ಸ್ವದೇಶಿ ಮಾದರಿ: ಗ್ರಾಮದಲ್ಲಿ ಸೋಲಾರ್ ಪ್ಲಾಂಟ್ ಹಾಕಿಸಿ ವಿದ್ಯುತ್ ಜೊತೆಗೆ, ಕೃಷಿಗೂ ನೆರವು ನೀಡಿ ಮಾದರಿಯಾದ ಯುವಕ

ಒಂದು ಸಮಸ್ಯೆಯನ್ನೇ ಒಂದು ಅವಕಾಶವನ್ನಾಗಿ ಮಾಡಿಕೊಳ್ಳುವ ಪ್ರತಿಭೆ, ಕೌಶಲ್ಯ ಎಲ್ಲರಲ್ಲೂ ಇರುವುದಿಲ್ಲ. ಈ ಕೌಶಲ್ಯ ಇದ್ದವರು ಮರುಭೂಮಿಯಲ್ಲಿ ಬೇಕಾದರೂ ಬದುಕನ್ನು ಹಸನಾಗಿಸಿಕೊಂಡು ಅನ್ಯರಿಗೆ ಮಾದರಿಯಾಗುವರು ಎನ್ನುವುದರಲ್ಲಿ ಎಳ್ಳಷ್ಟೂ ಅನುಮಾನವೇ ಇಲ್ಲ ಎಂದು ನಾವು ಹೇಳಬಹುದು. ಕೊರೊನಾ ದೇಶಕ್ಕೆ ಕಾಲಿಟ್ಟಾಗ ಬಹುತೇಕ ಎಲ್ಲ ಉದ್ಯಮಗಳು ಕೂಡಾ ಬಂದ್ ಆಗಿದ್ದು ಮಾತ್ರವೇ ಅಲ್ಲದೇ, ಹೊಸ ಉದ್ಯೋಗಾವಕಾಶಗಳ ಗತಿ ಕೂಡಾ ಮಂದವಾಗಿತ್ತು. ಈ ವೇಳೆಯಲ್ಲಿ ಯುವಕನೊಬ್ಬನು ತನಗೆ ಮಾತ್ರವೇ ಅಲ್ಲದೇ ತನ್ನ ಗ್ರಾಮದ ಜನರಿಗೂ ಕೂಡಾ ಉದ್ಯೋಗವನ್ನು ಕಲ್ಪಿಸಿಕೊಟ್ಟಿದ್ದಾನೆ. ಆತ ಇಡೀ ಗ್ರಾಮದಲ್ಲಿ ಸೋಲಾರ್ ಪ್ಲಾಂಟ್ ಗಳನ್ನು ಹಾಕಿಸಿದ್ದು ಇದರಿಂದ ಅನೇಕರಿಗೆ ಉದ್ಯೋಗಾವಕಾಶವು ದೊರೆತಿದೆ. ಆ ಯುವಕನ ಹೆಸರು ಆಮೋದ್ ಪವಾರ್. ಉತ್ತರ ಕಾಶಿಯ ಜಿಲ್ಲಾ ಕೇಂದ್ರದಿಂದ 45 ಕಿಮೀ ದೂರದಲ್ಲಿರುವ ಚಿನ್ಯಾಲಿಸೌಡ್ ನ ಇಂದ್ರ ಟಿಪಾರಿ ಎನ್ನುವ ಹಳ್ಳಿಯ ನಿವಾಸಿ ಈ ಯುವಕ.

