ಯುಎಇ ಯಲ್ಲಿ 50° ಸೆಲ್ಷಿಯಸ್ ದಾಟಿದ ಉಷ್ಣಾಂಶ: ಸುಡುವ ಬಿಸಿ ತಗ್ಗಿಸಲು ಡ್ರೋನ್ ಬಳಿಸಿ ಕೃತಕ ಮಳೆ ತರಿಸಿದ ಸರ್ಕಾರ
ಭೂಮಿಯ ಮೇಲೆ ಅತಿ ಹೆಚ್ಚು ಬಿಸಿಯಾದ ಪ್ರದೇಶಗಳಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್ ಕೂಡಾ ಒಂದಾಗಿದೆ. ಇಲ್ಲಿ ಉಷ್ಣತೆಯು 50 ಡಿಗ್ರಿ ಸೆಲ್ಸಿಯಸ್ ಗಿಂತಲೂ ಅಧಿಕವಾಗಿತ್ತು ಎನ್ನಲಾಗಿದೆ. ಸುಡುವ ಶಾಖವನ್ನು ಕಡಿಮೆ ಮಾಡಲು ಹಾಗೂ ಭೂಮಿಗೆ ಮತ್ತು ಜನರಿಗೆ ತಂಪನ್ನು ಎರೆಯುವ ಸಲುವಾಗಿ ಇಲ್ಲಿ ಒಂದು ಹೊಸ ತಂತ್ರವನ್ನು ಈಗ ಬಳಸಲಾಗುತ್ತಿದೆ. ಬ್ರಿಟನ್ನಿನ ಯುನಿವರ್ಸಿಟಿ ಆಫ್ ರೀಡಿಂಗ್ ನ ಸಹಯೋಗದಲ್ಲಿ ಡ್ರೋನ್ ಟೆಕ್ನಾಲಜಿಯ ಸಹಾಯದಿಂದ ಈ ಪ್ರದೇಶದಲ್ಲಿ ಕೃತಕವಾಗಿ ಮಳೆ ಬರುವಂತೆ ಮಾಡಲಾಗುತ್ತಿದೆ. ಈ ತಂತ್ರದಿಂದ ಸಿಕ್ಕಂತಹ ಯಶಸ್ಸನ್ನು ಕುರಿತಾದ ವಿಡಿಯೋ ತುಣುಕನ್ನು ರಾಷ್ಟ್ರದ ರಾಷ್ಟ್ರೀಯ ಹವಾಮಾನ ಕೇಂದ್ರವು ಹಂಚಿಕೊಂಡಿದೆ.
ಈ ತಂತ್ರಜ್ಞಾನದಿಂದ ಮೋಡಗಳಿಗೆ ವಿದ್ಯುತ್ ಶಾಕ್ ನೀಡಲಾಗುತ್ತದೆ. ಆಗ ಮಳೆ ಉಂಟಾಗುತ್ತದೆ. ಈ ತಂತ್ರವನ್ನು ಪ್ರಚೋದಕವಾಗಿ ಬಳಸುವುದರಿಂದ ಮಳೆಯ ಪ್ರಮಾಣವನ್ನು ಸಹ ಹೆಚ್ಚಿಸಬಹುದು ಎನ್ನುವ ನಿರೀಕ್ಷೆಯಂತೆ ಈಗ ಮಾಡಲಾಗಿದೆ. ಡ್ರೋನ್ ತಂತ್ರಜ್ಞಾನದಿಂದ ಮೋಡಗಳಿಗೆ ವಿದ್ಯುತ್ ಶಾಕ್ ನೀಡಿದಾಗ ಅವು ಒಟ್ಟಿಗೆ ಸೇರಲು ಪ್ರಾರಂಭಿಸುತ್ತವೆ. ಆಗ ಅವುಗಳು ಘನೀಕರಿಸಿ, ಅವುಗಳ ಘರ್ಷಣೆಯಿಂದಾಗಿ ಮಳೆ ಬೀಳುತ್ತದೆ. ಇಲ್ಲಿನ ಹವಾಮಾನ ಇಲಾಖೆಯು ಮೋಡಬಿತ್ತನೆ ಯಿಂದಲೂ ಮಳೆಯ ಪ್ರಮಾಣವನ್ನು ಹೆಚ್ಚಿಸಬಹುದು ಎಂದು ಹೇಳಿದೆ.
