ಮೊದಲ ಟೆಸ್ಟ್ ನಲ್ಲಿಯೇ ದ್ವಿಶತಕ ಬಾರಿಸಿದ ಬ್ಯಾಟ್ಸ್ಮನ್’ಗಳು; 143 ವರ್ಷಗಳ ಕ್ರಿಕೆಟ್ ಇತಿಹಾಸದಲ್ಲಿಯೇ ಈ 5 ಬ್ಯಾಟ್ಸ್ಮನ್ ಗಳಿಂದ ಮಾತ್ರ ಸಾಧ್ಯವಾಗಿದೆ!

ಟೆಸ್ಟ್ ಕ್ರಿಕೇಟ್ ನಲ್ಲಿ ಚೊಚ್ಚಲ ಪಂದ್ಯದಲ್ಲಿ ದ್ವೀಶತಕ (Double Hundred on Debut Test) ಬಾರಿಸುವದು ಬ್ಯಾಟ್ಸ್ಮನ್ ದೃಷ್ಟಿಯಿಂದ ದೊಡ್ಡ ಸಾಧನೆಯೇ ಆಗಿರುತ್ತದೆ. ಟೆಸ್ಟ್ ಕ್ರಿಕೇಟ್ ನಲ್ಲಿ ಯಶಸ್ಸು ಕಾಣುವದು ಪ್ರತಿಯೊಬ್ಬ ಕ್ರಿಕೇಟ್ ಆಟಗಾರರ ಕನಸಾಗಿರುತ್ತದೆ. ಕ್ರಿಕೆಟ್‌ನಲ್ಲಿ ಟೆಸ್ಟ್ ಫಾರ್ಮೇಟ್ ಇದು ಬ್ಯಾಟ್ಸ್‌ಮನ್ ನ ತನ್ನ ಕೌಶಲ್ಯ ಮತ್ತು ಸಮಯ ಪ್ರಜ್ಞೆಯನ್ನು ಸಾಬೀತುಪಡಿಸುವ ಒಂದು ಸ್ವರೂಪವಾಗಿದೆ.

ಟೆಸ್ಟ್ ಕ್ರಿಕೆಟ್‌ನಲ್ಲಿ ಯಶಸ್ವಿಯಾಗುವುದು ಬ್ಯಾಟ್ಸ್‌ಮನ್‌ನ ಕನಸಾಗಿರುತ್ತದೆ. ಬ್ಯಾಟ್ಸ್‌ಮನ್ ನೊಬ್ಬನು ಚೊಚ್ಚಲ ಟೆಸ್ಟ್‌ನಲ್ಲಿ ಶತಕ ಬಾರಿಸಿದರೆ ಅವರ ವೃತ್ತಿಜೀವನ ಅತ್ಯಂತ ಅದ್ಭುತ ಆರಂಭವೆಂದು ಪರಿಗಣಿಸಲಾಗುತ್ತದೆ. ಅಲ್ಲದೆ ಅವರ ಡೇಬ್ಯು ಮ್ಯಾಚ್ ನಲ್ಲಿ ದ್ವಿಶತಕ ಬಾರಿಸಿದರೆ ಸಾಕು ಅವರಿಗೆ ತಮ್ಮ ವೃತ್ತಿ ಜೀವನದಲ್ಲಿ ಎಲ್ಲಿಲ್ಲದ ಬೇಡಿಕೆ ಬರುತ್ತದೆ. 1877 ರಲ್ಲಿ ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ನಡುವೆ ಮೊದಲನೆಯ ಟೆಸ್ಟ್ ಪಂದ್ಯ ಆಡಲಾಯಿತು. ಅಂದಿನಿಂದ ಇಂದಿನವರೆಗೆ ಅಂದರೆ ಸುಮಾರು 143 ವರ್ಷಗಳಲ್ಲಿ ಕೇವಲ ಐದು ಆಟಗಾರರು ಮಾತ್ರ ತಮ್ಮ ಕರಿಯರ್ ನ ಮೊದಲನೆಯ ಟೆಸ್ಟ್ ಪಂದ್ಯದಲ್ಲಿ ದ್ವೀಶತಕ ಭಾರಿಸಿದ್ದಾರೆ.

