12 ನೇ ವಯಸ್ಸಿಗೆ ಕೈಯಲ್ಲಿ ಕೇವಲ 110 ರೂ. ಹಿಡಿದು ಮುಂಬೈಗೆ ಓಡಿದವನು ಇಂದು 40 ಕೋಟಿ ಬೆಲೆಯ ಕಂಪನಿಯ ಮಾಲೀಕ!

ವ್ಯಕ್ತಿಯ ದೇಹದಲ್ಲಿ ಕಷ್ಟ ಮಾಡುವಂತಹ ಶಕ್ತಿ ಇದ್ದು ಅದರ ಜೊತೆಗೆ ಮಾಡಿಯೇ ತೀರುತ್ತೇನೆ ಎನ್ನುವ ಛಲ ಇದ್ದರೆ ಆತನ ಪರಿಸ್ಥಿತಿ ಎಂಥದ್ದೇ ಬಡತನದ್ದಿರಲಿ ಆತ ನಿಶ್ಚಿತವಾಗಿಯೂ ತನ್ನ ಜೀವನವನ್ನು ಬದಲಿಸಿಕೊಳ್ಳುತ್ತಾನೆ. ಇಂಥ ಒಬ್ಬ ವ್ಯಕ್ತಿಯ ನೈಜ ಕಥೆಯನ್ನೇ ಈ ಅಂಕಣದಲ್ಲಿ ಓದುವಾ ಮತ್ತು ತಿಳಿಯುವ.

ರಾಜಸ್ಥಾನ ಮೂಲದ ಈ ತರುಣನ ಹೆಸರು ದುರ್ಗಾರಾಮ ಚೌಧರಿ. ತನ್ನ ಹನ್ನೆರಡನೆಯ ವಯಸ್ಸಿಗೆ ಮುಂಬಯಿಗೆ ಓಡಿ ಬಂದವ. ಬರುವಾಗ ಹತ್ತಿರ ಬರೀ 110 ₹. ಎಷ್ಟೋ ದಿನಗಳ ವರೆಗೆ ಮುಂಬಯಿಯ ಫುಟ್ಪಾಥ್ ನಲ್ಲಿ ಜೀವನ. ಆದರೆ ಗುರಿಯನ್ನು ಬೆನ್ನಟ್ಟಿ ಸಫಲವಾಗಿ ಇಂದು 40 ಕೋಟಿ ರೂಪಾಯಿಗಳ ಕಂಪನಿಯ ಒಡೆತನದ ಮಾಲೀಕ. ಹೇಗೆ ಅಂತೀರಾ, ಇಲ್ಲಿದೆ ನೋಡಿ ಅವರ ಕಥೆ….

ಇವರ ತಂದೆ ತಾಯಿ ಇಬ್ಬರೂ ರೈತರು. ಆದರೆ ಇವರಿಗೆ ಬೇಸಾಯದ ಕಡೆಗೆ ಗಮನವಿರಲಿಲ್ಲ. ತಾನು ಏನಾದರೂ ಬೇರೆಯೇ ಮಾಡಬೇಕೆಂಬ ಹಂಬಲ. ಆಗ ಈ ರಾಜ್ಯದ ಹೆಚ್ಚುವರಿ ಜನರು ಉದ್ಯೋಗಕ್ಕಾಗಿ ದಕ್ಷಿಣ ಭಾರತಕ್ಕೆ ಬರುತ್ತಿದ್ದರು. ಈತನು ಅವರ ಜೊತೆಗೆ ಹೋಗಬೇಕೆಂದು ನಿಶ್ಚಯಿಸಿ ಒಂದು ದಿನ ಯಾರಿಗೂ ಹೇಳದೆ ರೈಲಿನಲ್ಲಿ ಕುಳಿತನು. ಗುಜರಾತಿನ ಅಹಮದಾಬಾದ್ ಪ್ರವಾಸ ಮಾಡುವಾಗ ರೈಲಿನಲ್ಲಿ ಯಾರೋ ಒಬ್ಬರು ಮುಂಬಯಿಗೆ ಹೋಗುವ ಬಗ್ಗೆ ಮಾತನಾಡುತ್ತಿದ್ದರು. ಅವರ ಮಾತು ಕೇಳಿ ಮುಂಬಯಿಗೆ ಬಂದರು. ಹತ್ತಿರ ಬರೀ 150 ರೂಪಾಯಿಗಳು. ರೈಲು ಟಿಕೆಟ್ ಗಾಗಿ 40 ರೂಪಾಯಿ ಹೋದ ನಂತರ ಹತ್ತಿರ 110 ₹ ಗಳನ್ನು ತೆಗೆದುಕೊಂಡು ಮುಂಬಯಿಗೆ ಬಂದನು.

