“ಸ್ಪಾ” ಅನುಭವ ನಾಡಿನಲ್ಲೇ ಅಲ್ಲಾ ಕಾಡಿನ ಹಂದಿಗೂ ಕೂಡಾ ಸಿಗುತ್ತೆ ಅಂದ್ರೆ ನಂಬ್ತೀರಾ? ನೋಡಿ ಈ Viral Video
ಸ್ಪಾ ಗಳು ಮತ್ತು ಮಾಸಾಜ್ ಪಾರ್ಲರ್ ಗಳು ನಮ್ಮ ದೇಶದಲ್ಲಿ ಅಷ್ಟಾಗಿ ಜನಪ್ರಿಯವಲ್ಲವಾದರೂ ವಿದೇಶಗಳಲ್ಲಿ ಇದು ಬಹಳ ಫೇಮಸ್. ಅದರಲ್ಲೂ ಬ್ಯಾಂಕಾಂಕ್ ಇದಕ್ಕೆ ಬಹುದೊಡ್ಡ ಉದಾಹರಣೆ ಆಗಿದ್ದು, ಕೆಲವರು ಐಶಾರಾಮೀ ಜೀವನ ನಡೆಸುವ ಮಂದಿ ಅತ್ಯುತ್ತಮವಾದ ಸ್ಪಾ ಅನುಭೂತಿಯನ್ನು ಪಡೆಯಲು ವಿದೇಶಗಳಿಗೆ ಹೋಗಿ ಬರುವುದು ಕೂಡಾ ಉಂಟು. ಸಾಮಾನ್ಯರಿಗೆ ಈ ಸ್ಪಾ ಗಳು, ಮಸಾಜ್ ಸೆಂಟರ್ ಗಳು ಎಂದರೆ ಅದು ಒಂದು ರೀತಿಯಲ್ಲಿ ಬಹಳ ದೂರವಾದ ಮಾತು ಎಂದೇ ನಾವು ಹೇಳಬಹುದು. ಸಾಲದಕ್ಕೆ ನಮ್ಮ ದೇಶದಲ್ಲಿ ಕೆಲವು ಕಡೆ ಸ್ಪಾ ಹೆಸರಿನಲ್ಲಿ ನಡೆದಿರುವ ಕೆಲವು ಘಟನೆಗಳು ಸಭ್ಯರನ್ನು ಅತ್ತ ಕಡೆ ಹೆಜ್ಜೆ ಹಾಕಲು ಹೆದರುವುದು ಅಥವಾ ಹಿಂಜರಿಕೆ ಪಡುವುದು ಕೂಡಾ ಸಾಮಾನ್ಯವಾದ ವಿಷಯವಾಗಿದೆ.
ಆದರೆ ಈ ಸ್ಪಾ ಗಳಲ್ಲಿ ಸಿಗುವ ಸೇವೆಯಿಂದ ಒತ್ತಡದ ಜೀವನದಲ್ಲಿ ಉಂಟಾದ ಆಯಾಸವನ್ನು ಕಡಿಮೆ ಮಾಡುವುದು ಮಾತ್ರವಲ್ಲದೇ, ನಮ್ಮ ಮೈಮನಸ್ಸುಗಳಿಗೆ ಅದು ಆಹ್ಲಾದಕರವಾದ ಅನುಭೂತಿಯನ್ನು ನೀಡುತ್ತದೆ ಹಾಗೂ ನಮ್ಮ ಮನಸ್ಸು ಹಾಗೂ ದೇಹಕ್ಕೆ ಒಂದು ಅದ್ಭುತವಾದ ರಿಲಾಕ್ಸೇಷನ್ ಮೂಡಿಗೆ ನಮ್ಮನ್ನು ಕರೆದುಕೊಂಡು ಹೋಗುತ್ತದೆ. ಇಂತಹ ಒಂದು ಸ್ಪಾ ನ ಅನುಭವ ಪ್ರಾಣಿಗಳಿಗೆ ಕೂಡಾ ದಕ್ಕಿದರೆ ಹೇಗೆ? ಏನಿದು ತಮಾಷೆ, ಪ್ರಾಣಿಗಳಿಗೂ ಸ್ಪಾ ನ ಏನಿದು ಅರ್ಥವಿಲ್ಲದ ಮಾತು ಅಂತೀರಾ. ಈ ಮಾತು ಅರ್ಥವಿಲ್ಲದ್ದು ಅನಿಸಬಹುದು ಆದರೆ ಈ ಮಾತು ಹೇಳೋ ದಕ್ಕೆ ಒಂದು ಕಾರಣ ಇದೆ. ಅದನ್ನು ತಿಳಿದ ಮೇಲೆ ನೀವು ಕೂಡಾ ಆಶ್ಚರ್ಯ ಪಡೋದು ಖಂಡಿತ.