ರೆಜಿನಾಲ್ಡ್ ಫೋಸ್ಟರ್

ಇಂಗ್ಲೆಂಡ್‌ನ ರೆಜಿನಾಲ್ಡ್ ಫೋಸ್ಟರ್ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಚೊಚ್ಚಲ ಟೆಸ್ಟ್‌ನಲ್ಲಿ ದ್ವಿಶತಕ ಬಾರಿಸಿದ ಮೊದಲ ಬ್ಯಾಟ್ಸ್‌ಮನ್ ಆಗಿದ್ದಾರೆ. ಫೋಸ್ಟರ್ 1903 ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಸಿಡ್ನಿ ಯಲ್ಲಿ ನಡೆದ ಮೊದಲನೆಯ ಟೆಸ್ಟ್‌ನಲ್ಲಿ 287 ರನ್ ಗಳಿಸಿ ಟೆಸ್ಟ್ ಪಂದ್ಯಕ್ಕೆ ಪಾದಾರ್ಪಣೆ ಮಾಡಿದರು. ಫೋಸ್ಟರ್ ತಮ್ಮ ಇನ್ನಿಂಗ್ಸ್‌ನಲ್ಲಿ 37 ಬೌಂಡರಿ ಬಾರಿಸಿದರು. ರೆಜಿನಾಲ್ಡ್ ಫೋಸ್ಟರ್ ಅವರನ್ನು ಟಿಪ್ ಫೋಸ್ಟರ್ ಎಂದೂ ಸಹ ಕರೆಯಲಾಗುತ್ತದೆ. ಅಂತರರಾಷ್ಟ್ರೀಯ ಇಂಗ್ಲೆಂಡ್ ಕ್ರಿಕೆಟ್ ತಂಡ ಮತ್ತು ಫುಟ್ಬಾಲ್ ಇಂಗ್ಲಿಷ್ ತಂಡದ ನಾಯಕತ್ವ ವಹಿಸಿದ ಏಕೈಕ ಪುರುಷ ಆಟಗಾರ ರೆಜಿನಾಲ್ಡ್ ಫೋಸ್ಟರ್ ಆಗಿದ್ದಾರೆ. ಫೋಸ್ಟರ್ ತಮ್ಮ ವೃತ್ತಿಜೀವನದಲ್ಲಿ 8 ಪಂದ್ಯಗಳನ್ನು ಆಡಿ 602 ರನ್ ಗಳಿಸಿದ್ದಾರೆ. ಅಲ್ಲದೆ ಈ ಡಬಲ್ ಶತಕವು ಅವರ ಟೆಸ್ಟ್ ವೃತ್ತಿಜೀವನದ ಕೊನೆಯ ಶತಕವೆಂದು ಪರಿಗಣಿಸಲಾಗಿದೆ.

