ವಾಹನಗಳಿಂದ ತುಂಬಿರುವ ರಸ್ತೆ ದಾಟಲು ಮುಂದಾದ ಎಮ್ಮೆಗಳು; ವಾಹನಗಳು ಬರುವಾಗ ರಸ್ತೆ ದಾಟಬಾರದು ಎಂದು ಪಾಠ ಮಾಡಿದ ಗುಂಪಿನ ಮತ್ತೊಂದು ಎಮ್ಮೆ! ನೋಡಿ ಈ Viral Video!

ದೊಡ್ಡ ನಗರಗಳು, ಪಟ್ಟಣಗಳಲ್ಲಿ ರಸ್ತೆ ಸಂಚಾರಿ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಾದ್ದು ಪ್ರತಿಯೊಬ್ಬರ ಧರ್ಮ ಹಾಗೂ ಅದು ಅವರ ಕರ್ತವ್ಯ ಕೂಡಾ. ಆದರೆ ದುರಾದೃಷ್ಟವಶಾತ್ ಅನೇಕರು ಈ ನಿಯಮಗಳನ್ನು ಪಾಲಿಸದೇ ಬಹಳ ಅಸಡ್ಡೆಯಿಂದ ನಿಯಮಗಳನ್ನು ಮುರಿದು, ಕಾನೂನಿಗೆ ಗೌರವವನ್ನು ಕೂಡಾ ನೀಡದೇ ತಮಗಿಷ್ಟ ಬಂದ ಹಾಗೆ, ಮನಸೋ ಇಚ್ಛೆ ರಸ್ತೆಯ ಮೇಲೆ ವಾಹನಗಳನ್ನು ಚಲಾಯಿಸಿ ತಮ್ಮ ಪ್ರಾಣಕ್ಕೆ ಸಂ ಚಕಾರವನ್ನು ತಂದುಕೊಂಡಿರುವ ವಿಷಯಗಳು ಸುದ್ದಿಯಾಗುತ್ತಲೇ ಇರುತ್ತವೆ. ಇಷ್ಟಾದರೂ ಕೂಡಾ ಬುದ್ಧಿ ಬಾರದ ಜನರು ಮರುದಿನ ಅಂತಹುದೇ ತಪ್ಪು ಮಾಡಿ ಶಿಕ್ಷೆ ಅನುಭವಿಸುವುದು ಕೂಡಾ ವಾಸ್ತವ. ಇದೆಲ್ಲಾ ಬದಲಾವಣೆ ಎಂದಾಗುವುದು, ಜಾಗೃತಿ ಯಾವಾಗ ಮೂಡುವುದು ಎನ್ನುವುದು ಮಾತ್ರ ಉತ್ತರ ಇಲ್ಲದ ಪ್ರಶ್ನೆ.

ಶಾಲೆಗಳ ಹಂತದಿಂದಲೇ ಮಕ್ಕಳಿಗೆ ರಸ್ತೆಯ ನಿಯಮಗಳ ಬಗ್ಗೆ ಪರಿಚಯ ಮಾಡಿಕೊಡಲಾಗುತ್ತದೆ. ಆದರೆ ಸಮಾಜದಲ್ಲಿ ಅನೇಕರು ಅದನ್ನು ಮರೆತು ನಡೆಯುವ ಕಾರಣ ಕಲಿಕೆ ಪುಸ್ತಕಗಳಿಗೆ ಮಾತ್ರ ಸೀಮಿತವಾಗಿದೆ‌. ಹೀಗೆ ರಸ್ತೆ ಸಂಚಾರಿ ನಿಯಮಗಳನ್ನು ಮೀರಿ ನಡೆಯುವ ಜವಾಬ್ದಾರಿ ರಹಿತ ನಾಗರಿಕರ ಸಮಾಜವನ್ನು ವ್ಯಂಗ್ಯ ಮಾಡುವಂತಹ ಒಂದು ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಇಲ್ಲೊಂದು ಪ್ರಾಣಿಯು ತನ್ನ ಸಂಗಡಿಗರಿಗೆ ರಸ್ತೆಯಲ್ಲಿ ಸಂಚರಿಸುವಾಗ ಎಚ್ಚರವಹಿಸುವ ಜಾಗರೂಕತೆಯನ್ನು ಬೋಧಿಸುತ್ತಿದೆಯೇನೋ ಎನಿಸುವಂತೆ ಕಂಡಿದೆ.

