“ರಾತ್ರಿ ದನದ ಕೊಟ್ಟಿಗೆಯಲ್ಲಿಯೇ ಹೆರಿಗೆಯಾಯಿತು. ಅದೆಷ್ಟೇ ಚೀರಾಡಿದರೂ ಸಹಾಯಕ್ಕೆ ಒಬ್ಬರೂ ಬರಲಿಲ್ಲ ಆದರೆ”…: ಸಿಂಧೂತಾಯಿ ಸಪಕಾಳ!!

ಚಿಕ್ಕ ವಯಸ್ಸಿನಲ್ಲಿಯೇ ಮದುವೆ. ಮದುವೆಯಾದ ಕೆಲ ವರ್ಷಗಳಲ್ಲಿ ಗಂಡ ಇವರನ್ನು ಮನೆಯಿಂದ ಹೊರಹಾಕಿದ. ತವರಿಗೆ ಹೋದರೆ, ಅಲ್ಲಿದ್ದವರು ರಪ್ಪನೆ ಬಾಗಿಲು ಹಾಕಿಬಿಟ್ಟರು. ‘ಶನೀ,
ನೀನು ರೈಲಿಗೆ ಸಿಕ್ಕಿ ಸಾಯಬಾರದೇನೇ…’ ಅಂದರು.
ಹೀಗೆಲ್ಲ ಅನ್ನಿಸಿಕೊಂಡ ಸಿಂಧೂತಾಯಿ, ಅನಂತರದಲ್ಲಿ
ಮಹಾನ್ ಸಾಧಕಿಯಾಗಿ ಬೆಳೆದುನಿಂತರಲ್ಲ;
ಅದೇ ಒಂದು ಸ್ವಾರಸ್ಯಕರ ಕಥೆ. ಅದನ್ನು ಕೇಳಿದರೆ
ಸಂತೋಷವಾಗುತ್ತದೆ. ಅದರಂತೆ ದುಃಖವೂ
ಆಗುತ್ತದೆ. ಇದ್ದಕ್ಕಿದ್ದಂತೆ ಕಣ್ಣುಂಬಿಕೊಳ್ಳುತ್ತದೆ.

ಅಮ್ಮಾ, ನಿನ್ನ ಸಾಧನೆಗೆ ಶರಣು ಎಂದು ಮನಸ್ಸು
ಸಂಭ್ರಮದಿಂದ ಪಿಸುಗುಡುತ್ತದೆ. ಯಾಕೆ ಗೊತ್ತೆ ?
ಗಂಡನಿಗೂ, ತವರುಮನೆಯವರಿಗೂ ಬೇಡವಾಗಿ
ಅನಾಥೆಯಂತೆ ಬೀದಿಗೆ ಬಂದ ಸಿಂಧೂತಾಯಿ ಈಗ
ಸಾವಿರ ಮಕ್ಕಳ ತಾಯಿ ! ಇವರು ದಿಕ್ಕಿಲ್ಲದವರ ಪಾಲಿನ
ಆಧಾರಸ್ತಂಭ, ಅನಾಥರ ಅಮ್ಮ ಎಂದೇ ಇವರನ್ನು
ಗುರುತಿಸಲಾಗುತ್ತದೆ. ಮಹಿಳೆಯೊಬ್ಬಳು ಮನಸ್ಸು
ಮಾಡಿದರೆ ಏನೆಲ್ಲಾ ಸಾಧಿಸಬಹುದು’ ಎಂಬ ಮಾತಿಗೆ
ಉದಾಹರಣೆಯಂತಿರುವ ಸಿಂಧೂತಾಯಿ, ತಮ್ಮ ಹೋರಾಟದ ಬದುಕಿನ ಮೊದಲ ಪುಟಗಳನ್ನು ಹೀಗೆ
ತೆರೆದಿಡುತ್ತಾರೆ.

