ಸಗಣಿಯನ್ನೇ ಆದಾಯದ ಮೂಲ ಮಾಡಿಕೊಂಡು ವರ್ಷಕ್ಕೆ 28 ಲಕ್ಷ ರೂ ಗಳಿಸುತ್ತಾರೆ ಈ ಯುವಕರು: ಆಶ್ಚರ್ಯ ಎನಿಸಿದರೂ ಇದು ಸತ್ಯ!
ಹಸುವಿನ ಸಗಣಿಯು ಕೂಡಾ ಉತ್ತಮ ಆದಾಯದ ಮೂಲವಾಗಬಹುದು ಎನ್ನುವುದನ್ನು ನೀವು ಉಳಿಸಿರುವಿರಾ?? ಬಹುಶಃ ಈ ಮಾತನ್ನು ಕೇಳಿ ನಿಮಗೆ ಆಶ್ಚರ್ಯ ಆಗಬಹುದು. ಆದರೆ ವಾಸ್ತವವಾಗಿ ಸಗಣಿಯನ್ನೂ ಒಂದು ಆದಾಯದ ಮೂಲವನ್ನಾಗಿ ಮಾಡಿಕೊಳ್ಳಲು ಸಾಧ್ಯವಿದೆ ಎನ್ನುವುದು ಊಹೆ ಖಂಡಿತ ಅಲ್ಲ. ಮೊದಲು ಸಗಣಿಯಿಂದ ಅಷ್ಟೇನೂ ಪ್ರಯೋಜನಗಳು ಇಲ್ಲ ಎಂದೇ ಜನ ಭಾವಿಸಿದ್ದರು. ಆದರೆ ಇಬ್ಬರು ಯುವಕರು ಜನರ ಈ ಆಲೋಚನೆಯನ್ನು ಬದಲಿಸಿದ್ದಾರೆ. ಈ ಯುವಕರು ಹಸುವಿನ ಸಗಣಿಯನ್ನು ಕೂಡಾ ಆದಾಯದ ಒಂದು ಮೂಲವನ್ನಾಗಿ ಮಾಡಿದ್ದಾರೆ. ಅವರ ಈ ಪ್ರಯತ್ನದಿಂದಾಗಿ ಸಗಣಿಗೆ ಬೇಡಿಕೆ ಬಂದಿರುವುದು ಮಾತ್ರವೇ ಅಲ್ಲದೇ ಅವರ ಈ ಒಂದು ಪ್ರಯತ್ನದ ಫಲ ಎಂಬಂತೆ ಅವರ ಗ್ರಾಮವು ಕೂಡ ಸ್ವಚ್ಛವಾಗಿದೆ.
ಮಿರ್ಜಾಪುರ ಜಿಲ್ಲೆಯ ಸೀಖಡ್ ಹಳ್ಳಿಯ ನಿವಾಸಿಗಳಾಗಿರುವ ಚಂದ್ರಮೌಳಿ ಪಾಂಡೆ ಹಾಗೂ ಮುಖೇಶ್ ಪಾಂಡೆ ಎನ್ನುವ ಇಬ್ಬರು ಸ್ನೇಹಿತರು ಸಗಣಿಯನ್ನು ಬಳಸಿಕೊಂಡು ವರ್ಮಿ ಕಾಂಪೋಸ್ಟ್ ತಯಾರಿಸುತ್ತಿದ್ದಾರೆ. ಮುಖೇಶ್ ಪಾಂಡೆ ಗ್ರಾಮೀಣ ಅಭಿವೃದ್ಧಿ ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದುಕೊಂಡಿದ್ದಾರೆ. ಅಲ್ಲದೆ ಅಹಮದಾಬಾದ್ ನ ಈ ಡಿ ಐ ಬಿಸಿನೆಸ್ ಸ್ಕೂಲಿಂದ ಅವರು ಎಂಬಿಎ ಪದವಿಯನ್ನು ಪಡೆದಿದ್ದಾರೆ. ಏಳು ವರ್ಷಗಳ ಕಾಲ ಒಂದು ಉದ್ಯೋಗ ಕೂಡಾ ಮಾಡಿದ್ದಾರೆ. ಮುಖೇಶ್ ಹೇಳುವಂತೆ ಅವರು ಗ್ರಾಮಕ್ಕೆ ಬಂದಾಗಲೆಲ್ಲ ರಸ್ತೆ ಬದಿಯಲ್ಲಿ ಜಾನುವಾರುಗಳ ಸಗಣಿಯ ರಾಶಿ ಬಿದ್ದಿರುವುದು ನೋಡುತ್ತಿದ್ದರಂತೆ.