ಹೌದು ಕೆಲವೇ ಸೆಕೆಂಡ್ ಗಳ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಗಮನ ಸೆಳೆಯುತ್ತಾ ವೈರಲ್ ಆಗಿದೆ. ಅಕ್ಟೋಬರ್ ಐದರಂದು ಶೇರ್ ಆಗಿರುವ ಈ ವೀಡಿಯೊವನ್ನು ಈಗಾಗಲೇ 37 ಸಾವಿರಕ್ಕಿಂತ ಅಧಿಕ ಮಂದಿ ವೀಕ್ಷಣೆ ಮಾಡಿದ್ದಾರೆ. ನಾಲ್ಕು ಸಾವಿರದ ಹತ್ತಿರದಲ್ಲಿ ಲೈಕ್ ಗಳನ್ನು ಪಡೆದಿರುವ ವೀಡಿಯೋ ಈಗಾಗಲೇ 833 ಬಾರಿ ರೀಟ್ವೀಟ್ ಆಗಿದ್ದು ನೆಟ್ಟಿಗರ ಗಮನವನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ ಹಾಗೂ ಪ್ರಾಣಿಗಳ ಎಚ್ಚರಿಕೆಯ ವರ್ತನೆ ಒಮ್ಮೆ ನಮ್ಮ ನಡವಳಿಕೆ ಬಗ್ಗೆ ನಾವೇ ಆಲೋಚಿಸುವಂತೆ ಮಾಡುವಂತೆ ಇದೆ ಈ ವೀಡಿಯೋ.

ವೈರಲ್ ಆಗಿರುವ ವೀಡಿಯೋದಲ್ಲಿ ಎಮ್ಮೆ ಜಾತಿಗೆ ಸೇರಿದ ವಿದೇಶದ ಪ್ರಾಣಿಗಳು ರಸ್ತೆಯೊಂದರ ಬಳಿ ನಿಂತಿದ್ದು ಅವು ರಸ್ತೆಯ ಇನ್ನೊಂದು ಬದಿಗೆ ಹೋಗಬೇಕಾಗಿರುವಂತೆ ಕಂಡಿದೆ. ಆದರೆ ರಸ್ತೆಯಲ್ಲಿ ರಭಸವಾಗಿ ವಾಹನಗಳ ಸಂಚಾರ ನಡೆಯುತ್ತಿದೆ. ಆದರೂ ಒಂದೆರಡು ಎಮ್ಮೆಗಳು ರಸ್ತೆ ದಾಟುವ ಪ್ರಯತ್ನದಲ್ಲಿ ಮುಂದಾದಾಗ ಕೂಡಲೇ ಅಲ್ಲಿದ್ದ ಮತ್ತೊಂದು ಎಮ್ಮೆ ಕ್ಷಣ ಮಾತ್ರದಲ್ಲಿ ಅವುಗಳ ಮುಂದೆ ಹೋಗಿ ರಸ್ತೆ ದಾಟದ ಹಾಗೆ ಅವುಗಳನ್ನು ಹಿಂದಕ್ಕೆ ಕಳುಹಿಸಿದೆ. ಆ ಎಮ್ಮೆ ವಾಹನಗಳು ಬರುವಾಗ ರಸ್ತೆ ದಾಟಬಾರದೆಂಬ ಪಾಠವನ್ನು ಕಲಿಸುತ್ತಿರುವಂತೆ ಕಂಡಿದೆ ಈ ವೀಡಿಯೋ.

ವಿಡಿಯೋ ನೋಡಿ…

ವೀಡಿಯೋ ನೋಡಿದ ಟ್ವಿಟರ್ ಬಳಕೆದಾರರು ಆ ಎಮ್ಮೆ ಬಹಳ ಸ್ಮಾರ್ಟ್ ಎಂದಿದ್ದಾರೆ. ಒಬ್ಬರು ಅದು ಬಹಳ ಹ್ಯಾಂಡ್ಸಂ ಮತ್ತು ಅದು ನಿಜವಾದ ಹೀರೋ ಎಂದು ಹೊಗಳಿದ್ದಾರೆ. ರಸ್ತೆ ನಿಯಮ ಪಾಲನೆ ಅನಿವಾರ್ಯ, ಈತ ಒಬ್ಬ ಅತಿ ಬುದ್ದಿ ವಂತ ನಾಯಕ ಎಂದು ಮತ್ತೊಬ್ಬರು ಅದನ್ನು‌ ವರ್ಣಿಸಿದ್ದಾರೆ. ಕೆಲವರು ಉಳಿದ ಎಮ್ಮೆಗಳಂತಹ ಆ ಪ್ರಾಣಿಗಳ ಅಮಾಯಕತ್ವ ನೋಡಿ ಪಾಪಾ ಎಂದಿದ್ದಾರೆ. ಆದರೆ ರಸ್ತೆ ದಾಟುವಾಗ ಎಚ್ಚರ ಇರಬೇಕು ಎನ್ನುವ ನೀತಿ ಪಾಠವನ್ನು ಎಮ್ಮೆಯೊಂದು ಮಾಡುತ್ತಿರುವುದು ಅದ್ಭುತ ಎನಿಸಿದೆ.