ಲಾಭದಾಯಕವಾಗಿದೆ ಎನ್ನುತ್ತದೆ ಕಂಪನಿ.