ಯಾವ ಆವಿಷ್ಕಾರ ಸಿವಿ ರಾಮನ್ ಅವರಿಗೆ ನೊಬೆಲ್ ನೀಡಿತ್ತೋ, ಅದೇ ಆವಿಷ್ಕಾರ ಇಂದು ಮಂಗಳನ ಅಂಗಳದಲ್ಲಿ ಜೀವನದ ಶೋಧನೆ ನಡೆಸಿದೆ
ಫೆಬ್ರವರಿ 28, 1928 ರಲ್ಲಿ ವಿಶ್ವದ ಸುಪ್ರಸಿದ್ಧ ವಿಜ್ಞಾನಿಯಾದ ಸರ್ ಸಿ ವಿ ರಾಮನ್ ಅವರು ತನ್ನ ರಾಮನ್ ಎಫೆಕ್ಟ್ ಸಿದ್ಧಾಂತವನ್ನು ಆವಿಷ್ಕಾರ ಮಾಡಿದರು. ಈ ಆವಿಷ್ಕಾರದ ನಂತರ ಅವರು ಭಾರತವು ವಿಶ್ವ ನಾಗರಿಕತೆಯನ್ನು ಉನ್ನತಿಕರಣಗೊಳಿಸುವ ಕೌಶಲ್ಯವನ್ನು ಪಡೆದಿದೆ ಎಂಬುದನ್ನು ಮತ್ತೊಮ್ಮೆ ಇಡೀ ಜಗತ್ತಿನ ಮುಂದೆ ಸಾರಿದರು. ಅವರ ಈ ಆವಿಷ್ಕಾರಕ್ಕೆ ನೊಬೆಲ್ ಪ್ರಶಸ್ತಿ ಕೂಡ ಅವರನ್ನು ಅರಸಿ ಬಂದಿತ್ತು. ಅಲ್ಲದೇ ನೊಬೆಲ್ ಪ್ರಶಸ್ತಿ ಪಡೆದ ಪ್ರಪ್ರಥಮ ಭಾರತೀಯ ವಿಜ್ಞಾನಿ ಎನಿಸಿಕೊಂಡರು. ವಿಶೇಷ ಎಂದರೆ ಇಂದೂ ಕೂಡಾ ಭೂಮಿಯ ಹೊರತಾಗಿ ಅನ್ಯ ಗ್ರಹಗಳಲ್ಲಿ ಜೀವನ ಇದೆ ಎನ್ನುವುದನ್ನು ಕಂಡುಹಿಡಿಯಲು ರಾಮನ್ ಎಫೆಕ್ಟ್ ಸಿದ್ಧಾಂತವನ್ನೇ ಬಳಸಿಕೊಳ್ಳಲಾಗುತ್ತಿದೆ. ಅಮೇರಿಕಾದ ಬಾಹ್ಯಾಕಾಶ ಸಂಸ್ಥೆ ನಾಸಾ ಮಂಗಳ ಗ್ರಹದ ಮೇಲೆ ಪರ್ಸೇವೆರನ್ಸ್ ರೋವರ್ ಎನ್ನುವ ಅಂತರಿಕ್ಷ ವಾಹನವನ್ನು ಇಳಿಸಿದೆ. ಈ ಯಂತ್ರದಲ್ಲಿ ಅಳವಡಿಸಲಾಗಿರುವ ಒಂದು ವಿಶೇಷ ಉಪಕರಣ ಶೆರ್ಲಾಕ್ ರಾಮನ್ ಎಫೆಕ್ಟ್ ಆಧಾರದಲ್ಲೇ ಮಂಗಳ ಗ್ರಹದ ಮೇಲೆ ಹಿಂದೆ ಜೀವನ ಇತ್ತೇನು? ಎನ್ನುವುದನ್ನು ಪತ್ತೆ ಹಚ್ಚಲಿದೆ.

ಶೆರ್ಲಾಕ್ ನ ಪ್ರಧಾನ ತನಿಖಾಧಿಕಾರಿ ಲೂಥರ್ ಬೀಗಲ್ ಅವರ ಪ್ರಕಾರ ರಾಮನ್ ಅವರು ಹಡಗಿನಲ್ಲಿ ಸಂಚಾರ ಮಾಡುವಾಗ ಸಾಗರದ ನೀರು ಏಕೆ ನೀಲಿಯಾಗಿರುತ್ತದೆ ಎಂಬುದನ್ನು ತಿಳಿದುಕೊಳ್ಳಲು ರಾಮನ್ ಬಯಸಿದ್ದರು. ರಾಮನ್ ಅವರ ಪ್ರಕಾರ ಯಾವುದೇ ಒಂದು ಮೇಲ್ಮೈನಲ್ಲಿ ಬೆಳಕಿನ ಕಿರಣವನ್ನು ಮೂಡಿಸಿದರೆ, ಅದರಿಂದ ಹರಡುವ ಬೆಳಕಿನ ಕಿರಣಗಳು, ಬೆಳಕಿನ ತರಂಗಾಂತರವು ವಸ್ತುವಿನ ಮೇಲ್ಮೈಗೆ ಅನುಗುಣವಾಗಿ ಬದಲಾಗುತ್ತದೆ ಎಂದು ಅವರು ಭಾವಿಸಿದ್ದರು. ಇದನ್ನು ರಾಮನ್ ಸ್ಕ್ಯಾಟರಿಂಗ್ ಎಂದು ಕರೆಯಲಾಗುತ್ತದೆ. ಡೀಪ್ – UV ರಾಮನ್ ಉಪಕರಣವನ್ನು ನಾಸಾ ಹಾಗೂ ಅಮೆರಿಕಾದ ರಕ್ಷಣಾ ಸಚಿವಾಲಯವು ಹಲವು ವರ್ಷಗಳಿಂದ ಫಾರ್ಮಾ, ತ್ಯಾಜ್ಯ ನೀರಿನಿಂದ ಹಿಡಿದು ವೈರಸ್ ಪರೀಕ್ಷೆಗಳ ವರೆಗೆ ಇದನ್ನು ಬಳಸಿಕೊಳ್ಳುತ್ತಿದೆ.
