17 ವರ್ಷಗಳಿಂದ ಜೇನು ಸಾಕಣೆ, ವರ್ಷಕ್ಕೆ 120 ಕ್ವಿಂಟಾಲ್ ಜೇನು ಉತ್ಪಾದಿಸಿ ಗಳಿಸುತ್ತಿದ್ದಾರೆ 20 ರಿಂದ 30 ಲಕ್ಷ ರೂ. ಆದಾಯ!

ನಮ್ಮಲ್ಲಿ ಅನೇಕರು ತಾವು ಪ್ರಕೃತಿಗೆ ಹತ್ತಿರವಾಗಿದ್ದು ಅದರ ಮೂಲಕವೇ ಹೆಚ್ಚಿನ ಲಾಭವನ್ನು ಪಡೆದುಕೊಳ್ಳುವ ಪ್ರಯತ್ನವನ್ನು ಕೂಡಾ ಮಾಡುತ್ತಾರೆ. ಕೆಲವರು ಹೊಸ ವಿಧಾನಗಳನ್ನು ಬಳಸಿ ಕೃಷಿ ಮಾಡುತ್ತಿದ್ದಾರೆ. ಇನ್ನೂ ಕೆಲವರು ಮೀನುಗಾರಿಕೆ ಮಾಡುತ್ತಿದ್ದಾರೆ. ಆದರೆ ಇನ್ನೂ ಅನೇಕರಿಗೆ ಕೃಷಿ ಹಾಗೂ ಮೀನುಗಾರಿಕೆ ಇತರೆ ವಿಷಯಗಳಿಂದ ಬರುವ ಆದಾಯದ ವಿಷಯವಾಗಿ ತಿಳಿದಿದೆಯಾದರೂ ಅದನ್ನು ಹೇಗೆ ಅಳವಡಿಸಿಕೊಳ್ಳಬೇಕು ಎಂಬುದನ್ನು ತಿಳಿದುಕೊಳ್ಳುವಲ್ಲಿ ಹಿಂದುಳಿದಿದ್ದಾರೆ ಅಥವಾ ಅದರ ಬಗ್ಗೆ ಅವರಿಗೆ ಅಷ್ಟಾಗಿ ಮಾಹಿತಿ ಇಲ್ಲ. ಇಂದು ನಾವು ಜೇನು ನೊಣಗಳ ಸಾಕಣೆ ಬಗ್ಗೆ, ಅದರಿಂದ ಆದಾಯ ಗಳಿಸುವ ಬಗ್ಗೆ ಹೇಳಲು ಹೊರಟಿದ್ದೇವೆ. ಜೇನು ಸಾಕಣೆ ಮಾಡಲು ಬಯಸಿದರೆ ನೀವು ಉದ್ಯೋಗ ಮಾಡುತ್ತಿದ್ದರೂ, ಅದರ ಜೊತೆಯಲ್ಲಿಯೇ ಜೇನು ಸಾಕಣೆ ಮಾಡಲು ಅವಕಾಶವಿದೆ. ಒಂದು ವೇಳೆ ನೀವು ವ್ಯವಸಾಯ ಮಾಡುತ್ತಿದ್ದರೂ ಕೂಡಾ ಅದರ ಜೊತೆಗೆ ಜೇನು ಸಾಕಣೆಯನ್ನು ಮಾಡುವ ಅವಕಾಶಗಳು ಕೂಡಾ ಹೇರಳವಾಗಿದೆ ಎಂದೇ ಹೇಳಬಹುದಾಗಿದೆ.

