ಹಳೆಯ ವಸ್ತು ಮಾರಾಟ ಮಾಡುವ ವ್ಯಕ್ತಿಗೆ ಜಾಕ್ ಪಾಟ್: ಲಕ್ಷಗಳಲ್ಲಿ ಖರೀದಿಸಿದ ಹಳೆಯ ವಸ್ತುಗಳಿಂದ ಕೋಟಿಗಳನ್ನು ಗಳಿಸಿದ.

ಕೆಲವರಿಗೆ ಪುರಾತನ ವಸ್ತುಗಳನ್ನು ಮಾರುವುದು ಹಾಗೂ ಖರೀದಿಸುವುದು ಒಂದು ಹವ್ಯಾಸವಾಗಿರುತ್ತದೆ. ದೇಶದಲ್ಲಿ ಕೆಲವೆಡೆ ಹಾಗೂ ವಿದೇಶಗಳಲ್ಲಿ ಕೂಡಾ ಇಂತಹ ಪುರಾತನ ವಸ್ತುಗಳನ್ನು ಮಾರಾಟ ಮಾಡುವ ಅಂಗಡಿಗಳು ಅನೇಕ ಲಭ್ಯವಿದೆ. ಕೆನಡಾದಲ್ಲಿ ಇಂತಹದೇ ಒಂದು ಪುರಾತನ ವಸ್ತುಗಳನ್ನು ಮಾರಾಟಮಾಡುವ ಅಂಗಡಿಯ ಮಾಲೀಕನ ಜೀವನದಲ್ಲಿ ನಡೆದಿರುವ ಒಂದು ಅದ್ಭುತ ಎನಿಸುವ ಘಟನೆ ಇದೀಗ ಸೋಶಿಯಲ್ ಮೀಡಿಯಾ ಗಳಲ್ಲಿ ಬಹಳ ದೊಡ್ಡ ಸದ್ದನ್ನು ಮಾಡುತ್ತಿದ್ದು, ಪ್ರತಿಯೊಬ್ಬರ ಗಮನವನ್ನು ಕೂಡಾ ತನ್ನತ್ತ ಸೆಳೆಯುತ್ತಿದೆ. ಇನ್ನು ವಿಚಾರಕ್ಕೆ ಬರುವುದಾದರೆ ಪುರಾತನ ವಸ್ತುಗಳನ್ನು ಮಾರಾಟ ಮಾಡುವ ಅಂಗಡಿಯನ್ನು ನಡೆಸುವಾತ, ಒಬ್ಬ ಸಂಗೀತಗಾರ‌ ಮನೆಯಿಂದ ಕೆಲವು ಹಳೆಯ ವಸ್ತುಗಳನ್ನು ಖರೀದಿ ಮಾಡಿದ್ದಾನೆ. ಆತ ಲಕ್ಷಗಳ ಬೆಲೆಯಲ್ಲಿ ಖರೀದಿ ಮಾಡಿದಂತಹ ವಸ್ತುಗಳು ಆತನ ಜೀವನವನ್ನೇ ಬದಲಿಸುತ್ತದೆ ಎಂಬುದು ಆತನಿಗೆ ಕೂಡ ತಿಳಿದಿರಲಿಲ್ಲ. ಹಾಗಾದಲ್ಲಿ ಆ ವ್ಯಕ್ತಿ ಯಾರು? ಅವರ ಜೀವನದಲ್ಲಿ ನಡೆದಂತಹ ಆಸಕ್ತಿಕರ ಘಟನೆಯಾದರೂ ಏನು? ಎಂಬುದನ್ನು ತಿಳಿಯುವ ಆಸಕ್ತಿ ನಿಮಗೆ ಮೂಡಿದ್ದರೆ ಅದಕ್ಕೆ ಇಲ್ಲಿದೆ ಉತ್ತರ.

