ಲಾಕ್ ಡೌನ್ ನಲ್ಲಿ ಕೆಲಸ ಹೋಯಿತು, ಈಗ ಟೀ ಮಾರಿ ತಿಂಗಳಿಗೆ 2 ಲಕ್ಷ ರೂಪಾಯಿ ಸಂಪಾದಿಸುತ್ತಿರುವ ಯುವಕ..!

ಕೊರನಾ ಕಾರಣದಿಂದ ಘೋಷಿಸಲಾದ ಲಾಕ್ಡೌನ್ ಸರ್ವ ಸಾಮಾನ್ಯರ ಪಾಲಿಗೆ ತುಂಬಾ ಕಠಿಣವಾದ ಸಮಯವಾಗಿತ್ತು. ಈ ಸಮಯದಲ್ಲಿ ಎಷ್ಟೋ ಜನರು ತಮ್ಮ ನೌಕರಿಯನ್ನು ಕಳೆದುಕೊಂಡರು. ಹೀಗೆ ಒಬ್ಬ ತನ್ನ ನೌಕರಿಯನ್ನು ಕಳೆದುಕೊಂಡ ನಂತರ ಚಹಾ ಕ್ಯಾಂಟೀನ್ ಶುರು ಮಾಡಿದನು. ಈತನೇ ಈಗ ತಿಂಗಳಿಗೆ ಸುಮಾರು ಎರಡು ಲಕ್ಷ ರೂಪಾಯಿಗಳನ್ನು ಗಳಿಸುತ್ತಿದ್ದಾನೆ.

ಇಂದಿನ ಲೇಖನದಲ್ಲಿ ಮಹಾರಾಷ್ಟ್ರದ ಯುವಕನ ಪ್ರೇರಣೆಯನ್ನು ನೀಡುವ ಪ್ರಸಂಗವನ್ನು ಓದುವ. ನೌಕರಿ ಕಳೆದುಕೊಂಡ ನಂತರ ರೇವಣ ಶಿಂದೆ ಹೆಸರಿನ ಈ ಯುವಕ ಸೋಲೊಪ್ಪಿಕೊಳ್ಳದೆ ಚಹಾ ಕ್ಯಾಂಟೀನ್ ನ್ನು ಶುರುಮಾಡಿದನು. ತಾನು ಮಾಡಿದ ಕಷ್ಟದ ಫಲದಿಂದ ತಿಂಗಳಿಗೆ ಸುಮಾರು ಎರಡು ಲಕ್ಷ ರೂಪಾಯಿಗಳನ್ನು ಗಳಿಸುತ್ತಿದ್ದಾನೆ.

28 ವರ್ಷದ ರೇವಣನ ತಂದೆ ಬಡಿಗತನದ ಕೆಲಸ ಮಾಡುತ್ತಾರೆ. ಬಡತನದ ಪರಿಸ್ಥಿತಿಯಿಂದಾಗಿ ರೇವಣನು ಬರೀ ಪಿಯುಸಿವರೆಗೆ ಮಾತ್ರ ಶಿಕ್ಷಣ ಮುಗಿಸಿ ನಂತರ ಪುಣೆಯ ಒಂದು ಕಂಪನಿಯಲ್ಲಿ ಗಾರ್ಡ್ ಕೆಲಸ ಮಾಡತೊಡಗಿದನು. 2019ರಲ್ಲಿ ಕಂಪನಿ ಬಂದ್ ಆದ ನಂತರ ರೇವಣನ ನೌಕರಿ ಹೋಯಿತು. ಮತ್ತೆ ಕೆಲವು ದಿವಸಗಳವರೆಗೆ ಅಲೆದಾಡಿ ಹೊಸ ನೌಕರಿ ಶೋಧಿಸಿದನು. ಹೊಟೆ ಲ್ ನಲ್ಲಿ ಮಾಡುವ ಈ ಕೆಲಸದಲ್ಲಿ ಸಂಬಳ ತುಂಬಾ ಕಡಿಮೆಯಾಗಿತ್ತು. ಕೆಲವು ದಿವಸಗಳವರೆಗೆ ಹೋಟೆಲ್ ನಲ್ಲಿ ಕೆಲಸ ಮಾಡಿದ ನಂತರ ಸ್ವಂತದ್ದೇ ಯಾವುದಾದರೂ ಉದ್ಯೋಗವನ್ನು ಪ್ರಾರಂಭಿಸುವ ವಿಚಾರ ಮಾಡಿ ಪುಣೆಯಲ್ಲಿಯೇ ಕಳೆದ ವರ್ಷ ಚಹಾ ಕ್ಯಾಂಟೀನ್ ಓಪನ್ ಮಾಡಿದನು. ಈತ ಚಹಾ ಕ್ಯಾಂಟೀನ್ ಶುರುಮಾಡಿದ ನಂತರವೇ ಲಾಕ್ಡೌನ್ ಜಾರಿಯಾಯಿತು. ಪ್ರಾರಂಭಿಸಿದ ಉದ್ಯೋಗ ಹಾನಿಗೊಳಗಾಯಿತು. ಹತ್ತಿರವಿದ್ದ ಅಲ್ಪಸ್ವಲ್ಪ ಹಣವು ಮುಗಿದುಹೋಗಿತ್ತು. ಹೀಗಾಗಿ ತಿನ್ನಲು ಒಂದು ಹೊತ್ತಿನ ಊಟಕ್ಕೂ ಗ್ರಹಚಾರ ಬಂದೊದಗಿತ್ತು. ಆದರೂ ಎದೆಗುಂದದೆ ಸಂಯಮದಿಂದ ದಿನಗಳನ್ನು ದೂಡಿ ಕೆಲವು ದಿವಸಗಳ ನಂತರ ಜೂನ್ ತಿಂಗಳಿನಲ್ಲಿ ಮತ್ತೆ ನಿಧಾನ ಲಾಕ್ಡೌನ್ ಓಪನ್ ಆಗುತ್ತಿದ್ದಂತೆಯೇ ಚಹಾ ಕ್ಯಾಂಟೀನ್ ಓಪನ್ ಮಾಡಿದನು. ಆದರೆ ಆತನ ಮುಂದೆ ಹೊಸ ಸಮಸ್ಯೆಯೊಂದು ಉದ್ಭವವಾಯಿತು. ಅದೇನೆಂದರೆ ಲಾಕ್ಡೌನ್ ನಂತರ ಜನರೇನೋ ಮನೆಯಿಂದ ಹೊರಗೆ ಬಿದ್ದರು, ಆದರೆ ಹೊರಗಿನ ಆಹಾರ ಪದಾರ್ಥಗಳನ್ನು ತಿನ್ನುವುದರ ಮೇಲೆ ತುಂಬಾ ಕಂಟ್ರೋಲ್ ಮಾಡಿಕೊಂಡಿದ್ದರು. ರೇವಣನು ಸಹ ಇದರ ಮೇಲೆ ಒಂದು ಯುಕ್ತಿ ಹುಡುಕಿದನು. ಆತ ಚಹಾ ಹೋಮ್ ಡಿಲೆವರಿ ಶುರುಮಾಡಿದನು.