ಇದು ಭರತ್ಪುರದ ಒಬ್ಬ ರೈತನ ಕಥೆಯಾಗಿದ್ದು, ಮೊದಲು ಜೇನು ನೊಣಗಳು ಎಂದರೆ ಭಯ ಪಡುತ್ತಿದ್ದ ಅವರು ಇಂದು ಅದೇ ಜೇನು ಸಾಕಣೆ ಮೂಲಕ ಹನ್ನೆರಡು ಲಕ್ಷ ರೂಪಾಯಿ ಆದಾಯ ಗಳಿಸುತ್ತಿದ್ದಾರೆ ಎನ್ನುವುದು ಕೂಡಾ ವಾಸ್ತವ. ಭರತ್ಪುರದ ನಾಗ್ಲಾ ಕಲ್ಯಾಣ್ ಗ್ರಾಮದ ನಿವಾಸಿಯಾಗಿರುವ ಹರ್ದಯಾಲ್ ಸಿಂಗ್ ಅವರು ಹಿಂದಿ ಬಿ.ಇಡಿ ಮತ್ತು ಎಂ ಎ ಮಾಡಿ ಮೊದಲು ಶಿಕ್ಷಕರಾಗಿದ್ದರು. ಆದರೆ ಹದಿನೇಳು ವರ್ಚಗಳ ಹಿಂದೆ ಅವದು ಜೇನು ಸಾಕಣೆಯ ಬಗ್ಗೆ ಆಲೋಚನೆ ಮಾಡಿ ಆ ಕ್ಷೇತ್ರದತ್ತ ಗಮನ ಹರಿಸಿದರು. ಅದರ ಫಲವಾಗಿ ಅವರು ಇಂದು ಉತ್ತಮ ಆದಾಯ ಗಳಿಸುತ್ತಿದ್ದು, ಐಶಾರಾಮೀ ಜೀವನಕ್ಕೆ ಅಗತ್ಯವಿರುವ ಎಲ್ಲಾ ಸೌಲಭ್ಯಗಳನ್ನು ಹೊಂದಿರುವ ಜೀವನ ಅವರದ್ದಾಗಿದೆ.

ಹರ್ದಯಾಲ್ ಸಿಂಗ್ ಅವರು ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿ ಹಿಮಾಚಲ ಪ್ರದೇಶದಿಂದ ಜೇನು ಸಾಕಣೆಗೆ 8 ಬಾಕ್ಸ್ ಗಳನ್ನು ತಂದರು. ಅವರ ಈ ಕಾರ್ಯ ಸಫಲವಾಯಿತು. 8 ಬಾಕ್ಸ್ ಗಳು 550 ಬಾಕ್ಸ್ ಗಳಿಗೆ ಬೆಳೆಯಿತು. ಈಗ ಅವರು ಪ್ರತಿವರ್ಷ 121 ಕ್ವಿಂಟಾಲ್ ಜೇನು ಉತ್ಪಾದನೆ ಮಾಡುತ್ತಿದ್ದಾರೆ.‌ 40 ಜನ ಜೇನು ಸಾಕಣೆದಾರರನ್ನು ತೊಡಗಿಸಿಕೊಂಡಿದ್ದಾರೆ. ಅಲ್ಲದೇ ಒಂದು ಮಿನಿ ಜೇನು ಸಂಸ್ಕರಣಾ ಘಟಕವನ್ನು ಕೂಡಾ ತೆರೆಯುವ ಯೋಜನೆಯನ್ನು ಕೂಡಾ ಅವರು ಹೊಂದಿದ್ದಾರೆ. ಇವರ ಈ ಜೇನು ಸಾಕಣೆ ಇತರೆ ರೈತರಿಗೆ ಕೂಡಾ ಪ್ರೇರಣೆಯನ್ನು ನೀಡಿತು. ಇದೇ ಗ್ರಾಮದ ಮತ್ತೊಬ್ಬ ರೈತ ಜಗದೀಶ್ ಪ್ರಸಾದ್ ಅವರು ಜೇನು ಸಾಕಣೆ ಆರಂಭಿಸಿದರು.