ಅಲೆಕ್ಸ್ ಆರ್ಚ್‌ಬೋಲ್ಡ್ ತನ್ನ ಹೆಂಡತಿಯೊಂದಿಗೆ ಸುಮಾರು 5 ವರ್ಷಗಳ ಹಿಂದೆ ಕೆನಡಾದ ಎಡ್ಮಂಟನ್ ನಗರದಲ್ಲಿ ಕ್ಯೂರಿಯಾಸಿಟಿ ಇಂಕ್ ಹೆಸರಿನ ಈ ಪುರಾತನ ವಸ್ತುಗಳ ಮಾರಾಟದ ಅಂಗಡಿಯನ್ನು ತೆರೆದನು. ಕಳೆದ ವರ್ಷ ಡಿಸೆಂಬರ್ ನಲ್ಲಿ ಅಲೆಕ್ಸ್ ಒಬ್ಬರು ದಿವಂಗತರಾದ ಪಿಯಾನೋ ಶಿಕ್ಷಕರ ಮನೆಯಲ್ಲಿನ ಹಳೆಯ ವಸ್ತುಗಳನ್ನು ಖರೀದಿ ಮಾಡಿದ್ದರು. ಆ ಪಿಯಾನೋ ಶಿಕ್ಷಕಿಯ ಹೆಸರು ಬೆಟ್ಟಿ ಜೋನ್ ರಾಕ್. ಈ ಮಹಿಳೆಗೆ 76 ವರ್ಷ ವಯಸ್ಸಾಗಿತ್ತು ಎನ್ನಲಾಗಿದ್ದು ಆಕೆ ಒಂಟಿಯಾಗಿ ಜೀವನವನ್ನು ನಡೆಸುತ್ತಿದ್ದರು. ಕಳೆದ ಡಿಸೆಂಬರ್ ನಲ್ಲಿ ಆಕೆಯ ನಿಧನಾನಂತರ ಅಲೆಕ್ಸ್ ಸುಮಾರು ಹತ್ತು ಸಾವಿರ ಡಾಲರ್ ಹಣವನ್ನು ನೀಡಿ ಅಂದರೆ ಏಳು ಲಕ್ಷ ರೂಪಾಯಿಗಳನ್ನು ಕೊಟ್ಟು ಆಕೆಯ ಮನೆಯಲ್ಲಿದ್ದ ಹಳೆಯ ಸಾಮಾನುಗಳನ್ನು ಖರೀದಿ ಮಾಡಿದ್ದಾರೆ.

ಆದರೆ ಏಳು ಲಕ್ಷಗಳನ್ನು ಕೊಟ್ಟು ಅವರು ಖರೀದಿ ಮಾಡಿದ ವಸ್ತುಗಳೇ ಅವರನ್ನು ಒಬ್ಬ ಕೋಟ್ಯಾಧಿಪತಿಯನ್ನಾಗಿ ಮಾಡುತ್ತದೆ ಎನ್ನುವ ವಿಷಯ ಸ್ವತಃ ಅಲೆಕ್ಸ್ ಕೂಡ ತಿಳಿದಿರಲಿಲ್ಲ. ಅಲೆಕ್ಸ್ ಶಿಕ್ಷಕಿಯ ಮನೆಯಿಂದ ಬೆಳ್ಳಿ ಹಾಗೂ ಚಿನ್ನದ ಆಭರಣಗಳು, ಒಂದು ಬೆಳ್ಳಿಯ ಇಟ್ಟಿಗೆ, ಒಂದಷ್ಟು ಶುದ್ಧ ಬೆಳ್ಳಿಯ ಡಾಲರ್ ಗಳು, ಡಿಸೈನರ್ ಬಟ್ಟೆಗಳು ಹಾಗೂ ಸ್ವಲ್ಪ ಹಣ ಇತ್ಯಾದಿ ಹಲವು ಹತ್ತು ವಸ್ತುಗಳನ್ನು ಖರೀದಿ ಮಾಡಿದ್ದರು. ಅವನ್ನು ಖರೀದಿ ಮಾಡಿದ ನಂತರ ಅಲೆಕ್ಸ್ ಇದು ತಮ್ಮ ಜೀವನದ ಬಹಳ ಲಾಭದಾಯಕ ಹೂಡಿಕೆಯಾಗಿದೆ ಎಂದು ಹೇಳಿಕೊಂಡಿದ್ದಾರೆ. ಅವರು ಈ ಬಗ್ಗೆ ಮಾತನಾಡುತ್ತಾ ಆ ಮನೆಯಿಂದ ಕೊಂಡು ತಂದಿರುವ ಹಳೆಯ ವಸ್ತುಗಳಿಂದ ಸುಮಾರು, 400,000 ಡಾಲರ್ ಗಳು ಅಂದರೆ 2 ಕೋಟಿ 90 ಲಕ್ಷ ರೂಪಾಯಿಗಳನ್ನು ಗಳಿಸುವ ಸಾಧ್ಯತೆಗಳಿವೆ ಎಂದು ತಿಳಿಸಿದ್ದಾರೆ.