ಕಳೆದ ವರ್ಷ ಮಾರ್ಚ್ ತಿಂಗಳಲ್ಲಿ ಕೊರೊನಾ ಎಂದು ದೇಶ ಲಾಕ್ ಡೌನ್ ಆದ ಸಂದರ್ಭದಲ್ಲಿ ಆಮೋದ್ ಬೆಟ್ಟದ ಮೇಲೆ ಸೋಲಾರ್ ವಿದ್ಯುತ್ ಸ್ಥಾವರದ ನಿರ್ಮಾಣದ ಕಾರ್ಯದಲ್ಲಿ ನಿರತರಾಗಿದ್ದರು.‌ ಇದರ ಮೂಲಕವೇ ಅವರು ಕೋವಿಡ್ ನ ಪರಿಸ್ಥಿತಿಯಲ್ಲೇ ಹೊಸ ಉದ್ಯೋಗದ ಮಾದ್ಯಮವನ್ನು ಕೂಡಾ ಸ್ಥಾಪಿಸಿದರು. ಇದಲ್ಲದೇ ಕೋವಿಡ್ ನಿಂದ ಉದ್ಯೋಗಗಳನ್ನು ಕಳೆದುಕೊಂಡು ಗ್ರಾಮಕ್ಕೆ ಮರಳಿದವರಿಗೆ ಆಮೋದ್ ಹೊಸ ಆದಾಯದ ಮಾರ್ಗಗಳನ್ನು ಕೂಡಾ ಒದಗಿಸಿದ್ದಾರೆ. ಆಮೋದ್ ಅವರು 200 ಕಿಲೋವ್ಯಾಟ್ ವಿದ್ಯುತ್ ನ ಉತ್ಪಾದನೆಯನ್ನು ಮಾಡುತ್ತಾರೆ.‌ ಇದರ ಜೊತೆಗೆ ಅವರು ಕೋಳಿ ಸಾಕಣೆ, ಹಸು ಸಾಕಣೆ, ತರಕಾರಿ ಕೃಷಿಯನ್ನು ಕೂಡಾ ಮಾಡುತ್ತಾರೆ.

ವಿಶೇಷವೆಂದರೆ ಆಮೋದ್ ಅವರ ಸ್ವ ಉದ್ಯೋಗದ ಆಧುನಿಕ ಮಾದರಿಯಿಂದ ಆ ರಾಜ್ಯದ ಮುಖ್ಯಮಂತ್ರಿ ಆಗಿರುವ ತ್ರಿವೇಂದ್ರ ಸಿಂಗ್ ರಾವತ್ ಅವರು ಕೂಡಾ ಪ್ರಭಾವಿತರಾಗಿದ್ದಾರೆ ಎನ್ನುವುದು ಕೇಳಿದಾಗ ಆಮೋದ್ ಅವರ ಪರಿಶ್ರಮ ಹಾಗೂ ಅವರ ಸಾಧನೆ ಏನೆಂಬುದರ ಅರಿವು ನಮಗಾಗುತ್ತದೆ. ಅಲ್ಲದೇ ಅವರು ಆಮೋದ್ ಅವರ ಕಾರ್ಯವೈಖರಿಯನ್ನು ಬಹಳವಾಗಿ ಮೆಚ್ಚಿದ್ದಾರೆ ಕೂಡಾ. ಆಮೋದ್ ಅವರ ಬಳಿ ಸ್ವಲ್ಪ ಬಂಜರು ಭೂಮಿ ಇತ್ತು. ಆದರೆ ಅವರು ಅದನ್ನು ಸದುಪಯೋಗ ಪಡಿಸಿಕೊಳ್ಳುವ ಆಲೋಚನೆಯನ್ನು ಮಾಡಿದ್ದರು. ಅದಕ್ಕಾಗಿಯೇ ಅವರು ಆ ಜಮೀನಿನಲ್ಲಿ ಸೋಲಾರ್ ಪ್ಲಾಂಟ್ ಗಳನ್ನು ನಿರ್ಮಾಣ ಮಾಡಿಸಲು ತೀರ್ಮಾನವನ್ನು ಮಾಡಿದರು.

ಅವರು 2019 ರಲ್ಲಿ ಸೋಲಾರ್ ಪ್ಲಾಂಟ್ ಯೋಜನೆಗೆ ಅರ್ಜಿಯನ್ನು ಸಲ್ಲಿಸಿದರು. ಈ ಯೋಜನೆಯನ್ನು ಕಾರ್ಯರೂಪಕ್ಕೆ ತರಲು ಅವರು ಬ್ಯಾಂಕ್ ನಿಂದ 80 ಲಕ್ಷ ರೂಪಾಯಿಗಳ ಸಾಲವನ್ನು ಪಡೆದರು. ಅಮೋದ್ ಪನ್ವಾರ್ ಅವರ 200 ಕಿಲೋ ವ್ಯಾಟ್ ಸೋಲಾರ್ ವಿದ್ಯುತ್ ಪ್ಲಾಂಟ್ ನ ಪವರ್ ಗ್ರಿಡ್ ಗಳು ದೇಶದಲ್ಲಿ ಕೊರೊನಾ ಲಾಕ್ ಡೌನ್ ಆಗುವ ಒಂದು ದಿನ ಮೊದಲು ತನ್ನ ಕಾರ್ಯವನ್ನು ಆರಂಭಿಸಿತು. ಕೊರೊನಾ ಲಾಕ್ ಡೌನ್ ನಿಂದ ಗ್ರಾಮದ ಅನೇಕ ಯುವಕರು ಉದ್ಯೋಗ ಕಳೆದುಕೊಂಡು ಗ್ರಾಮಕ್ಕೆ ಹಿಂತಿರುಗಿ ಬರುತ್ತಿದ್ದರೆ, ಆಮೋದ್ ಗ್ರಾಮದಲ್ಲೇ ಇದ್ದು ಒಳ್ಳೆ ಸಂಪಾದನೆಯನ್ನು ಮಾಡುತ್ತಿದ್ದರು.