ಜಗದೀಶ್ ಪ್ರಸಾದ್ ಅವರು ಇತರೆ ಕೆಲಸಗಳ ನಡುವೆ ಜೇನು ಸಾಕಣೆ ಆರಂಭಿಸಿದರು. ಆದರೆ ಅವರು ಹೇಳುವಂತೆ ಅವರಿಗೆ ಕೃಷಿಗಿಂತ ಜೇನು ಸಾಕಣೆಯಲ್ಲೇ ಹೆಚ್ಚಿನ ಲಾಭ ದೊರೆಯುತ್ತಿದೆಯಂತೆ.
46 ವರ್ಷದ ಮುಖೇಶ್ ಚಂದ್ರ ಅವರು ಕೂಡಾ ಜೇನು ಸಾಕಣೆಯನ್ನು ಆರಂಭಿಸಿದ್ದು ಅವರು ವಾರ್ಷಿಕ 77 ಲಕ್ಷ ರೂಪಾಯಿಗಳ ಆದಾಯವನ್ನು ಗಳಿಸುತ್ತಿದ್ದಾರೆ. 2003 ರಲ್ಲಿ ಇವರು ಜೇನು ಸಾಕಣೆ ಪ್ರಾರಂಭ ಮಾಡಿದರು. ಜೇನು ಸಾಕಣೆಯ ಜೊತೆಗೆ ಮೇಣದ ಉತ್ಪಾದನೆ ಕೂಡಾ ಇವರು ಮಾಡುತ್ತಾರೆ. ವಾರ್ಷಿಕ 770 ಕ್ವಿಂಟಾಲ್ ಜೇನು ಹಾಗೂ 15 ಕ್ವಿಂಟಾಲ್ ಮೇಣವನ್ನು ಇವರು ಉತ್ಪಾದನೆ ಮಾಡುತ್ತಾರೆ. ಪ್ರಸ್ತುತ ಇವರು ನಾಲ್ಕು ಸಾವಿರ ಜೇನು ಸಾಕಣೆ ಬಾಕ್ಸ್ ಹೊಂದಿದ್ದಾರೆ. ಇವರ ಮಗ ಎಂಬಿಬಿಎಸ್ ಮಾಡುತ್ತಿದ್ದು, ಉಳಿದ ಮಕ್ಕಳಿಗೂ ಒಳ್ಳೆ ವಿದ್ಯಾಭ್ಯಾಸವನ್ನು ನೀಡುತ್ತಿದ್ದಾರೆ.

ಸಾಸಿವೆ ಸಂಶೋಧನಾ ನಿರ್ದೇಶನಾಲಯದ ನಿರ್ದೇಶಕರಾದ ಪಿ.ಕೆ.ರಾಯ್ ಅವರು ಭರತ್ಪುರದಲ್ಲಿ ಉಂಟಾಗಿರುವ ಜೇನು ಕ್ರಾಂತಿಯಿಂದಾಗಿ ಈಗ ಈ ಸ್ಥಳವನ್ನು ಜೇನಿನ ಬಟ್ಟಲು ಎಂದೇ ಕರೆಯಲಾಗುತ್ತಿದೆ ಎಂದಿದ್ದಾರೆ. ಭರತ್ಪುರ ನಿಂತ ನೀರಿನ ಪ್ರದೇಶವಾಗಿದ್ದು, ಇಲ್ಲಿ ಸಾಸಿವೆ ಯನ್ನು ಹೆಚ್ಚಾಗಿ ಬೆಳೆಯಲಾಗುತ್ತದೆ. ಇಲ್ಲಿ ಕೇವಲ 5 ಲಕ್ಷ ಹೆಕ್ಟೇರ್ ಭೂಮಿಯನ್ನು ಮಾತ್ರ ಕೃಷಿ ಮಾಡಲು ಅವಕಾಶವಿದ್ದು, ಸಾಸಿವೆ ಈ ಭೂಮಿಯಲ್ಲಿ ಎರಡೂವರೆ ದಶಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯುತ್ತದೆ. ಆದರೆ ಈ ಬೇಸಾಯವು ಜನರ ಆರ್ಥಿಕ ಪರಿಸ್ಥಿತಿ ಸುಧಾರಣೆಗೆ ಅಷ್ಟೇನು ಸಹಕಾರಿಯಾಗಿರಲಿಲ್ಲ. ಆದರೂ ಜನ ಬೇರೆ ದಾರಿ ಇಲ್ಲದ ಕಾರಣ ಕೃಷಿಯನ್ನೇ ನಂಬಿದ್ದರು. ಆದರೆ ಜೇನು ಉತ್ಪಾದನೆ ಅವರ ಜೀವನದ ದಿಕ್ಕನ್ನೇ ಬದಲಿಸಿದೆ.

