ರಾಯಲ್ ಎನ್ ಫೀಲ್ಡ್ 350 ಗೆ ಚಾಲೆಂಜ್ ಕೊಡಲು ಬಂತು ಹೋಂಡಾ ಕಂಪನಿಯ ಹೊಸ ಬೈಕ್: ಬೆಲೆ ಎಷ್ಟು?

ದೇಶದ ಪ್ರಮುಖ ದ್ವಿಚಕ್ರ ವಾಹನಗಳ ನಿರ್ಮಾಣ ಸಂಸ್ಥೆಯಾಗಿರುವ ಹೋಂಡಾ ಮೋಟರ್ ಸೈಕಲ್ ಅಂಡ್ ಸ್ಕೂಟರ್ ಕಂಪನಿಯು ತನ್ನ ಪ್ರೀಮಿಯಂ ಮೋಟರ್ಸೈಕಲ್ Honda H’Ness CB 350  ಬೆಲೆಯನ್ನು ಏಪ್ರಿಲ್ ತಿಂಗಳಿನಿಂದ ಹೆಚ್ಚು ಮಾಡುವ ನಿರ್ಧಾರವನ್ನು ಮಾಡಿದೆ. ವರದಿಯ ಪ್ರಕಾರ ಜಪಾನಿನ ದ್ವಿಚಕ್ರ ವಾಹನ ತಯಾರಕರ ರೆಟ್ರೋ ಕ್ಲಾಸಿಕ್ ಬೈಕ್ ನ ಬೆಲೆಯು ಐದು ಸಾವಿರ ರೂಪಾಯಿಗಳಷ್ಟು ಏರಿಕೆಯನ್ನು ಮಾಡಲಾಗಿದೆ. ಈ ಏರಿಕೆಯು ಏಪ್ರಿಲ್ 2021 ರಿಂದಲೇ ಜಾರಿಯಾಗಿದೆ. ರಾಯಲ್ ಎನ್ಫೀಲ್ಡ್ 350 ಬೈಕಿಗೆ ಸವಾಲನ್ನು ಒಡ್ಡುವ ಹಾಗೆ ಇರುವ ಈ ಬೈಕ್ ನ ವಿಶೇಷತೆಗಳು ಏನು ಎನ್ನುವುದಾದರೆ ಇಲ್ಲಿದೆ ಅದರ ಮಾಹಿತಿ.
Honda H’Ness CB 350  ಡಿ ಎಲ್ ಎಕ್ಸ್ ರೂಪಾಂತರದ ಆರಂಭಿಕ ಎಕ್ಸ್ ಶೋರೂಮ್
1,86,500 ರೂಪಾಯಿಗಳಾಗಿದ್ದರೆ, ಅದೇ ಸಮಯದಲ್ಲಿ, ಅದರ ಟಾಪ್-ಸ್ಪೆಕ್ ಡಿಎಲ್ಎಕ್ಸ್ ಪ್ರೊ ರೂಪಾಂತರದ ಎಕ್ಸ್ ಶೋರೂಮ್ ಬೆಲೆಯು 1,92,500 ರೂಗಳಾಗಿದೆ.

ವಿಶೇಷವೆಂದರೆ ಹೆಚ್ಚಿನ ವಾಹನ ತಯಾರಕರು ತಮ್ಮ ವಾಹನಗಳ ಬೆಲೆಯನ್ನು ಏಪ್ರಿಲ್ ತಿಂಗಳಿನಿಂದ ಹೆಚ್ಚಿಸುವುದಾಗಿ ಘೋಷಿಸಿದ್ದಾರೆ. ದೇಶದ ಅತಿ ದೊಡ್ಡ ದ್ವಿಚಕ್ರವಾಹನ ಕಂಪನಿಯಾದ ಹೀರೋ ಮೋಟೊಕಾರ್ಪ್ ತಾನು ಸಹಿತ ಏಪ್ರಿಲ್ ನಿಂದ ತನ್ನ ದ್ವಿಚಕ್ರ ವಾಹನಗಳ ಬೆಲೆಯನ್ನು ಹೆಚ್ಚಿಸುವುದಾಗಿ ಹೇಳಿದೆ. ಈ ಹಿನ್ನಲೆಯಲ್ಲಿ ಹೋಂಡಾ ಕಂಪನಿಯೂ ತನ್ನ ದ್ವಿಚಕ್ರವಾಹನಗಳ ಬೆಲೆ ಏರಿಕೆ ಮಾಡುತ್ತಿರುವುದರಲ್ಲಿ ಆಶ್ಚರ್ಯ ಖಂಡಿತ ಇಲ್ಲ. ಆದರೆ ಜನವರಿಯ ನಂತರ ಇದು ಎರಡನೇ ಬಾರಿಗೆ ಹೋಂಡಾ ಹೆಚ್ ನೆಸ್ ಸಿಬಿ 350 ಬೆಲೆ ಏರಿಕೆ ಕಾಣುತ್ತಿರುವುದ ವಿಶೇಷವಾಗಿದೆ.