ಸೋಲಾರ್ ಪ್ಲಾಂಟ್ ನ ಸ್ಥಾಪನೆಯ ನಂತರ ಅವರು ಸುತ್ತ ಮುತ್ತಲಿನ ಬಂಜರು ಭೂಮಿಯನ್ನು ಕೂಡಾ ಫಲವತ್ತಾಗಿಸಲು ನಿರ್ಧಾರವನ್ನು ಮಾಡಿದರು. ಅವರು ಕೃಷಿಯನ್ನು ಮಾಡಲು ಆರಂಭಿಸಿದರು. ಅವರ ಸೋಲಾರ್ ಪ್ಲಾಂಟ್ ನ ಹತ್ತಿರದಲ್ಲೇ ಕೃಷಿ, ಹಸು ಸಾಕಣೆ, ಕೋಳಿ ಸಾಕಣೆಯನ್ನು ಆರಂಭಿಸಿದರು. ರಾಜ್ಯದ ಮುಖ್ಯ ಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ಅವರು ಕಳೆದ ವರ್ಚ ಸೆಪ್ಟೆಂಬರ್ 30, 2020 ರಂದು ಆಮೋದ್ ಅವರ ಸೋಲಾರ್ ಪ್ಲಾಂಟ್ ನ ವೀಕ್ಷಣೆ ಮಾಡಲು ಖುದ್ದು ಆಗಮಿಸಿದ್ದರು. ಅವರು ಆಮೋದ್ ಅವರ ಕಾರ್ಯವನ್ನು ಬಹಳವಾಗಿ ಮೆಚ್ಚಿದರು. ಆಮೋದ್ ಅವರ ಪವರ್ ಪ್ಲಾಂಟ್ ನಲ್ಲಿ ಈಗಾಗಲೇ ಎರಡೂವರೆ ಲಕ್ಷ ಯೂನಿಟ್ ಗೂ ಅಧಿಕ ವಿದ್ಯುತ್ ಉತ್ಪಾದನೆ ನಡೆದಿದೆ.

ಅವರು ಸೌರ ವಿದ್ಯುತ್ ಸ್ಥಾವರವು ವಾರ್ಷಿಕವಾಗಿ ಸರಾಸರಿ 3 ಲಕ್ಷ ಯುನಿಟ್ ವಿದ್ಯುತ್ ಉತ್ಪಾದಿಸುತ್ತದೆ. ಪ್ರಸ್ತುತ, ಪ್ರತಿ ಯೂನಿಟ್‌ಗೆ 4.38 ರೂ.ಗಳ ದರದಲ್ಲಿ ವಿದ್ಯುತ್ ಖರೀದಿಸಲಾಗುತ್ತಿದೆ. ಆಮೋದ್ ಅವರು ಹೇಳುವಂತೆ ಬೆಟ್ಟದ ಮೇಲಿನ ಜಾಗ ಸೌರ ಶಕ್ತಿಯು ಉದ್ಯೋಗದ ಒಂದು ಮೂಲವಾಗಿದೆ. ಭೂಮಿಯ ಕೊರತೆ ಇರುವವರು 25 ಕಿಲೋ ವ್ಯಾಟ್ ನ ಸೌರ ಸ್ಥಾವರದ ಸ್ಥಾಪನೆಯನ್ನು ಮಾಡಬಹುದಾಗಿದೆ. ಇದಲ್ಲದೇ ಅದರ ಜೊತೆಗೆ ತರಕಾರಿ ಬೆಳೆಯುವುದು, ಪಶು ಸಂಗೋಪನೆ ಮತ್ತು ಕೋಳಿ ಸಾಕಾಣಿಕೆ ಕೂಡಾ ಯುವಕರಿಗೆ ಉತ್ತಮವಾದ ಆದಾಯದ ಮೂಲ ಎಂದು ಹೇಳುತ್ತಾರೆ.