ಗ್ರಾಮದಲ್ಲಿ ಯಾರ ಮನೆಯಲ್ಲಿ ಗೋಬರ್ ಗ್ಯಾಸ್ ಇರಲಿಲ್ಲವೋ ಅವರು ಸಗಣಿಯಿಂದ ಬೆರಣಿ ಗಳನ್ನು ತಯಾರಿಸಿ ಬಳಸುತ್ತಿದ್ದರು ಇನ್ನು ಕೆಲವರಿಗೆ ನೀರನ್ನು ಬೆರೆಸಿ ಹೊಲಗಳಲ್ಲಿ ಹರಿಸುತ್ತಿದ್ದರೆ ಇನ್ನೂ ಕೆಲವರು ಹಾಗೆಯೇ ತೋಟಗಳಲ್ಲಿ ಬಳಸುತ್ತಿದ್ದರು. ಇದಾವುದನ್ನೂ ಮಾಡದವರು ರಸ್ತೆ ಬದಿಯಲ್ಲಿ ಸಗಣಿಯನ್ನು ಸುರಿದು ಅದು ರಾಶಿಯಾಗುತ್ತಿತ್ತು. ಆ ಸಗಣಿಯು ಯಾವುದೇ ಉಪಯೋಗಕ್ಕೆ ಬರುತ್ತಿರಲಿಲ್ಲ. ಆದರೆ ಇದನ್ನು ನೋಡಿಯೋ ಮುಖೇಶ್ ಅವರಿಗೆ ವರ್ಮಿ ಕಾಂಪೋಸ್ಟ್ ಮಾಡುವ ಆಲೋಚನೆಯು ಹೊಳೆದಿತ್ತು. ಹೀಗೆ ಅವರಲ್ಲಿ ವರ್ಮಿ ಕಾಂಪೋಸ್ಟ್ ಮಾಡುವ ಆಲೋಚನೆ ಬಂದಮೇಲೆ ಸ್ನೇಹಿತ ಚಂದ್ರಮೌಳಿ ಜೊತೆ ಸೇರಿ ವರ್ಮಿ ಕಾಂಪೋಸ್ಟ್ ಮಾಡುವ ಕೆಲಸವನ್ನು ಆರಂಭಿಸಿದರು.