ಪಿ.ಕೆ. ರಾಯ್ ಅವರು ಜೇನುಸಾಕಣೆ ಹೇಗೆ ಮಾಡಬೇಕೆಂಬುದರ ಬಗ್ಗೆ ಇಲ್ಲಿನ ರೈತರಿಗೆ ತರಬೇತಿ ನೀಡುತ್ತಾರೆ. ಕಡಿಮೆ ವೆಚ್ಚದಲ್ಲಿ ಹೆಚ್ಚಿನ ಲಾಭವನ್ನು ಹೇಗೆ ಗಳಿಸಬಹುದು? ಎಂದು ಮಾರ್ಗದರ್ಶನ ನೀಡುತ್ತಾರೆ. ಆರಂಭದಲ್ಲಿ ರೈತರಿಗೆ ಭಯವಿತ್ತು ಎನ್ನಲಾಗಿದೆ. ‌ಜೇನು ತಮ್ಮನ್ನು ಕಚ್ಚಿದರೆ ಏನು ಗತಿ ಎನ್ನುವ ಆ ತಂ ಕ ಅವರಲ್ಲಿ ಇತ್ತು. ಒಂದು ಪ್ರಸಂಗದಲ್ಲಿ ಈ ಊರಿನ ಗಂಡಿಗೆ ಹೆಣ್ಣು ನೀಡಲು ಬಂದವರು ಕೂಡಾ ಜೇನು ನೋಡಿ ಓಡಿ ಹೋಗಿದ್ದು ಉಂಟಂತೆ. ಆದರೆ ಪಿ.ಕೆ.ರಾಯ್ ಅವರು ರೈತರಿಗೆ ಜೇನು ಸಾಕಣೆಯ ಬಗ್ಗೆ, ಅದರಿಂದ ಬರುವ ಆದಾಯದ ಬಗ್ಗೆ ಮನವರಿಕೆ ಮಾಡಿಸಿದ ಮೇಲೆ ಎಲ್ಲರೂ ಉತ್ಸಾಹ ತೋರಿದರೆನ್ನಲಾಗಿದೆ.

ಭರತ್ಪುರದಲ್ಲಿ ಜೇನು ಉತ್ಪಾದನೆಗಾಗಿ ಮೂರು ಸಂಸ್ಕರಣಾ ಘಟಕಗಳನ್ನು ಪ್ರಾರಂಭಿಸಲಾಗಿದೆ. ಇದನ್ನು “ಹೆಲ್ತ್ ಕೇರ್ ಮತ್ತು ಬ್ರಿಜ್ ಹನಿ ಪ್ರೈವೇಟ್ ಲಿಮಿಟೆಡ್” ಎಂದು ಹೆಸರಿಸಲಾಗಿದೆ. ಇದನ್ನು 2006 ರಲ್ಲಿ ರಾಜ್‌ಕುಮಾರ್ ಗುಪ್ತಾ ಎನ್ನುವವರು ಸ್ಥಾಪನೆ ಮಾಡಿದರು. ಪ್ರತಿ ವರ್ಷ ಇಲ್ಲಿ ಸುಮಾರು 12 ಸಾವಿರ ಮೆಟ್ರಿಕ್ ಟನ್ ಗಳಷ್ಟು ಜೇನು ತುಪ್ಪವನ್ನು ಉತ್ಪಾದಿಸುತ್ತಾರೆ. ಹೀಗೆ ಉತ್ಪಾದನೆಯಾದ ಕೆನಡಾ, ಅಮೆರಿಕ, ಸೌದಿ ಅರೇಬಿಯಾ, ಲಿಬಿಯಾದಂತಹ ದೇಶಗಳಿಗೆ ರಫ್ತು ಕೂಡಾ ಮಾಡಲಾಗುತ್ತಿದೆ ಎನ್ನಲಾಗಿದೆ.