ಶೆರ್ಲಾಕ್ ಉಪಕರಣದೊಳಗೆ ಅಳವಡಿಸಲಾಗಿರುವ ಫೋಟಾನ್ ಸಿಸ್ಟಮ್ ಲೇಸರ್ ಮೂಲಕ ಮಂಗಳ ಗ್ರಹದಲ್ಲಿನ ಹಲವು ಈ ಹಿಂದೆ ಯಾವ ಸುಳಿವುಗಳನ್ನು ಪತ್ತೆ ಹಚ್ಚಲು ಕಷ್ಟಕರವಾಗಿತ್ತೋ, ಅಂತಹ ಸುಳಿವು ಗಳನ್ನು ಅಥವಾ ಕುರುಹುಗಳನ್ನು ಪತ್ತೆ ಹಚ್ಚವ ಪ್ರಯತ್ನವನ್ನು ಮಾಡಲಾಗುತ್ತಿದೆ.

ಡೀಪ್-UV ಫೋಟಾನ್ ಗಳು ಅನೇಕ ಅನೇಕ ವಸ್ತುಗಳ ಜೊತೆ ಸಂವಹನವನ್ನು, ಅದರಲ್ಲೂ ವಿಶೇಷವಾಗಿ ಸಾವಯವ ಅಣುಗಳ ಜೊತೆ ಸಂವಹನವನ್ನು ನಡೆಸುತ್ತವೆ. ಇದು ಇನ್ಫ್ರಾರೆಡ್ ಅಥವಾ ವಿಜಿಬಲ್ ಲೈಟ್ ಲೇಸರ್ ಗಳಿಗೆ ಹೋಲಿಕೆ ಮಾಡಿದರೆ ಅವುಗಳಿಗಿಂತ ಹೆಚ್ಚು ಸೂಕ್ಷ್ಮ ಹಾಗೂ ನಿಖರವಾಗಿ ಕೆಲಸವನ್ನು ಮಾಡುತ್ತದೆ. ರಾಮನ್ ಸ್ಪೆಕ್ಟ್ರೋಸ್ಕೋಪಿ, ಧಾತುಗಳನ್ನು ಘರ್ಷಿಸಿ ವಿಭಜಿಸಲ್ಪಡುವ ಬೆಳಕನ್ನು ಸೂಕ್ಷ್ಮವಾಗಿ ಗಮನಿಸುತ್ತದೆ. ಇದನ್ನೇ ರಾಮನ್ ಸ್ಕಾಟರಿಂಗ್ ಎಂದು ಕರೆಯಲಾಗುತ್ತದೆ. ಮಾಲಿಕ್ಯೂಲ್ಸ್ ನ ಪ್ರಭಾವದಿಂದ ಇದರ ಕೆಲವು ಭಾಗವು ಬೇರೆ ತರಾಂಗಂತರದಲ್ಲಿ ಇರುತ್ತದೆ. ತರಾಂಗಾಂತರದ ಬದಲಾವಣೆಯಿಂದ ಸ್ಯಾಂಪಲ್ ಮೆಟಿರಿಯಲ್ ನಲ್ಲಿ ಇರುವ ವಸ್ತುಗಳನ್ನು ಗುರುತಿಸಬಹುದಾಗಿದೆ. ಯುವಿ ಲೈಟ್ ನ ಹೆಚ್ಚಿನ ಎನರ್ಜಿಯ ಫೋಟಾನ್, ಆರ್ಗೆನಿಕ್ ಅಣುಗಳಲ್ಲಿ ಕಡಿಮೆ ಆವರ್ತನ ಹೊಂದಿರುವ ಬೆಳಕಿಗೆ ಹೋಲಿಕೆ ಮಾಡಿದಾಗ ಹೆಚ್ಚು ರಾಮನ್ ಸ್ಕ್ಯಾಟರಿಂಗ್ ಅನ್ನು ಉತ್ಪತ್ತಿ ಮಾಡುತ್ತದೆ.