ಸೋಶಿಯಲ್ ಮೀಡಿಯಾದಲ್ಲಿ ಒಂದು ವೀಡಿಯೋ ವೈರಲ್ ಆಗಿದ್ದು, ಇದು ನಿಜಕ್ಕೂ ಪ್ರಾಣಿಗಳ ಮಧ್ಯೆ ಇರೋ ಒಂದು ವಿಶೇಷವಾದ ಹೊಂದಾಣಿಕೆಯನ್ನು ನಮಗೆ ತೋರಿಸೋದು ಮಾತ್ರವೇ ಅಲ್ಲದೇ ಪ್ರಕೃತಿಯಲ್ಲಿನ ಒಂದು ವೈವಿದ್ಯವನ್ನು ನೋಡುವ ಅವಕಾಶವನ್ನು ಇದು ನಮಗೆ ನೀಡಿದೆ. ಇಷ್ಟಕ್ಕೂ ವೈರಲ್ ಆಗಿರೋ ವೀಡಿಯೋ ಏನು ಅಂತೀರಾ? ಬನ್ನಿ ಹೇಳ್ತೀವಿ. ಈ ವೀಡಿಯೋದಲ್ಲಿ ವಾರ್ತೋಗ್ (warthog) ಎನ್ನುವ ಹಂದಿಯ ಜಾತಿಗೆ ಸೇರಿದ ಪ್ರಾಣಿಯು ಕಾಡಿನಲ್ಲಿ ಮುಂಗುಸಿಗಳ ಜೊತೆಗೆ ಹೊಂದಿರುವ ವ್ಯಾವಹಾರಿಕವಾದ ಬಂಧವನ್ನು ನಾವು ನೋಡಬಹುದಾಗಿದೆ.
ವಾರ್ತೋಗ್ ಒಂದು ಬಲಿಷ್ಠವಾದ ಹಂದಿಯಾಗಿದೆ. ಇದು ಕಾಡಿನಲ್ಲಿ ನಡೆದು ಬರುತ್ತಾ ಮುಂಗುಸಿಗಳ ಒಂದು ದಂಡು ಬೀಡು ಬಿಟ್ಟಿರುವ ಕಡೆಗೆ ಬರುತ್ತದೆ. ಹಂದಿಯನ್ನು ನೋಡಿದ ಮುಂಗುಸಿ ಗಳು ಅಲ್ಲಿಂದ ಓಡುವುದಿಲ್ಲ, ಬದಲಿಗೆ ಅವು ಅದಕ್ಕಾಗಿಯೇ ಕಾಯುತ್ತಿದ್ದವೇನೋ ಎಂಬಂತೆ ಕಾರ್ಯ ತತ್ಪರವಾಗುತ್ತವೆ. ಆ ದೊಡ್ಡ ಗಾತ್ರದ ಹಂದಿ ತಮ್ಮ ಬಳಿ ಬಂದ ಕೂಡಲೇ ಎಲ್ಲಾ ಮುಂಗುಸಿಗಳು ಕೂಡಾ ಅದರ ಮೈಮೇಲೆ, ಕೈ ಕಾಲುಗಳ ಮೇಲೆ ಹತ್ತಿ ತಮ್ಮ ಕಾರ್ಯವನ್ನು ಮಾಡುತ್ತವೆ. ಅವು ಆ ಬಲಿಷ್ಠವಾದ ಪ್ರಾಣಿಯ ದೇಹದ ಮೇಲಿನ ವ್ಯರ್ಥ ಪದಾರ್ಥಗಳನ್ನು ಕಿತ್ತು ತಿನ್ನಲು ಆರಂಭ ಮಾಡುತ್ತವೆ.
ಮುಂಗುಸಿಗಳು ಹಾಗೆ ಮಾಡುವಾಗ ಹಂದಿ ರಿಲ್ಯಾಕ್ಸ್ ಆಗಿ ಒಂದು ಆರಾಮದಾಯಕ ಸ್ಪಾ ದ ಅನುಭವ ಪಡೆಯುವಂತೆ ಹಾಗೆ ನೆಲದ ಮೇಲೆ ಉರುಳಿ ಮಲಗುತ್ತದೆ. ಮುಂಗುಸಿಗಳು ತಮ್ಮ ಕೆಲಸವನ್ನು ತಾವು ಬಹಳ ಅಚ್ಚುಕಟ್ಟಾಗಿ ಮಾಡಿ ಮುಗಿಸಿ ಅಲ್ಲಿಂದ ಹೊರಡುತ್ತವೆ. ಈ ವಿಶೇಷವಾದ ವೀಡಿಯೋವನ್ನು ಈಗಾಗಲೇ ಒಂದು ಲಕ್ಷಕ್ಕೂ ಅಧಿಕ ಜನರು ವೀಕ್ಷಣೆ ಮಾಡಿದ್ದು, ಆರು ಸಾವಿರಕ್ಕೂ ಅಧಿಕ ಮಂದಿ ಕಾಮೆಂಟ್ ಮಾಡಿದ್ದಾರೆ. ಕಾಮೆಂಟ್ ನಲ್ಲಿ ಕೆಲವರು ಹಂದಿ ಮುಂಗುಸಿಗಳ ಸ್ಪಾ ತಾನೇ ಹುಡುಕಿಕೊಂಡಿತೋ ಅಥವಾ ಯಾರಾದರೂ ರೆಕಮೆಂಡ್ ಮಾಡಿದರೋ ಎಂದು ಹಾಸ್ಯ ಚಟಾಕಿ ಹಾರಿಸಿದ್ದಾರೆ. ಅನೇಕರು ವಾರ್ತೊಂಗ್ ಗೆ ಒಳ್ಳೆಯ ರಿಲ್ಯಾಕ್ಸ್ ಮೂಡ್ ಎಂದೂ ಕೂಡಾ ಹೇಳಿದ್ದಾರೆ.