ರಿಷಬ್ ಪಂತನಂತೆ ಸಾಧನೆ ಮಾಡುವುದು ಅಸಾಧ್ಯ – ಚಾಪೆಲ್
ಅಹಮದಾಬಾದ್:- ಟೀಮ್ ಇಂಡಿಯಾ ಇಂಗ್ಲೆಂಡ್ ವಿರುದ್ಧದ ಎರಡನೆಯ T- ಟ್ವೆಂಟಿ ಪಂದ್ಯದಲ್ಲಿ 7 ವಿಕೆಟ್ ಗಳ ಭರ್ಜರಿ ಜಯ ಗಳಿಸಿತು. ಅದರ ಜೊತೆಗೆ ಮೊದಲ ಪಂದ್ಯದ ಸೇಡು ತೀರಿಸಿಕೊಂಡಿತು. ಈ ಪಂದ್ಯ ಗೆದ್ದು ಭಾರತ 1-1 ಸರಣಿ ಸಮಬಲ ಮಾಡಿಕೊಂಡಿತು. ಇಂಗ್ಲೆಂಡ್ ನೀಡಿದ 164 ರನ್ ಗಳ ಗುರಿ ಭಾರತ ಬರೀ 17.5 ಓವರ್ ಗಳಲ್ಲಿ ಪೂರ್ಣ ಮಾಡಿತು.
ಈ ಪಂದ್ಯದಲ್ಲಿ ಪಂತ್ ಅವರು ಚಿಕ್ಕದೇ ಆದರೂ ಮಹತ್ವದ 26 ರನ್ ಗಳನ್ನು ಕಲೆ ಹಾಕುವಲ್ಲಿ ಯಶಸ್ವಿ ಆದರು. ಏತನ್ಮಧ್ಯೆ ರಿಷಭ್ ಅವರು ಆಟದ 12 ನೇ ಓವರ್ ನ ಎರಡನೆಯ ಎಸೆತದಲ್ಲಿ ಭರ್ಜರಿ ಶಾಟ್ ಹೊಡೆದರು. ಅವರು ಬಾರಿಸಿದ ಬಾಲ್ 90 ಮೀಟರ್ ದೂರದ ಅಂತರದಲ್ಲಿ ಬಿದ್ದಿತ್ತು. ಈ ಭರ್ಜರಿ ಸಿಕ್ಸ್ ನೋಡಿದ ನಾನ್ ಸ್ಟ್ರೈಕರ್ ಎಂಡ್ ನಲ್ಲಿದ್ದ ಕೊಹ್ಲಿಗೆ ತುಂಬಾ ಖುಷಿಯಾಗಿತ್ತು.
ಈ ಉದಯೋನ್ಮುಖ ಆಟಗಾರ ಅನೇಕ ಬಾರಿ ಭಾರತದ ಗೆಲುವುಗಳಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ಮೂರೇ ತಿಂಗಳಲ್ಲಿ ಮೂರು ಟೆಸ್ಟ್ ಮ್ಯಾಚ್ ಗಳ ನಿರ್ಣಯ ಭಾರತದ ಕಡೆಗೆ ತಿರುಗಿಸುವಲ್ಲಿ ಯಶಸ್ವಿಯಾದರು. ಎಷ್ಟೋ ಆಟಗಾರರಿಗೆ ಇದು ಸಂಪೂರ್ಣ ಜೀವಮಾನದಲ್ಲಿಯೇ ಸಾಧಿಸಲಾಗುವುದಿಲ್ಲ ಎಂದು ಆಸ್ಟ್ರೇಲಿಯಾದ ಮಾಜಿ ಆಟಗಾರ ಇಯಾನ್ ಚಾಪೆಲ್ ಅವರು ರಿಷಬ್ ಪಂತ್ ಅವರ ಬಗ್ಗೆ ವರ್ಣನೆ ಮಾಡಿದ್ದಾರೆ. ಎಡಗೈ ಆಟಗಾರರಾದ ರಿಷಬ್ ಪಂತ್ ಅವರು ಆಸ್ಟ್ರೇಲಿಯಾ ವಿರುದ್ಧದ ಮೂರನೆಯ ಮತ್ತು ನಾಲ್ಕನೆಯ ಹಾಗೂ ಇಂಗ್ಲೆಂಡ್ ವಿರುದ್ಧದ ಮೊದಲ ಪಂದ್ಯದಲ್ಲಿ ಭರ್ಜರಿ ಆಟವನ್ನು ಪ್ರದರ್ಶಿಸಿದರು. ಇದೇ ಕಾರಣದಿಂದ ಭಾರತವು ವಿಶ್ವ ಟೆಸ್ಟ್ ಕ್ರಿಕೆಟ್ ಸ್ಪರ್ಧೆಯ ಫೈನಲ್ ಪ್ರವೇಶಿಸಲು ಸಾಧ್ಯವಾಯಿತು.
ಆಸ್ಟ್ರೇಲಿಯಾ ವಿರುದ್ಧ ಸಿಡ್ನಿ ಮತ್ತು ಬ್ರಿಸ್ಬೆನ್ ನಲ್ಲಿ ರಿಷಬ್ ಪಂತ್ ಅವರು ಪ್ರದರ್ಶಿಸಿದ ಭರ್ಜರಿ ಆಟವು ನಿಜಕ್ಕೂ ಹೊಗಳಿಕೆಗೆ ಪಾತ್ರವಾಗಿದೆ. ಅದರ ನಂತರ ಅಹಮದಾಬಾದ್ ನಲ್ಲಿ ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಶತಕ ಬಾರಿಸಿ ಭಾರತದ ಗೆಲುವನ್ನು ನಿಶ್ಚಯಿಸಿದರು. ತಂಡವು ಕಠಿಣ ಪರಿಸ್ಥಿತಿಯಲ್ಲಿರುವಾಗ ಅವರು ಈ ರೀತಿಯ ಆಟವನ್ನು ಪ್ರದರ್ಶಿಸಿದರು. ಆದ್ದರಿಂದ ರಿಷಬ್ ಪಂತ್ ಅವರಂತಹ ಆಟಗಾರ ಭಾರತಕ್ಕೆ ಸಿಕ್ಕಿರುವುದು ಅದೃಷ್ಟವೇ ಸರಿ. ಆದ್ದರಿಂದ ಭಾರತದ ಮೂರೂ ತಂಡಗಳಲ್ಲಿ ಅವರಿಗೆ ಸ್ಥಾನ ಸಿಗಲೇಬೇಕು ಎಂದು ಚಾಪೆಲ್ ಹೇಳುತ್ತಾರೆ. ಅದರ ಜೊತೆಗೆ ರಿಷಬ್ ಪಂತ್ ಅವರ ಕೀಪಿಂಗ್ ನಲ್ಲಿಯೂ ತುಂಬಾ ಸುಧಾರಣೆಯಾಗಿದೆ ಎಂದಿದ್ದಾರೆ.