ಇಂದು ಇದರಿಂದಾಗಿ ಇಬ್ಬರೂ ಸ್ನೇಹಿತರಿಗೂ ಉತ್ತಮವಾದ ಆದಾಯ ಸಿಗುತ್ತಿರುವುದು ಮಾತ್ರವೇ ಅಲ್ಲದೇ ಗ್ರಾಮದ ಜನರಿಗೂ ಕೂಡ ಸಗಣಿಗೆ ಉತ್ತಮ ಬೆಲೆ ಸಿಗುತ್ತಿದೆ. ಮುಖೇಶ್ ಹಾಗೂ ಚಂದ್ರಮೌಳಿ ಅವರು ಒಂದು ಟ್ರಾಲಿ ಸಗಣಿಗೆ ಸಾವಿರದ ಐನೂರು ರೂಪಾಯಿಗಳು ಎಂದು ಬೆಲೆಯನ್ನು ನಿಗಧಿ ಮಾಡಿದ್ದಾರೆ. ಗ್ರಾಮದ ಜನರು ಸಗಣಿಯನ್ನು ಇವರಿಗೆ ಮಾರಾಟ ಮಾಡುತ್ತಾರೆ. ಅವರ ಈ ಪ್ರಯತ್ನದಿಂದ ಗ್ರಾಮವು ಕೂಡಾ ಸ್ವಚ್ಛವಾಗಿದೆ. ಪಶುಸಂಗೋಪನೆ ಮಾಡುವವರು ಸಗಣಿಯನ್ನು ವ್ಯರ್ಥ ಮಾಡದೇ ಅದನ್ನು ಸಂಗ್ರಹಿಸಲು ಆರಂಭಿಸಿದ್ದು, ಅದರಿಂದ ಅವರು ಸುಲಭವಾಗಿ ಯಾವುದೇ ಕಷ್ಟವಿಲ್ಲದೆ ಸಗಣಿಯ ಮೂಲಕ ಹಣವನ್ನು ಗಳಿಸುತ್ತಿದ್ದಾರೆ.
ಚಂದ್ರಮೌಳಿ ಮತ್ತು ಮುಕೇಶ್ ಅವರ ಕಾಂಪೋಸ್ಟ್ ಮಾರಾಟ ಮಿರ್ಜಾಪುರ ಜಿಲ್ಲೆಯ ಇತರೆ ಭಾಗಗಳಿಗೆ ಮಾತ್ರವೇ ಸೀಮಿತವಾಗಿಲ್ಲ.

ಅವರು ಸಿದ್ಧಪಡಿಸುವ ಕಾಂಪೋಸ್ಟ್ ಅನ್ನು ದೆಹಲಿ,, ಮಧ್ಯಪ್ರದೇಶ, ಛತ್ತಿಸ್ಗಢ, ರಾಜಸ್ಥಾನ, ಬಿಹಾರ ಮತ್ತು ಜಾರ್ಖಂಡ್ ನಂತಹ ರಾಜ್ಯಗಳಲ್ಲೂ ಮಾರಾಟ ಮಾಡುತ್ತಾರೆ. ಇವರ ವರ್ಮಿ ಕಾಂಪೋಸ್ಟ್ ಉತ್ಪದನಾ ಕಾರ್ಯವು ನಬಾರ್ಡ್ ಮತ್ತು ಕೃಷಿ ಇಲಾಖೆಯ ಸಹಯೋಗದಿಂದ ಆರಂಭವಾಯಿತು. ಇಂದು ಇವರು ಸಿದ್ಧಪಡಿಸುವ ಈ ಕಾಂಪೋಸ್ಟಿಂಗ್ ಬೇರೆ ಬೇರೆ ರಾಜ್ಯಗಳಲ್ಲಿ ಸಾಕಷ್ಟು ಬೇಡಿಕೆ ಇದೆ. ಪ್ರಸ್ತುತ ಅವರ ಈ ಕಾಂಪೋಸ್ಟ್ ಗೆ ವಿದೇಶಗಳಿಂದ ಕೂಡಾ ಬೇಡಿಕೆ ಬರುತ್ತಿದ್ದು ವರ್ಮಿ ಕಾಂಪೋಸ್ಟ್ ಅನ್ನು ವಿದೇಶಗಳಿಗೆ ರಫ್ತು ಮಾಡಲು ಸಿದ್ಧತೆಗಳನ್ನು ನಡೆಸುತ್ತಿದ್ದಾರೆ. ಇದಲ್ಲದೇ ಮುಖೇಶ್ ಹಾಗೂ ಚಂದ್ರಮೌಳಿ ಎರೆಹುಳು ಪಾಲನೆಯನ್ನು ಕೂಡ ಪ್ರಾರಂಭಿಸಿದ್ದಾರೆ.