ಮೊದಮೊದಲು 6-7 ತಿಂಗಳುಗಳವರೆಗೆ ಜೀವನ ಫುಟ್ಪಾಥ್ ಮೇಲೆಯೇ ನಡೆಯಿತು. ಸಿ ಪಿ ಟ್ಯಾಂಕ್ ಹತ್ತಿರ ಒಂದು ದೇಗುಲವಿತ್ತು. ಎಷ್ಟೋ ದಿವಸ ಅಲ್ಲಿಯ ಪ್ರಸಾದವನ್ನು ತಿಂದೇ ಹೊಟ್ಟೆ ತುಂಬಿಕೊಳ್ಳತೊಡಗಿದನು. ಅಲ್ಲಿಯೇ ಸಮೀಪದಲ್ಲಿದ್ದ ಒಂದು ಕಲ್ಯಾಣಮಂಟಪದಲ್ಲಿ ವೇಟರ್ ಕೆಲಸ ಮಾಡಲು ಶುರು ಮಾಡಿದನು. ಅದಕ್ಕಾಗಿ 15 ರೂಪಾಯಿಗಳು ದೊರೆಯುತ್ತಿದ್ದವು.

ಅದೇ ಸ್ಥಳದಲ್ಲಿ ಒಬ್ಬ ಅಂಗಡಿ ಮಾಲೀಕನಿದ್ದ. ಆತ ದುರ್ಗಾರಾಮನಿಗೆ ಚಿಕ್ಕ ಹುಡುಗನೆಂದು ಆಫೀಸ್ ಬಾಯ್ ನೌಕರಿ ದೊರಕಿಸಿ ಕೊಟ್ಟನು. ಅಲ್ಲಿ ಎರಡೂವರೆ ವರ್ಷ ಕೆಲಸ ಮಾಡಿದನು. ಅದೇ ಸಮಯಕ್ಕೆ ದುರ್ಗಾರಾಮನಿಗೆ ಅಡುಗೆಯ ಜೊತೆಗೆ ಮನೆ ನೋಡಿಕೊಳ್ಳುವುದು ಬರುತ್ತಿತ್ತು. ಹೀಗಾಗಿ ಆತನಿಗೆ ಡಾಕ್ಟರ್ ಮನೆಯಲ್ಲಿ ಕೆಲಸ ಸಿಕ್ಕಿತು.

ಇದೆಲ್ಲ ಮಾಡುವಾಗ ವೀನಸ್ ಕಂಪನಿಯಲ್ಲಿ ಕ್ಯಾಸೆಟ್ ಪ್ಯಾಕಿಂಗ್ ಮಾಡುವ ಕೆಲಸ ಸಿಕ್ಕಿತು. ಅದಾದ ನಂತರ ಒಬ್ಬರ ಸಹಾಯದಿಂದ T ಸೀರಿಜ್ ನಲ್ಲಿ ಕೆಲಸ ಸಿಕ್ಕಿತು. ಅಲ್ಲಿ ಕ್ಯಾಸೆಟ್ ನ ಮಾರ್ಕೆಟಿಂಗ್ ಬಗ್ಗೆ ಮಾಹಿತಿ ಸಿಕ್ಕಿತು. ನೌಕರಿ ಮಾಡುತ್ತಲೇ ರಸ್ತೆಯ ಬದಿಗೆ ಕ್ಯಾಸೆಟ್ ಅಂಗಡಿಯನ್ನು ಓಪನ್ ಮಾಡಿದನು. ಅಲ್ಲಿ ಚೆನ್ನಾಗಿ ಕಮಿಷನ್ ದೊರೆಯಲು ಪ್ರಾರಂಭವಾಯಿತು.

2002 ರ ಹೊತ್ತಿಗೆ ದುರ್ಗಾರಾಮ T ಸೀರಿಜ್ ಕಂಪನಿ ಬಿಟ್ಟು ಕ್ಯಾಸೆಟ್ ಮಾರಾಟ ಕಡೆಗೆ ಹೆಚ್ಚು ಗಮನ ನೀಡಿದನು. ಎರಡೇ ವರ್ಷದಲ್ಲಿ ಆತ ಎರಡು ಕ್ಯಾಸೆಟ್ ಕಂಪನಿಗಳ ಮಾಲೀಕನಾದನು. ಇದೆಲ್ಲ ಮಾಡುವಾಗ ಆತನ ಸಂಪರ್ಕ ಅನೇಕ ಕಲಾಕಾರರ ಜೊತೆಗೂ ಬಂದು ಅವರ ಪರಿಚಯವೂ ಚೆನ್ನಾಗಿ ಆಗಿತ್ತು.