ಲಾರೆನ್ಸ್ ರೋವ್


ವೆಸ್ಟ್ ಇಂಡೀಸ್‌ನ ಲಾರೆನ್ಸ್ ರೋವ್ 1972 ರಲ್ಲಿ ಟೆಸ್ಟ್ ಗೆ ಪಾದಾರ್ಪಣೆ ಮಾಡಿದರಲ್ಲದೆ ಅವರು ತಮ್ಮ ಚೊಚ್ಚಲ ಟೆಸ್ಟ್‌ನಲ್ಲಿ ದ್ವಿಶತಕ ಬಾರಿಸಿದರು. ಟೆಸ್ಟ್‌ ಇತಿಹಾಸದಲ್ಲಿ ಸುಮಾರು 69 ವರ್ಷಗಳ ನಂತರ ಎರಡನೆಯ ಬ್ಯಾಟ್ಸ್‌ಮನ್ ತನ್ನ ಚೊಚ್ಚಲ ಟೆಸ್ಟ್‌ನಲ್ಲಿ ಡಬಲ್ ಸೆಂಚುರಿ ಗಳಿಸುವಲ್ಲಿ ಯಶಸ್ವಿಯಾದರು.
1972 ರ ಕಿಂಗ್ಸ್ಟನ್ ಟೆಸ್ಟ್ನಲ್ಲಿ ಲಾರೆನ್ಸ್ ರೋವ್ ಅವರು ನ್ಯೂಜಿಲೆಂಡ್ ವಿರುದ್ಧ 214 ರನ್ ಗಳಿಸಿದ್ದರು. ಅಷ್ಟೇ ಅಲ್ಲ, ಲಾರೆನ್ಸ್ ರೋವ್ ತಮ್ಮ ಎರಡನೇ ಇನ್ನಿಂಗ್ಸ್‌ನಲ್ಲಿ ಮತ್ತೇ ಶತಕ ಬಾರಿಸಿದರು. ಟೆಸ್ಟ್ ವೃತ್ತಿಜೀವನದಲ್ಲಿ, ಲಾರೆನ್ಸ್ 30 ಪಂದ್ಯಗಳಲ್ಲಿ ಒಟ್ಟು 7 ಶತಕಗಳನ್ನು ಬಾರಿಸಿದ್ದಾರೆ. ರೋವ್ ಅವರು ತಮ್ಮ ವೃತ್ತಿಜೀವನದ ಕೊನೆಯ ಟೆಸ್ಟ್ ನ್ಯೂಜಿಲೆಂಡ್ ವಿರುದ್ಧ 1980 ರಲ್ಲಿ ಆಡಿದ್ದಾರೆ.

ಬ್ರೆಂಡನ್ ಕೆರುಪ್ಪು


ಶ್ರೀಲಂಕಾದ ಬ್ರೆಂಡನ್ ಕೆರುಪ್ಪು 1987 ರಲ್ಲಿ ನ್ಯೂಜಿಲೆಂಡ್ ವಿರುದ್ಧದ ಕೊಲಂಬೊ ಟೆಸ್ಟ್ ಪಂದ್ಯದಲ್ಲಿ ಪಾದಾರ್ಪಣೆ ಮಾಡಿದರು. ಆ ಪಂದ್ಯದಲ್ಲಿ ಅಜೇಯ 201 ರನ್ ಗಳಿಸಿದರು. ಬ್ರೆಂಡನ್ ಕೆರುಪ್ಪು ತಮ್ಮ ಟೆಸ್ಟ್ ವೃತ್ತಿಜೀವನದಲ್ಲಿ 4 ಪಂದ್ಯಗಳನ್ನು ಆಡಿದರು ಮತ್ತು 1 ಶತಕವನ್ನು ಗಳಿಸುವಲ್ಲಿ ಯಶಸ್ವಿಯಾದರು. ಆದರೆ, ಕೆರುಪ್ಪು ತಮ್ಮ ವೃತ್ತಿಜೀವನದಲ್ಲಿ ಟೆಸ್ಟ್ ಪಂದ್ಯಗಳಿಗಿಂತ ಹೆಚ್ಚು ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಅವರು ಶ್ರೀಲಂಕಾ ಪರ 54 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಈ ಅವಧಿಯಲ್ಲಿ ಅವರು 4 ಅರ್ಧಶತಕಗಳನ್ನು ಒಳಗೊಂಡಂತೆ ಒಟ್ಟು 1022 ರನ್ ಗಳಿಸಿದ್ದಾರೆ.