“ಮಹಾರಾಷ್ಟ್ರದ ವಿದರ್ಭ ಪ್ರಾಂತ್ಯದಲ್ಲಿನ
ಪಿಂಪರಿಮೆಫೆ ಎಂಬ ಒಂದು ಹಳ್ಳಿನನ್ನ ಹುಟ್ಟೂರು.ನನ್ನ
ಹೆತ್ತವರಿಗೆ ಮೊದಲು ಮೂರುಜನ ಗಂಡುಮಕ್ಕಳಿದ್ದರು.
ನಾಲ್ಕನೇಯ ಮಗುವೂ ಗಂಡು ಮಗುವಾಗಬೇಕೆಂಬ
ಹಂಬಲ ಇತ್ತಂತೆ. ಆದರೆ, ನಾಲ್ಕನೆಯ ಮಗುವಾಗಿ,
ನಾನು ಹುಟ್ಟಿದ್ದೆ! ಹೆಣ್ಣುಮಗು ಎಂಬ ಸುದ್ದಿ
ಕೇಳಿದ ತಕ್ಷಣ, ಯಾಕಾದ್ರೂ ಹುಟ್ಟಿತೋ ಅನಿಷ್ಟ ಎಂದು
ಎಲ್ಲರೂ ಮೂಗು ಮುರಿದರಂತೆ. ಅನಂತರದಲ್ಲಿ
ನನಗೆ ಸಿಂಧೂತಾಯಿ ಎಂದು ನಾಮಕರಣವಾಯಿತು
ನಿಜ. ಆದರೆ, ಮನೆಮಂದಿಯೆಲ್ಲ ನನಗೆ ಚಿಂದಿ
ಎಂದು ಕರೆಯತೊಡಗಿದರು. (ಚಿಂದಿ ಅ೦ದರೆ
ಮರಾಠಿಯಲ್ಲಿ ಬೇಡವಾದ ವಸ್ತು, ಹರಿದುಹೋದ
ಸೀರೆಯ ತುಂಡು ಎಂದು ಅರ್ಥವಿದೆ). ತುತ್ತು
ಅನ್ನಕ್ಕೂ ತತ್ವಾರ ಎಂಬಂಥ ಬಡತನ ನನ್ನ ಕುಟುಂಬಕ್ಕಿತ್ತು. ಈ ಬಡತನದ ಮಧ್ಯೆಯೂ ಶಾಲೆಗೆ
ಹೋದೆ. ಸ್ಟೇಟ್ ಖರೀದಿಸುವ ಶಕ್ತಿಯೂ ನನ್ನ ತಂದೆಗೆ
ಇರಲಿಲ್ಲ. ಶಾಲೆಯ ಎದುರಿಗಿದ್ದ ಆಲದ ಮರದ
ಎಲೆಯನ್ನು ತೆಗೆದುಕೊಂಡು ಹೋಗಿ ಅದರ ಮೇಲೆ
ಚೂಪಾದ ಕಡ್ಡಿಯಿಂದ ಬರೆಯುತ್ತಾ ಅಕ್ಷರ ಕಲಿತೆ.
ಮುಂದೆ ಶ್ರೀಹರಿ ಸಪಕಾಳ ಅವರ ಜೊತೆಗೆ ನನ್ನ
ವಿವಾಹವಾಯಿತು.”

“ನನ್ನ ಗಂಡನಮನೆ ಇದ್ದುದ್ದು ವರ್ಧಾ ಜಿಲ್ಲೆಯ ನವರಗಾಂವದಲ್ಲಿ, ಅದೇನು ಕಾರಣವೋ
ಕಾಣೆ:ಅತ್ತೆ-ಮಾವಂದಿರಿಗೂ ನನಗೂ
ಹೊಂದಾಣಿಕೆಯೇ ಆಗಲಿಲ್ಲ. ಅವರು ಹೆಜ್ಜೆಗೊಂದು
ತಪ್ಪು ಹುಡುಕುತ್ತಿದ್ದರು. ಸಂಜೆ ನನ್ನ ಗಂಡ ಮನೆಗೆ
ಬಂದರೆ ಸಾಕು; ಚಾಡಿ ಹೇಳುತ್ತಿದ್ದರು. ಪರಿಣಾಮ,
ಮಾಡದ ತಪ್ಪಿಗೆ ಹೊಡೆತ ತಿನ್ನುವುದು ನನ್ನ ಪಾಲಿಗೆ
ದಿನಚರಿಯೇ ಆಗಿಹೋಯಿತು. ಈ ಮಧ್ಯೆ ನಮ್ಮ
ದಾಂಪತ್ಯಕ್ಕೆ ಹನ್ನೆರಡು ವರ್ಷಗಳು ತುಂಬಿದ್ದವು”.