ಶೆರ್ಲಾಕ್ ಯುವಿ ಸ್ಪೆಕ್ಟ್ರೋಮೀಟರ್ ಲೇಸರ್ ಮತ್ತು ಕ್ಯಾಮೆರಾ ಹೊಂದಿದೆ. ಇದು ಜೆಜೊರೋ ಕ್ರೇಟರ್ ನಲ್ಲಿ ಸಾವಯವ ವಸ್ತುಗಳನ್ನು ಹಾಗೂ ಖನಿಜಗಳನ್ನು ಪತ್ತೆ ಹಚ್ಚುತ್ತದೆ. ಇವುಗಳ ಸಹಾಯದಿಂದ ವಿಜ್ಞಾನಿಗಳು ಈ ಹಿಂದೆ ಈ ಗ್ರಹದ ಮೇಲೆ ಜೀವದ ಅಸ್ತಿತ್ವ ಇತ್ತೋ, ಇಲ್ಲವೋ ಎಂಬುದನ್ನು ಪತ್ತೆ ಹಚ್ಚುವ ಕಾರ್ಯವನ್ನು ಮಾಡುವರು. ಫ್ಲೋರೊಸೆನ್ಸ್ ಮತ್ತು ರಾಮನ್ ಸ್ಪೆಕ್ಟ್ರೋಸ್ಕೋಪಿ ಸಹಾಯದಿಂದ ಮಂಗಳ ಗ್ರಹದ ಮೇಲ್ಮೈಯಲ್ಲಿರುವ ವಸ್ತುಗಳನ್ನು ಶೆರ್ಲಾಕ್ ವಿಶ್ಲೇಷಣೆ ಮಾಡುತ್ತದೆ. ಇದರಿಂದ ಜೆಜೆರೋನಲ್ಲಿ ನೀರು ಯಾವಾಗ ತುಂಬಿತ್ತು ಎನ್ನುವುದನ್ನು ತಿಳಿಯಲು ಸಾಧ್ಯವಾಗುತ್ತದೆ. ಖನಿಜ ಮತ್ತು ಸಾವಯವ ನಕ್ಷೆಗಳು ಇತರೆ ಅಂಶಗಳೊಂದಿಗೆ ಮಾದರಿಗಳನ್ನು ಸಂಗ್ರಹಿಸುವಲ್ಲಿ ತಮ್ಮ ಕೊಡುಗೆ ನೀಡುತ್ತವೆ. ಅನಂತರ ಈ ಸ್ಯಾಂಪಲ್ ಅಥವಾ ಮಾದರಿಗಳನ್ನು ಭೂಮಿಗೆ ತರಲಾಗುವುದು.

ಗೊಡ್ಡಾರ್ಡ್ ನ ಪ್ರಧಾನ ತನಿಖಾಧಿಕಾರಿ ಆ್ಯಂಡ್ರೆಸ್ ಗ್ರೂಬಿಕ್ ಅವರು ರಾಮನ್-ಮಾಸ್ ಸ್ಪೆಕ್ಟ್ರೋಮೀಟರ್ (ರಾಮಾಸ್) ಗಾಗಿ ಪಿಕಾಸೊ ಪ್ರಶಸ್ತಿಯನ್ನು ಪಡೆದಿದ್ದಾರೆ. ರಾಮನ್ ಸ್ಪೆಕ್ಟ್ರೋಸ್ಕೋಪಿ ಮತ್ತು ಮಾಸ್ ಸ್ಪೆಕ್ಟ್ರೋಸ್ಕೋಪಿ ವಿಭಿನ್ನ ಅಣುಗಳ ಮೂಲಕ ನಿರ್ಧಿಷ್ಟವಾದ ಖನಿಜಗಳನ್ನು ಗುರುತಿಸುವ ವಿಶ್ಲೇಷಣಾತ್ಮಕ ರಾಸಾಯನಿಕ ತಂತ್ರಗಳಾಗಿವೆ. ಇವುಗಳ ಸಹಾಯದಿಂದ ಸೌರಮಂಡಲದಲ್ಲಿನ ಅನ್ಯ ಗ್ರಹಗಳಲ್ಲಿ ಕೂಡಾ ಜೀವಿಗಳು ಇದ್ದವೇ? ಎಂಬುದನ್ನು ತಿಳಿದುಕೊಳ್ಳಲು ನೆರವಾಗುತ್ತದೆ ಎನ್ನಲಾಗಿದೆ. ಈಗ ಪ್ರಸ್ತುತ ಮಂಗಳ ಗ್ರಹದ ಮೇಲೆ ಯಾವುದೇ ಬ್ಯಾಕ್ಟೀರಿಯ ಕಂಡು ಹಿಡಿಯುವ ಸಾಧ್ಯತೆ ಇಲ್ಲ, ಆದರೆ ಅದರ ಮೇಲ್ಮೈನಲ್ಲಿ ಯಾವುದಾದರೂ ಸಾವಯವ ಕುರುಹನ್ನು ಶೆರ್ಲಾಕ್ ಸಹಾಯದಿಂದ ಪಡೆಯಬಹುದು ಎನ್ನಲಾಗಿದೆ.