ಹಳೆಯ ವಸ್ತುಗಳನ್ನು ಮಾರಾಟ ಮಾಡುವ ಶಾಪ್ ನ ತನ್ನ ವ್ಯವಹಾರದ ಕಾರಣದಿಂದಲೇ ಇಂತಹುದೊಂದು ಅದೊಂದು ದೊಡ್ಡ ಲಾಭವನ್ನು ಪಡೆಯಲು ಸಾಧ್ಯವಾಗಿದೆ ಎನ್ನುವುದು ಅವರ ಅಭಿಪ್ರಾಯವಾಗಿದೆ. ಅಲೆಕ್ಸ್ ಹೀಗೆ ಹಳೆಯ ವಸ್ತುಗಳನ್ನು ಖರೀದಿ ಮಾಡಿದ ಎಲ್ಲಾ ವಿಚಾರವನ್ನು ಕೂಡಾ ತಮ್ಮ ಯುಟ್ಯೂಬ್ ಚಾನೆಲ್ ನ ಮೂಲಕ ಎಲ್ಲರೊಂದಿಗೆ ಹಂಚಿಕೊಂಡಿದ್ದಾರೆ. ಅವರು ಸಂಗೀತ ಶಿಕ್ಷಕಿಯ ಮನೆಯಿಂದ ಖರೀದಿ ಮಾಡಿದ ವಸ್ತುಗಳ ಕುರಿತಾದ ಒಪ್ಪಂದವನ್ನು ಹಾಗೂ ಆ ಖರೀದಿಯಿಂದ ದೊರೆತ ವಸ್ತುಗಳನ್ನು ಕೂಡ ವಿಡಿಯೋ ಮೂಲಕ ಎಲ್ಲರಿಗೂ ತೋರಿಸಿದ್ದಾರೆ.‌ ಅಲೆಕ್ಸ್ ತಮ್ಮ ವ್ಯಾಪಾರ ಹಾಗೂ ವ್ಯವಹಾರಕ್ಕೆ ಸಂಬಂಧಿಸಿದ ಬಹಳ ಆಸಕ್ತಿಕರ ಎನ್ನುವಂತಹ ವಿಷಯಗಳನ್ನು ಕುರಿತಾಗಿ ತಮ್ಮ ಯುಟ್ಯೂಬ್ ಚಾನೆಲ್ ನಲ್ಲಿ ವಿಡಿಯೋಗಳನ್ನು ಮಾಡಿ ಎಲ್ಲರೊಟ್ಟಿಗೆ ಹಂಚಿಕೊಂಡು ಮಾಹಿತಿಯನ್ನು ನೀಡುತ್ತಿರುತ್ತಾರೆ.

ಅದೃಷ್ಟ ಎನ್ನುವುದು ಯಾರಿಗೆ, ಹೇಗೆ ಒಲಿದು ಬರುತ್ತದೆ ಎನ್ನುವುದನ್ನು ಊಹಿಸಲು ಕೂಡಾ ಸಾಧ್ಯವಿಲ್ಲ ಎಂದು ಹೇಳುವುದು ಇದಕ್ಕೆ ಇರಬಹುದು ಎಂದು ಈ ಘಟನೆಯ ಬಗ್ಗೆ ತಿಳಿದಾಗ ನಮಗೂ ಕೂಡಾ ಅನಿಸುತ್ತದೆ‌. ಹಳೆಯ ವಸ್ತುಗಳನ್ನು ಖರೀದಿಸಿ ಅದನ್ನು ಮಾರಾಟ ಮಾಡಿಯೇ ಕೋಟಿಗಳನ್ನು ಅಲೆಕ್ಸ್ ಗಳಿಸಿರುವುದನ್ನು ನೋಡಿ ಇದರಿಂದ ಪ್ರೇರಿತರಾಗಿ ಇನ್ನೊಂದಷ್ಟು ಜನರು ಇಂತಹ ಪುರಾತನ ವಸ್ತುಗಳನ್ನು ಮಾರಾಟ ಮಾಡುವ ಅಂಗಡಿಯನ್ನು ತೆರೆದರೂ ಕೂಡಾ ನಾವು ಆಶ್ಚರ್ಯವನ್ನು ಪಡಬೇಕಾಗಿಲ್ಲ. ಆದರೆ ಅಲೆಕ್ಸ್ ಗೆ ಮಾತ್ರ ಜಾಕ್ ಪಾಟ್ ಹೊಡೆದಿದ್ದು, ಹಳೆಯ ವಸ್ತುಗಳ ಮಾರಾಟ ಆತನ ಜೀವನಕ್ಕೆ ಗುಡ್ ಲಕ್ ತಂದು ಕೊಟ್ಟಿದೆ.