“ಇದು 1972ರ ಮಾತು. ಆವತ್ತಿನ ಸಂದರ್ಭದಲ್ಲಿ
ಅರಣ್ಯ ಇಲಾಖೆಯವರು ಹಳ್ಳಿಯಜನರಿಂದ ಹಸುವಿನ
ಸೆಗಣಿಯನ್ನು ಖರೀದಿಸುತ್ತಿದ್ದರು. ಹಳ್ಳಿಯ ಎಲ್ಲರಿಂದ
ಸೆಗಣಿ ಸಂಗ್ರಹಿಸಿ ಅದನ್ನು ಮಾರುವ ಜವಾಬ್ದಾರಿ ಊರ
ಮುಖಂಡನದ್ದಾಗಿತ್ತು. ಅನಂತರ, ಸೆಗಣಿ ನೀಡಿದ
ಎಲ್ಲರಿಗೂ ಆತ ಹಣವನ್ನು ಹಂಚಬೇಕಿತ್ತು. ನಮ್ಮ
ಊರಲ್ಲಿದ್ದ ಮುಖಂಡನ ಹೆಸರು ದಂಡಾಜಿ ಸತ್ಕಾರ್.
ಅವನು ಹಳ್ಳಿ ಜನರಿಗೆ ನಯಾಪೈಸೆಯನ್ನೂ ಕೊಡದೆ
ವಂಚಿಸುತ್ತಿದ್ದ. ಯಾರಾದರೂ ತಿರುಗಿ ಪ್ರಶ್ನಿಸಿದರೆ
ಅವರಿಗೆ ಕಿರುಕುಳ ಕೊಡುತ್ತಿದ್ದ. ಅಂಥವನ ಎದುರು
ನಿಂತು ನಾನು ಪಾಲು ಕೇಳಿದೆ. ನನಗೆ ಬರಬೇಕಿದ್ದ
ಹಣ ಪಡೆಯುವಲ್ಲಿ ಕಡೆಗೂ ಯಶಸ್ವಿಯಾದೆ. ಆದರೆ,
ಮುಂದಿನ ಪರಿಣಾಮ ಬಹಳ ಕೆಟ್ಟದಿತ್ತು. ಈ ಹೆಂಗಸಿಗೆ
ಬುದ್ದಿ ಕಲಿಸಲೇಬೇಕು ಎಂದು ನಿರ್ಧರಿಸಿದ ಆ
ಶ್ರೀಮಂತ ನೇರವಾಗಿ ನನ್ನ ಗಂಡನ ಬಳಿಗೇ ಹೋದ.
ನಿನ್ನ ಹೆಂಡತಿಯ ನಡತೆ ಸರಿಯಿಲ್ಲ ಕಣೋ, ಅವಳನ್ನು
ಮೊದಲು ಮನೆಯಿಂದ ಹೊರಹಾಕು’ ಎಂದೆಲ್ಲಾ
ಹೇಳಿಕೊಟ್ಟ.’

“ಅನುಮಾನದ ಪಿಶಾಚಿ ಗಂಡಸಿನ ತಲೆಹೊಕ್ಕಿತು
ಅಂದಮೇಲೆ ಕೇಳುವುದೇನಿದೆ ? ನನ್ನ ಗಂಡ
ಮೇಲಿಂದ ಮೇಲೆ ಜಗಳಕ್ಕೆ ಬಂದ. ನಾನಾಗ
ಗರ್ಭಿಣಿ, ಅದೊಂದು ರಾತ್ರಿ, ಯಥಾಪ್ರಕಾರ ಜಗಳ
ತೆಗೆದ ಗಂಡ, ಅನಂತರ ಮನಬಂದಂತೆ ಥಳಿಸಿದ.
ಅಷ್ಟಕ್ಕೆ ಸುಮ್ಮನಾಗದೆ, ನನ್ನನ್ನು ದರದರನೆ ಕೊಟ್ಟಿಗೆಗೆ
ಎಳೆದೊಯ್ದು ಹಸು, ಕರುಗಳ ಮಧ್ಯೆ ನೂಕಿ
ಹೋಗಿಬಿಟ್ಟ. ಆವತ್ತೇ ರಾತ್ರಿ ಕೊಟ್ಟಿಗೆಯಲ್ಲಿಯೇ
ಹೆರಿಗೆಯಾಯಿತು. ಅದೆಷ್ಟೇ ಚೀರಾಡಿದರೂ
ಸಹಾಯಕ್ಕೆ ಒಬ್ಬರೂ ಬರಲಿಲ್ಲ. ಆದರೆ ಹಸುವೊಂದು
ಕೊಟ್ಟಿಗೆಯಲ್ಲಿದ್ದ ಎಲ್ಲ ಹಸುಗಳನ್ನೂ ದೂರ ಸರಿಸಿ
ನನಗೆ ತೊಂದರೆಯಾಗದಂತೆ ನೋಡಿಕೊಂಡಿತು.
ಕುರಿಗಳೂ ತಮ್ಮಿಂದಯಾವುದೇ ತೊಂದರೆಯಾಗದಂತೆ ನೋಡಿಕೊಂಡವು”. ಎಂದು ಸಿಂಧೂತಾಯಿ ಸಪಕಾಳ ಹೇಳುತ್ತಾರೆ.