ಮುಂದೆ 2005 ರಲ್ಲಿ ರಿಂಗ್ ಟೋನ್ ಮತ್ತು ಕಾಲರ್ ಟೋನ್ ಟ್ರೆಂಡ್ ಶುರು ಆಗಿತ್ತು. ಬಾಲಿವುಡ್ ಹಾಡುಗಳನ್ನು ಜಾಸ್ತಿ ಜನರು ಡೌನ್ ಲೋಡ್ ಮಾಡಿಕೊಳ್ಳುತ್ತಿದ್ದರು. ಜೊತೆಗೆ ಪ್ರಾದೇಶಿಕ ಹಾಡುಗಳನ್ನು ಅಂದರೆ ರಾಜಸ್ಥಾನಿ, ಗುಜರಾತಿ ಹೀಗೆ ಪ್ರಾದೇಶಿಕ ಹಾಡುಗಳನ್ನು ತಯಾರಿಸುವ ಕಂಪನಿಗೆ ಭೇಟಿ ನೀಡಿದರು. ಆ ಹಾಡುಗಳನ್ನು ಡಿಜಿಟಲ್ ಹಾಡುಗಳಲ್ಲಿ ಕನ್ವರ್ಟ್ ಮಾಡಲು ಶುರು ಮಾಡಿದರು.

2006 ರಲ್ಲಿ ಒಂದು ಗುಜರಾತಿ ಹಾಡು ಬಂದಿತ್ತು. ಆಗ ದುರ್ಗಾರಾಮ ಕಂಪನಿಯ ಜೊತೆಗೆ ಡೀಲ್ ಮಾಡಿ ಈ ಹಾಡನ್ನು ಕನ್ವರ್ಟ್ ಮಾಡಿದನು. ಈ ಹಾಡು ತುಂಬಾ ಪ್ರಸಿದ್ಧಿಯನ್ನು ಪಡೆಯಿತು. ಇದರಿಂದ ದುರ್ಗಾರಾಮನಿಗೆ 20 ಲಕ್ಷ ರೂಪಾಯಿಗಳ ಲಾಭವಾಯಿತು.

ಆನಂತರ ಮುಂದೆ ಯೂಟ್ಯೂಬ್ ಬಂದಿತ್ತು. ಅಷ್ಟರವರೆಗೆ ಇವರು ಸ್ವಂತದ ಕಂಪನಿ ಶುರು ಮಾಡಿದ್ದರು. ಅಲ್ಲಿ ರೀಜನಲ್ ಕಂಟೆಂಟ್ ದೊಡ್ಡ ಪ್ರಮಾಣದಲ್ಲಿ ಯೂಟ್ಯೂಬ್ನಲ್ಲಿ ಬಿಡಲು ಶುರು ಮಾಡಿದರು. ನಂತರ ಇವರು ಕೊಲ್ಕತಾ, ಆಸಾಮ್ ಮತ್ತು ಓಡಿಸಾ ಗೆ ಭೇಟಿ ನೀಡಿದರು. ಅಲ್ಲಿಯ ಪ್ರಾದೇಶಿಕ ಕಂಟೆಂಟ್ ಗಳನ್ನು ಸಹ ಯೂಟ್ಯೂಬ್ನಲ್ಲಿ ಹರಿಬಿಟ್ಟರು.

2017ರಲ್ಲಿ ಅನಿಮೇಶನ್ ಫರ್ಮ ಶುರು ಮಾಡಿದರು. ಸದ್ಯಕ್ಕೆ ಅವರ ಹತ್ತಿರ 65 ಜನ ಕೆಲಸಗಾರರಿದ್ದಾರೆ. ಅವರ ಕಂಪನಿಯ ವಾರ್ಷಿಕ ವಹಿವಾಟು ನಲವತ್ತು ಕೋಟಿಗೂ ಮೀರಿದೆ. ದುರ್ಗಾರಾಮ ಅವರ ಈ ಸಂಘರ್ಷದಿಂದ ಕೂಡಿದ ಪ್ರವಾಸ ಎಲ್ಲರಿಗೂ ಒಂದು ಪ್ರೇರಣೆಯಾಗಿದೆ.