Honda H”ness CB 350 ಯು 348 ಸಿಸಿ, ಸಿಂಗಲ್ ಸಿಲಿಂಡರ್, ಏರ್-ಕೂಲ್ಡ್, 4-ಸ್ಟ್ರೋಕ್, ಒಎಚ್‌ಸಿ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 5,500 ಆರ್‌ಪಿಎಂನಲ್ಲಿ ಗರಿಷ್ಠ 20.8 ಬಿಹೆಚ್‌ಪಿ ಮತ್ತು 3,000 ಆರ್‌ಪಿಎಂನಲ್ಲಿ 30 ಎನ್‌ಎಂ ಗರಿಷ್ಠ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇದರ ಎಂಜಿನ್‌ನಲ್ಲಿ 5-ಸ್ಪೀಡ್ ಗೇರ್‌ ಬಾಕ್ಸ್ ಅಳವಡಿಸಲಾಗಿದೆ. ಈ ಬೈಕ್‌ನಲ್ಲಿ 15 ಲೀಟರ್ ಹಿಡಿಸುವ ಇಂಧನ ಟ್ಯಾಂಕ್ ಇದೆ. ಈ ಬೈಕ್ ನಲ್ಲಿ ಇದಲ್ಲದೇ ಇನ್ನೂ ಅನೇಕ ವೈಶಿಷ್ಟತೆಗಳಿಂದ ಕೂಡಿದೆ. ಇದು ಪೂರ್ಣ ಪ್ರಮಾಣದ ಎಲ್ಇಡಿ ಲೈಟಿಂಗ್, ಪಾರ್ಷಿಯಲ್-ಡಿಜಿಟಲ್ ಕನ್ಸೋಲ್ ಅನ್ನು ಹೊಂದಿದೆ, ಇದು ರಿಯಲ್ ಟೈಮ್ ಮೈಲೇಜ್ ಮತ್ತು ಗೇರ್ ಮಾಹಿತಿಯನ್ನು ಒದಗಿಸುತ್ತದೆ. ಇದಲ್ಲದೇ ಟ್ರೆಕ್ಷನ್ ಕಂಟ್ರೋಲ್, ಸ್ಲಿಪ್ಪರ್ ಕ್ಲಚ್, ಯುಎಸ್‌ಬಿ ಪೋರ್ಟ್ ಹೊಂದಿರುವ ಬ್ಲೂಟೂತ್ ಮತ್ತು ಸ್ಮಾರ್ಟ್‌ಫೋನ್ ಸಂಪರ್ಕ ಒದಗಿಸಲಾಗಿದೆ.

ಈ ದ್ವಿಚಕ್ರ ವಾಹನದಲ್ಲಿ ಸೆಲೆಕ್ಟೆಡ್ ಟಾರ್ಕ್ ಕಂಟ್ರೋಲ್ ಅನ್ನು ಅಳವಡಿಸಲಾಗಿದೆ. ಇದು ಹಿಂದಿ‌ನ ಚಕ್ರದ ಎಳೆತವನ್ನು ನಿಯಂತ್ರಿಸಲು ಬಹಳಷ್ಟು ಸಹಾಯಕವಾಗುತ್ತದೆ. ಅಲ್ಲದೇ ಟಾರ್ಕ್ ಇಂಜೆಕ್ಷನ್ ಮೂಲಕ, ಇದು ಎಂಜಿನ್‌ನ ಟಾರ್ಕ್ ಅನ್ನು ಸಹ ನಿಯಂತ್ರಿಸುತ್ತದೆ. ಈ ವೈಶಿಷ್ಟ್ಯವನ್ನು ಸ್ವಿಚ್ ಮೂಲಕ ಆನ್ ಮತ್ತು ಆಫ್ ಮಾಡಬಹುದು. ಅಲ್ಲದೆ, ಈ ಬೈಕ್ ಮೊದಲ ಬಾರಿಗೆ ಸ್ಲಿಪ್ ಮತ್ತು ಅಸಿಸ್ಟ್ ಕ್ಲಚ್ನ ವೈಶಿಷ್ಟ್ಯವನ್ನು ಹೊಂದಿರುವುದು ಕೂಡಾ ಬಹಳ ವಿಶೇಷ ಎನಿಸಿದೆ.

ಹೋಂಡಾ ಹೆಚ್ ನೆಸ್ ಸಿಬಿ 350 ರ ಮುಂಭಾಗವು ಟೆಲಿಸ್ಕೋಪಿಕ್ ಫಾರ್ಕ್ಸ್ ಸಸ್ಪೆನ್ಷನ್ ಹೊಂದಿದೆ. ಅದೇ ಸಮಯದಲ್ಲಿ, ಅದರ ಹಿಂಭಾಗದಲ್ಲಿ ಟ್ವಿನ್ ರಿಯರ್ ಶಾ ಕ್ಸ್ ನೀಡಲಾಗಿದೆ. ಬ್ರೇಕಿಂಗ್‌ಗಾಗಿ, ಬೈಕ್‌ನ ಮುಂಭಾಗದಲ್ಲಿ 310 ಎಂಎಂ ಡಿಸ್ಕ್ ಬ್ರೇಕ್ ನೀಡಲಾಗಿದೆ. ಅದೇ ಸಮಯದಲ್ಲಿ ಅದರ ಹಿಂಭಾಗದಲ್ಲಿ 240 ಮಿಲಿಮೀಟರ್ ಡಿಸ್ಕ್ ಬ್ರೇಕ್ ಇದೆ. ಸುರಕ್ಷತೆಗಾಗಿ ಇದು ಡ್ಯುಯಲ್-ಚಾನೆಲ್ ಆಂಟಿ-ಲಾಕ್ ಬ್ರೇಕಿಂಗ್ ಸಿಸ್ಟಮ್ (ಎಬಿಎಸ್) ಅನ್ನು ಹೊಂದಿದ್ದು ಒಟ್ಟಾರೆ ಸಾಕಷ್ಟು ವೈಶಿಷ್ಟ್ಯಗಳಿಂದಲೇ ಗಮನ ಸೆಳೆಯುತ್ತಿದೆ.