ಮ್ಯಾಥ್ಯೂ ಸಿಂಕ್ಲೇರ್


ಚೊಚ್ಚಲ ಟೆಸ್ಟ್‌ನಲ್ಲಿ ಡಬಲ್ ಸೆಂಚುರಿ ಗಳಿಸಿದ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ನ್ಯೂಜಿಲೆಂಡ್‌ನ ಮ್ಯಾಥ್ಯೂ ಸಿಂಕ್ಲೇರ್ ಕೂಡಾ ತಮ್ಮ ಹೆಸರನ್ನು ಗಿಟ್ಟಿಸಿಕೊಂಡಿದ್ದಾರೆ. ಮ್ಯಾಥ್ಯೂ 1999 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ವೆಲ್ಲಿಂಗ್ಟನ್ ಟೆಸ್ಟ್ನಲ್ಲಿ 214 ರನ್ ಗಳಿಸಿದ್ದರು. ಸಿಂಕ್ಲೇರ್ ಅವರು ತಮ್ಮ ಚೊಚ್ಚಲ ಇನ್ನಿಂಗ್ಸ್‌ನಲ್ಲಿ 447 ಎಸೆತಗಳನ್ನು ಎದುರಿಸಿ ಅದರಲ್ಲಿ 22 ಬೌಂಡರಿಗಳನ್ನು ಹೊಡೆದಿದ್ದರು. ಚೊಚ್ಚಲ ಪಂದ್ಯದಲ್ಲಿ ಉತ್ತಮ ಆಟವಾಡಿದ ಸಿಂಕ್ಲರ್ ಅವರು ತಮ್ಮ ವೃತ್ತಿ ಜೀವನದಲ್ಲಿ ಒಟ್ಟು 32 ಪಂದ್ಯಗಳನ್ನು ಆಡಿದ್ದಾರೆ ಅದರಲ್ಲಿ 2 ಶತಕಗಳನ್ನು ಗಳಿಸಿದ್ದಾರೆ ಅಂದರೆ ಚೊಚ್ಚಲ ಪಂದ್ಯದಲ್ಲಿ ದ್ವೀಶತಕ ಹಿಡಿದುಕೊಂಡು ಒಟ್ಟು ಮೂರು ಶತಕಗಳನ್ನು ತಮ್ಮದಾಗಿಸಿ ಕೊಂಡಿದ್ದಾರೆ.

ಜೆಕ್ಸ್ ರುಡಾಲ್ಫ್


ದಕ್ಷಿಣ ಆಫ್ರಿಕಾದ ಜೆಕ್ಸ್ ರುಡಾಲ್ಫ್ ಇದುವರೆಗಿನ ಟೆಸ್ಟ್ ಚೊಚ್ಚಲ ಪಂದ್ಯದಲ್ಲಿ ದ್ವಿಶತಕ ಬಾರಿಸಿದ ಐದನೇ ಬ್ಯಾಟ್ಸ್‌ಮನ್ ಆಗಿದ್ದಾರೆ. 2003 ರಲ್ಲಿ ರುಡಾಲ್ಫ್ ಬಾಂಗ್ಲಾದೇಶ ವಿರುದ್ಧ ನಡೆದ ತಮ್ಮ ಚೊಚ್ಚಲ ಟೆಸ್ಟ್ ಪಂದ್ಯದಲ್ಲಿ ಅಜೇಯ 222 ರನ್ ಗಳಿಸಿದರು. ರುಡಾಲ್ಫ್ ನಂತರ ಇದುವರೆಗೆ ಯಾವುದೇ ಬ್ಯಾಟ್ಸ್‌ಮನ್ ಚೊಚ್ಚಲ ಟೆಸ್ಟ್‌ನಲ್ಲಿ ಡಬಲ್ ಸೆಂಚುರಿ ಗಳಿಸಿಲ್ಲ. ಆದುದರಿಂದ ರುಡಾಲ್ಫ್ ಅವರು ಚೊಚ್ಚಲ ಟೆಸ್ಟ್ ಪಂದ್ಯದಲ್ಲಿ ದ್ವೀಶತಕ ಭಾರಿಸಿದ ಕೊನೆಯ ಆಟಗಾರರಾಗಿದ್ದಾರೆ. ರುಡಾಲ್ಫ್ ತಮ್ಮ ವೃತ್ತಿಜೀವನದಲ್ಲಿ 48 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಅದರಲ್ಲಿ 6 ಶತಕಗಳನ್ನು ಮತ್ತು 11 ಅರ್ಧಶತಕಗಳನ್ನು ಗಳಿಸಿದ್ದಾರೆ.