ಮೊದಮೊದಲು ಆತ ಕೆಲವು ಆಫೀಸುಗಳಲ್ಲಿ ಹೋಗಿ ಚಹಾ ನೀಡಲು ಶುರು ಮಾಡಿದನು. ಒಂದು ತಿಂಗಳಿನವರೆಗೆ ಎಲ್ಲರಿಗೂ ಚಹಾ ಫ್ರೀಯಾಗಿ ಕೊಟ್ಟನು. ಆನಂತರ ಆತನ ಸ್ವಭಾವ ಮತ್ತು ಚಹಾ ಇವೆರಡು ಜನರಿಗೆ ತುಂಬಾ ಹಿಡಿಸಿದವು. ಆತನು ಶುಂಠಿ ಮತ್ತು ಯಾಲಕ್ಕಿ ಈ ಎರಡು ಫ್ಲೇವರ್ ಗಳಲ್ಲಿ ಚಹಾ ತಯಾರಿಸುತ್ತಿದ್ದನು. ಇದರ ಜೊತೆಗೆ ಬಿಸಿಬಿಸಿಯಾದ ಹಾಲನ್ನು ಸಹಿತ ಹೋಮ್ ಡೆಲಿವರಿ ಮಾಡಲು ಶುರು ಮಾಡಿದನು. ಇದರಿಂದ ಆತನ ಗಳಿಕೆ ದಿನಂಪ್ರತಿ 7/8 ಸಾವಿರ ರೂಪಾಯಿಗಳಾಗಲು ಶುರುವಾಯಿತು.

ತನ್ನ ಈ ಉದ್ಯೋಗ ಹೆಚ್ಚುತ್ತಿರುವುದನ್ನು ನೋಡಿ ತನ್ನ ಜೊತೆಗೆ ಮತ್ತೆ 5 ಯುವಕರನ್ನು ಕೆಲಸಕ್ಕೆ ಇಟ್ಟುಕೊಂಡನು. ರೇವಣ ಮತ್ತು ಆತನ ಸಹವರ್ತಿಗಳು ಕೂಡಿ ಮುಂಜಾನೆ 9 ರಿಂದ 12 ಹಾಗೂ ಮಧ್ಯಾಹ್ನ 3 ರಿಂದ 7 ಈ ಸಮಯದಲ್ಲಿ ಪುಣೆಯ ಪಿಂಪ್ರಿ ಮತ್ತು ಸುತ್ತಮುತ್ತಲಿನ ಭಾಗದಲ್ಲಿ ಚಹಾ ಹಾಗೂ ಬಿಸಿ ಬಿಸಿಯಾದ ಹಾಲನ್ನು ಹೋಮ್ ಡಿಲೆವರಿ ಮಾಡಲು ಶುರು ಮಾಡಿದರು.

ಇಂದು ರೇವಣನ ಚಹಾ ದೊಡ್ಡ ದೊಡ್ಡ ಕಂಪನಿಗಳಲ್ಲಿ ತಲುಪುತ್ತಿದೆ. ಆತ ಒಂದು ವಾಟ್ಸಾಪ್ ಗ್ರೂಪ್ ನ್ನು ಸಹ ಮಾಡಿದ್ದಾನೆ. ಅದರ ಮೇಲೆ ಆತನ ಗ್ರಾಹಕರು ಚಹಾ ಮತ್ತು ಹಾಲಿನ ಆರ್ಡರ್ ನೀಡುತ್ತಿದ್ದಾರೆ.