ಯುಎಇ ವಿಶ್ವದ ಅತಿ ಹೆಚ್ಚು ಉಷ್ಣಾಂಶವನ್ನು ಹೊಂದಿರುವ ಹತ್ತು ದೇಶಗಳಲ್ಲಿ ಒಂದಾಗಿದೆ. ಇಲ್ಲಿ ವಾರ್ಷಿಕ ಮಳೆಯ ಪ್ರಮಾಣ ಕೇವಲ ಮೂರು ಇಂಚುಗಳಷ್ಟು ಆಗಿದೆ. ಅದಕ್ಕಾಗಿ ಹೆಚ್ಚಿನ ಮಳೆಯನ್ನು ಪಡೆಯುವುದಕ್ಕಾಗಿ 15 ದಶಲಕ್ಷ ಡಾಲರ್ಗಳ ಮೌಲ್ಯದ ಯೋಜನೆಗಳನ್ನು ಸಿದ್ಧಪಡಿಸಲಾಗುತ್ತಿದೆ. ಅದರ ಭಾಗವಾಗಿ ಮೋಡ ಬಿತ್ತನೆಯನ್ನು ಸೇರಿಸಲಾಗಿದೆ. ಇದಕ್ಕಿಂತ ಮೊದಲು ಬ್ರಿಟನ್ನಿನ ಯುನಿವರ್ಸಿಟಿ ಆಫ್ ರೀಡಿಂಗ್ ನ ಪ್ರೊಫೆಸರ್ ಆದಂತಹ ಮಾರ್ಟಿನ್ ಅಂಬೋಮ್ ಅವರು ಯುಎಇ ಯಲ್ಲಿ ಮಳೆಗೆ ಮೋಡಗಳ ಪ್ರಮಾಣವು ಪರ್ಯಾಪ್ತ ವಾಗಿದೆ ಎಂದು ತಿಳಿಸಿದ್ದಾರೆ.
ವಿಡಿಯೋ ನೋಡಿ
طريق القوع جنوب #العين #أبوظبي #المركز_الوطني_للأرصاد #أمطار_الخير #أصدقاء_المركز_الوطني_للأرصاد #حالة_الطقس #حالة_جوية #هواة_الطقس #إدريس_المرزوقي #عواصف_الشمال pic.twitter.com/CC6j0TNsKp
— المركز الوطني للأرصاد (@NCMS_media) July 21, 2021
ಅಲ್ಲದೇ ಡ್ರೋನ್ ತಂತ್ರಜ್ಞಾನದಿಂದ ನೀರಿನ ಹನಿಗಳು ಒಂದಕ್ಕೊಂದಕ್ಕೆ ಅಂಟಿಕೊಳ್ಳಲು ನೆರವಾಗುತ್ತದೆ. ಈ ಹನಿಗಳು ದೊಡ್ಡದು ಮತ್ತು ಭಾರವಾದಾಗ ಮಳೆಯ ರೂಪದಲ್ಲಿ ಭೂಮಿಗೆ ತಲುಪುತ್ತದೆ ಎಂದಿದ್ದಾರೆ.
ಈ ಕಾರ್ಯಕ್ರಮದ ನಿರ್ದೇಶಕರಾದ ಅಲಯಾ ಅಲ್-ಮಜ್ರೊಯ್ ಅವರು ಅರಬ್ ನ್ಯೂಸ್ ಗೆ ಮಾಹಿತಿಯನ್ನು ನೀಡುತ್ತಾ ಮೋಡಗಳಿಗೆ ವಿದ್ಯುತ್ ಶಾಕ್ ನೀಡುವ ಡ್ರೋನ್ ಗಳು ಗಾಳಿಯಲ್ಲಿ ತೇಲಿ ಹೋಗಿ, ಮೋಡಗಳಲ್ಲಿ ಒಂದು ಸಂಚಲನವನ್ನು ಸೃಷ್ಟಿಸುತ್ತದೆ. ಈ ಸಂಚಲನೆಯಿಂದ ಮಳೆ ಉಂಟಾಗುತ್ತದೆ ಎಂದು ವಿವರಣೆ ನೀಡಿದ್ದಾರೆ.
ಈ ತಂತ್ರಜ್ಞಾನ ಬಳಕೆ ಮಾಡುವುದಕ್ಕಿಂತ ಮೊದಲೇ ಮೋಡಗಳ ಸ್ಥಿತಿ ಹೇಗಿದೆ ಎಂಬುದನ್ನು ನಾವು ತಿಳಿದುಕೊಳ್ಳಬೇಕು ಎಂದು ಅವರು ಹೇಳಿದ್ದಾರೆ. ಮೋಡಗಳು ರೂಪುಗೊಂಡಿರುವುದು ಕಂಡಾಗ ಡ್ರೋನ್ ಗಳನ್ನು ಚಾರ್ಜ್ ಮಾಡಲಾಗುತ್ತದೆ. ಹಾಗೆಂದು ಪ್ರತಿ ಬಾರಿಯೂ ಡ್ರೋನ್ ಗಳನ್ನು ಚಾರ್ಜ್ ಮಾಡಿದಾಗಲೂ ಮಳೆ ಬೀಳುತ್ತದೆ ಎಂದು ಹೇಳಲಾಗುವುದಿಲ್ಲ ಎಂದಿರುವ ಅವರು, ಬಹಳಷ್ಟು ಸಂದರ್ಭದಲ್ಲಿ ಈ ಚಾರ್ಜ್ ನ ನಂತರ ಮಳೆ ಬೀಳುವುದನ್ನು ಕೂಡಾ ನಿರಾಕರಿಸಲು ಸಾಧ್ಯವಿಲ್ಲ ಎಂದಿದ್ದಾರೆ.