ಈಗ ಅವರು ಎರೆಹುಳುಗಳ ಮಾರಾಟವನ್ನು ವರ್ಮಿ ಕಾಂಪೋಸ್ಟ್ ಜೊತೆಗೆ ಮಾಡುತ್ತಿದ್ದಾರೆ. ಚಂದ್ರಮೌಳಿ ಅವರು ಹೇಳುವಂತೆ 40 ಸಾವಿರ ರೂಪಾಯಿಗಳ ಬಂಡವಾಳವನ್ನು ಹೂಡಿ ಆಸ್ಟ್ರೇಲಿಯನ್ ಜಾತಿಯ ಎರೆಹುಳುಗಳನ್ನು ಖರೀದಿಸಿದ್ದಾರಂತೆ. ಹಾಗೆ ಪ್ರಾರಂಭಿಸಿದ ಎರೆಹುಳು ಪಾಲನೆಯಿಂದ ಇದೀಗ ವರ್ಷವೊಂದಕ್ಕೆ ಸುಮಾರು ಐದು ಲಕ್ಷ ರೂಪಾಯಿಗಳ ಆದಾಯವನ್ನು ಅವರು ಗಳಿಸುತ್ತಿದ್ದಾರೆ. ಚಂದ್ರಮೌಳಿ ಹಾಗೂ ಮುಖೇಶ್ ಅವರೇ ಹೇಳುವಂತೆ ಒಂದು ಕಿಲೋ ಗೊಬ್ಬರವನ್ನು ತಯಾರಿಸಲು ಮೂರು ರೂಪಾಯಿ ಖರ್ಚಾಗುತ್ತದೆ. ಅವರು ಒಂದು ಕಿಲೋ ಹತ್ತು ರೂಪಾಯಿಗೆ ಮಾರಾಟ ಮಾಡುತ್ತಾರೆ. 1, 2 , 5 , 10 ಮತ್ತು 20 ಕಿಲೋ ಗ್ರಾಂ ಗಳ ಪ್ಯಾಕ್ ನಲ್ಲಿ ಮಾರಾಟಕ್ಕೆ ಇದು ಲಭ್ಯವಿದೆ.

ಈ ಗೊಬ್ಬರದ ಮೂಲಕವೇ ಅವರ ಒಂದು ವರ್ಷದ ಟರ್ನ್ ಓವರ್ 28 ಲಕ್ಷ ರೂಪಾಯಿಗಳು ಎನ್ನಲಾಗಿದೆ. ಸಸ್ಯಗಳ ನರ್ಸರಿಗಳಿಂದ ವರ್ಮಿ ಕಾಂಪೋಸ್ಟ್ ಗೆ ಹೆಚ್ಚಿನ ಬೇಡಿಕೆ ಇದೆ ಎನ್ನಲಾಗಿದ್ದು, ರೈತರು ಕೂಡಾ ತಮ್ಮ ಹೊಲ ಗದ್ದೆಗಳಿಗಾಗಿ ವರ್ಮಿಕಾಂಪೋಸ್ಟ್ ಖರೀದಿಯನ್ನು ಮಾಡುತ್ತಾರೆ ಎನ್ನಲಾಗಿದೆ. ರೈತರ ಆರ್ಥಿಕ ಸ್ಥಿತಿಯನ್ನು ಸರಿಪಡಿಸಲು ಸರ್ಕಾರಿ ಮಟ್ಟದಲ್ಲಿ ಲಭ್ಯವಿರುವ ಸೌಲಭ್ಯಗಳ ಲಾಭವನ್ನು ಪಡೆದುಕೊಳ್ಳುವ ಮೂಲಕ ರೈತರ ತಂಡವನ್ನು ರಚಿಸಿ ಈ ಯೋಜನೆಯನ್ನು ಪ್ರಾರಂಭಿಸಲಾಗಿದೆ ಎಂದು ಮಿರ್ಜಾಪುರ ಉಪ ಕೃಷಿ ನಿರ್ದೇಶಕ ಅಶೋಕ್ ಉಪಾಧ್ಯಾಯ್ ಹೇಳುತ್ತಾರೆ.